Acne Issue: ಮೊಡವೆ ಸಮಸ್ಯೆಯೇ? ಇಲ್ಲಿವೆ ಪರಿಹಾರಗಳು!
ಚರ್ಮದ ಉರಿಯೂತಗಳು ಕಡಿಮೆಯಾಗಿ ಮೊಡವೆಯ ಸಂಭಾವ್ಯತೆಯೂ ಕ್ಷೀಣಿಸಬಹುದು. ಆಹಾರ ಹೇಗಿದ್ದರೆ ಚರ್ಮಕ್ಕೆ ಹಿತ? ಮೊಡವೆಯನ್ನು ತೊಡೆಯುವುದಕ್ಕೆ ಇನ್ನೂ ಏನೇನು ಮಾಡಬಹುದು? ಮೊಡವೆಗೆ ಮೇಲಿಂದ ಲೇಪಿಸುವುದು ತಕ್ಷಣದ ಪರಿಣಾಮವನ್ನು ಬೀರಬಹುದಾದರೂ, ಸರಿಯಾದ ಪರಿಹಾರವಲ್ಲ. ಇದಕ್ಕಾಗಿ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದೇ?


ಬೆಂಗಳೂರು: ಮೊಡವೆ(Acne Issue) ಇದ್ದರೆ ಮುಖಕ್ಕೆ ಬೇರೆ ಒಡವೆಯೇ ಬೇಡ ಎನ್ನಬಹುದೇ? ಆದರೆ ಬೇಕಾದಾಗ ಹಾಕಿ-ತೆಗೆದು ಮಾಡುವಂಥ ಒಡವೆಯು ಇದಲ್ಲವಾದ್ದರಿಂದ, ಇದನ್ನು ದೂರ ಮಾಡುವ ಬಗ್ಗೆ ಹೇಗೆ ಎಂಬುದೇ ಧರಿಸಿದವರ ಚಿಂತೆ. ಮುಖದ ಚಂದಕ್ಕೆ ಇದೊಂದು ದೃಷ್ಟಿಬೊಟ್ಟು ಎನ್ನುವ ಕಾರಣಕ್ಕೆ, ಮಾರುಕಟ್ಟೆಯಿಂದ ಏನೇನೋ ಕ್ರೀಮ್‌ಗಳನ್ನು ತಂದು ಪ್ರಯೋಗಿಸುತ್ತೇವೆ. ಮೊಡವೆಗೆ ಮೇಲಿಂದ ಲೇಪಿಸುವುದು ತಕ್ಷಣದ ಪರಿಣಾಮವನ್ನು ಬೀರಬಹುದಾದರೂ, ಸರಿಯಾದ ಪರಿಹಾರವಲ್ಲ. ಇದಕ್ಕಾಗಿ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದೇ?
ಮುಗಿಯದ ವಾಯುಮಾಲಿನ್ಯ, ಬಿರುಬಿಸಿಲು, ಅಸಂಬದ್ಧ ಆಹಾರ ಪದ್ಧತಿಗಳು- ಇವೆಲ್ಲವೂ ತ್ವಚೆಯ ಆರೋಗ್ಯವನ್ನು ಹಾಳು ಮಾಡುವಂಥವು. ಹಾಗಾಗಿ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮೊಡವೆಯನ್ನು ಸಂಪೂರ್ಣವಾಗಿ ತೊಡೆಯಬಹುದು ಎಂದಲ್ಲ. ಆದರೆ ಚರ್ಮದ ಆರೋಗ್ಯವನ್ನಂತೂ ಖಂಡಿತವಾಗಿ ವೃದ್ಧಿಸಿಕೊಳ್ಳಬಹುದು. ಇದರಿಂದ ಚರ್ಮದ ಉರಿಯೂತಗಳು ಕಡಿಮೆಯಾಗಿ ಮೊಡವೆಯ ಸಂಭಾವ್ಯತೆಯೂ ಕ್ಷೀಣಿಸಬಹುದು. ಆಹಾರ ಹೇಗಿದ್ದರೆ ಚರ್ಮಕ್ಕೆ ಹಿತ? ಮೊಡವೆಯನ್ನು ತೊಡೆಯುವುದಕ್ಕೆ ಇನ್ನೂ ಏನೇನು ಮಾಡಬಹುದು?
