ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

RCBW vs DCW: ಎಲಿಸ್‌ ಪೆರಿ ಅರ್ಧಶತಕ ವ್ಯರ್ಥ, ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಆರ್‌ಸಿಬಿಗೆ ಸೋಲು!

RCBW vs DCW Match Highlights: ತವರು ಅಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸತತ ನಾಲ್ಕನೇ ಪಂದ್ಯದಲ್ಲಿ ಸೋಲು ಅನುಭವಿಸಿತು. ಶನಿವಾರ ನಡೆದಿದ್ದ ಮಹಿಳಾ ಪ್ರೀಮಿಯರ್‌ ಲೀಗ್‌ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ ವಿರುದ್ದ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು.

ಡೆಲ್ಲಿಗೆ ಹ್ಯಾಟ್ರಿಕ್‌ ಜಯ, ತವರಿನಲ್ಲಿ ಆರ್‌ಸಿಬಿಗೆ ಸತತ  4ನೇ ಸೋಲು!

ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಆರ್‌ಸಿಬಿಗೆ ಸೋಲು!

Profile Ramesh Kote Mar 1, 2025 10:59 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಆಡಿದ ತನ್ನ ಕೊನೆಯ ಪಂದ್ಯದಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 9 ವಿಕೆಟ್‌ ಸೋಲು ಅನುಭವಿಸಿತು. ಆ ಮೂಲಕ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲಿನ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಆಂದ ಹಾಗೆ ಬೆಂಗಳೂರಿನಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಗೆಲ್ಲದ ಆರ್‌ಸಿಬಿ, ತನ್ನ ಅಭಿಮಾನಿಗಳಿಗೆ ಭಾರಿ ನಿರಾಶೆಯನ್ನು ಮೂಡಿಸಿತು.

ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪ್ಲೇಆಫ್‌ಗೆ ಅಧಿಕೃತವಾಗಿ ಪ್ರವೇಶ ಮಾಡಿತು. ಬೌಲಿಂಗ್‌ನಲ್ಲಿ ಶಿಖಾ ಪಾಂಡೆ ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ್ದರೆ, ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಶಫಾಲಿ ವರ್ಮಾ (80*) ಹಾಗೂ ಜೆಸ್‌ ಜೊನಾಸೆನ್‌ (61*) ಸ್ಪೋಟಕ ಬ್ಯಾಟಿಂಗ್‌ ಮೂಲಕ ಬೆವರಿಳಿಸಿದರು.

WPL 2025: ಮೊಟ್ಟ ಮೊದಲ ಸೂಪರ್‌ ಓವರ್‌ನಲ್ಲಿ ಯುಪಿ ವಾರಿಯರ್ಸ್‌ ಎದುರು ಸೋತ ಆರ್‌ಸಿಬಿ!

ಶಫಾಲಿ-ಜೊನಾಸೆನ್‌ ಜುಗಲ್‌ಬಂದಿ

ಆರ್‌ಸಿಬಿ ನೀಡಿದ 148 ರನ್‌ಗಳ ಅಲ್ಪ ಮೊತ್ತವನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 5 ರನ್‌ ಇರುವಾಗಲೇ ಮೆಗ್‌ ಲ್ಯಾನಿಂಗ್‌ ವಿಕೆಟ್‌ ಅನ್ನು ಕಳೆದುಕೊಂಡಿತ್ತು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಶಫಾಲಿ ವರ್ಮಾ ಮತ್ತು ಜೆಸ್‌ ಜೊನಾಸೆನ್‌ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎರಡನೇ ವಿಕೆಟ್‌ಗೆ 142 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಡೆಲ್ಲಿ 15.3 ಓವರ್‌ಗಳಿಗೆ ಕೇವಲ ಒಂದು ವಿಕೆಟ್‌ ಕಳೆದುಕೊಂಡು 151 ರನ್‌ಗಳಿಸಿ ಗೆಲುವಿನ ದಡ ಸೇರಿತು.



