Pralhad Joshi: ʻಏನ್ ದೋಸ್ತ...ಹೆಂಗ ಇದ್ದೀ...ʼ ಬಾಲ್ಯದ ಆಪ್ತಮಿತ್ರರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ನೇಹಕೂಟ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi)ಯವರು ಶುಕ್ರವಾರ ತಮ್ಮ ಬಾಲ್ಯದ ಗೆಳೆಯರನ್ನು ಭೇಟಿಯಾಗಿ ಕಾಲ ಕಳೆದರು. ಬೆಂಗಳೂರಿನಲ್ಲಿ ಸ್ನೇಹ ಸಮ್ಮಿಲನದಲ್ಲಿ ಭಾಗಿಯಾಗಿ ತಮ್ಮನ್ನು ಭೇಟಿಯಾದ ಹೈಸ್ಕೂಲ್ ಗೆಳಯರ ಜೊತೆ ಕೆಲ ಕಾಲ ಹರಟೆ ಹೊಡೆದರು. ಹೋಳಿ ಹಬ್ಬದ ದಿನ ಬೆಂಗಳೂರಿನಲ್ಲಿ ಹುಬ್ಬಳ್ಳಿಯ ಅಷ್ಟೂ ಮಂದಿ ಬಾಲ್ಯದ ಸ್ನೇಹಿತರು ಸೇರಿ ನಲಿದಾಡಿದರು. ಅದೆಷ್ಟೋ ವರ್ಷಗಳ ಬಳಿಕ ಆದ ಸ್ನೇಹಿತರ ಸಮಾಗಮದ ಖುಷಿಗೆ ಪಾರವೇ ಇರಲಿಲ್ಲ.


ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi)ಯವರು ಶುಕ್ರವಾರ ತಮ್ಮ ಬಾಲ್ಯದ ಗೆಳೆಯರನ್ನು ಭೇಟಿಯಾಗಿ ಕಾಲ ಕಳೆದರು. ಬೆಂಗಳೂರಿನಲ್ಲಿ ಸ್ನೇಹ ಸಮ್ಮಿಲನದಲ್ಲಿ ಭಾಗಿಯಾಗಿ ತಮ್ಮನ್ನು ಭೇಟಿಯಾದ ಹೈಸ್ಕೂಲ್ ಗೆಳಯರ ಜೊತೆ ಕೆಲ ಕಾಲ ಹರಟೆ ಹೊಡೆದರು. ಬಾಲ್ಯದ ಗೆಳೆಯರನ್ನು ಕಂಡು ತಾವೊಬ್ಬ ಕೇಂದ್ರ ಸಚಿವ ಎಂಬುದನ್ನು ಮರೆತು ಜೋಶಿ ಆಪ್ತಮಿತ್ರ ಬಳಗದಲ್ಲಿ ನಕ್ಕು ನಲಿದರು. ಹೋಳಿ ಹಬ್ಬದ ದಿನ ಬೆಂಗಳೂರಿನಲ್ಲಿ ಹುಬ್ಬಳ್ಳಿಯ ಅಷ್ಟೂ ಮಂದಿ ಬಾಲ್ಯದ ಸ್ನೇಹಿತರು ಸೇರಿ ನಲಿದಾಡಿದರು. ಅದೆಷ್ಟೋ ವರ್ಷಗಳ ಬಳಿಕ ಆದ ಸ್ನೇಹಿತರ ಸಮಾಗಮದ ಖುಷಿಗೆ ಪಾರವೇ ಇರಲಿಲ್ಲ. ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು 1978ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲೀಷ್ ಸ್ಕೂಲ್ ಅಲ್ಲಿ ಮೆಟ್ರಿಕ್ ಕಲೀತ್ತಿದ್ದಾಗಿನ ಬಾಲ್ಯದ ಆಪ್ತ ಸ್ನೇಹಿತರಿಗೆಲ್ಲಾ ಖುದ್ದು ಕರೆ ಮಾಡಿ "ಸ್ನೇಹಕೂಟ"ಕ್ಕೆ ಆಹ್ವಾನಿಸಿದ್ದರು.

