ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Bhasi Bhaskar: ಮೋಹನ್‌ ಲಾಲ್‌ ಜತೆ ನಟಿಸಿದ್ದು, ನನ್ನ ಜೀವನದ ಬಹುದೊಡ್ಡ ಸಾಧನೆ: ಭಾಸಿ ಭಾಸ್ಕರ್‌

Bhasi Bhaskar: ಫ್ರೊಫೆಷನಲ್‌ ಕ್ರಿಕೆಟರ್‌ ಭಾಸಿ ಭಾಸ್ಕರ್‌, ಸದ್ಯ ಕನ್ನಡ ಮಾತ್ರವಲ್ಲ, ಬಾಲಿವುಡ್‌ನ ಸ್ಟಾರ್‌ ನಟ, ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದ ವೃಷಭ ಸಿನಿಮಾ ಇದೇ ವರ್ಷ ತೆರೆಗೆ ಬರುವ ಸಾಧ್ಯತೆಗಳಿವೆ. ಮೋಹನ್‌ ಲಾಲ್‌ ಅವರ ಜತೆಗೆ ವೃಷಭ ಚಿತ್ರದಲ್ಲಿ ಕೆಲಸ ಮಾಡಿರುವ ಭಾಸಿ ಭಾಸ್ಕರ್‌, ತಮ್ಮ ಕಿರು ಸಿನಿಮಾ ಯಾನದ ಬಗ್ಗೆ ಮಾತನಾಡಿದ್ದಾರೆ.

ಮೋಹನ್‌ ಲಾಲ್‌ ಜತೆ ನಟಿಸಿದ್ದು, ನನ್ನ ಬಹುದೊಡ್ಡ ಸಾಧನೆ: ಭಾಸಿ ಭಾಸ್ಕರ್‌

Profile Prabhakara R Feb 23, 2025 3:00 PM

ಬೆಂಗಳೂರು: ಬಣ್ಣದ ಲೋಕದ ನಂಟಿಲ್ಲದಿದ್ದರೂ, ಅದ್ಯಾವ ಮಾಯೆಯೊಂದು ಎಂಥೆಂಥವರನ್ನೋ ಚಿತ್ರರಂಗಕ್ಕೆ ಕರೆತಂದಿರುತ್ತದೆ. ಅದೇ ರೀತಿ, ತಾವಾಯ್ತು ತಮ್ಮ ಕ್ರಿಕೆಟ್‌ ಆಟವಾಯ್ತು ಎಂದಷ್ಟೇ ಇದ್ದ ಫ್ರೊಫೆಷನಲ್‌ ಕ್ರಿಕೆಟರ್‌ ಭಾಸಿ ಭಾಸ್ಕರ್‌ (Bhasi Bhaskar), ಸದ್ಯ ಕನ್ನಡ ಮಾತ್ರವಲ್ಲ, ಬಾಲಿವುಡ್‌ನ ಸ್ಟಾರ್‌ ನಟ, ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪಕ್ಕದ ಮಲಯಾಳಂನಲ್ಲಿಯೂ ಮೋಹನ್‌ ಲಾಲ್‌ ಅವರ ಜತೆಗೆ ವೃಷಭ ಹೆಸರಿನ ಸಿನಿಮಾ ಮಾಡಿದ್ದಾರೆ. ಇನ್ನೇನು ಬಹುತೇಕ ಕೆಲಸ ಮುಗಿಸಿಕೊಂಡಿರುವ ಪ್ಯಾನ್‌ ಇಂಡಿಯಾ ಮಟ್ಟದ ವೃಷಭ ಸಿನಿಮಾ ಇದೇ ವರ್ಷ ತೆರೆಗೆ ಬರುವ ಸಾಧ್ಯತೆಗಳಿವೆ. ಇದೀಗ ಇದೇ ಚಿತ್ರದ ಕೆಲಸ ಮಾಡಿರುವ ಭಾಸಿ ಭಾಸ್ಕರ್‌, ತಮ್ಮ ಕಿರು ಸಿನಿಮಾ ಯಾನದ ಬಗ್ಗೆ ಮಾತನಾಡಿದ್ದಾರೆ.

