ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Dr K P Putturaya Column: ನದೀ ಸ್ನಾನದಿಂದ ಪುಣ್ಯಪ್ರಾಪ್ತಿ ಸಾಧ್ಯವೇ ?

ಅಂಥ ನಂಬಿಕೆಗಳ ಪೈಕಿ ‘ಪರ್ವಕಾಲದಲ್ಲಿ ಪವಿತ್ರ ನದಿಗಳಲ್ಲಿ ಮಿಂದೆದ್ದರೆ, ನಮ್ಮ ಪಾಪ ಗಳೆಲ್ಲಾ ತೊಳೆದು ಹೋಗಿ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂಬುದೂ ಒಂದು. ಈ ನಂಬಿಕೆಯ ಆಧಾರದ ಮೇಲೆಯೇ, ಕುಂಭಮೇಳ ಕಾಲದಲ್ಲಿ ಗಂಗೆ-ಯಮುನೆ-ಸರಸ್ವತಿ ಪವಿತ್ರ ನದಿಗಳು ಒಂದೇ ಕಡೆ ಸೇರುವ ತ್ರಿವೇಣಿ ಸಂಗಮದಲ್ಲಿ ಕೋಟ್ಯಂತರ ಜನರು ಪುಣ್ಯಸ್ನಾನ ಮಾಡಿ ತಾವು ಪಾಪಮುಕ್ತರಾಗಿ ಪುನೀತರಾದೆವು ಎಂದು ಭಾವಪರವಶ ರಾಗುತ್ತಾರೆ.

ನದೀ ಸ್ನಾನದಿಂದ ಪುಣ್ಯಪ್ರಾಪ್ತಿ ಸಾಧ್ಯವೇ ?

Profile Ashok Nayak Mar 3, 2025 6:58 AM

ವಿಶ್ಲೇಷಣೆ

ಡಾ.ಕೆ.ಪಿ.ಪುತ್ತೂರಾಯ

ನಮ್ಮ ದೇಶದಲ್ಲಿ ಜನರು ತರತರಹದ ನಂಬಿಕೆಗಳನ್ನಿಟ್ಟುಕೊಂಡಿದ್ದಾರೆ. ನಂಬಿಕೆಗಳೆಂದರೆ ದೃಢ ವಿಶ್ವಾಸಗಳೆಂದರ್ಥ. ನಂಬಿಕೆಗಳಿಗೆ ವೈಜ್ಞಾನಿಕವಾದ ವಿವರಣೆ ಮತ್ತು ಆಧಾರ ವಿದ್ದರೆ ಮಾತ್ರ ಅದು ಸಾರ್ವಕಾಲಿಕವಾಗಿ ಎಲ್ಲರಿಂದಲೂ ಬಲು ಶೀಘ್ರ ಸ್ವೀಕೃತಗೊಳ್ಳುತ್ತದೆ ಹಾಗೂ ಆಚರಿಸಲ್ಪಡುತ್ತದೆ. ಆದರೆ ಯಾವ ನಂಬಿಕೆಗಳು ಕಪೋಲಕಲ್ಪಿತವೋ ಅವು ‘ಮೂಢನಂಬಿಕೆ’ ಎಂಬ ಹಣೆ ಪಟ್ಟಿ ಪಡೆದು, ವಿದ್ಯಾವಂತರ, ವಿಚಾರವಂತರ ಪಟ್ಟಿ ಯಿಂದ ಹೊರಬೀಳುತ್ತವೆ. “ಪ್ರಶ್ನಿಸ ಬೇಡ, ಸುಮ್ಮನೆ ಆಚರಿಸು" ಎನ್ನುತ್ತದೆ ಮೂಢ ನಂಬಿಕೆ. ಆದರೆ “ಪ್ರಶ್ನಿಸು, ಸರಿ ಎಂದರೆ ಮಾತ್ರ ಆಚರಿಸು" ಎಂದು ಹೇಳುತ್ತದೆ ವಿಜ್ಞಾನ. “ನಂಬಿದವರಿಗೆ ಕಲ್ಲು ಕೂಡಾ ದೇವರೇ; ನಂಬದವರಿಗೆ ದೇವರು ಕೂಡಾ ಕಲ್ಲೇ" ಎಂಬುದು ಇನ್ನೊಂದು ಮಾತು.

ಅಂಥ ನಂಬಿಕೆಗಳ ಪೈಕಿ ‘ಪರ್ವಕಾಲದಲ್ಲಿ ಪವಿತ್ರ ನದಿಗಳಲ್ಲಿ ಮಿಂದೆದ್ದರೆ, ನಮ್ಮ ಪಾಪಗಳೆಲ್ಲಾ ತೊಳೆದು ಹೋಗಿ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂಬುದೂ ಒಂದು. ಈ ನಂಬಿಕೆಯ ಆಧಾರದ ಮೇಲೆಯೇ, ಕುಂಭಮೇಳ ಕಾಲದಲ್ಲಿ ಗಂಗೆ-ಯಮುನೆ-ಸರಸ್ವತಿ ಪವಿತ್ರ ನದಿಗಳು ಒಂದೇ ಕಡೆ ಸೇರುವ ತ್ರಿವೇಣಿ ಸಂಗಮದಲ್ಲಿ ಕೋಟ್ಯಂತರ ಜನರು ಪುಣ್ಯಸ್ನಾನ ಮಾಡಿ ತಾವು ಪಾಪಮುಕ್ತರಾಗಿ ಪುನೀತರಾದೆವು ಎಂದು ಭಾವಪರವಶ ರಾಗುತ್ತಾರೆ.

ಇದನ್ನೂ ಓದಿ: Geetha Kundapura Column: ಅಪರೂಪದ ಕೆತ್ತನೆಗಳು ಅಸಾಧಾರಣ ವಾಸ್ತು

ಮೂಲತಃ ಭಾರತೀಯರು ಪ್ರಕೃತಿ ಆರಾಧಕರು. ನಮಗೆ ಪ್ರಾಣಜಲವಾಗಿ, ನಮ್ಮ ಬೆಳೆಗಳಿಗೆ ಪೋಷಕ ಅಂಶವಾಗಿ, ಜನಜೀವನಕ್ಕೆ ಆಧಾರವಾಗಿರುವ ಪವಿತ್ರ ನದಿಗಳನ್ನು ಪೂಜಿಸಿ ಅದರ ನೀರಿನಲ್ಲಿ ಮಿಂದೆದ್ದು ಮೋಕ್ಷದತ್ತ ಮುಖ ಮಾಡುವುದು ನಮ್ಮ ಆಚರಣೆ ಹಾಗೂ ಸಂಪ್ರದಾಯ. ವಾಸ್ತವದಲ್ಲಿ ನದೀ ಸ್ನಾನದಿಂದ ಮಾತ್ರ ಪಾಪಗಳ ಪರಿಹಾರ, ಪುಣ್ಯಪ್ರಾಪ್ತಿ ಸಾಧ್ಯವೇ ಎಂಬುದು ಒಂದು ವೈಜ್ಞಾನಿಕ ಪ್ರಶ್ನೆ; ಸಾಧ್ಯವೆಂಬುದು ಒಂದು ಧಾರ್ಮಿಕ ನಂಬಿಕೆ.

ಮೂಢನಂಬಿಕೆಗಳ ವಿರುದ್ಧ ನೂರಾರು ದಾರ್ಶನಿಕರು, ದಾಸರು ನಮ್ಮನ್ನು ಬಡಿದೆಬ್ಬಿಸಿ
ದ್ದುಂಟು. ದಾಸವರೇಣ್ಯ ಪುರಂದರದಾಸರೆಂದರು “ಉದಯಕಾಲದೊಳೆದ್ದು ಗಡಗಡ ನಡುಗುತ ನದಿಯಲ್ಲಿ ಮಿಂದೆವೆಂದು ಹಿಗ್ಗುತಲಿ, ಮದ ಮತ್ಸರ ಕ್ರೋಧವ ಒಳಗೆ ತುಂಬಿಟ್ಟುಕೊಂಡು ಬಳಿಯಲಿದ್ದವರಿಗಾಶ್ಚರ್ಯವ ತೋರುವುದು; ಕೊರಳೊಳು ಮಾಲೆ ಯ ಧರಿಸಿದರೇನು? ಬೆರಳೊಳು ಜಪಮಣಿ ತಿರುಹಿದರೇನು? ತಾ ಬದಲಾಗದ ತನಕ!". ಮುಂದುವರಿಸುತ್ತಾ ದಾಸರು ಹೇಳಿದರು- “ಬಟ್ಟೆಯ ನೀರೊಳಗದ್ದಿ ಉಟ್ಟುಕೊಂಡರೆ, ಅದು ಮಡಿಯಲ್ಲ; ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರವ ಬಿಟ್ಟು ನಡೆದರೆ ಅದು ಮಡಿಯು!". ಅವರು ಅಂಧವಿಶ್ವಾಸಗಳನ್ನು ಪ್ರಶ್ನಿಸಿದ್ದು ಹೀಗೆ- “ಮನಶುದ್ಧಿ ಇಲ್ಲದವಗೆ ಮಂತ್ರದ ಫಲವೇನು? ತನುಶುದ್ಧಿ ಇಲ್ಲದವಗೆ ತೀರ್ಥದ ಫಲವೇನು? ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ! ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತ್ತಿದ್ದ ಪುರಂದರ ವಿಠಲ".