ಅಬ್ಬರಿಸಿದ ಶಫಾಲಿ-ಜೊನಾಸೆನ್‌

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಶಫಾಲಿ ವರ್ಮಾ ಕೇವಲ 43 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 80 ರನ್‌ ಗಳನ್ನು ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್‌ ನೀಡುತ್ತಿದ್ದ ಜೆಸ್‌ ಜೊನಾಸೆನ್‌ 38 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 61 ರನ್‌ಗಳನ್ನು ಚಚ್ಚಿದರು. ಈ ಇಬ್ಬರ ಅಬ್ಬರದ ಬ್ಯಾಟಿಂಗ್‌ ಎದುರು ಆರ್‌ಸಿಬಿ ಬೌಲರ್‌ಗಳು ಕಂಗಾಲಾದರು. ಅಂತಿಮವಾಗಿ ಡೆಲ್ಲಿ ಹ್ಯಾಟ್ರಿಕ್‌ ಗೆಲುವನ್ನು ತನ್ನದಾಗಿಸಿಕೊಂಡಿತು. ಡೆಲ್ಲಿ ಪರ ಅಬ್ಬರಿಸಿದ ಶಫಾಲಿ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



147 ರನ್‌ ಗಳಿಸಿದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಎಲಿಸ್‌ ಪೆರಿ (60*)‌ ಅವರ ಏಕಾಂಗಿ ಹೊರಾಟದ ಹೊರತಾಗಿಯೂ ಇತರೆ ಬ್ಯಾಟರ್‌ಗಳ ವೈಫಲ್ಯದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 147 ರನ್‌ಗಳನ್ನಷ್ಟೇ ಕಲೆ ಹಾಕಲು ಶಕ್ತವಾಯಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 148 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ನೀಡಿತು.



ಎಲಿಸ್‌ ಪೆರಿ ಏಕಾಂಗಿ ಹೋರಾಟ

ಆರ್‌ಸಿಬಿಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ನಾಯಕಿ ಸ್ಮೃತಿ ಮಂಧಾನಾ ಕೇವಲ 8 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ವ್ಯಾಟ್‌ ಹಾಡ್ಜ್‌ 18 ಎಸೆತಗಳಲ್ಲಿ 21 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಎಲಿಸ್‌ ಪೆರಿ ಮತ್ತೊಂದು ಅರ್ಧಶತಕವನ್ನು ಬಾರಿಸಿದರು. ಅವರು ಆಡಿದ 47 ಎಸೆತಗಳಲ್ಲಿ ತಲಾ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 60 ರನ್‌ ಸಿಡಿಸಿದರು. ಆ ಮೂಲಕ ಆರ್‌ಸಿಬಿ 140ರ ಗಡಿ ದಾಟಲು ಸಾಧ್ಯವಾಯಿತು. ಇಲ್ಲವಾದಲ್ಲಿ ಆರ್‌ಸಿಬಿ 120 ರನ್‌ ಗಳಿಸಲು ಸಾಧ್ಯವಾಗುತ್ತಿರಲಿಲ್ಲ.

ಒಂದು ತುದಿಯಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡುತ್ತಿದ್ದ ಎಲಿಸ್‌ ಪೆರಿಗೆ ಮತ್ತೊಂದು ತುದಿಯಲ್ಲಿ ಕೆಲ ಕಾಲ ಸಾಥ್‌ ನೀಡಿದ್ದ ರಾಘ್ವಿ ಬಿಸ್ಟ್‌ 32 ಎಸೆತಗಳಲ್ಲಿ 33 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟರ್‌ಗಳು ಎಲಿಸ್‌ ಪೆರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಲಿಲ್ಲ. ಇದರ ಪರಿಣಾಮವಾಗಿ ಆರ್‌ಸಿಬಿ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ. ರಿಚಾ ಘೋಷ್‌ ಹಾಗೂ ಕನಿಕಾ ಅಹುಜಾ ಬ್ಯಾಟಿಂಗ್‌ನಲ್ಲಿ ನಿರಾಶೆ ಮೂಡಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಶಿಖಾ ಪಾಂಡೆ ಮತ್ತು ನಲಪುರೆಡ್ಡಿ ಚಾರಣಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.



ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 147-5 (ಎಲಿಸ್‌ ಪೆರಿ 60*, ರಾಘ್ವಿ ಬಿಸ್ಟ್‌ 33, ವ್ಯಾಟ್‌ ಹಾಡ್ಜ್‌ 21; ಶಿಖಾ ಪಾಂಡೆ 24ಕ್ಕೆ 2, ನಲಪುರೆಡ್ಡಿ ಚಾರಣಿ 28ಕ್ಕೆ 2)

ಡೆಲ್ಲಿ ಕ್ಯಾಪಿಟಲ್ಸ್‌: 15.3 ಓವರ್‌ಗಳಿಗೆ 151-1 (ಶಫಾಲಿ ವರ್ಮಾ 80*, ಜೆಸ್‌ ಜೊನಾಸೆನ್‌ 61* (ರೇಣುಕಾ ಸಿಂಗ್‌ 28 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಶಫಾಲಿ ವರ್ಮಾ