"ನಾನು ಸಿನಿಮಾಕ್ಕೆ ಬರುತ್ತೇನೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. ನನಗೆ ಸಿನಿಮಾ ರಂಗದ ನಂಟು ಬಂದಿದ್ದು ಸ್ನೇಹಲೋಕದಿಂದ. ವಿಷ್ಣು ಸರ್‌ ನಮ್ಮ ಆಫೀಸ್‌ಗೆ ಬಂದಾಗ, ಈ ಸ್ನೇಹಲೋಕ ಶುರುವಾಯ್ತು. ನಾನು, ವಿಷ್ಣುವರ್ಧನ್‌ ಸರ್, ಶಿವರಾಮಣ್ಣ, ಅಭಿಜಿತ್‌, ಶೋಭರಾಜ್‌, ವಿಜಯಕುಮಾರ್‌ ಜತೆಗಿನ ನಂಟು ಮುಂದುವರಿಯಿತು. ಜತೆ ಜತೆಗೆ ಕ್ರಿಕಿಟ್‌ ಸಹ ಆಡ್ತಿದ್ವಿ. ಹಾಗೆ ಆಟ ಆಡುವಾಗ, ರಂಗಭೂಮಿ ಹಿನ್ನೆಲೆಯ ನಿರ್ದೇಶಕರೊಬ್ಬರು ನನ್ನ ಭೇಟಿಯಾದರು. ನಮ್ಮ ಡ್ರಾಮಾದಲ್ಲಿ ಒಂದು ಪಾತ್ರ ಇದೆ ಮಾಡ್ತೀರಾ? ಎಂದು ಕೇಳಿದರು. ನನಗೆ ಡ್ರಾಮಾ ಬಗ್ಗೆ ಏನೂ ಗೊತ್ತಿಲ್ಲ ಸರ್‌ ಅಂದೆ. ಒಂದೂವರೆ ಎರಡು ತಿಂಗಳು ಟ್ರೇನಿಂಗ್‌ ಕೊಟ್ಟರು. ಹೇಗೆ ಮಾತನಾಡಬೇಕು, ಯಾವ ರೀತಿ ಎಕ್ಸ್‌ಪ್ರೆಷನ್‌ ಕೊಡಬೇಕು ಎಲ್ಲವನ್ನೂ ಹೇಳಿಕೊಟ್ಟರು. ಅಲ್ಲಿಂದ ನಟನೆ ಕೆಲಸ ಶುರುವಾಯ್ತು.

Bhasi Bhaskar (2)

"ಒಂದು ದಿನ ಆವತ್ತು ನನ್ನ ಡ್ರಾಮಾವನ್ನು ಎಸ್‌. ನಾರಾಯಣ್‌ ಬಂದು ನೋಡಿದ್ದರು. ಶೋ ಮುಗಿದ ಬಳಿಕ ವೀರಪರಂಪರೆ ಸಿನಿಮಾದಲ್ಲಿ ಒಂದು ಪಾತ್ರ ಇದೆ ಮಾಡು ಎಂದು ಹೇಳಿದರು. ಅಂಬರೀಶ್‌ ಮತ್ತು ಸುದೀಪ್‌ ಅವರ ಸಿನಿಮಾ ಅದು. ದೊಡ್ಡ ವ್ಯಕ್ತಿಗಳು ಕೇಳಿದಾಗ, ಇಲ್ಲ ಅಂತ ಹೇಳಲು ಆಗಲ್ಲ. ಬೇರೆ ಏನನ್ನೂ ಯೋಚಿಸದೇ ನಾನು ಸಿನಿಮಾ ಒಪ್ಪಿಕೊಂಡೆ. ವೀರಪರಂಪರೆ ಚಿತ್ರದ ಬಳಿಕ "ವಾರೆವ್ವಾ" ಸಿನಿಮಾ ಮಾಡಿದೆ. "ಈ ಕ್ಷಣ" ಅನ್ನೋ ಸಿನಿಮಾ ಮಾಡಿದೆ. ಅಲ್ಲಿಂದ ಪೂರ್ಣ ಪ್ರಮಾಣದ ಸಿನಿಮಾ ನಟನೆ ಶುರುವಾಯ್ತು. ಜತೆಗೆ ಸಿಸಿಎಲ್‌ ಸಹ ಶುರುವಾಯ್ತು. ಸುದೀಪ್‌ ಮತ್ತು ಅಶೋಕ್‌ ಖೇಣಿ ಅವರಿಂದ ಚಾನ್ಸ್‌ ಸಿಕ್ತು. ಸಿಸಿಎಲ್‌ನಲ್ಲಿ ಕೊನೇ ಬಾಲ್‌ ಸಿಕ್ಸ್‌ ಬಾರಿಸಿ ತಂಡ ಗೆಲ್ಲಿಸಿದೆ. ಇಂದಿಗೂ ಅದನ್ನು ಜನ ನೆನಪಿಟ್ಟುಕೊಂಡಿದ್ದಾರೆ.