ಇಷ್ಟಕ್ಕೇ ನಿಲ್ಲಿಸದೆ ಮಾನಸಿಕ ಮಡಿವಂತಿಕೆ ಇಲ್ಲದ ಡಂಭಾಚಾರಿಗಳನ್ನು ಬೈದೇ ಬಿಟ್ಟರು- “ಮಡಿ ಮಡಿ ಮಡಿ ಎಂದು ಮೂರ್ಮಾರು ಹಾರುತಿಹೆ ಮಡಿ ಎಲ್ಲಿ ಬಂತೋ ಬಿಕನಾಶಿ? ಮಡಿಯು ನೀನೆ, ಮೈಲಿಗೆಯು ನೀನೇ, ಸುಡಲಿ ನಿನ್ನ ಮಡಿ ಬಿಕನಾಶಿ?".

ಇಷ್ಟೆಲ್ಲಾ ಉಪದೇಶಗಳಿದ್ದರೂ ಜನ ನದೀಸ್ನಾನ ಮಾಡುವುದನ್ನ ನಿಲ್ಲಿಸಲಿಲ್ಲ! ಮುಂದ ಕ್ಕೂ ನಿಲ್ಲಿಸೋದಿಲ್ಲ. ಹಾಗಂತ ನದೀಸ್ನಾನಗಳು ಅನಗತ್ಯ, ಸಂಪೂರ್ಣ ವ್ಯರ್ಥವೆಂದು ಹೇಳಲಾಗದು. ವೈಜ್ಞಾನಿಕವಾಗಿ ನೋಡಿದರೆ ನೀರು ಸ್ವಚ್ಛವಾಗಿದ್ದಲ್ಲಿ ನದೀಸ್ನಾನ ಆರೋ ಗ್ಯವರ್ಧಕವೂ ಹೌದು, ಉಲ್ಲಾಸದಾಯಕವೂ ಹೌದು.

ಕಾರಣ ಬೆಟ್ಟ ಪರ್ವತಗಳಲ್ಲಿ ಹುಟ್ಟಿ ಹರಿಯುವ ಈ ನೀರಿನಲ್ಲಿ ಖನಿಜಾಂಶಗಳು, ಗಿಡ ಮೂಲಿಕೆಗಳೇ ಮುಂತಾದ ಔಷಧಿಯ ಗುಣಗಳಿರುತ್ತವೆ. ಆದರೆ ಸಹಸ್ರಾರು ಜನರು ಸ್ನಾನ ಮಾಡಿದ, ಎಣ್ಣೆ ಜಿಡ್ಡು ಹೊಂದಿ, ಕೊಳೆ, ಕ್ರಿಮಿ-ಕೀಟ, ರೋಗಾಣುಗಳನ್ನು ಹೊಂದಿದ, ಹರಿಯದೆ ಕಲುಷಿತವಾಗಿ ನಿಂತ ನೀರಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಗಳನ್ನು, ವ್ಯಾಧಿಗಳನ್ನು ಆಹ್ವಾನಿಸಿಕೊಂಡಂತೆ.

