ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi Praises Maha Kumbh: ಲೋಕಸಭೆಯಲ್ಲಿ ಮಹಾ ಕುಂಭಮೇಳವನ್ನು ಶ್ಲಾಘಿಸಿದ ಪ್ರಧಾನಿ ಮೋದಿ; ವಿಪಕ್ಷಗಳಿಂದ ಆಕ್ಷೇಪ

Narendra Modi: ಲೋಕಸಭೆಯಲ್ಲಿ ಮಂಗಳವಾರ (ಮಾ. 18) ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳ ಯಶಸ್ವಿಯಾಗಿ ನೆರವೇರಿದ ಬಗ್ಗೆ ಮಾತನಾಡಿದ್ದಾರೆ. ಆದರೆ ಇದಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಮಹಾ ಕುಂಭಮೇಳವನ್ನು ಶ್ಲಾಘಿಸಿದ ಮೋದಿಗೆ ವಿಪಕ್ಷಗಳ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿ.

Profile Ramesh B Mar 18, 2025 5:54 PM

ಹೊಸದಿಲ್ಲಿ: ʼʼಲೋಕಸಭೆಯಲ್ಲಿ ಮಂಗಳವಾರ (ಮಾ. 18) ಪ್ರಧಾನಿ ನರೇಂದ್ರ ಮೋದಿ (Narendra Modi) ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳ ಯಶಸ್ವಿಯಾಗಿ ನೆರವೇರಿದ ಬಗ್ಗೆ ಮಾತನಾಡಿದ್ದಾರೆ (PM Modi Praises Maha Kumbh). ಆದರೆ ಈ ವೇಳೆ ಅವರು ಜ. 29ರಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರನ್ನು ನೆನಪಿಸಿಕೊಳ್ಳಲಿಲ್ಲ. ಜತೆಗೆ ವಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಲಿಲ್ಲʼʼ ಎಂದು ವಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರ ಭಾಷಣದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ʼʼಕುಂಭಮೇಳದ ಬಗ್ಗೆ ನರೇಂದ್ರ ಮೋದಿ ಹೇಳಿರುವ ವಿಚಾರವನ್ನು ಸ್ವಾಗತಿಸುತ್ತೇವೆ. ಕುಂಭಮೇಳ ನಮ್ಮ ಶ್ರೇಷ್ಠ ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸದ ಸಂಕೇತ. ಆದರೆ ಈ ಬಗ್ಗೆ ಮಾತನಾಡುವ ವೇಳೆ ಮೋದಿ ಅವರು ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲಿಲ್ಲʼʼ ಎಂದು ದೂರಿದ್ದಾರೆ.

ಕುಂಭಮೇಳದ ವೇಳೆ ಉದ್ಯೋಗಾವಕಾಶ ಸೃಷ್ಟಿಯಾಗುವ ಬಗ್ಗೆ ಯುವ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಈ ಬಗ್ಗೆ ಪ್ರಧಾನಿ ಮಾತನಾಡಬೇಕು ಎಂದು ಅವರು ತಿಳಿಸಿದ್ದಾರೆ. ವಿಪಕ್ಷಕ್ಕೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಗದಿರುವ ಬಗ್ಗೆ ಮಾಧ್ಯಮಗಳು ಕೇಳಿದಾಗ, "ಪ್ರಜಾಪ್ರಭುತ್ವದ ರಚನೆಯ ಪ್ರಕಾರ, ವಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ಸಿಗಬೇಕು. ಆದರೆ ಅವರು ನಮಗೆ ಅವಕಾಶ ನೀಡುವುದಿಲ್ಲ. ಇದು ನವ ಭಾರತʼʼ ಎಂದು ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿರುವ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Vaishno Devi Camp: ವೈಷ್ಣೋದೇವಿ ದೇಗುಲಕ್ಕೆ ಪಿಸ್ತೂಲ್‌ ತಂದ ದೆಹಲಿ ಮಹಿಳೆಯ ಬಂಧನ

