Actress Ramya: ಬಾಲಿವುಡ್ ಕ್ವೀನ್ ಕಂಗನಾಗೆ ಟಾಂಗ್ ಕೊಟ್ಟ ಸ್ಯಾಂಡಲ್‌ವುಡ್ ಕ್ವೀನ್; ʼಎಮರ್ಜೆನ್ಸಿʼ ಚಿತ್ರದ ಬಗ್ಗೆ ರಮ್ಯಾ ಏನಂದ್ರು?
ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದ ಮೋಹಕ ತಾರೆ ರಮ್ಯಾ ಅವರು ಕಂಗನಾ ರಾಣಾವತ್ ನಟಿಸಿ, ನಿರ್ದೇಶಿಸಿದ್ದ, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ʼಎಮರ್ಜೆನ್ಸಿʼ ಕೆಟ್ಟ ಚಿತ್ರವಾಗಿತ್ತು ಎಂದಿದ್ದಾರೆ.

ರಮ್ಯಾ.

ಬೆಂಗಳೂರು: ದಶಕಗಳ ಕಾಲ ಸ್ಯಾಂಡಲ್‌ವುಡ್ ಆಳಿದ್ದ ಮೋಹಕ ತಾರೆ ರಮ್ಯಾ () ಸದ್ಯ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಾಕಷ್ಟು ಬೇಡಿಕೆ ಇದ್ದರೂ ಸಿನಿಮಾಗಳಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳದೇ ದಶಕವೇ ಕಳೆದಿದೆ. ಆದರೂ ಅವರಿಗೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ (Bengaluru International Film Festival)ನಲ್ಲಿ ಭಾಗಿಯಾಗಿದ್ದ ಅವರು ವಿವಿಧ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದರ ಜತೆಗೆ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ (Kangana Ranaut) ಬಗ್ಗೆ ಟಾಂಗ್ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ತೆರೆಕಂಡ ಕಂಗನಾ ನಟಿಸಿ, ನಿರ್ದೇಶಿಸಿದ್ದ, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ʼಎಮರ್ಜೆನ್ಸಿʼ (Emergency) ಕೆಟ್ಟ ಚಿತ್ರವಾಗಿತ್ತು. ಇದಕ್ಕಾಗಿಯೇ ಪ್ರೇಕ್ಷಕರು ಈ ಬಾಲಿವುಡ್ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ.
ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ತಾರತಮ್ಯದ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ ವೇಳೆ ಕಂಗನಾ ಅವರ ʼಎಮರ್ಜೆನ್ಸಿʼ ಬಗ್ಗೆ ಪ್ರಶ್ನೆ ಕೇಳಲಾಯಿತು. ಪ್ರೇಕ್ಷಕರು ಕಂಗನಾ ಅವರ ʼಎಮರ್ಜೆನ್ಸಿʼ ಸಿನಿಮಾವನ್ನು ಒಪ್ಪಿಕೊಂಡಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ʼʼಎಮರ್ಜೆನ್ಸಿʼ ಉತ್ತಮ ಚಿತ್ರವಲ್ಲ. ಕಂಗನಾ ತುಂಬಾ ಪ್ರತಿಭಾವಂತ ನಟಿ. ಆದರೆ ಒಬ್ಬ ವ್ಯಕ್ತಿಯಾಗಿ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅವರ ʼಎಮರ್ಜೆನ್ಸಿʼ ಚಿತ್ರವು ಕೆಟ್ಟದಾಗಿತ್ತು ಮತ್ತು ಅದಕ್ಕಾಗಿಯೇ ಪ್ರೇಕ್ಷಕರು ಅದನ್ನು ತಿರಸ್ಕರಿಸಿದರು. ಕಂಗನಾ ಈ ಹಿಂದೆ ಝಾನ್ಸಿ ಲಕ್ಷ್ಮೀಭಾಯಿ ಜೀವನಾಧರಿತ ʼಮಣಿಕರ್ಣಿಕಾʼ ಚಿತ್ರ ಮಾಡಿದ್ದರು. ಅದು ಹಿಟ್ ಆಗಿತ್ತು. ಯಾಕೆಂದರೆ ಆ ಚಿತ್ರ ಉತ್ತಮವಾಗಿತ್ತುʼʼ ಎಂದು ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದ ಬಗ್ಗೆ ಮೆಚ್ಚುಗೆ
ಇದೇ ವೇಳೆ ರಮ್ಯಾ ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗತಿಗಳ ಬಗ್ಗೆಯೂ ಮಾತನಾಡಿದ್ದಾರೆ. ʼʼಸದ್ಯ ಮಾಲಿವುಡ್‌ನಲ್ಲಿ ಅತ್ಯುತ್ತಮ ಕಥೆಯ ಚಿತ್ರಗಳು ಹೊರ ಬರುತ್ತಿವೆ. ಇದರಲ್ಲಿ ಮಹಿಳಾ ಪಾತ್ರಗಳೂ ಹೈಲೈಟ್ ಆಗುತ್ತಿವೆ. ಆದರೆ ಕನ್ನಡ ಸಿನಿಮಾರಂಗದಲ್ಲಿ ಪರಿಸ್ಥಿತಿ ಹಾಗಿಲ್ಲ. ದುರದೃಷ್ಟವಶಾತ್ ಇಲ್ಲಿನ ಮಹಿಳಾ ಪಾತ್ರಗಳು ನೆಪಕ್ಕಷ್ಟೇ ಇದೆ. ನಾಯಕನೊಂದಿಗೆ ಮರ ಸುತ್ತುವ ಪಾತ್ರ ಮಾಡಲು, ಕೆಲವೇ ದೃಶ್ಯಗಳಲ್ಲಿ ಬಂದು ಹೋಗಲು ನನಗೆ ಇಷ್ಟ ಇಲ್ಲ. ನಾನು ಇದನ್ನು 20 ವರ್ಷಗಳ ಹಿಂದೆಯೇ ಮಾಡಿದ್ದೇನೆ. ನಾಯಕಿಯರ ಪರಿಸ್ಥಿತಿ ಅಂದಿನಂತೆ ಇಂದೂ ಹಾಗೇ ಇದೆ. ಕನ್ನಡ ಚಿತ್ರರಂಗವು ಮಲಯಾಳಂ ಸಿನಿಮಾ ನೋಡಿ ಕಲಿಯುವುದು ಸಾಕಷ್ಟಿದೆ. ಸ್ಯಾಂಡಲ್‌ವುಡ್‌ನಲ್ಲಿಯೂ ಮಹಿಳೆಯರಿಗೆ ಗುಣಮಟ್ಟದ ಪಾತ್ರ ಸೃಷ್ಟಿಯಾಗಬೇಕುʼʼ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Actress Ramya: ರಮ್ಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್; ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಪದ್ಮಾವತಿ ಸಜ್ಜು
"ನಾನು ಕನ್ನಡ ಚಿತ್ರಗಳಲ್ಲಿನ ಪುರುಷ ಪ್ರಧಾನ ಪಾತ್ರಗಳನ್ನು ನೋಡುತ್ತಲೇ ಇದ್ದೇನೆ. ಆದರೆ ಮಲಯಾಳಂನಲ್ಲಿ ಹಾಗಲ್ಲ. ಸಿನಿಮಾದ ಕೇಂದ್ರ ಪಾತ್ರಗಳಾಗಿ ಮಹಿಳೆಯರು ಬದಲಾಗುತ್ತಿದ್ದಾರೆ. ಶಕ್ತಿಯುತ ಮಹಿಳಾ ಪಾತ್ರಗಳೆಂದರೆ ಪೊಲೀಸ್ ಅಧಿಕಾರಿಯಾಗಿ ಫೈಟಿಂಗ್ ದೃಶ್ಯಗಳಲ್ಲಿ ಕಾನಿಸಿಕೊಳ್ಳುವುದಷ್ಟೇ ಅಲ್ಲ. ಅವರ ಶಕ್ತಿಯನ್ನು ಇತರ ರೀತಿಯಲ್ಲಿಯೂ ತೋರಿಸಬಹುದುʼʼ ಎಂದು ಸಲಹೆ ನೀಡಿದ್ದಾರೆ. ಇದರ ಜತೆಗೆ ಮಹಿಳೆಯರಿಗೆ ಸಿಗುವ ಸಂಭಾವನೆಯಲ್ಲಿಯೂ ತಾರತಮ್ಯ ಎದುರಾಗುತ್ತಿದೆ ಎಂದ ಅವರು ನಾಯಕರಿಗೆ ಸಿಗುವ ಅರ್ಧದಷ್ಟೂ ಸಂಭಾವನೆ ನಾಯಕಿಯರಿಗೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.