ಇಷ್ಟಕ್ಕೂ ಬರೇ ಮೈಕೈಗಳನ್ನು ತೊಳೆದುಕೊಂಡ ಮಾತ್ರಕ್ಕೆ ಗೈದ ಪಾಪಗಳೆಲ್ಲಾ ಹೋಯಿತು, ಪುಣ್ಯ ಸಂಪಾದನೆಯಾಗಿ ನಾವು ಪರಿಶುದ್ಧರಾದೆವು ಎಂಬುದು ಒಂದು ತಪ್ಪು ಕಲ್ಪನೆ. ಮೈಯ ಸ್ನಾನದ ಜತೆ ಆತ್ಮಸ್ನಾನವೂ ನಡೆಯಬೇಕು; ಆತ್ಮಶುದ್ಧಿಯೂ ಆಗಬೇಕು. ಈ ಸತ್ಯವನ್ನೇ “ಮುಸುರೆ ತೊಳೆಯಬೇಕು. ಈ ಮನದಾ ಮುಸುರೆ ತೊಳೆಯಬೇಕು" ಎಂಬುದಾಗಿ ದಾಸರು ಸೂಚಿಸಿದರು. ಕಾರಣ ಮನುಷ್ಯನ ಮನಸ್ಸು ಗುಣದ ತೊಟ್ಟಿಲೂ ಆಗಬಹುದು, ಕಸದ ತೊಟ್ಟಿಯೂ ಆಗಬಹುದು. ಇದೇ ಸತ್ಯವನ್ನೇ ಕನಕದಂಥ ಕನಕ ದಾಸರು ಪುನರುಚ್ಚರಿಸಿದರು- “ಮನವ ಶೋಧಿಸಬೇಕು ನಿಚ್ಚ; ದಿನ ದಿನವೂ ಮಾಡುವ ಪಾಪ ಪುಣ್ಯಗಳ ಲೆಕ್ಕ".

ಈ ಹಿನ್ನೆಲೆಯಲ್ಲಿ ನದೀಸ್ನಾನಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕಾದರೆ, ಶಾರೀರಿಕ ಸ್ನಾನದ ಜತೆ ಆಂತರಿಕವಾಗಿಯೂ ಪರಿಶುದ್ಧರಾಗಿರಬೇಕು; ಇದಕ್ಕೆ ಬೇಕು ನಿತ್ಯ ನಮಗೆರಡು ಸ್ನಾನಗಳು- ಒಂದು ಮೈ ಸ್ನಾನ, ಇನ್ನೊಂದು ಆತ್ಮಸ್ನಾನ. ಇದನ್ನು ನಾವು ನಾವೇ ನಡೆಸಿಕೊಳ್ಳಬೇಕಾದ ಸ್ವಯಂ ಮೌಲ್ಯಮಾಪನ ಇಲ್ಲವೇ ಆತ್ಮಾವಲೋಕನ ವೆನ್ನಬಹುದು. ಏಕೆಂದರೆ ನಮ್ಮ ಬಗ್ಗೆ ನಮಗೇ ಗೊತ್ತಿರುವಷ್ಟು ಇನ್ಯಾರಿಗೂ ತಿಳಿಯದು.

ಮೇಲಾಗಿ ನಾವ್ಯಾರೂ ಸಂಪೂರ್ಣವಾಗಿ ಶತ ಪ್ರತಿಶತ ಪರಿಶುದ್ಧರಲ್ಲ, ಪರಿಪೂರ್ಣರಲ್ಲ. ಎಲ್ಲರಲ್ಲೂ ಏನಾದರೊಂದು ದೌರ್ಬಲ್ಯ, ದುರ್ಗುಣಗಳು ಇದ್ದೇ ಇದೆ. ಹಾಗೂ ಎಲ್ಲರೂ ಕೆಲವೊಮ್ಮೆ ಕೆಟ್ಟ ಕೆಲಸ, ತಪ್ಪು ಕೆಲಸಗಳನ್ನು ಮಾಡಿಯೇ ಮಾಡಿರುತ್ತಾರೆ. ಇದಕ್ಕೆ ಇರಬೇಕಾದ ಪಾಪಪ್ರಜ್ಞೆಯೂ ಮಾಡಿಕೊಳ್ಳಲೇಬೇಕಾದ ಪ್ರಾಯಶ್ಚಿತ್ತವೂ ನದೀಸ್ನಾನದ ಒಂದು ಕಾರ್ಯಕ್ರಮವಾಗಿರಬೇಕು. ಪಶ್ಚಾತ್ತಾಪವೇ ಪ್ರಾಯಶ್ಚಿತ ಮಾಡಿಕೊಳ್ಳುವ ಪರಿ ಹೊರತು ಹೋಮ-ಹವನಗಳಲ್ಲ.

