ಕೋಲಾರದ ಚಿನ್ನ ನಟಿ ಸೌಂದರ್ಯ; 21 ವರ್ಷದ ಬಳಿಕ ಸಾವಿನ ವಿಚಾರ ಮುನ್ನೆಲೆಗೆ ಬಂದಿದ್ದೇಕೆ?
ಕೋಲಾರದ ಚಿನ್ನ ನಟಿ ಸೌಂದರ್ಯ; 21 ವರ್ಷದ ಬಳಿಕ ಸಾವಿನ ವಿಚಾರ ಮುನ್ನೆಲೆಗೆ ಬಂದಿದ್ದೇಕೆ?ಕೋಲಾರದ ಚಿನ್ನ ನಟಿ ಸೌಂದರ್ಯ; 21 ವರ್ಷದ ಬಳಿಕ ಸಾವಿನ ವಿಚಾರ ಮುನ್ನೆಲೆಗೆ ಬಂದಿದ್ದೇಕೆ?ಕೋಲಾರದ ಚಿನ್ನ ನಟಿ ಸೌಂದರ್ಯ; 21 ವರ್ಷದ ಬಳಿಕ ಸಾವಿನ ವಿಚಾರ ಮುನ್ನೆಲೆಗೆ ಬಂದಿದ್ದೇಕೆ?ಕೋಲಾರದ ಚಿನ್ನ ನಟಿ ಸೌಂದರ್ಯ; 21 ವರ್ಷದ ಬಳಿಕ ಸಾವಿನ ವಿಚಾರ ಮುನ್ನೆಲೆಗೆ ಬಂದಿದ್ದೇಕೆ?

ಅದು 2004ರ ಏಪ್ರಿಲ್ 17. ಅಂದರೆ ಸುಮಾರು 21 ವರ್ಷಗಳ ಹಿಂದೆ. ಒಡಲಲ್ಲಿ ಚಿಗುರೊಡೆಯುತ್ತಿದ್ದ ಹೊಸ ಜೀವವೊಂದನ್ನು ಹೊತ್ತುಕೊಂಡು ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ತನ್ನ ಸಹೋದರ ಅಮರ್‌ನಾಥ್, ಬಿಜೆಪಿ ಕಾರ್ಯಕರ್ತ ರಮೇಶ್ ಕದಮ್ ಮತ್ತು ಪೈಲಟ್ ಜಾಯ್ ಫಿಲಿಪ್ಸ್ ಅವರೊಂದಿಗೆ ಬೆಂಗಳೂರಿನಿಂದ ಆಂಧ್ರ ಪ್ರದೇಶದ ಕರೀಂ ನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸುವ ಸಲುವಾಗಿ ತೆರಳಲು ಹೆಲಿಕಾಫ್ಟರ್ ಹತ್ತಿದರು. ಆಗ ಬೆಳಗ್ಗೆ 11 ಗಂಟೆಯಾಗಿತ್ತು. ಟೇಕಾಫ್ ಆದ ವಿಮಾನ ಗಾಳಿಗೆರಗಿ ಐದೇ ಐದು ನಿಮಿಷವಾಗುತ್ತಷ್ಟೆ. ಪೈಲಟ್‌ನ ನಿಯಂತ್ರಣ ತಪ್ಪಿದ ಸೆಸ್ನಾ 180 ಹೆಸರಿನ ಹೆಲಿಕಾಫ್ಟರ್ ಬೆಂಕಿಯ ಉಂಡೆಯಾಗಿ ಸಿಡಿದು ನೆಲಕ್ಕಪ್ಪಳಿಸಿತು. ಬೆಂಗಳೂರಿನ ಬಳಿಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹೆಲಕಾಫ್ಟರ್‌ನೊಂದಿಗೆ ಅದರಲ್ಲಿದ್ದ ನಾಲ್ವರು ಸುಟ್ಟು ಕರಕಲಾದರು. ಆ ಮೂಲಕ ಸೌಂದರ್ಯ ಎನ್ನುವ ವಿವಿಧ ಚಿತ್ರರಂಗದಲ್ಲಿ ಸ್ಯಾಂಡಲ್‌ವುಡ್ ಕಂಪು ಬೀರುತ್ತಿದ್ದ ನಟಿ, ನಿರ್ಮಾಪಕಿ, ಸಾವಿರಾರು ಅಭಿಮಾನಿಗಳ ಪಾಲಿನ ಆರಾಧ್ಯ ದೇವತೆ, ಅಪ್ಪಟ ಕನ್ನಡ ಪ್ರತಿಭೆಯೊಂದರ ಯುಗಾಂತ್ಯವಾಯಿತು.