"ಟ್ರೇನಿಂಗ್‌ ಸಲುವಾಗಿಯೇ ಮುಂಬೈನಲ್ಲಿ ಹಿಂದಿ, ಉರ್ದು ನಾಟಕಗಳಲ್ಲಿ ಅಭಿನಯಿಸಿದೆ. ಒಂದು ದಿನ ಆ ನಾಟಕವನ್ನು ನಿರ್ದೇಶಕ ನೀರಜ್‌ ಪಾಂಡೆ ಅವರು ನೋಡಿದ್ದರು. ಅವರಿಂದ ಎಂ.ಎಸ್‌. ಧೋನಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಾದ ಮೇಲೆ ಅಕ್ಷಯ್‌ ಕುಮಾರ್, ತಾಪ್ಸಿ ಪನ್ನು ಅವರ ಜತೆಗೆ ನಾಮ್‌ ಶಬಾನಾ ಸಿನಿಮಾದಲ್ಲಿಯೂ ನಟಿಸಿದೆ. ನಿಧಾನಕ್ಕೆ ಹೆಚ್ಚೆಚ್ಚು ಆಫರ್‌ ಸಿಗುತ್ತ ಹೋದವು. ಹೀಗಿರುವಾಗಲೇ ಸಲಗ ಸಿನಿಮಾದಲ್ಲಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡೆ. ಆ ಪಾತ್ರ ನೀಡಿದ ದುನಿಯಾ ವಿಜಯ್‌ ಅವರಿಗೆ ನಾನು ಥ್ಯಾಂಕ್ಸ್‌ ಹೇಳಲೇ ಬೇಕು. ಆ ಚಿತ್ರದ ಪಾತ್ರವೂ ನನ್ನ ಕೆರಿಯರ್‌ಗೂ ಹೊಸ ಮೈಲೇಜ್‌ ತಂದುಕೊಟ್ಟಿತು" ಎಂಬುದು ಭಾಸಿ ಭಾಸ್ಕರ್‌ ಮಾತು.

"ಇದೆಲ್ಲದರ ನಡುವೆ, ಮೋಹನ್‌ ಲಾಲ್‌ ಅವರ ವೃಷಭ ಸಿನಿಮಾದಲ್ಲಿಯೂ ಚಾನ್ಸ್‌ ಸಿಕ್ಕಿತು. ಆಡಿಷನ್‌ನಲ್ಲಿ ಏಕ್ತಾ ಕಪೂರ್‌ ಪ್ರೊಡಕ್ಷನ್‌ ಆಡಿಷನ್‌ನಲ್ಲಿ ನಾನು ಸೆಲೆಕ್ಟ್‌ ಆದೆ. ವೃಷಭ ಚಿತ್ರದಲ್ಲಿ ನನ್ನದು ಮೋಹನ್‌ ಲಾಲ್‌ ಅವರಿಗೆ ಟ್ರೀಟ್‌ಮೆಂಟ್‌ ಕೊಡುವ ಡಾಕ್ಟರ್‌ ಪಾತ್ರ. ಕನ್ನಡದ ನಿರ್ದೇಶಕ ನಂದಕಿಶೋರ್‌ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೂ ನಾನು ಥ್ಯಾಂಕ್ಸ್‌ ಹೇಳಲೇಬೇಕು. ಈಗಾಗಲೇ ವೃಷಭ ಚಿತ್ರದಲ್ಲಿನ ನನ್ನ ಪಾತ್ರದ ಶೂಟಿಂಗ್‌ ಮುಗಿದಿದೆ. ಮೋಹನ್‌ ಲಾಲ್‌ ಅವರ ಜತೆಗೆ ಸ್ಕ್ರೀನ್‌ ಶೇರ್‌ ಮಾಡುವುದೇ ನನಗೆ ಖುಷಿ. ನಮ್ಮ ಕನ್ನಡದ ಹೆಮ್ಮೆಯ ರಾಜ್‌ಕುಮಾರ್‌ ಅವರನ್ನೇ ನೋಡಿದಂತಾಯ್ತು. ಅಷ್ಟೊಂದು ಸರಳತೆ. ಕ್ಯಾರಾವಾನ್‌ಗೆ ಕರೆದು ಕೂತು ಮಾತನಾಡಿಸಿದರು"