ತಲೆಹೊಟ್ಟು: ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಯೋಚಿಸಿದರೆ, ಒಂದಕ್ಕೊಂದು ಸಂಬಂಧ ಇದೆ. ತಲೆಹೊಟ್ಟಿನ ಸಮಸ್ಯೆಯೂ ಮೊಡವೆಗಳನ್ನು ಹೆಚ್ಚಿಸಬಲ್ಲದು. ಹೊಟ್ಟು ಹೆಚ್ಚಾಗಿ ಮೈಮೇಲೆಲ್ಲ ಉದುರುತ್ತಿದ್ದರೆ, ಮುಖದಲ್ಲಿ ಮಾತ್ರವಲ್ಲ ಬೆನ್ನು, ಭುಜದ ಮೇಲೆಯೂ ಮೊಡವೆಗಳು ಏಳುವ ಸಾಧ್ಯತೆಯಿದೆ. ಹಾಗಾಗಿ ತಲೆ ಚರ್ಮದ ಆರೋಗ್ಯ ಹೇಗಿದೆ ಎಂಬುದನ್ನು ಮೊದಲು ಗಮನಿಸಿ. ತಲೆಯಲ್ಲಿ ಹೊಟ್ಟಿದ್ದರೆ ಅದಕ್ಕೆ ಮೊದಲು ಔಷಧಿ ಮಾಡಿ.
ಶುದ್ಧ ಆಹಾರ: ನಾವೇನು ತಿನ್ನುತ್ತೇವೆ ಎನ್ನುವುದು ನಮ್ಮ ಚರ್ಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ ಶುದ್ಧವಾದ ಆಹಾರವನ್ನೇ ಆಯ್ಕೆ ಮಾಡಿಕೊಳ್ಳಿ. ಅಂದರೆ, ಕೃತಕವಾದ ಎಲ್ಲವನ್ನೂ ದೂರ ಇರಿಸಿ. ಪ್ಯಾಕ್ ಮಾಡಿದ ಆಹಾರಗಳು, ಬಣ್ಣ-ಸಕ್ಕರೆ ಭರಿತ ತಿನಿಸುಗಳು, ಸಂಸ್ಕರಿತ ಆಹಾರಗಳನ್ನು, ಸಂರಕ್ಷಕಗಳು ಮತ್ತು ಇತರ ರಾಸಾಯನಿಕಗಳಿರುವ ಆಹಾರಗಳನ್ನು ಸೇವಿಸಬೇಡಿ. ಮನೆಯಲ್ಲಿ ಮಾಡಿದ ತಾಜಾ ಆಹಾರಗಳು ಮಾತ್ರವೇ ಜೀರ್ಣಾಂಗಗಳನ್ನು ಮತ್ತು ಈ ಮೂಲಕ ಚರ್ಮವನ್ನು ಚೆನ್ನಾಗಿರಿಸಬಲ್ಲದು.
ಈ ಸುದ್ದಿಯನ್ನೂ ಓದಿ: Health Alert: ಮೆಹಂದಿಯಲ್ಲೂ ಆರೋಗ್ಯಕ್ಕೆ ಮಾರಕ ಅಂಶ ಪತ್ತೆ, ನಿಷೇಧ ಚಿಂತನೆ
ನಿದ್ದೆ: ಮಾನಸಿಕ ಒತ್ತಡ ಕಡಿಮೆ ಮಾಡುವ ಸುಲಭ ವಿಧಾನಗಳಲ್ಲಿ ಕಣ್ತುಂಬಾ ನಿದ್ದೆ ಮಾಡುವುದೂ ಒಂದು. ದಿನದ ಯಾವುದೋ ಹೊತ್ತಿನಲ್ಲಿ ಒಂದಿಷ್ಟು ನಿದ್ದೆ ಮಾಡಿದರಾಯಿತು ಎಂದಿದ್ದರೆ, ಚರ್ಮದ ಆರೋಗ್ಯ ಸುಧಾರಿಸುವುದಕ್ಕೆ ಸಾಧ್ಯವಿಲ್ಲ. ದೇಹದ ಆಂತರಿಕ ಗಡಿಯಾರವು ಹಗಲು-ಇರುಳಿನ ನೈಸರ್ಗಿಕ ಸಮಯಕ್ಕೆ ಹೊಂದಿಕೊಂಡಿರುವುದು ಅಗತ್ಯ. ಹಾಗಾಗಿ ಚೆನ್ನಾಗಿ ನಿದ್ದೆ ಮಾಡಿ, ನಳನಳಿಸುವ ತ್ವಚೆ ನಿಮ್ಮದಾಗಬಹುದು.
