ʻರಿಷಭ್ ಪಂತ್ ವೃತ್ತಿ ಜೀವನವನ್ನು ಗೌತಮ್ ಗಂಭೀರ್ ಹಾಳು ಮಾಡುತ್ತಿದ್ದಾರೆʼ: ಅತುಲ್ ವಾಸನ್ ಗಂಭೀರ ಆರೋಪ!
Atul Wassan on Rishabh pant: ಭಾರತ ಏಕದಿನ ತಂಡದಲ್ಲಿ ರಿಷಭ್ ಪಂತ್‌ಗೆ ಸ್ಥಾನ ನೀಡದ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ದ ಮಾಜಿ ವೇಗದ ಬೌಲರ್ ಅತುಲ್ ವಾಸನ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಚ್ ಕಾಯಿಸುವ ಮೂಲಕ ರಿಷಭ್ ಪಂತ್ ಅವರ ವೃತ್ತಿ ಜೀವನವನ್ನು ಗಂಭೀರ್ ಹಾಳು ಮಾಡುತ್ತಿದ್ದಾರೆಂದು ಅವರು ದೂರಿದ್ದಾರೆ.

ರಿಷಭ್ ಪಂತ್ ವೃತ್ತಿ ಜೀವನವನ್ನು ಗಂಭೀರ್ ಹಾಳು ಮಾಡುತ್ತಿದ್ದಾರೆಂದು ಅತುಲ್ ವಾಸನ್ ಆರೋಪ ಮಾಡಿದ್ದಾರೆ.

ನವದೆಹಲಿ: ಭಾರತ ಏಕದಿನ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಸರಿಯಾಗಿ ಅವಕಾಶ ನೀಡದ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ದ ಮಾಜಿ ವೇಗಿ ಅತುಲ್ ವಾಸನ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪಂತ್‌ರನ್ನು ನಿಯಮಿತವಾಗಿ ಬೆಂಚ್ ಕಾಯಿಸುವ ಮೂಲಕ ಗಂಭೀರ್, ಅವರ ವೃತ್ತಿ ಜೀವನವನ್ನು ಹಾಳು ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಗಾಯದಿಂದ ಕಮ್‌ಬ್ಯಾಕ್ ಮಾಡಿದ ಬಳಿಕ ಪಂತ್, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆಡಿದ್ದರು. ನಂತರ, ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಗೂ ಆಯ್ಕೆಯಾಗಿದ್ದ ಅವರನ್ನು ಒಂದೇ ಒಂದು ಪಂದ್ಯದಲ್ಲಿಯೂ ಆಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಡಗೈ ಆಟಗಾರ ಮೂರೂ ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು.
ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿಯೂ ರಿಷಭ್ ಪಂತ್ ಬದಲು ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಡಿದ್ದರು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 41 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಅವರು ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ. ಆದರೆ, ಭಾರತ ತಂಡದ ಮಾಜಿ ವೇಗಿ ಅತುಲ್ ವಾಸನ್ ಅವರು, ರಿಷಭ್ ಪಂತ್ ವಿಚಾರದಲ್ಲಿ ಗೌತಮ್ ಗಂಭೀರ್ ತೆಗೆದುಕೊಳ್ಳುತ್ತಿರುವ ನಡೆಯನ್ನು ಖಂಡಿಸಿದ್ದಾರೆ.
IND vs PAK: ವರುಣ್ ಚಕ್ರವರ್ತಿ ಇನ್? ಭಾರತದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ನಿರೀಕ್ಷೆ!