ಮೋಹನ್‌ಲಾಲ್‌ ಜತೆ ನಟಿಸಿದ್ದು ಲೈಫ್‌ಟೈಮ್‌ ಸಾಧನೆ

"ಮೋಹನ್‌ ಲಾಲ್‌ ಅವರ ಜತೆಗೆ ಒಂದೇ ಒಂದು ಪಾತ್ರ ಮಾಡಿದರೆ ಸಾಕು ಎಂಬುದು ಪ್ರತಿ ಕಲಾವಿದನ ಕನಸು. ಅವರಿಂದ ಕಲಿಯಲು ಸಾಕಷ್ಟು ವಿಷಯಗಳು ಸಿಗುತ್ತವೆ. ಅವು ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತವೆ. ಮೊದಲ ಭೇಟಿಯಲ್ಲಿಯೇ ನಾನು ಅವರ ಪಾದ ಮುಟ್ಟಿ ನಮಸ್ಕರಿಸಿದೆ. ಸಹ ಕಲಾವಿದರಿಗೆ ಗೌರವ ಆದರ ನೀಡಿಯೇ ಮಾತನಾಡಿಸುವ ಅವರ ಗುಣ, ನನಗೆ ರಾಜ್‌ಕುಮಾರ್‌ ಅವರನ್ನು ನೋಡಿದಂತಾಯ್ತು. ಅವರನ್ನು ಭೇಟಿಯಾದ ದಿನವೇ ನೀವು ವಿಶ್ವ ಸಿನಿಮಾದ ಎನ್‌ಸೈಕ್ಲೋಪೀಡಿಯಾ ಎಂದು ಅವರಿಗೆ ಹೇಳಿದೆ. ಏಕೆಂದರೆ ನಾನು ದೊಡ್ಮನೆಯ ದೊಡ್ಡ ಅಭಿಮಾನಿ. ಅಣ್ಣಾವ್ರಿಂದ ಹಿಡಿದು, ಶಿವಣ್ಣ, ರಾಘಣ್ಣ, ಪುನೀತ್‌ ಅವರ ದೊಡ್ಡ ಫ್ಯಾನ್‌ ನಾನು. ದೊಡ್ಮನೆಗೆ ಸಂಬಂಧಿಸಿದ ಸಾಕಷ್ಟು ಬುಕ್‌ಗಳು ನನ್ನ ಬಳಿ ಇವೆ. ಅದೂ ಒಂದು ಹೆಮ್ಮೆಯ ಕ್ಷಣ ನನಗೆ" ಹೀಗೆ ತಮ್ಮ ಸಿನಿಮಾ ಸಾಗಿಬಂದ ಕಥೆಯನ್ನು ಹೇಳಿದ್ದಾರೆ ಭಾಸಿ ಭಾಸ್ಕರ್.‌

ಈ ಸುದ್ದಿಯನ್ನೂ ಓದಿ | 'ನಿಂಬಿಯಾ ಬನಾದ ಮ್ಯಾಗ' ಪೇಜ್-1 ಚಿತ್ರದ ಟೀಸರ್‌ಗೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮೆಚ್ಚುಗೆ

ಒಂದೇ ಪಾತ್ರಕ್ಕೆ ಸೀಮಿತ ಮಾಡಬೇಡಿ

ಸಲಗ ಬಳಿಕ ಕನ್ನಡದ ಬೇರಾವ ಸಿನಿಮಾಗಳಲ್ಲಿ ನಟ ವಿಷ್ಣು ಭಾಸ್ಕರ್‌ ಕಾಣಿಸಿಕೊಂಡಿಲ್ಲ. ಅಂದರೆ, ಒಂದೇ ರೀತಿಯ ಪಾತ್ರಗಳು ಅವರನ್ನು ಹುಡುಕಿ ಬರಲಾರಂಭಿಸಿದವು. ಸಿನಿಮಾ ಅಂದರೆ ನವರಸ. ನನ್ನೊಳಗಿನ ಎಲ್ಲ ಥರದ ಭಾವನೆಗಳನ್ನು ನಾನು ನನ್ನ ನಟನೆ ಮೂಲಕ ತೋರಿಸಬಲ್ಲೆ. ಆದರೆ, ಪೊಲೀಸ್‌ ಪಾತ್ರಕ್ಕೆ ಸೀಮಿತವಾದಂತೆ, ಅಂಥ ಪಾತ್ರಗಳೇ ಬರುತ್ತಿವೆ. ಹಾಗಾಗಿ ಹೊಸ ಥರದ ಪಾತ್ರಗಳ ಹುಡುಕಾಟದಲ್ಲಿದ್ದೇನೆ. ಯಾವ ಭಾಷೆಯಾದರೂ ಸರಿ ನಟಿಸುತ್ತೇನೆ" ಎಂದಿದ್ದಾರೆ ಭಾಸಿ ಭಾಸ್ಕರ್‌.