ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Supreme Court: ಮಸೂದೆಗಳನ್ನು ತಡೆ ಹಿಡಿಯಲು ರಾಜ್ಯಪಾಲರಿಗೆ ವಿಟೋ ಅಧಿಕಾರವಿಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

Tamil Nadu government vs Governor: ರಾಜ್ಯ ಸರ್ಕಾರ ಪಾಸ್‌ ಮಾಡುವ ಬಿಲ್‌ಗಳನ್ನು ರಾಜ್ಯಪಾಲರಿಗೆ ಅನಿಶ್ಚಿತ ಕಾಲಕ್ಕೆ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್‌ ಹೇಳಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ 3 ತಿಂಗಳ ಕಾಲಾವಧಿಯನ್ನೂ ಸೂಚಿಸಿದೆ.

ರಾಜ್ಯಪಾಲರಿಗೆ ವಿಟೋ ಅಧಿಕಾರವಿಲ್ಲ: ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ ಮತ್ತು ತಮಿಳುನಾಡು ರಾಜ್ಯಪಾಲ ಆರ್‌.ಎನ್‌.ರವಿ.

Profile Ramesh B Apr 8, 2025 4:29 PM

ಹೊಸದಿಲ್ಲಿ: ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ (ಏ. 8) ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಪಾಸ್‌ ಮಾಡುವ ಬಿಲ್‌ಗಳನ್ನು ರಾಜ್ಯಪಾಲರಿಗೆ ಅನಿಶ್ಚಿತ ಕಾಲಕ್ಕೆ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್‌ ಹೇಳಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ 3 ತಿಂಗಳ ಕಾಲಾವಧಿಯನ್ನೂ ಸೂಚಿಸಿದೆ. ರಾಜ್ಯ ಶಾಸಕಾಂಗ ಕಳುಹಿಸುವ ಮಸೂದೆಗಳನ್ನು ಅಂಗೀಕರಿಸದೆ ಇರುವುದಕ್ಕೆ ರಾಜ್ಯಪಾಲರಿಗೆ ಯಾವುದೇ ರೀತಿಯ ವಿಟೋ (Veto) ಅಧಿಕಾರವಿಲ್ಲ ಎಂದಿದೆ. ಈ ಮೂಲಕ ರಾಜ್ಯಪಾಲರ ಜತೆಗೆ ಕೇಂದ್ರ ಸರ್ಕಾರಕ್ಕೂ ಸುಪ್ರೀಂ ಕೋರ್ಟ್‌ ಅಂಕುಶ ಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯಪಾಲರನ್ನು ಬಳಸಿ ಕೇಂದ್ರವು ವಿಪಕ್ಷಗಳು ಆಡಳಿತದಲ್ಲಿರುವ ಸರ್ಕಾರವನ್ನು ನಿಯಂತ್ರಿಸುವ ನಡೆಯನ್ನು ಸುಪ್ರೀಂ ಕೋರ್ಟ್‌ ಟೀಕಿಸಿದೆ . ಮಸೂದೆಯನ್ನು ಅನಿಶ್ಚಿತ ಕಾಲಾವಧಿಗೆ ಹಿಡಿದಿಡುವ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಈ ತೀರ್ಪು ನೆರವಾಗಲಿದೆ.



ಕೇರಳ, ತಮಿಳುನಾಡು, ಪಂಜಾಬ್‌, ಪಶ್ಚಿಮ ಬಂಗಾಳ ಮುಂತಾದೆಡೆಗಳಲ್ಲಿ ಕಂಡುಬರುವ ರಾಜ್ಯಪಾಲ-ರಾಜ್ಯ ಸರ್ಕಾರದ ನಡುವಿನ ಮುಸುಕಿನ ಗುದ್ದಾಟಕ್ಕೆ ಈ ತೀರ್ಪು ಮಹತ್ವದ್ದಾಗಲಿದೆ. 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆಯನ್ನು ತಡೆಹಿಡಿಯುವ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ನಿರ್ಧಾರವು ಕಾನೂನುಬಾಹಿರ ಮತ್ತು ನಿರಂಕುಶ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ.

"ರಾಷ್ಟ್ರಪತಿಗಳ ಮುಂದೆ 10 ಮಸೂದೆಗಳನ್ನು ಕಾಯ್ದಿರಿಸಿರುವ ರಾಜ್ಯಪಾಲರ ಕ್ರಮ ಕಾನೂನುಬಾಹಿರ ಮತ್ತು ಅನಿಯಂತ್ರಿತವಾಗಿದೆ. ಹಾಗಾಗಿ ಈ ಕ್ರಮವನ್ನು ರದ್ದುಗೊಳಿಸಲಾಗಿದೆ" ಎಂದು ನ್ಯಾಯಾಲಯ ನುಡಿಯಿತು.

