ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Serial Time: ಬಹುಮುಖ ಪ್ರತಿಭೆ, ನಟಿ ರಾಧಾ ಭಗವತಿಗೆ ಸಿಕ್ಕಿದೆ ಈ ಸೀರಿಯಲ್‌ನಲ್ಲಿ ಲೀಡ್ ರೋಲ್

ಸೀರಿಯಲ್ ಅಥವಾ ಸಿನಿಮಾದಲ್ಲಿನ ಕೆಲವೇ ಪಾತ್ರಗಳು ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿದುಬಿಡುತ್ತವೆ. ಆ ಪಾತ್ರವನ್ನು ಮತ್ತೆ ಬೇರಿನ್ಯಾರೇ ಮಾಡಿದರು ಅದಕ್ಕೆ ನ್ಯಾಯ ಒದಗಿಸುವುದು ಸ್ವಲ್ಪ ಕಷ್ಟವೇ. ಇದೀಗ ʼಅಮೃತಧಾರೆʼ ಧಾರವಾಹಿಯಲ್ಲಿ ಮಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದ ಪ್ರತಿಭಾವಂತ ನಟಿ ರಾಧಾ ಭಗವತಿ ಇನ್ನು ಮುಂದೆ ಆ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ! ಅದಕ್ಕೆ ಕಾರಣ ಇಲ್ಲಿದೆ.

'ಅಮೃತಧಾರೆ'ಯ ಮಲ್ಲಿ ಎಲ್ಲಿ ಎನ್ನುತ್ತಿದ್ದವರಿಗೆ ಸಿಕ್ಕಿದೆ ಉತ್ತರ ಇಲ್ಲಿ

ನಟಿ ರಾಧಾ ಭಗವತಿ.

Profile Sushmitha Jain Mar 3, 2025 9:53 PM

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಅಮೃತಧಾರೆʼಯ (Amruthadhare) ಮಲ್ಲಿ ಇನ್ನು ಮುಂದೆ ಆ ಸೀರಿಯಲ್ಲ್‌ನಲ್ಲಿ (Serial) ಕಾಣಿಸಿಕೊಳ್ಳುವುದಿಲ್ಲ. ಅಕ್ಕಾವ್ರೆ... ಅಕ್ಕಾವ್ರೇ... ಎನ್ನುತ್ತಲೇ ತನ್ನ ವಿಶಿಷ್ಟ ಮ್ಯಾನರಿಸಂ ಮೂಲಕ ಸೀರಿಯಲ್ ಪ್ರಿಯರ ಮನ ಗೆದ್ದಿದ್ದ ಮಲ್ಲಿ ಇನ್ಮುಂದೆ ಆ ಧಾರಾವಾಹಿಯಲ್ಲಿ ಕಣಿಸಿಕೊಳ್ಳುವುದಿಲ್ಲ. ಹಾಗೆಂದು ಸೀರಿಯಲ್‌ನಲ್ಲಿ ಮಲ್ಲಿಯ ಪಾತ್ರವಿರುತ್ತದೆ. ಆದರೆ ಈ ಪಾತ್ರದಲ್ಲಿ ಮಿಂಚಿದ್ದ ನಟಿ ರಾಧಾ ಭಗವತಿ (Radha Bhagavathi) ಈ ಸೀರಿಯಲ್​ನಿಂದ ಹೊರ ಬಂದಿದ್ದಾರೆ. ಗಂಡನನ್ನು ಅಗತ್ಯಕ್ಕಿಂತ ಹೆಚ್ಚು ನಂಬಿ ಮೋಸ ಹೋದರೂ ಗಂಡನನ್ನೇ ಸರ್ವಸ್ವ ಎಂದುಕೊಂಡು ಈ ಪಾತ್ರಕ್ಕೆ ನ್ಯಾಯ ಒದಗಿಸಿದ್ದ ರಾಧಾ ಇದೀಗ ಸೀರಿಯಲ್​ ಬಿಟ್ಟಿದ್ದಾರೆ. ಇನ್ನುಮುಂದೆ ಮಲ್ಲಿಯ ಪಾತ್ರವನ್ನು ಬೇರೊಬ್ಬ ನಟಿ ನಿರ್ವಹಿಸಲಿದ್ದಾರೆ. ರಾಧಾ ಭಗವತಿ ಇತ್ತೀಚೆಗೆ ಕೆಲವು ಎಪಿಸೋಡ್​ಗಳಿಂದ ʼಅಮೃತಧಾರೆʼಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದರಿಂದಾಗಿ ಮಲ್ಲಿ ಎಲ್ಲಿ ಎಂದು ಪ್ರಶ್ನಿಸುತ್ತಿರುವವರಿಗೆ ಈಗ ಉತ್ತರ ಸಿಕ್ಕಿದೆ.

ಸೀರಿಯಲ್ ಪ್ರೇಮಿಗಳಿಗೆ ತಿಳಿದಿರುವಂತೆ ರಾಧಾ ಭಗವತಿ (Radha Bhagavathi) ಈಗ ಕಲರ್ಸ್‌ ಕನ್ನಡ ವಾಹಿನಲ್ಲಿ ಪ್ರಸಾರವಾಗುತ್ತಿರುವ ʼಭಾರ್ಗವಿ ಎಲ್​.ಎಲ್​.ಬಿ.ʼಯಲ್ಲಿ (Bhargavi LLB) ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲ್ಲಿ ಪಾತ್ರಕ್ಕೆ ತದ್ವಿರುದ್ಧವಾಗಿರುವ, ಖಡಕ್​ ವಕೀಲೆಯಾಗಿ ರಾಧಾ ಇನ್ಮುಂದೆ ಈ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಇವರು ನಟಿಸಿರುವ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ʼಅಣ್ಣಯ್ಯʼ ಸೀರಿಯಲ್‌ ನ ನಾಯಕ, ವಿಕಾಶ್​ ಉತ್ತಯ್ಯ ಅವರಿಗೆ ನಾಯಕಿಯಾಗಿ ಮಿಂಚಿದ್ದಾರೆ ರಾಧಾ ಭಗವತಿ.



ಇದಾಗಲೇ ʼಅಮೃತಧಾರೆʼ ಸೀರಿಯಲ್‌ನಲ್ಲಿ ಜೀವ ಮತ್ತು ಮಹಿಮಾ ಪಾತ್ರಧಾರಿಗಳೂ ಬದಲಾಗಿದ್ದು, ಇದೀಗ ಮಲ್ಲಿ ಪಾತ್ರಕ್ಕೂ ಹೊಸ ನಟಿಯ ಎಂಟ್ರಿ ಆಗಲಿದೆ. ರಾಧಾ ಅವರು ʼಅಮೃತಧಾರೆʼ ಬಿಡಲು ಕಾರಣ ಅವರಿಗೆ ಲೀಡ್​ ರೋಲ್​ ಸಿಕ್ಕಿರುವುದು. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ʼಅಮೃತಧಾರೆʼಯಲ್ಲಿ ಸೈಡ್​ ರೋಲ್​, ಆದರೆ ʼಭಾರ್ಗವಿ ಎಲ್.​ಎಲ್.​ಬಿ.ʼಯಲ್ಲಿ ಲೀಡ್​ ರೋಲ್​. ಜತೆಗೆ ಸಿನಿಮಾ ಶೂಟಿಂಗ್ ಬೇರೆ​. ಈ ಎಲ್ಲ ಟೈಟ್ ಶೆಡ್ಯೂಲ್‌ ಕಾರಣದಿಂದ ʼಅಮೃತಧಾರೆʼ ಸೀರಿಯಲ್‌ನಿಂದ ಹೊರಬರಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಇನ್ನು ಈ ಸೀರಿಯಲ್ ನಲ್ಲಿ ಜೈದೇವನ ಪತ್ನಿ ಮಲ್ಲಿಯಾಗಿ ಯಾವ ನಟಿ ಬರುತ್ತಾರೆ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ರಾಧಾ ಅವರು, ರಾಮ್​ ಜಿ. ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ರಿಲೀಸ್​ ಆದ ʼವಸಂತ ಕಾಲದ ಹೂವುಗಳುʼ ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ʼಅಮೃತಧಾರೆʼಯಲ್ಲಿ ನಟಿಸಿದರು. ಇದೀಗ ಭಾರ್ಗವಿ ಆಗಿದ್ದಾರೆ.

ಮಾಡೆಲ್ ಕೂಡ ಆಗಿರುವ ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಆಸೆ ಇದೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ನಟಿಸುವ ಈ ನಟಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ. ನಟಿ ರಾಧಾ ಭಗವತಿ ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಹೀಗೆ ನಟಿ ರಾಧಾ ಅವರಿಗೆ ಸದ್ಯ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಅವಕಾಶಗಳು ಅರಸಿಕೊಂಡು ಬರುತ್ತಿವೆ.

ರಾಧಾ ಅವರದ್ದು ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರಾಗಿ ಮಿಂಚಿದವರು ಮಾತ್ರವಲ್ಲದೇ ಇವರು ಹರಿಕಥೆ ದಾಸರೂ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ಎಳೆಯ ವಯಸ್ಸಿನಲ್ಲೇ ನಟನೆಯತ್ತ ಒಲವು ಬೆಳೆಯಿತು. ಕಿರುತೆರೆ, ಹಿರಿತೆರೆ, ಮ್ಯೂಸಿಕ್ ಆಲ್ಬಂ ಮಾತ್ರವಲ್ಲದೇ ರಾಧಾ ಅವರು ಹಿನ್ನೆಲೆ ಗಾಯಕಿಯೂ ಹೌದು. ಈಗಾಗಲೇ ಎರಡು ಸಿನಿಮಾಗಳಲ್ಲಿ ಹಾಡಿರುವ ಈಕೆ, ಕಂಠದಾನಕ್ಕೂ ಸೈ. 'ಮದುಮಗಳು' ಧಾರಾವಾಹಿಯಲ್ಲಿನ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿರುವ ರಾಧಾ ಅವರಿಗೆ ಕಲೆ ಎಂಬುದು ರಕ್ತಗತವಾಗಿಯೇ ಒಲಿದು ಬಂದಿದೆ.