ಗೌತಮ್ ಗಂಭೀರ್ ವಿರುದ್ಧ ಅತುಲ್ ವಾಸನ್ ಬೇಸರ
ಎಎನ್‌ಐ ಜೊತೆ ಮಾತನಾಡಿದ ಅತುಲ್ ವಾಸನ್, "ಬಾಂಗ್ಲಾದೇಶ ತಂಡ 35-5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಬಳಿಕ ಅವರನ್ನು 228 ರನ್‌ಗಳನ್ನು ಗಳಿಸಲು ನೀವು ಬಿಟ್ಟಿದ್ದೀರಿ. ಗೌತಮ್ ಗಂಭೀರ್ ಅವರು ತಮಗೆ ಬೇಕಾದ ತಂಡವನ್ನು ಕಟ್ಟಿದ್ದಾರೆ. ರಿಷಭ್ ಪಂತ್ ಆಡದೆ ಇರುವ ಬಗ್ಗೆ ನನಗೆ ಒಂದೇ ಒಂದು ಬೇಸರವಿದೆ. ಇದಕ್ಕೆ ಕಾರಣವೇನೆಂದು ನನಗೆ ತಿಳಿದಿಲ್ಲ. ತಂಡದಲ್ಲಿ ಏನು ನಡೆಯುತ್ತಿದೆ? ಪಂತ್ ಒಬ್ಬ ಚುರುಕಾದ ಆಟಗಾರ ಹಾಗೂ ಅವರ ಬಗ್ಗೆ ಎದುರಾಳಿ ತಂಡಗಳಿಗೆ ಆತಂಕವಿದೆ. ಪಂತ್ ಒಬ್ಬರೇ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಅವರಿಗೆ ಗೊತ್ತಿದೆ," ಎಂದು ಅವರು ತಿಳಿಸಿದ್ದಾರೆ.
IND vs PAK: ಇಂಡೋ-ಪಾಕ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಹವಾಮಾನ ವರದಿ ಹೇಗಿದೆ?
ಪಂತ್ ವೃತ್ತಿ ಜೀವನವನ್ನು ಹಾಳು ಮಾಡಲಾಗುತ್ತಿದೆ
"ಕೆಎಲ್ ರಾಹುಲ್ ಶ್ರೇಷ್ಠ ಆಟಗಾರ. ಆದರೆ, ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಆಡುವಾಗ ಅವರಲ್ಲಿ ಏನನ್ನೂ ನೋಡಲಾಗಿದೆ ಎಂದು ನನಗೆ ಗೊತ್ತಿಲ್ಲ. ರಿಷಭ್ ಪಂತ್ ಇನ್ನೂ ಬೆಂಚ್ ಕಾಯುತ್ತಿದ್ದಾರೆ. ನೀವು ಆಟಗಾರರನ್ನು ಹೀಗೆಯೇ ಹಾಳು ಮಾಡುತ್ತೀರಿ. ಒಬ್ಬ ಒಳ್ಳೆಯ ಆಟಗಾರರನ್ನು ನೀವು ಈ ರೀತಿ ಇಟ್ಟರೆ, ಆಡುತ್ತೇನಾ? ಅಥವಾ ಇಲ್ಲವಾ ಎಂಬ ಬಗ್ಗೆ ಅವರು ಸದಾ ಯೋಚನೆ ಮಾಡುತ್ತಾ ಇರುತ್ತಾರೆ ಹಾಗೂ ಆ ಆಟಗಾರ ಹೀರೋ ಕಡೆಯಿಂದ ಜೀರೋ ಆಗುತ್ತಾರೆ," ಎಂದು ಅತುಲ್ ವಾಸನ್ ಹೇಳಿದ್ದಾರೆ.
2020ರಲ್ಲಿ ಭಾರತ ಏಕದಿನ ತಂಡದಲ್ಲಿ ರಿಷಭ್ ಪಂತ್ ತಮ್ಮ ಸ್ಥಾನವನ್ನು ಕೆಎಲ್ ರಾಹುಲ್‌ಗೆ ಬಿಟ್ಟುಕೊಟ್ಟಿದ್ದರು. 2020ರಲ್ಲಿ ಅವರು ಒಂದೇ ಒಂದು ಏಕದಿನ ಪಂದ್ಯವನ್ನು ಆಡಿದ್ದರು. ನಂತರ 2021ರಲ್ಲಿ ಅವರು 2 ಪಂದ್ಯಗಳನ್ನು ಮಾತ್ರ ಆಡಿದ್ದರು. 2022ರಲ್ಲಿ ಭಾರತದ ಪ್ಲೇಯಿಂಗ್ XIನಲ್ಲಿ ಪಂತ್ ನಿಯಮಿತ ಆಟಗಾರರಾಗಿದ್ದರು. ಆದರೆ, ಅವರು ಮತ್ತೆ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು. ಅಂದ ಹಾಗೆ ಟೆಸ್ಟ್ ತಂಡದಲ್ಲಿ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಆಗಿ ಆಡುತ್ತಿರುವ ಪಂತ್‌ಗೆ ಟಿ20ಐ ತಂಡದಲ್ಲಿ ಸಂಜು ಸ್ಯಾಮ್ಸನ್ ಕಠಿಣ ಪೈಪೋಟಿ ನೀಡುತ್ತಿದ್ದಾರೆ.