WPL 2025: ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ಆರ್ಸಿಬಿ
WPL 2025: ಚೈನೆಲ್ ಹೆನ್ರಿ ಅವರು ಯು.ಪಿ. ವಾರಿಯರ್ಸ್ ತಂಡ ಸೇರಿದ ಬಳಿಕ ಬ್ಯಾಟಿಂಗ್ ಬಲ ಹೆಚ್ಚಿದೆ. ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಅವರು ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಿಂದ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಅಲ್ಲದೆ ಎಂಟು ಸಿಕ್ಸರ್ ಬಾರಿಸಿದ್ದರು. ಹೀಗಾಗಿ ಇವರನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರದಂತೆ ಆರ್ಸಿಬಿ ಬೌಲರ್ಗಳು ನೋಡಿಕೊಳ್ಳಬೇಕು.


ಬೆಂಗಳೂರು: ಒಂದು ದಿನದ ವಿರಾಮದ ಬಳಿಕ ಮತ್ತೆ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆರಂಭಗೊಳ್ಳಲಿದೆ. ಇಂದು(ಸೋಮವಾರ) ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ ನಡೆಯುವ ಪಂದ್ಯದಲ್ಲಿ ತವರಿನ ಆರ್ಸಿಬಿ ಮತ್ತು ಯುಪಿ ವಾರಿಯರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಡೆಲ್ಲಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಖಾತೆ ತೆರೆದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ದೀಪ್ತಿ ಶರ್ಮಾ ಪಡೆ ಇಂದಿನ ಪಂದ್ಯದಲ್ಲಿಯೂ ಗೆಲುವಿನ ನಿರೀಕ್ಷೆಯಲ್ಲಿದೆ. ವಡೋದರಲ್ಲಿ ಸತತ 2 ಪಂದ್ಯ ಗೆದ್ದ ಬಳಿಕ ತವರಿನಲ್ಲಿ ಮಂಕಾಗಿರುವ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ಮತ್ತೆ ಗೆಲುವಿನ ಹಳಿ ಏರುವ ಪ್ರಯತ್ನದಲ್ಲಿದೆ. ಹೀಗಾಗಿ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಅಧಿಕ.
ಆರ್ಸಿಬಿ ಪರ ನಾಯಕಿ ಮಂಧಾನ ಮಧ್ಯಮ ಕ್ರಮಾಂಕದ ಆಸೀಸ್ ಬ್ಯಾಟರ್ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ಇವರ ವಿಕೆಟ್ ಬೇಗನೆ ಬಿದ್ದರೆ ತಂಡಕ್ಕೆ ಆಸರೆಯಾಗಬಲ್ಲ ಆಟಗಾರ್ತಿಯರ ಕೊರತೆ ಎದ್ದು ಕಾಣುತ್ತಿದೆ. ತಂಡದಲ್ಲಿರುವ ಅನುಭವಿ ಡೇನಿಯಲ್ ವ್ಯಾಟ್, ರಾಘವಿ ಬಿಷ್ಠ್ ಮತ್ತು ಕನಿಕಾ ಅಹುಜಾ ಅವರು ತಮಗೆ ಲಭಿಸಿದ ಅವಕಾಶವನ್ನು ಬಳಸಿಕೊಂಡರೆ ತಂಡವು ದೊಡ್ಡ ಮೊತ್ತ ಪೇರಿಸಬಹುದು.
ಚೈನೆಲ್ ಹೆನ್ರಿ ಅವರು ಯು.ಪಿ. ವಾರಿಯರ್ಸ್ ತಂಡ ಸೇರಿದ ಬಳಿಕ ಬ್ಯಾಟಿಂಗ್ ಬಲ ಹೆಚ್ಚಿದೆ. ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಅವರು ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಿಂದ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಅಲ್ಲದೆ ಎಂಟು ಸಿಕ್ಸರ್ ಬಾರಿಸಿದ್ದರು. ಹೀಗಾಗಿ ಇವರನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರದಂತೆ ಆರ್ಸಿಬಿ ಬೌಲರ್ಗಳಾದ ಜಾರ್ಜಿಯಾ ವೇರ್ಹ್ಯಾಮ್, ಕಿಮ್ ಗಾರ್ಥ್ ಮತ್ತು ರೇಣುಕಾ ಸಿಂಗ್ ನೋಡಿಕೊಳ್ಳಬೇಕಿದೆ. ಒಮ್ಮೆ ಹೆನ್ರಿ ಸಿಡಿಯಲಾರಂಭಿಸಿದರೆ ಮತ್ತೆ ಅವರನ್ನು ತಡೆದು ನಿಲ್ಲಿಸುವುದು ಕಷ್ಟ ಸಾಧ್ಯ. ಮತ್ತೊಬ್ಬ ಆಟಗಾತ್ರಿಯಾದ ಗ್ರೇಸ್ ಹ್ಯಾರಿಸ್ ಇದುವರೆಗೂ ತಮ್ಮ ಆಟ ಪ್ರದರ್ಶಿಸಿಲ್ಲ. ಅವರು ಕೂಡ ಕ್ಲಿಕ್ ಆದರೆ ಮತ್ತೆ ಯುಪಿ ತಂಡಕ್ಕೆ ಗೆಲುವಿಗೆ ಕೊರತೆ ಉಂಟಾಗದು.
ಸಂಭಾವ್ಯ ತಂಡಗಳು
ಆರ್ಸಿಬಿ: ಸ್ಮೃತಿ ಮಂದಾನ (ನಾಯಕ) ಡೇನಿಯಲ್ ವ್ಯಾಟ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿ.ಕೀ.), ರಾಘ್ವಿ ಬಿಸ್ಟ್, ಕನಿಕಾ ಅಹುಜಾ, ಜಾರ್ಜಿಯಾ ವೇರ್ಹ್ಯಾಮ್, ಕಿಮ್ ಗಾರ್ತ್, ಏಕ್ತಾ ಬಿಶ್ತ್, ಜೋಶಿತಾ ವಿಜೆ, ರೇಣುಕಾ ಸಿಂಗ್ ಠಾಕೂರ್.
ಯುಪಿ ವಾರಿಯರ್ಸ್: ಕಿರಣ್ ನವಗಿರೆ, ವೃಂದಾ ದಿನೇಶ್, ದೀಪ್ತಿ ಶರ್ಮಾ (ನಾಯಕಿ), ತಹ್ಲಿಯಾ ಮೆಕ್ಗ್ರಾತ್, ಶ್ವೇತಾ ಸೆಹ್ರಾವತ್, ಗ್ರೇಸ್ ಹ್ಯಾರಿಸ್, ಚಿನೆಲ್ಲೆ ಹೆನ್ರಿ, ಸೋಫಿ ಎಕ್ಲೆಸ್ಟೋನ್, ಉಮಾ ಚೆಟ್ರಿ (ವಿ.ಕೀ.), ಕ್ರಾಂತಿ ಗೌಡ್, ಸೈಮಾ ಠಾಕೋರ್.