ಅಂತೆಯೇ, ನದೀಸ್ನಾನಗಳು ನಾವು ಇದುವರೆಗೆ ಗೈದ ಪಾಪಗಳನ್ನು ಸಂಪೂರ್ಣವಾಗಿ ನಿವಾರಿಸಿ, ಮುಂದಕ್ಕೆ ಹೊಸ ಪಾಪಗಳನು, ಕೆಟ್ಟ ಕೆಲಸಗಳನ್ನು ಮಾಡಲು ಅನುಮತಿ/ ಅವಕಾಶವನ್ನು ನೀಡಿದಂತೆಯೂ ಆಗೋದಿಲ್ಲ. ಆದುದರಿಂದ ಮುಂದಕ್ಕೆ ಏನೇ ಅಪಚಾರ ಗಳು ನಡೆಯದಂತೆ ಮಾಡಿಕೊಳ್ಳುವ ಸಂಕಲ್ಪವೇ, ಪ್ರತಿಜ್ಞೆಯೇ ನದೀಸ್ನಾನಗಳ ಭಾಗ ವಾಗಿರಬೇಕು.

ಒಟ್ಟಿನಲ್ಲಿ ನಾವು ಗೈದ ಪಾಪಗಳು ಪ್ರಾಮಾಣಿಕವಾದ ಪಶ್ಚಾತ್ತಾಪದಿಂದ ಮತ್ತು ಮಹೋ ನ್ನತ ವಾದ ಸತ್ -ಸಂಕಲ್ಪಗಳಿಂದ ನಿವಾರಣೆಗೊಳ್ಳಬೇಕೇ ಹೊರತು ಬರೀ ನದೀಸ್ನಾನ ಗಳಿಂದಲ್ಲ. ಅಂತೆಯೇ ಪುಣ್ಯವನ್ನು ಸತ್ಕಾರ್ಯಗಳಿಂದ ಸನ್ಮಾರ್ಗದಲ್ಲಿ ನಡೆಯುವು ದರಿಂದ, ಸಮಾಜ ಸೇವೆಯಿಂದ ಪರೋಪಕಾರದಿಂದ ಪಡೆಯಬೇಕೇ ಹೊರತು ಬಡವರಿಗೆ ಎಸೆಯುವ ಭಿಕ್ಷೆಯಿಂದಲೂ ಅಲ್ಲ, ಪ್ರಚಾರಕ್ಕಾಗಿ ನಡೆಸುವ ದಾನ-ಧರ್ಮ ಗಳಿಂದಲೂ ಅಲ್ಲ, ಇಲ್ಲವೇ ನಡೆಸುವ ತೀರ್ಥಯಾತ್ರೆಗಳಿಂದಲೂ ಅಲ್ಲ.

ತಾತ್ಪರ್ಯ ಇಷ್ಟೇ: ನದೀಸ್ನಾನಗಳು ಬಾಹ್ಯ ಶುದ್ಧಿಯ ಜತೆ ನಮ್ಮ ಅಂತರಂಗದ ಶುದ್ಧಿಗೂ ನೆರವಾಗಲಿ; ಅದರಲ್ಲಿ ನಮ್ಮ ಲೌಕಿಕ ಆಶಯಗಳೊಂದಿಗೆ ಧಾರ್ಮಿಕ ಭಕ್ತಿ-ಭಾವಗಳು, ನಂಬಿಕೆಗಳೂ ತುಂಬಿರಲಿ. ಆಗಲೇ ಅದು ಫಲಪ್ರದ. ಇದುವೇ ನಮ್ಮ ಸನಾತನ ಧರ್ಮದ ಸಂದೇಶ ಹಾಗೂ ಆಶಯ.

(ಲೇಖಕರು ಪ್ರಾಧ್ಯಾಪಕರು)