ಸ್ನೇಹಿತರು ಕಂಡೊಡನೆ.. ʻಏನ್ ದೋಸ್ತ...ಹೆಂಗ ಇದ್ದೀ... ಎಷ್ಟು ದಿವಸದ ಮ್ಯಾಲೆ ಭೇಟಿ...ಏನ್ತಾನ...ಎಲ್ಲಾ ಆರಾಮ ಅಲಾ ಮತ್ತ... ಮತ್ತೇನಪಾ...ಮಕ್ಕಳದೆಲ್ಲಾ ಲಗ್ನ ಆತ ಇಲ್ಲ... ಎಷ್ಟ ಮೊಮ್ಮಕ್ಕಳು ಈಗ..? ಹೆಂಗಿದ್ದಿ ದೋಸ್ತ... ಏನ್ ಎಲ್ಲಾರೂ ಮಕ್ಕಳ ಜೊತಿ ಬೆಂಗ್ಳೂರ್ ಸೇರಿ...ಹುಬ್ಬಳ್ಳಿ ಮರೆತ ಬಿಟ್ಟಾಂಗ್ ಕಾಣ್ತದ...ನೀ ಏನಪಾ...ದೊಡ್ಡ ಮನಷ್ಯಾ ಈಗ...union minister. ಫುಲ್ ಬ್ಯುಸಿ. ಅದ್ಯಾವಾಗ ಸೌಡ್ ಇರ್ತಿಯೋ ನಾ ಕಾಣೆ..ಇವತ್ ಸಿಕ್ಕಿದ್ ಹೋಳಿ ಹಬ್ಬದಷ್ಟ ಖುಷಿ ಆತ್ ನೋಡ್.ಕೆಲ ದೋಸ್ತರನ್ನಂತೂ ಭೆಟ್ಟಿ ಆಗದ ಎಷ್ಟೋ ವರ್ಷಗಳೇ ಉರುಳಿದ್ವು ಆದ್ರ ಇವತ್ತು ಯೋಗ ಕೂಡಿ ಬಂತು ನೋಡ್ರಪ್ಪ...ಎನ್ನುತ್ತಲೇ ಜೋಶಿ ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡರು. ಎಲ್ಲರಲ್ಲೂ ಮಂದಹಾಸ.. ಆದರದ ಆತ್ಮೀಯತೆ...!
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೊಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ ಜೋಶಿ, ಇದ ಇವತ್ತ ನಾ 1978ರಾಗ ಮ್ಯಾಟ್ರಿಕ್ ಕಲಿಬೇಕಾರ ನನ್ನ ಜೊತಿ ನ್ಯೂ ಇಂಗ್ಲೀಷ್ ಸ್ಕೂಲ ಒಳಗ ಕಲಿತಿದ್ದ ದೋಸ್ತರ ಬೆಂಗಳೂರಾಗ ಸಿಕ್ಕಾಗ ನಡೆದ ಹರಟೆ. ಒಂದಿಷ್ಟ ದೋಸ್ತರನ್ನಂತೂ ಭೇಟ್ಟಿ ಆಗಲಾರದ ಎಷ್ಟ ವರ್ಷ ಆಗಿತ್ತೋ ಏನೋ...ಆದರ ಆತ್ಮೀಯತೆ ಏನ ಕಡಮಿ ಇರಲಿಲ್ಲಾ...ಎಷ್ಟಂದರೂ ದೋಸ್ತರ ದೋಸ್ತರ...ಯಾರ ಯಾ ಪೋಸ್ಟನಾಗ ಇದ್ದರೇನ ’ಬಾಲ್ಯದ ಆಟ.... ಆ ಹುಡುಗಾಟ... ಇನ್ನು ಮಾಸಿಲ್ಲಾ!’

ಈ ಸುದ್ದಿಯನ್ನೂ ಓದಿ: Prahlad Joshi: ಕರ್ನಾಟಕ ರೈಲ್ವೆಗೆ ಕೇಂದ್ರದಿಂದ ಯುಪಿಎ ಅವಧಿಗಿಂತ 9 ಪಟ್ಟು ಹೆಚ್ಚಿನ ಬಜೆಟ್: ಪ್ರಹ್ಲಾದ್ ಜೋಶಿ
ಅಂತಾರಲಾ ಹಂಗ ಇವತ್ತ ನನ್ನ ಹಳೇ ದೋಸ್ತರನ್ನ ಎಲ್ಲಾ ಭೇಟ್ಟಿ ಆಗಿ ಭಾರಿ ಖುಶಿ ಆತ.....ಹಂಗ ಎಲ್ಲಾರೂ ಸೇರಿ ಹಳೇದನ್ನ ಎಲ್ಲಾ ನೆನಸಿಗೊಂಡ ಅದರಾಗ ನಮಗ ಕಲಿಸಿದ್ದ ಗುರುಗಳ... ಲಕ್ಷ್ಮೇಶ್ವರ ಸರ್, ಕೊಪ್ಪರ ಸರ್ , ಭುಜಂಗ ಸರ್ ...ನಾತು ಸರ್ ....ಏನ್ ಜಿ ರಾಯಚೂರು ಸರ್. ಮುದಕವಿ ಸರ್ ಎಲ್ಲಾರನೂ ನೆನಸಿಕೊಂಡ, ನಮಿಸಿಕೊಂಡ ಅಗದಿ ಸಂತೋಷ ಆತ ಅನ್ನರಿ. ಏನಾ ಅನ್ನರಿ...’ ಸ್ನೇಹದ ಕಡಲಲ್ಲೀ..ನೆನಪಿನ ದೋಣಿಯಲೀ ’ ಮನಷ್ಯಾ ಆವಾಗ ಇವಾಗ ಟೈಮ್ ತಗದ ಪ್ರಯಾಣ ಮಾಡಬೇಕ. ಆವಾಗ ನಾವ ಎಷ್ಟ ದೂರ ಜೀವನದಾಗ ನಡದೇವಿ ಅನ್ನೋದ ಗೊತ್ತಾಗೋದ ಎಂದಿದ್ದಾರೆ.
