MSRTC : ಚಾಲಕನ ಮೇಲೆ ಹಲ್ಲೆ: ಕರ್ನಾಟಕಕ್ಕೆ ಬಸ್ ಸೇವೆ ಸ್ಥಗಿತಗೊಳಿಸಿದ ಮಹಾರಾಷ್ಟ್ರ
ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿನ ಸಾರಿಗೆ ಗಲಾಟೆಯ ನಂತರ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಕರ್ನಾಟಕಕ್ಕೆ ರಾಜ್ಯ ಸಾರಿಗೆ ಬಸ್‌ಗಳನ್ನು ಸ್ಥಗಿತಗೊಳಿಸಲು ಶನಿವಾರ ಆದೇಶಿಸಿದ್ದಾರೆ.ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಮಹಾರಾಷ್ಟ್ರದ ಬಸ್ ಮೇಲೆ ಕನ್ನಡ ಪರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಪ್ರತಾಪ್ ಸರ್ನಾಯಕ್ ಆರೋಪಿಸಿದ್ದಾರೆ.

ಎಂಎಸ್‌ಆರ್‌ಟಿಸಿ

ಮುಂಬೈ: ಕರ್ನಾಟಕ (KSRTC) ಹಾಗೂ ಮಹಾರಾಷ್ಟ್ರದಲ್ಲಿನ ಸಾರಿಗೆ (MSRTC) ಗಲಾಟೆಯ ನಂತರ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಕರ್ನಾಟಕಕ್ಕೆ ರಾಜ್ಯ ಸಾರಿಗೆ ಬಸ್‌ಗಳನ್ನು ಸ್ಥಗಿತಗೊಳಿಸಲು ಶನಿವಾರ ಆದೇಶಿಸಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ಬಸ್ ಮೇಲೆ ಶುಕ್ರವಾರ ರಾತ್ರಿ 9.10 ರ ಸುಮಾರಿಗೆ ಚಿತ್ರದುರ್ಗದಲ್ಲಿ ಕನ್ನಡ ಪರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಪ್ರತಾಪ್ ಸರ್ನಾಯಕ್ ಆರೋಪಿಸಿದ್ದಾರೆ. ಚಾಲಕರು ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಚಾಲಕ ಭಾಸ್ಕರ್ ಜಾಧವ್ ಅವರ ಮುಖಕ್ಕೂ ಕಪ್ಪು ಬಣ್ಣ ಬಳಿದು ಹಲ್ಲೆ ನಡೆಸಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರ ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸದ ಹೊರತು ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಪುನರಾರಂಭಿಸಲಾಗುವುದಿಲ್ಲ ಎಂದು ಅವರು ತಿಳಿಸಿದರು. ಸದ್ಯ ಆಪಾದಿತ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಜಿಲ್ಲಾ ಕೇಂದ್ರ ಪಟ್ಟಣದ ಹೊರವಲಯದಲ್ಲಿ, ಮರಾಠಿಯಲ್ಲಿ ಹುಡುಗಿಗೆ ಉತ್ತರಿಸದ ಕಾರಣಕ್ಕಾಗಿ ಕರ್ನಾಟಕದ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮದ ಬಸ್ಸಿನ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿದೆ. ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂಡಕ್ಟರ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Belagavi News: ಮರಾಠಿ ಬರಲ್ಲ, ಕನ್ನಡ ಮಾತಾಡಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಗುಂಪು ಹಲ್ಲೆ
ಸುಲೇಭಾವಿ ಗ್ರಾಮದಲ್ಲಿ ಯುವಕನ ಜೊತೆ ಬಸ್ ಹತ್ತಿದ ಯುವತಿಯೋರ್ವಳು ಮರಾಠಿಯಲ್ಲಿ ಮಾತನಾಡಿದ್ದಳು. ಆಗ ನಾನು ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ಜನರನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಂಡಕ್ಟರ್ ಹೇಳಿದ್ದರು. ಗಾಯಗೊಂಡ ಬಸ್ ಕಂಡಕ್ಟರ್ ಅನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಚಿತ್ರದುರ್ಗದಲ್ಲಿ ಎಂಎಸ್‌ಆರ್‌ಟಿಸಿ ಬಸ್ ಮೇಲೆ ನಡೆದ ದಾಳಿಯು ಕಂಡಕ್ಟರ್ ಮೇಲಿನ ಹಲ್ಲೆಗೆ ಪ್ರತೀಕಾರವಾಗಿ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.