ಸಹಜ ನಟನೆ, ಆಕರ್ಷಕ ನಗು, ಚೆಲುವಿನಿಂದಲೇ ಪ್ರೇಕ್ಷಕರ ಗಮನ ಸೆಳೆದ ಸೌಂದರ್ಯ ಇಹಲೋಕ ತ್ಯಜಿಸಿ ಬರೋಬ್ಬರಿ 2 ದಶಕ ಕಳೆದರೂ ಇನ್ನೂ ಅವರನ್ನು ಅಭಿಮಾನಿಗಳು ಮರೆತಿಲ್ಲ. ಕನ್ನಡ ಮಾತ್ರವಲ್ಲ ತೆಲುಗು ಸಿನಿಮಾ ಪ್ರೇಕ್ಷಕರೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರ ಚಿತ್ರ ಟಿವಿಯಲ್ಲಿ ಪ್ರಸಾರವಾಗುತ್ತಿದೆ ಹಲವರ ಕಣ್ಣಂಚು ಈಗಲೂ ಒದ್ದೆಯಾಗುತ್ತದೆ. 90 ದಶಕದಲ್ಲಿ ಸೌಂದರ್ಯ ಮಾಡಿದ್ದ ಮೋಡಿಯೇ ಅಂತಹದ್ದು. ಅಭಿನಯಕ್ಕೆ ಪ್ರಾಶಸ್ತ್ಯವಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಅವರು ಆ ಪಾತ್ರದಲ್ಲೇ ಜೀವಿಸುತ್ತಿದ್ದರು. ಇದೇ ಕಾರಣಕ್ಕೆ 12 ವರ್ಷಗಳಲ್ಲಿ ಬರೋಬ್ಬರಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
1972ರ ಜುಲೈ 18ರಂದು ಕೋಲಾರದ ಮುಳಬಾಗಿಲಿನಲ್ಲಿ ಜನಿಸಿದ ಸೌಂದರ್ಯ ಅವರ ಮೂಲ ಹೆಸರು ಸೌಮ್ಯಾ. ಇವರ ತಂದೆ ಕೆ.ಎಸ್.ಸತ್ಯನಾರಾಯಣ ಮತ್ತು ತಾಯಿ ಮಂಜುಳಾ. ಸತ್ಯನಾರಾಯಣ ಅವರು ಚಿತ್ರರಂಗದಲ್ಲಿಯೂ ಕೆಲಸ ಮಾಡುತ್ತಿದ್ದರು. ಹೀಗಾಗಿ ಸಹಜವಾಗಿಯೇ ಸೌಂದರ್ಯ ಬಣ್ಣದ ಲೋಕದತ್ತ ಆಕರ್ಷಿತರಾಗಿದ್ದರು. ಬೆಂಗಳೂರಿನಲ್ಲೇ ಬೆಳೆದ ಸೌಂದರ್ಯ 1992ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ನಟನೆಯ ಮೊದಲ ಚಿತ್ರ ಕನ್ನಡದ ʼಗಂಧರ್ವʼ. ಮರುವರ್ಷವೇ ತೆಲುಗಿಗೂ ಕಾಲಿಟ್ಟರು. 1993ರಲ್ಲಿ ತೆರೆಕಂಡ ʼಮನವರಲಿ ಪೆಲ್ಲಿʼ ಮೊದಲ ತೆಲುಗು ಚಿತ್ರ. ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ಬ್ಯಾಕ್ ಟು ಬ್ಯಾಕ್ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದರು. ಕನ್ನಡಕ್ಕಿಂತ ಹೆಚ್ಚು ತೆಲುಗಿನಲ್ಲೇ ಅಭಿನಯಿಸಿದ್ದಾರೆ ಎನ್ನುವುದು ವಿಶೇಷ. ತೆಲುಗಿನಲ್ಲಿ ಸೌಂದರ್ಯ ಎಷ್ಟು ಜನಪ್ರಿಯರಾಗಿದ್ದರು ಎಂದರೆ 1998 ಮತ್ತು 2000ದಲ್ಲಿ ಅವರು ಅಭಿನಯಿಸಿದ ತಲಾ 9 ಚಿತ್ರಗಳು ತೆರೆಕಂಡಿದ್ದವು.
ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸೌಂದರ್ಯ ಹಸೆಮಣೆಗೇರಿದರು. 2003ರಲ್ಲಿ ಅವರು ಸಾಫ್ಟ್‌ವೇರ್ ಎಕ್ಸಿಕ್ಯೂಟಿವ್ ಜಿ. ಎಸ್.ರಘು ಅವರನ್ನು ವರಿಸಿದರು. ಹೆಲಿಕಾಫ್ಟರ್ ಅವಘಡದಲ್ಲಿ ಮರಣ ಹೊಂದುವಾಗ ಸೌಂದರ್ಯ 3 ತಿಂಗಳ ಗರ್ಭಿಣಿಯಾಗಿದ್ದರು.