ಇನ್ನಷ್ಟು ವಿಷಯಗಳಿವೆ: ಬಹಳಷ್ಟು ವಿಷಯಗಳು ತ್ವಚೆಯ ಆರೋಗ್ಯದ ಮೇಲೆ, ಮೊಡವೆ ಸಮಸ್ಯೆಯ ಮೇಲೆ ಪರಿಣಾಮ ಬೀರುತ್ತವೆ. ಉದಾ, ಚೆನ್ನಾಗಿ ನೀರು ಕುಡಿಯಿರಿ. ದೇಹಕ್ಕೆ ಹೆಚ್ಚು ನೀರು ದೊರೆತಷ್ಟೂ ಶರೀರದಿಂದ ಟಾಕ್ಸಿನ್‌ಗಳು ಹೊರಹೋಗುತ್ತವೆ. ಇದರಿಂದ ಚರ್ಮವೂ ನಳನಳಿಸುತ್ತದೆ
ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳು ಧಾರಾಳವಾಗಿರಲಿ. ಋತುಮಾನದ ಹಣ್ಣು-ತರಕಾರಿಗಳನ್ನು ತಿನ್ನುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳಲೇಬೇಡಿ. ಒಮೇಗಾ ೩ ಕೊಬ್ಬಿನಾಮ್ಲ ಇರುವ ಆಹಾರಗಳು ಆರೋಗ್ಯಕ್ಕೆ ಮಹದುಪಕಾರ ಮಾಡುತ್ತವೆ. ಕಾಯಿಗಳು-ಬೀಜಗಳು, ಕೊಬ್ಬಿನ ಮೀನುಗಳು, ಅವಕಾಡೊಗಳೆಲ್ಲ ಬೇಕು
ಯಾವುದಾದರೂ ಅಲರ್ಜಿಗಳು ನಿಮಗಿವೆಯೇ ಗಮನಿಸಿ. ಉದಾ, ಡೇರಿ ವಸ್ತುಗಳು ನಿಮಗೆ ಅಲರ್ಜಿ ಇದ್ದರೆ, ಅವುಗಳನ್ನು ತಿಂದಾಕ್ಷಣ ಮೊಡವೆ ಏಳಬಹುದು. ಈ ಬಗ್ಗೆ ಚರ್ಮ ವೈದ್ಯರು ನೆರವಾದಾರು. ಜೀರ್ಣಾಂಗದ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಚರ್ಮದ ಆರೋಗ್ಯವೂ ಅಷ್ಟಕ್ಕಷ್ಟೆ. ಹಾಗಾಗಿ ಹುದುಗು ಬಂದಂಥ ಪ್ರೊಬಯಾಟಿಕ್ ಆಹಾರಗಳನ್ನು ಧಾರಾಳವಾಗಿ ತಿನ್ನಿ.
ಉರಿಯೂತ ಕಡಿಮೆ ಮಾಡುವಲ್ಲಿ ಸತು ಕೂಡಾ ಸಹಾಯಕ. ಬೀಜಗಳು, ಇಡೀ ಧಾನ್ಯಗಳು, ಕಾಳುಗಳೆಲ್ಲ ನಿಮ್ಮ ಆಹಾರದಲ್ಲಿರಲಿ. ಇದಲ್ಲದೆ, ವಿಟಮಿನ್ ಎ ಇರುವಂಥ ಆಹಾರಗಳನ್ನು ತಿನ್ನಿ. ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವವಿದು. ಕ್ಯಾರೆಟ್, ಗೆಣಸು, ಹಸಿರು ಸೊಪ್ಪುಗಳೆಲ್ಲ ವಿಟಮಿನ್ ಎ ದಿಂದ ಸಮೃದ್ಧವಾಗಿವೆ.