ʻರೋಹಿತ್ ಶರ್ಮಾರ ದೇಹದ ಬಗ್ಗೆ ಕಾಮೆಂಟ್ ಹಾಕುವುದು ನಾಚಿಕೆಗೇಡಿನ ಸಂಗತಿʼ-ವೆಂಕಟೇಶ್ ಪ್ರಸಾದ್!
ರೋಹಿತ್ ಶರ್ಮಾ ಅವರ ತೂಕದ ಬಗ್ಗೆ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಮಾಡಿದ ಹೇಳಿಕೆಯು ವಿವಾದವನ್ನು ಹುಟ್ಟು ಹಾಕಿದೆ. ಭಾರತ ತಂಡದ ಮಾಜಿ ವೇಗಿ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್, ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ. ಟೀಮ್ ಇಂಡಿಯಾ ನಾಯಕನನ್ನು ಈ ರೀತಿ ಟೀಕಿಸುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ-ವೆಂಕಟೇಶ್ ಪ್ರಸಾದ್

ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹದ ತೂಕದ ಕುರಿತು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ನೀಡಿದ ಹೇಳಿಕೆಯು ವಿವಾದವನ್ನು ಹುಟ್ಟು ಹಾಕಿದೆ. ಈ ವಿವಾದ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ರೋಹಿತ್ ಅವರನ್ನು ಬೆಂಬಲಿಸಿದ್ದಾರೆ. ರೋಹಿತ್ ಶರ್ಮಾ ಅವರ ದೇಹದ ತೂಕದ ಬಗ್ಗೆ ಟೀಕಿಸುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ ಅವರು, ನಾಯಕನ ಸಾಧನೆಯನ್ನು ಇಲ್ಲಿ ಗೌರವಿಸಬೇಕೆಂದು ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ತಮ್ಮ ಎಕ್ಸ್ ಖಾತೆಯಲ್ಲಿ ರೋಹಿತ್ ಶರ್ಮಾ ಅವರ ತೂಕದ ಬಗ್ಗೆ ಕಾಮೆಂಟ್ ಮಾಡಿದ್ದರು ಮತ್ತು ಅವರನ್ನು ಕೆಟ್ಟ ನಾಯಕ ಎಂದು ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡಿಗ ವೆಂಕಟೇಶ್ ಪ್ರಸಾದ್, ರೋಹಿತ್ ಶರ್ಮಾ ಅವರ ಸಾಧನೆಗಳನ್ನು ಉಲ್ಲೇಖಿಸಿ, ಅವರನ್ನು ಗೇಲಿ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ರೋಹಿತ್ ಶರ್ಮಾ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ರೋಹಿತ್ ಶರ್ಮಾ ಅವರ ಸಾಧನೆಗಳನ್ನು ನೋಡಬೇಕು ಅದು ಬಿಟ್ಟು ಅವರನ್ನು ಗೇಲಿ ಮಾಡುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ ಅವರು, ಶಮಾ ಮೊಹಮ್ಮದ್ ಅವರ ಪೋಸ್ಟ್ ಬಗ್ಗೆ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
IND vs AUS: ʻದುಬೈ ನಮ್ಮ ತವರು ಅಂಗಣವಲ್ಲʼ-ಟೀಕಾಕಾರರಿಗೆ ರೋಹಿತ್ ಶರ್ಮಾ ತಿರುಗೇಟು!
"ರೋಹಿತ್ ಶರ್ಮಾ ನಾಯಕನಾಗಿ ಸಾಕಷ್ಟು ಘನತೆಯನ್ನು ಕಾಯ್ದುಕೊಂಡಿದ್ದಾರೆ. 8 ತಿಂಗಳ ಹಿಂದೆ ಅವರು ನಮಗೆ ಟಿ20 ವಿಶ್ವಕಪ್ ಗೆಲ್ಲಲು ಸಹಾಯ ಮಾಡಿದ್ದರು ಮತ್ತು ಐಸಿಸಿ ಟೂರ್ನಿಯ ಮಧ್ಯದಲ್ಲಿ ಅವರ ದೇಹದ ತೂಕದ ಬಗ್ಗೆ ವ್ಯಂಗ್ಯವಾಡವುದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ. ಇಷ್ಟು ವರ್ಷಗಳ ಕಾಲ ತನ್ನ ಕೌಶಲ ಮತ್ತು ನಾಯಕತ್ವದ ಮೂಲಕ ಏನನ್ನಾದರೂ ಸಾಧಿಸಿದ ವ್ಯಕ್ತಿಯ ಬಗ್ಗೆ ನಮಗೆ ಸ್ವಲ್ಪ ಗೌರವವಿರಬೇಕು," ಎಂದು ವೆಂಕಟೇಸ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ರೋಹಿತ್ ಶರ್ಮಾರ ವೃತ್ತಿ ಜೀವನ
ರೋಹಿತ್ ಶರ್ಮಾ ಭಾರತದ ಇದುವರೆಗಿನ ಅತ್ಯಂತ ಕೆಟ್ಟ ನಾಯಕ ಎಂದು ಶಮಾ ಮೊಹಮ್ಮದ್ ಹೇಳಿದ್ದಾರೆ. ಆದರೆ, ನಾಯಕನಾಗಿ ರೋಹಿತ್ ಶರ್ಮಾ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಎರಡನೇ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು. ಅವರು ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರು 8 ಪಂದ್ಯಗಳಲ್ಲಿ 257 ರನ್‌ಗಳನ್ನು ಸಿಡಿಸಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
Rohit has maintained great dignity as a captain , led us to a T-20 WC win 8 months back and in the middle of an ICC tournament, body-shaming him is absolutely pathetic and uncalled for.
— Venkatesh Prasad (@venkateshprasad) March 3, 2025
Should have some respect for a person who has achieved through his skills and leadership for… pic.twitter.com/0FoGGYxpAa
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 48.74ರ ಸರಾಸರಿಯಲ್ಲಿ 11064 ರನ್ ಗಳಿಸಿದ್ದಾರೆ. ಇದರಲ್ಲಿ 32 ಶತಕಗಳು ಮತ್ತು 57 ಅರ್ಧಶತಕಗಳು ಸೇರಿವೆ. ಇತ್ತೀಚೆಗೆ ಅವರು 261 ಇನಿಂಗ್ಸ್‌ಗಳಲ್ಲಿ 11,000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ ಎರಡನೇ ಅತಿ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಅವರು ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿದ್ದಾರೆ. ಇದು ವಿಶ್ವ ದಾಖಲೆಯಾಗಿದೆ. ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಅತಿ ಹೆಚ್ಚು ಶತಕ ಗಳಿಸಿದ ಆಟಗಾರ. ಕಪಿಲ್ ದೇವ್ ಮತ್ತು ಎಂಎಸ್ ಧೋನಿ ನಂತರ ವಿಶ್ವಕಪ್ ಗೆದ್ದ ಮೂರನೇ ಭಾರತೀಯ ನಾಯಕ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಬರೆದಿದ್ದಾರೆ.