ಪ್ರಶಸ್ತಿಗಳ ಗರಿ
ಸೌಂದರ್ಯ ಅವರನ್ನು ಅರಸಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ. ನಟನೆಗಾಗಿ 2 ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, 2 ಬಾರಿ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಮತ್ತು ವಿವಿಧ ಭಾಷೆಗಳಲ್ಲಿನ ಅಭಿನಯಕ್ಕೆ 4 ಬಾರಿ ಫಿಲ್ಮ್‌ಫೇರ್ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ.
ನಿರ್ಮಾಪಕಿಯೂ ಹೌದು
ನಟನೆಯ ಜತೆಗೆ ನಿರ್ಮಾಪಕಿಯಾಗಿಯೂ ಸೌಂದರ್ಯ ಗುರುತಿಸಿಕೊಂಡಿದ್ದಾರೆ. 2002ರಲ್ಲಿ ತೆರೆಕಂಡ ʼದ್ವೀಪʼ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಜತೆಗೆ ನಿರ್ಮಾಣವನ್ನೂ ಮಾಡಿದ್ದರು. ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಈ ಸಿನಿಮಾವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದರು. ದೇಶಾದ್ಯತಂತ ಗಮನ ಸೆಳೆದ ಈ ಚಿತ್ರ ಆ ಸಾಲಿನ 2 ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿಕೊಂಡಿತ್ತು. ಅತ್ಯತ್ತಮ ಚಿತ್ರ ಮತ್ತು ಎಚ್.ಎಂ.ರಾಮಚಂದ್ರ ಹಲ್ಕೆರೆ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿತ್ತು. ಇದಲ್ಲದೆ ಸೌಂದರ್ಯ 1998ರಲ್ಲಿ ಎಸ್.ಎಸ್.ಭೈರಪ್ಪ ಅವರ ಕಾದಂಬರಿ ಆಧಾರಿತ ʼಗೃಹಭಂಗʼ ಧಾರಾವಾಹಿಯನ್ನೂ ನಿರ್ಮಾಣ ಮಾಡಿದ್ದರು.
ದಿಢೀರ್ ಮುನ್ನೆಲೆಗೆ ಬಂದಿದ್ದು ಹೇಗೆ?
ಸೌಂದರ್ಯ ಅವರ ವಿಚಾರ ದಿಢೀರ್ ಆಗಿ ಮತ್ತೆ ಮುನ್ನೆಲೆಗೆ ಬರಲು ಕಾರಣವೂ ಇದೆ. ಇತ್ತೀಚೆಗೆ ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯ ಏದುರುಗಟ್ಲ ಚಿಟ್ಟಿಬಾಬು ಎನ್ನುವವರು ಸೌಂದರ್ಯ ಅವರದ್ದು ಆಕಸ್ಮಿಕ ಸಾವಲ್ಲ, ಅವರನ್ನು ತೆಲುಗಿನ ಹಿರಿಯ ನಟ ಮೋಹನ್ ಬಾಬು ಕೊಲೆ ಮಾಡಿಸಿದ್ದರು ಎನ್ನುವ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ಜಮೀನು ತಕರಾರಿನ ಕಾರಣಕ್ಕೆ ಮೋಹನ್ ಬಾಬು ಈ ಕೃತ್ಯ ಎಸಗಿದ್ದರು ಎಂದು ಹೇಳಿಕೆ ನೀಡಿ ಕೋಲಾಹಲವನ್ನೇ ಎಬ್ಬಿಸಿದ್ದರು. ಆ ಮೂಲಕ ಸೌಂದರ್ಯ ಅವರ ಸಾವಿನ ವಿಚಾರ 21 ವರ್ಷಗಳ ಬಳಿಕ ಮತ್ತೆಗೆ ಚರ್ಚೆಗೆ ಗ್ರಾಸವಾಯಿತು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ ಸೌಂದರ್ಯ ಅವರ ಪತಿ ಜಿ.ಎಸ್.ರಘು ವದಂತಿಯನ್ನು ತಳ್ಳಿ ಹಾಕಿದ್ದಾರೆ. "ಕೆಲ ದಿನಗಳಿಂದ ನಟ ಮೋಹನ್ ಬಾಬು ಹಾಗೂ ಸೌಂದರ್ಯಗೆ ಸಂಬಂಧಿಸಿದಂತೆ ಹೈದರಾಬಾದ್ ಆಸ್ತಿಯ ವಿಚಾರವಾಗಿ ಸುಳ್ಳು ಸುದ್ದಿ ಕೇಳಿಬರುತ್ತಿದೆ. ಈ ನಿರಾಧಾರ ಸುಳ್ಳು ಸುದ್ದಿಯನ್ನು ನಾನು ಖಂಡಿಸುತ್ತೇನೆ. ನನ್ನ ಪತ್ನಿ ದಿವಂಗತ ಸೌಂದರ್ಯ ಅವರಿಂದ ನಟ ಮೋಹನ್ ಬಾಬು ಯಾವ ಆಸ್ತಿಯನ್ನೂ ಅಕ್ರಮವಾಗಿ ತೆಗೆದುಕೊಳ್ಳಲಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ನನಗೆ ಗೊತ್ತಿರುವಂತೆ ನಾವು ಅವರೊಂದಿಗೆ ಯಾವುದೇ ಭೂ ವ್ಯವಹಾರ ನಡೆಸಿಲ್ಲ" ಎಂದು ರಘು ಬಹಿರಂಗ ಪತ್ರದಲ್ಲಿ ಬರೆದುಕೊಂಡಿದ್ದಾರೆ.
