Chhaava Box Office Collection: ಬಾಕ್ಸ್ ಆಫೀಸ್‌ನಲ್ಲಿ ತಗ್ಗುತ್ತಿಲ್ಲ ʼಛಾವಾʼ ಅಬ್ಬರ; ವಿಕ್ಕಿ ಕೌಶಲ್ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು?
ಬಾಕ್ಸ್ ಆಫೀಸ್‌ನಲ್ಲಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ʼಅನಿಮಲ್ʼ, ʼಪುಷ್ಪ 2ʼ ಗೆಲುವಿನ ಬಳಿಕ ಇದೀಗ ʼಛಾವಾʼ ಕೂಡ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ವಿಕ್ಕಿ ಕೌಶಲ್-ರಶ್ಮಿಕಾ ನಟನೆಯ ಬಾಲಿವುಡ್ ಚಿತ್ರ ʼಛಾವಾʼ 9 ದಿನಗಳಲ್ಲಿ ಬರೋಬ್ಬರಿ 310 ಕೋಟಿ ರೂ. ಗಳಿಸಿದೆ.

ʼಛಾವಾʼ ಚಿತ್ರದ ಪೋಸ್ಟರ್.

ಮುಂಬೈ: ದೇಶ ಕಂಡ ಅಪ್ರತಿಮ ಸಾಹಸಿ, ಮರಾಠ ಸಾಮ್ರಾಜ್ಯದ ದೊರೆ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ (Chhatrapati Sambhaji Maharaj) ಜೀವನದ ಮೇಲೆ ಬೆಳಕು ಚೆಲ್ಲುವ ಬಾಲಿವುಡ್ ಚಿತ್ರ ʼಛಾವಾʼ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ರಿಲೀಸ್ ಆಗಿ 1 ವಾರ ಕಳೆದರೂ ಇದರ ಅಬ್ಬರ ಕಡಿಮೆಯಾಗುತ್ತಿಲ್ಲ. ವಿಕ್ಕಿ ಕೌಶಲ್ (Vicky Kaushal) - ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ, ಲಕ್ಷ್ಮಣ್ ಉಟೇಕರ್ (Laxman Utekar) ನಿರ್ದೇಶನದ ಈ ಐತಿಹಾಸಿಕ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ (Chhaava Box Office Collection). ಫೆ. 14ರಂದು ರಿಲೀಸ್ ಆದ ʼಛಾವಾʼ ಕೇವಲ 9 ದಿನಗಳಲ್ಲೇ 300 ಕೋಟಿ ರೂ. ಕ್ಲಬ್ ಸೇರಿದೆ. ಆ ಮೂಲಕ ಈ ವರ್ಷದ ಮೊದಲ ಬ್ಲಾಕ್ ಬ್ಲಸ್ಟರ್ ಸಿನಿಮಾ ಎನಿಸಿಕೊಂಡಿದೆ.
ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ʼಛಾವಾʼ ಇದುವರೆಗೆ ಸುಮಾರು 286.75 ಕೋಟಿ ರೂ. ಗಳಿಸಿದೆ. ಇನ್ನು ಜಾಗತಿಕ ಬಾಕ್ಸ್ ಆಫೀಸ್ ಲೆಕ್ಕಾಚಾರ ಗಣನೆಗೆ ತೆಗೆದುಕೊಂಡರೆ ಬರೋಬ್ಬರಿ 310 ಕೋಟಿ ರೂ. ಗಳಿಸಿದಂತಾಗಿದೆ. ಅದರಲ್ಲಿಯೂ ಚಿತ್ರ ರಿಲೀಸ್ ಆದ 2ನೇ ಶನಿವಾರ (ಫೆ. 22)ರಂದು ʼಛಾವಾʼ ಗಳಿಸಿದ್ದು ಬರೋಬ್ಬರಿ 44 ಕೋಟಿ ರೂ. ಭಾನುವಾರ ರಜಾದಿನವಾಗಿರುವುದಿಂದ ಇಂದು ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮತ್ತೊಮ್ಮೆ ಮೋಡಿ ಮಾಡಿದ ವಿಕ್ಕಿ ಕೌಶಲ್
ಬಾಲಿವುಡ್‌ನ ಪ್ರತಿಭಾವಂತ ನಟರಲ್ಲಿ ವಿಕ್ಕಿ ಕೌಶಲ್ ಕೂಡ ಒಬ್ಬರು. 2019ರಲ್ಲಿ ತೆರೆಕಂಡ ʼಉರಿ: ದಿ ಸರ್ಜಿಕಲ್ ಸ್ಟ್ರೈಕ್ʼ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ವಿಕ್ಕಿ ಕೌಶಲ್ ʼಛಾವಾʼ ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಸಂಭಾಜಿ ಮಹಾರಾಜರ ಪಾತ್ರದಲ್ಲಿ ಅವರು ಅಕ್ಷರಶಃ ಜೀವಿಸಿದ್ದು, ಅವರ ಪಾತ್ರಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ಮತ್ತೊಂದು ರಾಷ್ಟ್ರ ಪ್ರಶಸ್ತಿ ಪಕ್ಕಾ ಎಂದು ಫ್ಯಾನ್ಸ್ ಭವಿಷ್ಯ ನುಡಿಯುತ್ತಿದ್ದಾರೆ. ವಿಶೇಷವಾಗಿ ಭಾವನಾತ್ಮಕ ದೃಶ್ಯ ಅನೇಕರ ಗಮನ ಸೆಳೆದಿದೆ. ಜತೆಗೆ ಯುದ್ಧದ ದೃಶ್ಯಕ್ಕೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸುದ್ದಿಯನ್ನೂ ಓದಿ: Chhava Trailer: ಐತಿಹಾಸಿಕ ಪಾತ್ರದಲ್ಲಿ ವಿಕ್ಕಿ ಕೌಶಲ್-ರಶ್ಮಿಕಾ ಮಿಂಚು; 'ಛಾವಾ' ಟ್ರೈಲರ್ ಔಟ್
ಹ್ಯಾಟ್ರಿಕ್ ಗೆಲುವು ಸಾಧಿಸಿದ ರಶ್ಮಿಕಾ
ಕನ್ನಡತಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಂಭಾಜಿ ಮಹಾರಾಜರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಅವರ ಅಭಿನಯವೂ ಗಮನ ಸೆಳೆಯುತ್ತಿದೆ. 2023ರಲ್ಲಿ ರಿಲೀಸ್ ಆದ ಬಾಲಿವುಡ್ ಚಿತ್ರ ʼಆನಿಮಲ್ʼ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿದ್ದ ರಶ್ಮಿಕಾ ಕಳೆದ ವರ್ಷ ತೆರೆಕಂಡ ಟಾಲಿವುಡ್‌ನ ʼಪುಷ್ಪ 2ʼ ಸಿನಿಮಾ ಮೂಲಕ ಮತ್ತೊಮ್ಮೆ ದಾಖಲೆ ಬರೆದಿದ್ದರು. ಇದೀಗ ʼಛಾವಾʼ ಸರದಿ.
ʼಛಾವಾʼ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತವಿದ್ದು, ಅಕ್ಷಯ್ ಖನ್ನಾ, ಡಯಾನಾ ಪೆಂಟಿ, ಆಶುತೋಷ್ ರಾಣಾ, ದಿವ್ಯಾ ದತ್ತ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಜಾಹೀರಾತಿನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ʼಛಾವಾʼ ಚಿತ್ರಕ್ಕಾಗಿ ಬೆಳ್ಳಿ ತೆರೆ ಮೇಲೆ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರಿಗೂ ಇದು ಮೊದಲ ಐತಿಹಾಸಿಕ ಚಿತ್ರ ಎನ್ನುವುದು ವಿಶೇಷ. ಆ ಮೂಲಕ ಮೊದಲ ಬಾರಿ ಒಂದಾದ ಈ ಜೋಡಿ ಮೋಡಿ ಮಾಡಿದೆ.