Champions Trophy: ಅಫ್ಘಾನಿಸ್ತಾನ ಔಟ್, ಸೆಮಿಫೈನಲ್ಸ್‌ಗೆ ದಕ್ಷಿಣ ಆಫ್ರಿಕಾ ಪ್ರವೇಶ!
Afghanistan out of Semis: ಶನಿವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಎದುರಾಳಿ ತಂಡವನ್ನು 179 ರನ್‌ಗಳಿಗೆ ಆಲ್‌ಔಟ್ ಮಾಡಿದ ಬಳಿಕ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಆ ಮೂಲಕ ಮೂರು ಅಂಕಗಳನ್ನು ಹೊಂದಿದ್ದ ಅಫ್ಘಾನಿಸ್ತಾನ ತಂಡ ಸೆಮೀಸ್ ರೇಸ್‌ನಿಂದ ಹೊರ ಬಿದ್ದಿದೆ.

ಸೆಮಿಫೈನಲ್ ರೇಸ್‌ನಿಂದ ಅಫ್ಘಾನಿಸ್ತಾನ ಔಟ್.

ನವದೆಹಲಿ: ಅಫ್ಘಾನಿಸ್ತಾನ ತಂಡದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ ಕನಸು ಭಗ್ನವಾಗಿದೆ. ಶನಿವಾರದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 179 ರನ್‌ಗಳನ್ನು ಆಲ್‌ಔಟ್ ಮಾಡಿದ ಬಳಿಕ ದಕ್ಷಿಣ ಆಫ್ರಿಕಾ ತಂಡ ಗ್ರೂಪ್ ಬಿ ನಿಂದ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿದೆ. ಇದರೊಂದಿಗೆ ಅಫ್ಘಾನಿಸ್ತಾನ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರ ನಡೆಯಿತು.
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡ, ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನವನ್ನು ತೋರಲು ಸಾಧ್ಯವಾಗಲಿಲ್ಲ. ಮಾರ್ಕೊ ಯೆನ್ಸನ್ ಹಾಗೂ ವಿಯಾನ್ ಮುಲ್ಡರ್ ಅವರ ಮಾರಕ ಬೌಲಿಂಗ್ ದಾಳಿಗೆ ನುಲುಗಿದ ಆಂಗ್ಲರ ಪಡೆ 38.2 ಓವರ್‌ಗಳಿಗೆ 179 ರನ್ ಗಳನ್ನು ಗಳಿಸಿ ಆಲ್‌ಔಟ್ ಆಯಿತು. ಈ ಪಂದ್ಯದ ಪ್ರಥಮ ಇನಿಂಗ್ಸ್ ಮುಗಿದ ಬೆನ್ನಲ್ಲೆ ಟೂರ್ನಿಯ ಗ್ರೂಪ್ ಬಿ ನಿಂದ ಆಸ್ಟ್ರೇಲಿಯಾ ಜೊತೆಗೆ ದಕ್ಷಿಣ ಆಫ್ರಿಕಾ ತಂಡ ಕೂಡ ಸೆಮಿಫೈನಲ್‌ಗೆ ಅಧಿಕೃತವಾಗಿ ಪ್ರವೇಶ ಮಾಡಿದೆ.
AFG vs AUS: ಮಳೆಯಿಂದ ಪಂದ್ಯ ರದ್ದು; ಸೆಮಿಫೈನಲ್ ಪ್ರವೇಶಿಸಿದ ಆಸೀಸ್
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಬಿ ನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ಸೆಮಿಫೈನಲ್ ರೇಸ್‌ನಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಏಕೆಂದರೆ ಈ ಗುಂಪಿನ ಕೆಲ ಪಂದ್ಯಗಳಿಗೆ ಮಳೆ ಪ್ರಭಾವ ಬೀರಿತ್ತು ಹಾಗೂ ಪಂದ್ಯಗಳು ಮಳೆಯಿಂದ ರದ್ದಾಗಿದ್ದವು. ಇಂಗ್ಲೆಂಡ್ ತಂಡವನ್ನು ಹೊರತುಪಡಿಸಿ ಇನ್ನುಳಿದ ಮೂರೂ ತಂಡಗಳು ಕೂಡ ಕೊನೆಯ ತನಕ ಸೆಮಿಫೈನಲ್ ರೇಸ್‌ನಲ್ಲಿ ಉಳಿದಿದ್ದವು.
ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ ಶುಕ್ರವಾರದ ಪಂದ್ಯ ಮಳೆಯಿಂದ ರದ್ದಾಗಿತ್ತು. ಆ ಮೂಲಕ ಆಫ್ಘನ್ ಮತ್ತು ಆಫ್ರಿಕಾ ತಂಡಗಳು ತಲಾ ಮೂರು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಟೈ ಆಗಿದ್ದವು. ಆ ಮೂಲಕ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಣ ಶನಿವಾರದ ಪಂದ್ಯದ ಫಲಿತಾಂಶ ಅಫ್ಘಾನಿಸ್ತಾನ ತಂಡದ ಸೆಮೀಸ್ ಭವಿಷ್ಯವನ್ನು ನಿರ್ಧಾರವಾಗಿತ್ತು. ಆದರೆ, ಇಂಗ್ಲೆಂಡ್ ತಂಡ 179 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ಆಫ್ಘಾನ್ ತಂಡದ ಸೆಮೀಸ್ ಕನಸು ಭಗ್ನವಾಯಿತು.
ಆಫ್ರಿಕಾ ಎದುರು ಇಂಗ್ಲೆಂಡ್ 207 ರನ್ ಅಂತರದಲ್ಲಿ ಜಯಿಸಬೇಕಾಗಿತ್ತು
ಶನಿವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಇಂಗ್ಲೆಂಡ್ 207 ರನ್‌ಗಳ ಅಂತರದಲ್ಲಿ ಸೋಲಿಸಬೇಕಾಗಿತ್ತು. ಆಗ ನೆಟ್ ರನ್‌ರೇಟ್ ಆಧಾರದ ಮೇಲೆ ಅಫ್ಘಾನಿಸ್ತಾನ ತಂಡ ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶ ಮಾಡುತ್ತಿತ್ತು. ಆದರೆ, ಇಂಗ್ಲೆಂಡ್ ತಂಡ ಬ್ಯಾಝ್‌ಬಾಲ್ ಆಟಕ್ಕೆ ಕೈ ಹಾಕಿ ಕನಿಷ್ಠ 200 ರನ್‌ಗಳನ್ನು ಕೂಡ ಕಲೆ ಹಾಕಲು ಸಾಧ್ಯವಾಗಲಿಲ್ಲ. ತಮ್ಮ ನಾಯಕತ್ವದಲ್ಲಿ ಕೊನೆಯ ಪಂದ್ಯವನ್ನು ಆಡಿದ ಜೋಸ್ ಬಟ್ಲರ್ 44 ಎಸೆತಗಳಲ್ಲಿ 37 ರನ್ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.