"ನನಗೆ ಕಳೆದ 25 ವರ್ಷಗಳಿಂದ ಮೋಹನ್ ಬಾಬು ಪರಿಚಯವಿದೆ. ಅವರೊಂದಿಗೆ ನಮ್ಮ ಕುಟುಂಬ ಬಹಳ ಆತ್ಮೀಯ, ಉತ್ತಮ ಸ್ನೇಹ ಹಂಚಿಕೊಂಡಿದೆ. ನನ್ನ ಪತ್ನಿ, ಅತ್ತೆ, ಭಾವನಿಗೆ ಮೋಹನ್ ಬಾಬು ಬಗ್ಗೆ ನಂಬಿಕೆ, ಗೌರವವಿದೆ. ನಾನು ಕೂಡ ಮೋಹನ್ ಬಾಬು ಅವರನ್ನು ತುಂಬಾ ಗೌರವಿಸುತ್ತೇನೆ. ಹಾಗಾಗಿ ಈ ಸತ್ಯವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಯಸುತ್ತೇನೆ. ನಾವೆಲ್ಲ ಒಂದೇ ಕುಟುಂಬದಂತೆ ಇದ್ದೇವೆʼʼ ಎಂದಿದ್ದಾರೆ. ಆ ಮೂಲಕ ಹುಟ್ಟಿಕೊಂಡ ಗಾಸಿಪ್‌ಗೆ ತೆರೆ ಎಳದಿದ್ದಾರೆ.
ಸೌಂದರ್ಯ ಮತ್ತು ಮೋಹನ್ ಬಾಬು ʼರಾಯುಡು', 'ಶ್ರೀರಾಮುಲಯ್ಯ', 'ಪೆದರಾಯುಡು', 'ಕೊಂಡವೀಟಿ ಸಿಂಹಾಸನ', 'ಪೋಸ್ಟ್ ಮ್ಯಾನ್' ತೆಲುಗು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. 'ಶಿವ ಶಂಕರ್' ಸೌಂದರ್ಯ ನಟಿಸಿದ ಕೊನೆಯ ಸಿನಿಮಾ. ಇದರಲ್ಲಿ ಮೋಹನ್ ಬಾಬು ಕೂಡ ನಟಿಸಿದ್ದರು. ಇದೀಗ ಚಿಟ್ಟಿಬಾಬು ಪ್ರಚಾರಕ್ಕಾಗಿ ಸುಳ್ಳು ಆರೋಪ ಹೊರಿಸಿದ್ದಾರೆ ಎನ್ನುವುದು ರಘು ಅವರ ಹೇಳಿಕೆಯಿಂದ ಸ್ಪಷ್ಟವಾಂತಾಗಿದೆ. ಅದೇನೇ ಇರಲಿ ಚಿತ್ರರಂಗದಲ್ಲಿ ಮಿಂಚಿ 32ನೇ ವರ್ಷಕ್ಕೆ ಸೌಂದರ್ಯ ಅಗಲಿದ್ದನ್ನು ಅನೇಕರಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಾಯುವ ವಯಸ್ಸು ಅಲ್ಲವೇ ಅಲ್ಲ ಎಂದು ಇಂದಿಗೂ ಪೇಚಾಡಿಕೊಳ್ಳುವವರಿದ್ದಾರೆ.