Champions Trophy: ಕಿವೀಸ್ ಎದುರಿನ ಸೋಲಿನ ಆಘಾತದಲ್ಲಿದ್ದ ಪಾಕಿಸ್ತಾನಕ್ಕೆ ದಂಡ ವಿಧಿಸಿದ ಐಸಿಸಿ!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾರಣ ಆತಿಥೇಯ ಪಾಕಿಸ್ತಾನ ತಂಡಕ್ಕೆ ಐಸಿಸಿ ದಂಡ ವಿಧಿಸಿದೆ. ಪಾಕಿಸ್ತಾನದ ಮೊದಲ ಪಂದ್ಯ ನ್ಯೂಜಿಲೆಂಡ್ ವಿರುದ್ಧ ನಡೆದಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 60 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು.

ಪಾಕಿಸ್ತಾನ ತಂಡಕ್ಕೆ ದಂಡ ಹಾಕಿದ ಐಸಿಸಿ.

ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯದ ಸೋಲಿನೊಂದಿಗೆ ಪಾಕಿಸ್ತಾನ ತಂಡಕ್ಕೆ ಎರಡನೇ ಆಘಾತದ ಸುದ್ದಿ ಸಿಕ್ಕಿದೆ. ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾರಣ ಪಾಕಿಸ್ತಾನಕ್ಕೆ ಪಂದ್ಯ ಶುಲ್ಕದ ಶೇಕಡಾ 5ರಷ್ಟು ದಂಡವನ್ನು ವಿಧಿಸಲಾಗಿದೆ. ಮೊಹಮ್ಮದ್ ರಿಝ್ವಾನ್ ಪಡೆಯು ನಿಗದಿತ ಅವಧಿಯಲ್ಲಿ 50 ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದಂಡವನ್ನು ವಿಧಿಸಲಾಗಿದೆ. ಪಾಕಿಸ್ತಾನ ತಂಡ ನಿಗದಿತ ಅವಧಿಯ ವೇಳೆಗೆ ಒಂದು ಓವರ್ ಕಡಿಮೆ ಬೌಲ್ ಮಾಡಿತ್ತು.
"ಬುಧವಾರ ನಡೆದಿದ್ದ 2025ರ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ತಾನ ತಂಡಕ್ಕೆ ಪಂದ್ಯ ಶುಲ್ಕದ ಶೇಕಡಾ 5 ರಷ್ಟು ದಂಡ ವಿಧಿಸಲಾಗಿದೆ," ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿ ಸದಸ್ಯರಾದ ಆಂಡಿ ಪೈಕ್ರಾಫ್ಟ್, ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ದಂಡ ವಿಧಿಸಿದ್ದಾರೆ.
IND vs BAN:200ನೇ ಒಡಿಐ ಪಂದ್ಯವಾಡಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ!
ಐಸಿಸಿ ನಿಯಮಗಳ ಪ್ರಕಾರ, ನಿಗದಿತ ಸಮಯದಲ್ಲಿ ತಂಡವು ಬೌಲ್ ಮಾಡದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಶೇಕಡಾ 5 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಪಾಕಿಸ್ತಾನದ ಹಂಗಾಮಿ ನಾಯಕ ಮೊಹಮ್ಮದ್ ರಿಝ್ವಾನ್ ಈ ಪ್ರಮಾದವನ್ನು ಒಪ್ಪಿಕೊಂಡರು ಮತ್ತು ದಂಡವನ್ನು ಸ್ವೀಕರಿಸಿದ್ದಾರೆ. ಇದರಿಂದಾಗಿ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ. ಆನ್-ಫೀಲ್ಡ್ ಅಂಪೈರ್‌ಗಳಾದ ರಿಚರ್ಡ್ ಕೆಟಲ್‌ಬರೋ ಮತ್ತು ಶರ್ಫುದ್ದೌಲಾ, ಮೂರನೇ ಅಂಪೈರ್ ಜೋಯಲ್ ವಿಲ್ಸನ್ ಮತ್ತು ನಾಲ್ಕನೇ ಅಂಪೈರ್ ಅಲೆಕ್ಸ್ ವಾರ್ಫ್ ಈ ಆರೋಪವನ್ನು ಹೊರಿಸಿದ್ದರು.
PAK vs NZ: ಯಂಗ್-ಲೇಥಮ್ ಶತಕ, ಪಾಕಿಸ್ತಾನಕ್ಕೆ ಸೋಲಿನ ಬರೆ ಎಳೆದ ನ್ಯೂಜಿಲೆಂಡ್!
ಮೊದಲನೇ ಪಂದ್ಯ ಸೋತಿದ್ದ ಪಾಕಿಸ್ತಾನ
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳ ನಿರಾಶಾದಾಯಕ ಸೋಲು ಅನುಭವಿಸಿದ್ದ ಪಾಕಿಸ್ತಾನಕ್ಕೆ ಈ ದಂಡವು ಮತ್ತೊಂದು ಹೊಡೆತವಾಗಿದೆ. 321 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಆತಿಥೇಯರು ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದರು ಮತ್ತು ನಿಧಾನಗತಿಯ ಆರಂಭದ ನಂತರ ಅಗತ್ಯವಿರುವ ರನ್ ದರವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಇದಕ್ಕೂ ಮುನ್ನ ಪಾಕಿಸ್ತಾನದ ಆರಂಭಿಕ ಆಟಗಾರ ಫಖಾರ್ ಝಮಾನ್ ಗಾಯದ ಕಾರಣ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಪಂದ್ಯದ ಎರಡನೇ ಓವರ್‌ನಲ್ಲಿ ಫೀಲ್ಡಿಂಗ್‌ನಲ್ಲಿ ತೊಡಗಿದ್ದ ವೇಳೆ ಎಡಗೈ ಬ್ಯಾಟ್ಸ್‌ಮನ್ ಗಾಯಗೊಂಡಿದ್ದರು.
Pakistan sanctioned after the #ChampionsTrophy opener against New Zealand.
— ICC (@ICC) February 20, 2025
Details ⬇️https://t.co/Smt9hrOZgU
ಪಾಕ್‌ಗೆ ಮಾಡು ಇಲ್ಲವೆ ಮಡಿ ಪಂದ್ಯ
ಗಾಯಗೊಂಡಿರುವ ಫಖಾರ್ ಝಮಾನ್ ಬದಲಿಗೆ ಇಮಾಮ್-ಉಲ್-ಹಕ್ ಅವರನ್ನು ಐಸಿಸಿ ಅನುಮೋದಿಸಿದೆ. ಫೆಬ್ರವರಿ 23 ರಂದು ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ಸೆಮಿಫೈನಲ್ಸ್ ಹಾದಿಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಪಾಕಿಸ್ತಾನ ತಂಡಕ್ಕೆ ಭಾರತದ ವಿರುದ್ಧ ಗೆಲುವು ಅನಿವಾರ್ಯ. ಏಕೆಂದರೆ ಪ್ರತಿ ಗುಂಪಿನಿಂದ ಎರಡು ತಂಡಗಳು ಮಾತ್ರ ನಾಕೌಟ್ ಹಂತಕ್ಕೆ ತಲುಪಲಿವೆ. ಈ ಗುಂಪಿನಲ್ಲಿ ಬಾಂಗ್ಲಾದೇಶ ನಾಲ್ಕನೇ ತಂಡವಾಗಿದ್ದು, ನ್ಯೂಜಿಲೆಂಡ್ ಈಗಾಗಲೇ ಕರಾಚಿಯಲ್ಲಿ ತನ್ನ ಪಂದ್ಯವನ್ನು ಗೆದ್ದಿದೆ.