QPL 2.0: ಕ್ವೀನ್ಸ್ ಪ್ರೀಮಿಯರ್ ಲೀಗ್ ಲೋಗೋ ಲಾಂಚ್; ಸಮಾರಂಭಕ್ಕೆ ತಾರಾ ಮೆರುಗು
ಬಹುನಿರೀಕ್ಷಿತ ಕ್ವೀನ್ಸ್ ಪ್ರೀಮಿಯರ್ ಲೀಗ್ನ ದ್ವಿತೀಯ ಆವೃತ್ತಿಯ ‘ಕ್ರೀಡೋತ್ಸವ’ ಲೋಗೋವನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಮೋಹಕ ತಾರೆ ರಮ್ಯಾ ಲೋಗೋವನ್ನು ಅನಾವರಣಗೊಳಿಸಿದರು. ಕಳೆದ ವರ್ಷ ನಡೆದ ಮೊದಲ ಆವೃತ್ತಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ನಂತರ, ಈ ಸಲದ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದೆ. ಆ ಮೂಲಕ ಹಬ್ಬದ ರೀತಿಯಲ್ಲಿ ಇದನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



ಕಾರ್ಯಕ್ರಮದಲ್ಲಿ ಕ್ಯುಪಿಎಲ್ ಸ್ಥಾಪಕ ಮಹೇಶ್ ಗೌಡ, ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹಾಗೂ ನಟ, ಕ್ಯುಪಿಎಲ್ ಸಮಿತಿಯ ಸದಸ್ಯ ಪ್ರಮೋದ್ ಶೆಟ್ಟಿ, ಬಾಲಿವುಡ್ ನಟಿ ಎಲಿ ಎವ್ರಾಮ್, ಕ್ರೀಡೆ, ಫ್ಯಾಷನ್ ಮತ್ತು ಚಲನಚಿತ್ರ ಲೋಕದ ಗಣ್ಯರು ಹಾಜರಿದ್ದರು.

ಮಹೇಶ್ ಗೌಡ ಮಾತನಾಡಿ, “QPL 2.0 ಮೂಲಕ ನಾವು ಮಹಿಳೆಯರಿಗಾಗಿ ಕ್ರೀಡೆ ಮತ್ತು ಮನರಂಜನೆ ಕ್ಷೇತ್ರವನ್ನು ಪೂರ್ತಿಯಾಗಿ ಬದಲಾಯಿಸುತ್ತಿದ್ದೇವೆ” ಎಂದು ಹೇಳಿದರು. “ಈ ಸೀಸನ್ನಲ್ಲಿ ನಾವು 50 ಮಿಲಿಯನ್ ಡಿಜಿಟಲ್ ವೀಕ್ಷಣೆಗಳ ಗುರಿ ಹೊಂದಿದ್ದೇವೆ. ಯುವ ಜನತೆ ಮೊಬೈಲ್ ಗೇಮಿಂಗ್ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಸಿನಿ ತಾರೆಗಳು ತಾವು ಫಿಟ್ ಆಗಿ ಉಳಿಯಲು ಇದು ಸಹಾಯಕ” ಎಂದರು.

ರಮ್ಯಾ ಮಾತನಾಡಿ, "ಕ್ಯುಪಿಎಲ್ ಮಹಿಳಾ ಕಲಾವಿದರನ್ನು ಬೆಂಬಲಿಸಿ, ಅವರನ್ನು ಉತ್ತೇಜಿಸುತ್ತಿರುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಇದು ನಮಗೆ ದೈಹಿಕವಾಗಿ ಆರೋಗ್ಯಕರವಾಗಿರುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಆನ್ಲೈನ್ ಗೇಮಿಂಗ್ ಹಾಗೂ ಸೋಶಿಲ್ ಮೀಡಿಯಾದಿಂದ ದೂರವಿರಲು ನೆರವಾಗುತ್ತದೆ. ಕ್ಯುಪಿಎಲ್ನಲ್ಲಿ ನನ್ನ ಸಹಯೋಗ ಇರುವುದಕ್ಕೆ ನನಗೆ ಸಂತಸವಾಗಿದೆʼʼ ಎಂದು ತಿಳಿಸಿದರು.

ಪ್ರಮೋದ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿ, “ಕ್ಯುಪಿಎಲ್ ಎಂದರೆ ಕ್ರೀಡೆೊಂದೇ ಇಲ್ಲ, ಇದು ಗುರಿಯನ್ನು ಹೊಂದಿರುವ ಮನರಂಜನೆ” ಎಂದು ಹೇಳಿದರು. “ಇದು ಚಲನಚಿತ್ರ ಕ್ಷೇತ್ರ ಮತ್ತು ಕಾರ್ಪೊರೇಟ್ ಜಗತ್ತನ್ನು ಒಂದು ವೇದಿಕೆಯಲ್ಲಿ ತಂದು, ಫಿಟ್ನೆಸ್, ಮಹಿಳಾ ಸಬಲೀಕರಣಕ್ಕೆ ಕಾರಣವಾಗುತ್ತದೆʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಲದ ಆವೃತ್ತಿಯು ಮಹಿಳಾ ತಾಂತ್ರಿಕರು ಮತ್ತು ಪರದೆಯ ಹಿಂದೆ ಕೆಲಸಮಾಡುವವರಿಗೂ ವೇದಿಕೆ ಒದಗಿಸುತ್ತಿದೆ ಎನ್ನುವುದು ವಿಶೇಷ.