ಹೀಗೆ ಬಾಲ್ಯ ಸ್ನೇಹಿತರು ಪರಸ್ಪರ ಹೋಳಿ ಹಬ್ಬದ ಶುಭಾಶಯ ಹಂಚಿಕೊಳ್ಳುತ್ತ ತುಸು ಹೊತ್ತು ಸ್ನೇಹ ಕೂಟದಲ್ಲಿ ಬಾಲ್ಯದ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಬಾಲ್ಯದ ಆಟ...ಆ ಹುಡುಗಾಟ...' ಎನ್ನುವಂತೆ ತುಸು ಹೊತ್ತು ಹರಟೆ ಹೊಡೆದು ನಕ್ಕು ನಲಿದರು. ತಮ್ಮ ಜೀವನಕ್ಕೆ ಅಕ್ಷರದ ಅಡಿಪಾಯ ಹಾಕಿಕೊಟ್ಟ ಮಾಸ್ತರುಗಳನ್ನು ಸ್ಮರಿಸಿಕೊಂಡರು. ಆ ಒಂದು ಕ್ಷಣ ಮತ್ತೆ ಎಲ್ಲರೂ ವಿದ್ಯಾರ್ಥಿ ಜೀವನದ ಗತ ಸನ್ನಿವೇಶಗಳ ನೆನಪಿನಂಗಳಕ್ಕೆ ಜಾರಿದರು. ತಮಗೆ ಪ್ರೀತಿಸಿ, ಶಿಕ್ಷಿಸಿ ತಿದ್ದಿ ತೀಡಿದ, ಹುಬ್ಬಳ್ಳಿಯಲ್ಲಿ ಜ್ಞಾನ ದಾಸೋಹ ಉಣಬಡಿಸಿದ ಗುರುಗಳನ್ನ ನೆನೆಯುತ್ತಲೇ ನಮಿಸಿದರು ಈ ವಯಸ್ಕರ ವಿದ್ಯಾರ್ಥಿಗಳು.

ಲಕ್ಷ್ಮೇಶ್ವರ ಸರ್, ಕೊಪ್ಪರ ಸರ್ , ಭುಜಂಗ ಸರ್ ...ನಾತು ಸರ್ ....ಏನ್.ಜಿ. ರಾಯಚೂರು ಸರ್., ಮುದಕವಿ ಸರ್ ಹೀಗೆ ಎಲ್ಲರನ್ನೂ ಒಂದು ಕ್ಷಣ ಕಣ್ಮುಂದೆ ತಂದುಕೊಂಡು ಸ್ನರಿಸಿದ ಸಚಿವರ ಈ ಬಾಲ್ಯ ಸ್ನೇಹಿತರ ಬಳಗದ ಗುರುಸ್ಮರಣೆ ಅವಿಸ್ಮರಣೀಯ. ಈ ಸನ್ನಿವೇಶ, ಪ್ರೀತಿ-ವಿಶ್ವಾಸ, ಸರಳ-ಸಜ್ಜನಿಕೆ, ಸ್ನೇಹಕ್ಕೆ ಮತ್ತೊಂದು ಹೆಸರೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಂಬುದನ್ನು ಹಳೆಯ ಹುಬ್ಬಳ್ಳಿ ನ್ಯೂ ಇಂಗ್ಲೀಷ್ ಸ್ಕೂಲ್ ಸ್ನೇಹಿತರ ಬಳಗಕ್ಕೆ ಮತ್ತೊಮ್ಮೆ ನೆನಪಿಸಿತು.ಈ ಸ್ನೇಹ ಕೂಟದಲ್ಲಿ ಜತೆಗೂಡಿ ಭೋಜನ ಸವಿದು ಉಭಯ ಕುಶಲೋಪರಿ ಹಂಚಿಕೊಂಡ ಬಾಲ್ಯದ ಆಪ್ತಮಿತ್ರರಿಗೆ ಸಚಿವ ಪ್ರಲ್ಹಾದ ಜೋಶಿ. ಎಲ್ಲರ ಜೀವನ ವರ್ಣಮಯವಾಗಿರಲೆಂದು ಹಾರೈಸಿ ಮತ್ತೊಮ್ಮೆ ಕೈ ಕುಲುಕಿ ನಿರ್ಗಮಿಸಿದರು.