ವಿಧಾನಸಭೆ ಅಂಗೀಕರಿಸಿದ ವಿವಿಧ ಮಸೂದೆಗಳಿಗೆ ರಾಜ್ಯಪಾಲ ರವಿ ಅವರು ಒಪ್ಪಿಗೆ ನೀಡಲು ನಿರಾಕರಿಸಿದ್ದರಿಂದ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಮಸೂದೆಯನ್ನು ಪರಿಶೀಲಿಸುವ ಅಧಿಕಾರ ರಾಜ್ಯಪಾಲರಿಗಿದೆ. ಆದರೆ ವಿಧಾನಸಭೆಗಳು ಅಂಗೀಕರಿಸುವ ಮಸೂದೆಗಳನ್ನು ಹತ್ತಿಕ್ಕಲು ಇತ್ತೀಚಿನ ದಿನಗಳಲ್ಲಿ ಈ ಅಧಿಕಾರವನ್ನು ದುರುಪಯೋಗಿಸುತ್ತಿರುವುದು ಕಂಡು ಬಂದಿದೆ. ಇದಕ್ಕಾಗಿ 3 ತಿಂಗಳ ಕಾಲಾವಧಿಯನ್ನು ಸುಪ್ರೀಂ ಕೋರ್ಟ್‌ ನಿಗದಿಪಡಿಸಿರುವುದಿಂದ ಇನ್ನು ಮುಂದೆ ರಾಜ್ಯಪಾಲರ ಪರಿಶೀಲನೆಯಲ್ಲಿರುವ ಹಲವು ಮಸೂದೆಗಳ ಬಗ್ಗೆ ಬೇಗನೇ ತೀರ್ಮಾನವಾಗಲಿದೆ.

ಒಪ್ಪಿಗೆ ತಡೆಹಿಡಿದು ಸಚಿವ ಸಂಪುಟದ ನೆರವು ಮತ್ತು ಸಲಹೆಯೊಂದಿಗೆ ರಾಷ್ಟ್ರಪತಿಗಳಿಗೆ ಕಳಿಸಿದಾಗ ಒಂದು ತಿಂಗಳೊಳಗೆ ನಿರ್ಧರಿಸಬೇಕು. ಸಚಿವ ಸಂಪುಟದ ನೆರವು ಮತ್ತು ಸಲಹೆ ಇಲ್ಲದೆ ಒಪ್ಪಿಗೆ ನೀಡದಿದ್ದಾಗ ಮಸೂದೆಯನ್ನು 3 ತಿಂಗಳೊಳಗೆ ವಾಪಸ್‌ ಕಳಿಸಬೇಕು. ವಿಧಾನಸಭೆ ಮರುಪರಿಶೀಲಿಸಿ ಮಸೂದೆ ಮುಂದಿರಿಸಿದಾಗ ಒಂದು ತಿಂಗಳೊಳಗೆ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಬೇಕು ಎಂದು ಅದು ಸ್ಪಷ್ಟಪಡಿಸಿದೆ.

ಸಂವಿಧಾನದ ಅನುಚ್ಛೇದ 200ರ ಪ್ರಕಾರ ವಿಧಾನಸಭೆ ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರ ಮುಂದೆ ಮಂಡಿಸಿದಾಗ ಅವರು ತಮ್ಮ ಒಪ್ಪಿಗೆಯನ್ನು ನೀಡಬಹುದು, ಒಪ್ಪಿಗೆಯನ್ನು ತಡೆಹಿಡಿಯಬಹುದು ಅಥವಾ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಬಹುದು. ಕೆಲವು ನಿಬಂಧನೆಗಳ ಮರುಪರಿಶೀಲನೆಗಾಗಿ ರಾಜ್ಯಪಾಲರು ಮಸೂದೆಯನ್ನು ಸದನಗಳಿಗೆ ವಾಪಸ್‌ ಕಳುಹಿಸಬಹುದು. ಸದನವು ಅದನ್ನು ಮತ್ತೆ ಅಂಗೀಕರಿಸಿದರೆ, ರಾಜ್ಯಪಾಲರಿಗೆ ಒಪ್ಪಿಗೆ ನೀಡಬೇಕಾಗುತ್ತದೆ. ರಾಜ್ಯ ನೀತಿಯ ನಿರ್ದೇಶಕ ತತ್ವಗಳಿಗೆ ವಿರುದ್ಧವಾದ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವೆಂದು ಭಾವಿಸುವ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಬಹುದು.

ತೀರ್ಪು ಸ್ವಾಗತಿಸಿದ ತಮಿಳುನಾಡು ಸರ್ಕಾರ

ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ತಮಿಳುನಾಡು ಸರ್ಕಾರ ಸ್ವಾಗತಿಸಿದೆ. ಮುಖ್ಯಮಂತ್ರಿಯೂ ಆದ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಇದನ್ನು ಐತಿಹಾಸಿಕ ತೀರ್ಪು ಎಂದು ಕರೆದಿದ್ದಾರೆ. ʼʼಇದು ತಮಿಳುನಾಡು ಮಾತ್ರವಲ್ಲಿ ಎಲ್ಲ ರಾಜ್ಯಗಳಿಗೂ ದೊರೆತ ಜಯ. ರಾಜ್ಯ ಸ್ವಾಯತ್ತತೆ ಮತ್ತು ಫೆಡರಲ್ ರಾಜಕೀಯಕ್ಕಾಗಿ ಡಿಎಂಕೆ ಹೋರಾಟವನ್ನು ಮುಂದುವರಿಸಲಿದೆ" ಎಂದು ಅವರು ಹೇಳಿದ್ದಾರೆ.