ಕೇಂದ್ರ ಸರ್ಕಾರದಿಂದ 310 ಲಕ್ಷ ಮೆ. ಟನ್ ಗೋಧಿ, 70 ಲಕ್ಷ ಮೆ.ಟನ್ ಭತ್ತ ಸಂಗ್ರಹಣೆ ಗುರಿ
ಕೇಂದ್ರ ಸರ್ಕಾರ ಮುಂಬರುವ ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶ ಮತ್ತು ವಿವಿಧ ರಾಜ್ಯಗಳಿಂದ ಒಟ್ಟು 310 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 70 ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರಹಣೆಗೆ ಗುರಿ ಹಾಕಿಕೊಂಡಿದೆ. ಈ ಕುರಿತ ವಿವರ ಇಲ್ಲಿದೆ.


ನವದೆಹಲಿ: ಕೇಂದ್ರ ಸರ್ಕಾರ (Central Government) ಮುಂಬರುವ ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶ ಮತ್ತು ವಿವಿಧ ರಾಜ್ಯಗಳಿಂದ ಒಟ್ಟು 310 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 70 ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರಹಣೆಗೆ ಗುರಿ ಹಾಕಿಕೊಂಡಿದೆ. ದೆಹಲಿಯಲ್ಲಿ ಇಂದು ನಡೆದ ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ ರಾಜ್ಯಗಳ ಆಹಾರ ಇಲಾಖೆ ಕಾರ್ಯದರ್ಶಿಗಳ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮುಂದಿನ ಮಾರುಕಟ್ಟೆ ಋತುವಿನಲ್ಲಿ ಗೋಧಿ ಮತ್ತು ರಬಿ ಬೆಳೆಗಳ ಸಂಗ್ರಹಣೆಯನ್ನು ಗರಿಷ್ಠಗೊಳಿಸಲು ಮತ್ತು ಪೂರ್ವಭಾವಿ ವಿಧಾನ ಅಳವಡಿಸಿಕೊಳ್ಳಲು ನಿರ್ದೇಶನ ನೀಡಲಾಯಿತು. ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆ ಬಗ್ಗೆ ಪರಿಶೀಲನೆ ನಡೆಸಿ, ಈ ಬಗ್ಗೆ ತಿಳಿಸಲಾಯಿತು.
2025-26ರ ರಬಿ ಮಾರುಕಟ್ಟೆ ಋತುವಿನಲ್ಲಿ (RMS) ಮತ್ತು 2024-25ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (KMS) ರಬಿ ಬೆಳೆಗಳ ಖರೀದಿ ವ್ಯವಸ್ಥೆ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಮುಂಬರುವ RMS 2025-26ರ ಅವಧಿಯಲ್ಲಿ ಗೋಧಿ ಸಂಗ್ರಹಣೆ ಅಂದಾಜು 310 ಲಕ್ಷ ಮೆಟ್ರಿಕ್ ಟನ್, ಅದೇ ರೀತಿ, KMS 2024-25 (ರಬಿ ಬೆಳೆ) ಅವಧಿಯಲ್ಲಿ ಭತ್ತ ಸಂಗ್ರಹಣೆ ಅಂದಾಜು 70 LMT ನಿಗದಿಪಡಿಸಲಾಗಿದೆ.
ಖಾರಿಫ್ ಮಾರುಕಟ್ಟೆ ಋತು 2024-25ರಲ್ಲಿ (ರಬಿ ಬೆಳೆ) ರಾಜ್ಯಗಳು ರಾಗಿ (ಶ್ರೀ ಅಣ್ಣಾ) ಸೇರಿದಂತೆ ಸುಮಾರು 16 ಲಕ್ಷ ಮೆಟ್ರಿಕ್ ಟನ್ ಒರಟು ಧಾನ್ಯಗಳ ಖರೀದಿ ಅಂದಾಜಿಸಲಾಗಿದೆ. ಬೆಳೆಗಳ ವೈವಿಧ್ಯೀಕರಣ ಮತ್ತು ಆಹಾರ ಪದ್ಧತಿಯಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ರಾಗಿ ಖರೀದಿಯತ್ತ ಹೆಚ್ಚು ಗಮನಹರಿಸುವಂತೆ ಸೂಚಿಸಿದೆ.
ಹವಾಮಾನ ಮುನ್ಸೂಚನೆ, ಉತ್ಪಾದನಾ ಅಂದಾಜು ಮತ್ತು ಖರೀದಿ ಕಾರ್ಯಾಚರಣೆಗಳಿಗೆ ರಾಜ್ಯಗಳ ಸಿದ್ಧತೆ ಹಾಗೂ ಖರೀದಿ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳ ಬಗ್ಗೆ ಸಭೆಯಲ್ಲಿ ಪರಿಶೀಲಿಸಲಾಯಿತು. ಅಲ್ಲದೇ, ಟಿಪಿಡಿಎಸ್ ನಿಯಂತ್ರಣ ಆದೇಶದಲ್ಲಿನ ಪ್ರಸ್ತಾವಿತ ಸುಧಾರಣೆಗಳು, ಸ್ಮಾರ್ಟ್ ಪಿಡಿಎಸ್, ಇ-ಕೆವೈಸಿ, ಮ್ಯಾಪರ್ ಎಸ್‌ಒಪಿ, ಜನ ಪೋಷಣ್ ಕೇಂದ್ರಗಳು ಮತ್ತು ಖರೀದಿ ಕೇಂದ್ರಗಳಲ್ಲಿನ ಮೂಲಸೌಕರ್ಯ ಸುಧಾರಣೆ ಮುಂತಾದ ಉಪಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.
ಈ ಸುದ್ದಿಯನ್ನೂ ಓದಿ | Janapada Academy Award: 30 ಕಲಾವಿದರು, ತಜ್ಞರು ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ
ಸಭೆಯಲ್ಲಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳು ಹಾಗೂ ಭಾರತೀಯ ಆಹಾರ ನಿಗಮ (ಎಫ್‌ಸಿಐ), ಗೋದಾಮು ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ಡಬ್ಲ್ಯೂಡಿಆರ್‌ಎ), ಭಾರತ ಹವಾಮಾನ ಇಲಾಖೆ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.