ಮಾತನಾಡಲು ಅವಕಾಶ ಕೋರಿದ ಪ್ರಿಯಾಂಕಾ ಗಾಂಧಿ

ಕುಂಭಮೇಳದ ಬಗ್ಗೆ ಮಾತನಾಡಲು ವಿಪಕ್ಷಗಳಿಗೆ ಅವಕಾಶ ನೀಡಬೇಕಿತ್ತು ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಅಗ್ರಹಿಸಿದ್ದಾರೆ. ʼʼಪ್ರಧಾನಿ ಮಹಾ ಕುಂಭದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ವಿಪಕ್ಷಗಳಿಗೂ ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡಬೇಕಾಗಿತ್ತು. ಯಾಕೆಂದರೆ ವಿಪಕ್ಷ ನಾಯಕರಿಗೂ ಅವರದ್ದೇ ಆದ ಭಾವನೆಗಳಿವೆ. ವಿಪಕ್ಷಗಳಿಗೆ ಕನಿಷ್ಠ 2 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಬೇಕಿತ್ತು" ಎಂದು ಹೇಳಿದ್ದಾರೆ.

ಮೋದಿ ಹೇಳಿದ್ದೇನು?

ಲೋಕಸಭೆಯಲ್ಲಿ ನಡೆಸಿದ ಭಾಷಣದಲ್ಲಿ ಪ್ರಧಾನಿ ಮೋದಿ ಸುಮಾರು 60 ಕೋಟಿ ಭಕ್ತರು ಭಾಗವಹಿಸಿದ್ದ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ಆಯೋಜಿಸಿದ ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದರು. ʼʼಯಶಸ್ವಿಯಾಗಿ ಕುಂಭಮೇಳವನ್ನು ನಡೆಸಿದ ಉತ್ತರ ಪ್ರದೇಶ ಸರ್ಕಾರ ಮತ್ತು ಸಾರ್ವಜನಿಕರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಹಲವು ಜನರ ಶ್ರಮದ ಫಲ ಇದು. ಭಕ್ತರು, ಉತ್ತರ ಪ್ರದೇಶದ ಪ್ರಜೆಗಳು ಮುಖ್ಯವಾಗಿ ಪ್ರಯಾಗ್‌ರಾಜ್‌ನ ಸ್ಥಳೀಯರಿಗೆ ಧನ್ಯವಾದಗಳು. ಗಂಗೆಯನ್ನು ಭೂಮಿಗೆ ತರಲು ಕಠಿಣ ಪ್ರಯತ್ನಗಳು ನಡೆದಿದ್ದವು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಅದೇ ರೀತಿ ಭವ್ಯ ಮಹಾಕುಂಭವನ್ನು ನಡೆಸಲು ಸತತ ಪ್ರಯತ್ನ ಕೈಗೊಳ್ಳಲಾಗಿತ್ತುʼʼ ಎಂದಿದ್ದರು.

ʼʼಮಹಾ ಕುಂಭಮೇಳ ನಡೆಯುವ ವೇಳೆ ಜಗತ್ತು ಭಾರತದ ಶ್ರೀಮಂತ, ವಿಶಿಷ್ಟ ಸಂಸ್ಕೃತಿಗೆ ಸಾಕ್ಷಿಯಾಗಿತ್ತು. ದೇಶದ ಪ್ರಜೆಗಳ ಕೊಡುಗೆಗಳಿಂದಲೇ ಇದು ಸಾಧ್ಯವಾಗಿದ್ದು. ಇದು ಜನರ ನಂಬಿಕೆಯ ಪ್ರತಿಫಲ. ಈ ಮಹಾಕುಂಭದಲ್ಲಿ ನಮ್ಮ ರಾಷ್ಟ್ರೀಯ ಪ್ರಜ್ಞೆಯ ಜಾಗೃತವಾಗಿದೆʼʼ ಎಂದು ಬಣ್ಣಿಸಿದ್ದರು.