ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉತ್ತರ ಪ್ರದೇಶದ ದೇವಸ್ಥಾನವೊಂದರ ಶಿವಲಿಂಗ, ನಂದಿ ವಿಗ್ರಹ ವಿರೂಪ; ಭುಗಿಲೆದ್ದ ಆಕ್ರೋಶ

ಉತ್ತರ ಪ್ರದೇಶದ ಮೊಹಲ್ಲಾ ಬಡಾ ಬಜಾರ್‌ ದೇವಸ್ಥಾನವೊಂದರಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹವನ್ನು ವಿರೂಪಗೊಳಿಸಲಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಗುಂಪುಗೂಡಿ ಪ್ರತಿಭಟನೆ ನಡೆಸಿವೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹ ಕೇಳಿ ಬಂದಿದೆ.

ದೇವಸ್ಥಾನವೊಂದರ ಶಿವಲಿಂಗ, ನಂದಿ ವಿಗ್ರಹ ವಿರೂಪ

Profile Ramesh B Mar 18, 2025 9:09 PM

ಲಖನೌ: ಔರಂಗಜೇಬ್‌ನ ಸಮಾಧಿಯ ವಿಚಾರಕ್ಕೆ ಮಹಾರಾಷ್ಟ್ರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿಯೂ ಬಿಗುವಿನ ವಾತಾವರಣ ಕಂಡು ಬಂದಿದೆ. ದೇವಸ್ಥಾನವೊಂದರಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹವನ್ನು ವಿರೂಪಗೊಳಿಸಲಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಗುಂಪುಗೂಡಿ ಪ್ರತಿಭಟನೆ ನಡೆಸಿವೆ. ಮೊಹಲ್ಲಾ ಬಡಾ ಬಜಾರ್‌ (Mohalla Bada Bazar) ಪ್ರದೇಶದ ರಾಧಾ ಕೃಷ್ಣ ದೇವಸ್ಥಾನ (Radha Krishna temple)ದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸರ್ಕಲ್‌ ಆಫೀಸರ್ ನಿತೀಶ್‌ ಗರ್ಗ್‌ ಘಟನೆ ಬಗ್ಗೆ ಮಾತನಾಡಿ, ʼʼದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಶೀಘ್ರದಲ್ಲೇ ಕೃತ್ಯ ಎಸಗಿದವರನ್ನು ಸೆರೆ ಹಿಡಿಯಲಾಗುತ್ತದೆʼʼ ಎಂದು ಭರವಸೆ ನೀಡಿದ್ದಾರೆ.

ಪೊಲೀಸರ ಪ್ರಕಾರ ಮಂಗಳವಾರ ಮುಂಜಾನೆ ರಾಧಾ ಕೃಷ್ಣ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿದಾಗ ಯಾವುದೇ ಸಂಶಯಾಸ್ಪದ ಬೆಳವಣಿಗೆ ಕಂಡುಬಂದಿರಲಿಲ್ಲ. ಬಳಿಕ ಸುಮಾರು 8 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಆಗಮಿಸಿ ಶಿವಲಿಂಗ ಮತ್ತು ನಂದಿ ವಿಗ್ರಹವನ್ನು ವಿರೂಪಗೊಳಿಸಿದ್ದಾರೆ. ಕೆಲಹೊತ್ತಲ್ಲೇ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು.

ಈ ಸುದ್ದಿಯನ್ನೂ ಓದಿ: Aurangzeb Tomb Row: ನಾಗ್ಪುರ ಹಿಂಸಾಚಾರ; ಗಲಭೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ವಿಶ್ವ ಹಿಂದೂ ಪರಿಷತ್‌ ಮತ್ತು ಇತರ ಹಿಂದೂ ಸಂಘಟನೆಗಳ ಸದಸ್ಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಘಟನೆ ನಡೆದು 5 ಗಂಟೆ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಕೊನೆಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಭಾವನಾ ವಿಮಲ್‌, ನಿತೀಶ್‌ ಗಾರ್ಗ್‌ ಮತ್ತು ತಹಶೀಲ್ದಾರ್‌ ಅರವಿಂದ್‌ ಗೌತಮ್‌ ಸ್ದಳಕ್ಕೆ ಆಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಸದ್ಯ ಪರಿಸ್ಥಿತಿ ತಿಳಿಯಾಗಿದೆ.

ಮಹಾರಾಷ್ಟ್ರದಲ್ಲಿ ಆಗಿದ್ದೇನು?

ಮುಂಬೈ: ಮಹಾರಾಷ್ಟ್ರ ನಾಗ್ಪುರದಲ್ಲಿ ಔರಂಗಜೇಬ್‌ ಸಮಾಧಿ ವಿಚಾರಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ಕೋಮು ಘರ್ಷಣೆ ತಾರಕಕ್ಕೇರಿದ್ದು, ಇದೊಂದು ಪೂರ್ವಯೋಜಿತ ಪಿತೂರಿ ಎಂಬ ಆರೋಪ ಕೇಳಿಬಂದಿದೆ. ಮಂಗಳವಾರ, ನಾಗ್ಪುರದಲ್ಲಿ ನಡೆದ ಕೋಮು ಗಲಭೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಹಿಂಸಾಚಾರದಲ್ಲಿ ಮೂವರು ಪೊಲೀಸ್ ಉಪ ಆಯುಕ್ತರು ಸೇರಿದಂತೆ 33 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ʼʼನಾಗ್ಪುರದ ಕೆಲವು ಭಾಗಗಳಲ್ಲಿ ಸಾಮಾಜಿಕ ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಯೋಜಿತ ಮಾದರಿಯಲ್ಲಿ ಜನರ ಗುಂಪೊಂದು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿದೆ. ಮೂವರು ಡಿಸಿಪಿಗಳು ಸೇರಿದಂತೆ 33 ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 5 ನಾಗರಿಕರಿಗೂ ಗಾಯವಾಗಿದ್ದು, ಒಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆʼʼ ಎಂದು ಫಡ್ನವೀಸ್ ವಿವರಿಸಿದ್ದಾರೆ.

ಮಾ. 17ರಂದು ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯ ವಿರುದ್ಧ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ಕಾರಣವಾಗಿತ್ತು. ಹಿಂಸಾಚಾರದಲ್ಲಿ ಹಲವಾರು ಮನೆಗಳು ಮತ್ತು ವಾಹನಗಳನ್ನು ಧ್ವಂಸಗೊಂಡ ನಂತರ ನಾಗ್ಪುರ ನಗರದ ಹಲವಾರು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.