Agnyathavasi Movie: ಪ್ರೊಡಕ್ಷನ್ ಹೌಸ್ ಆರಂಭಿಸಿದ ಹೇಮಂತ್ ರಾವ್; ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಚಿತ್ರ ಏ. 11ಕ್ಕೆ ರಿಲೀಸ್
ʼಕವಲುದಾರಿʼ, ʼಗೋಧಿಬಣ್ಣ ಸಾಧಾರಣ ಮೈಕಟ್ಟುʼ ಹಾಗೂ ʼಸಪ್ತ ಸಾಗರದಾಚೆ ಎಲ್ಲೋ ಸರಣಿʼ ಸಿನಿಮಾಗಳ ಸಾರಥಿ ಹೇಮಂತ್ ರಾವ್ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರು ನಿರ್ಮಿಸುತ್ತಿರುವ ಹೊಸ ಚಿತ್ರ 'ಅಜ್ಞಾತವಾಸಿ' ಚಿತ್ರ ಏ. 11ರಂದು ತೆರೆ ಕಾಣಲಿದೆ.

'ಅಜ್ಞಾತವಾಸಿʼ ಚಿತ್ರದ ಪೋಸ್ಟರ್.

ಬೆಂಗಳೂರು: ʼಕವಲುದಾರಿʼ, ʼಗೋಧಿಬಣ್ಣ ಸಾಧಾರಣ ಮೈಕಟ್ಟುʼ ಹಾಗೂ ʼಸಪ್ತ ಸಾಗರದಾಚೆ ಎಲ್ಲೋ ಸರಣಿʼ ಸಿನಿಮಾಗಳ ಸಾರಥಿ ಹೇಮಂತ್ ರಾವ್ (Hemanth Rao) ನಿರ್ಮಾಣದ ಬಹುನಿರೀಕ್ಷಿತ ಚಿತ್ರ ʼಅಜ್ಞಾತವಾಸಿʼ (Agnyathavasi Movie). 'ಗುಳ್ಟು' ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಆ್ಯಕ್ಷನ್ ಕಟ್ ಹೇಳಿರುವ 'ಅಜ್ಞಾತವಾಸಿ' ಸಿನಿಮಾದ ಟೀಸರ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಇದೀಗ ಚಿತ್ರತಂಡ ಸಿನಿಮಾವನ್ನು ಬೆಳ್ಳಿತೆರೆಗೆ ತರಲು ಸಜ್ಜಾಗಿದೆ. ʼಅಜ್ಣಾತವಾಸಿʼ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ. ಏ. 11ಕ್ಕೆ ರಾಜ್ಯಾದ್ಯಂತ ʼಅಜ್ಞಾತವಾಸಿʼ ಅಬ್ಬರ ಆರಂಭವಾಗಲಿದೆ.
ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ʼಅಜ್ಞಾತವಾಸಿʼಯಲ್ಲಿ ಪಾವನ ಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮತ್ತಿತರರು ನಟಿಸಿದ್ದಾರೆ. ಜನಾರ್ಧನ್ ಚಿಕ್ಕಣ್ಣ ಗುರುಗಳಾದ ಕೃಷ್ಣರಾಜ್ ʼಅಜ್ಞಾತವಾಸಿʼ ಚಿತ್ರಕ್ಕೆ ಕಥೆ ಬರೆದ್ದಾರೆ. 1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ ಎಂದು ಸಿನಿಮಾತಂಡ ತಿಳಿಸಿದೆ.
ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ.ಸಿ. ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ʼಅಜ್ಞಾತವಾಸಿʼ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎನ್. ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ.ಬಿ.ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.
ಮಾರ್ಚ್‌ನಲ್ಲಿ ಹಾಡುಗಳ ಅಬ್ಬರ
ʼಅಜ್ಞಾತವಾಸಿʼ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡುತ್ತಿದ್ದಂತೆ ಚಿತ್ರತಂಡ ಪ್ರಚಾರಕ್ಕೆ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಮಾರ್ಚ್‌ನಲ್ಲಿ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಪ್ರೇಮಿಗಳಿಗೆ ʼಅಜ್ಞಾತವಾಸಿʼ ಬಳಗ ಆಹ್ವಾನ ಕೊಡಲಿದೆ.
ತಾಯಿ ಹೆಸರಲ್ಲಿ ಹೇಮಂತ್ ರಾವ್ ನಿರ್ಮಾಣ ಸಂಸ್ಥೆ
ʼಹಂಬಲ್ ಪೊಲಿಟಿಷಿಯನ್ ನಾಗರಾಜ್ʼ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿ ಸಾಥ್ ಕೊಟ್ಟಿದ್ದ ಹೇಮಂತ್ ರಾವ್ ʼಅಜ್ಞಾತವಾಸಿʼ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಹೆಜ್ಜೆ ಇಟ್ಟಿದ್ದಾರೆ. ಹೇಮಂತ್ ಅವರು ತಮ್ಮ ತಾಯಿ ನೆನಪಿನಲ್ಲಿ ದಾಕ್ಷಾಯಿಣಿ ಟಾಕೀಸ್ ಎಂಬ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ದಾಕ್ಷಾಯಿಣಿ ಟಾಕೀಸ್‌ನಡಿ ನಿರ್ಮಾಣವಾಗುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ.