Magical Forests: ದಣಿದ ಮನಸ್ಸಿಗೆ ನೆಮ್ಮದಿಯ ತಂಗಾಳಿ ನೀಡುವ ಭಾರತದ ಅರಣ್ಯಗಳಿವು
ದುಡಿದು ದಣಿದ ಮನಸ್ಸುಗಳಿಗೆ ಪ್ರವಾಸ ಒಂದಷ್ಟು ರಿಲಾಕ್ಸ್ ನೀಡುತ್ತದೆ. ಅದರಲ್ಲಿಯೂ ಹಚ್ಚ ಹಸುರಿನಿಂದ ಕೂಡಿರುವ ಪರಿಸರ, ದಟ್ಟ ಕಾಡು ಎಂತಹವರನ್ನೂ ಸೆಳೆಯುತ್ತದೆ. ಇಂತರ ಪರಿಸರದಲ್ಲಿ ಒಮ್ಮೆ ಸುತ್ತಾಡಿ ಬಂದರೆ ಬದುಕಿನ ಚಿಂತೆಯೆಲ್ಲ ಮಂಜಿನಂತೆ ಕರಗಿ ಹೋಗುತ್ತದೆ ಎನ್ನುವುದು ಹಲವರ ಅನುಭವದ ಮಾತು. ಹೀಗಾಗಿ ಇಲ್ಲಿದೆ ನೀವು ಭೇಟಿ ನೀಡಬಹುದಾದ, ಅತೀ ಹೆಚ್ಚು ಪ್ರವಾಸಿಗರು ಅತೆರಳುವ ದೇಶದ ಟಾಪ್ ಅರಣ್ಯ ಪ್ರದೇಶಗಳ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.


ಸುಂದರ್ಬನ್ಸ್ (Sundarbans), ಪಶ್ಚಿಮ ಬಂಗಾಳ
ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹರಡಿಕೊಂಡಿರುವ ಸುಂದರ್ಬನ್ಸ್ ವಿಶ್ವದ ಅತೀ ದೊಡ್ಡ ಮ್ಯಾಂಗ್ರೋವ್ (ಕಾಂಡ್ಲಾ) ಕಾಡು. ಈ ರಾಷ್ಟ್ರೀಯ ಉದ್ಯಾನವನವು ಹುಲಿ ಸಂರಕ್ಷಿತ ಮತ್ತು ಜೀವವೈವಿಧ್ಯ ತಾಣವಾಗಿದ್ದು, ಇದು ರಾಯಲ್ ಬೆಂಗಾಲ್ ಟೈಗರ್ನ ಆವಾಸಸ್ಥಾನವೂ ಹೌದು. ದಟ್ಟವಾದ ಹಸಿರು ಕಾಡುಗಳು ಮತ್ತು ರುದ್ರ ರಮಣೀಯ ಪ್ರಕೃತಿ ನೋಡಲು ಬಯಸುವವರು ಸುಂದರ್ಬನ್ಸ್ಗೆ ಭೇಟಿ ನೀಡಬಹುದು. ಇದು ಯುನೆಸ್ಕೋ ಸಂರಕ್ಷಿತ ತಾಣವಾಗಿದ್ದು, ಸುಂದರಿ ಮರಗಳಿಂದ ಈ ಹೆಸರು ಬಂದಿದೆ.
ಭೇಟಿ ನೀಡಲು ಉತ್ತಮ ಸಮಯ: ಸೆಪ್ಟೆಂಬರ್ನಿಂದ ಮಾರ್ಚ್.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ (Jim Corbett National Park), ಉತ್ತರಾಖಂಡ
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದು. ಈ ಉದ್ಯಾನವನವು ಭಾರತದ ಬಂಗಾಳ ಹುಲಿಗಳಿಗೆ ರಕ್ಷಣಾ ವಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು 1936ರಲ್ಲಿ ಸ್ಥಾಪಿಸಲಾಯಿತು. ಇದು ಶೇ. 73ರಷ್ಟು ತೇವಾಂಶವುಳ್ಳ ಕಾಡಿನಿಂದ ಆವೃತವಾಗಿದ್ದು, 580 ಪಕ್ಷಿ ಪ್ರಭೇದಗಳು, 50 ಸಸ್ತನಿಗಳು ಮತ್ತು 25 ಸರೀಸೃಪಗಳಿವೆ.
ಭೇಟಿ ನೀಡಲು ಉತ್ತಮ ಸಮಯ: ನವೆಂಬರ್ನಿಂದ ಫೆಬ್ರವರಿ.

ಖಾಸಿ ಬೆಟ್ಟ (Khasi Hills), ಮೇಘಾಲಯ
ಪೂರ್ವದ ಸ್ಕಾಟ್ಲೆಂಡ್ ಎಂದು ಕರೆಯಲ್ಪಡುವ ಖಾಸಿ ಬೆಟ್ಟ ಶಿಲ್ಲಾಂಗ್ ಪ್ರಸ್ಥಭೂಮಿಯಲ್ಲಿದ್ದು, ಮಾತೃವಂಶೀಯ ಖಾಸಿ ಬುಡಕಟ್ಟು ಜನಾಂಗದವರ ನೆಲೆ ಎನಿಸಿಕೊಂಡಿದೆ. ವಿಶ್ವದ ಅತ್ಯಂತ ಹೆಚ್ಚು ಮಳೆ ಬೀಳುವ ಸ್ಥಳವಾದ ಚಿರಾಪುಂಜಿ, ಮನ ಸೆಳೆಯುವ ಮಂಜಿನ ಪರ್ವತಗಳು ಇಲ್ಲಿವೆ.
ಭೇಟಿ ನೀಡಲು ಉತ್ತಮ ಸಮಯ: ಸೆಪ್ಟೆಂಬರ್ನಿಂದ ಮಾರ್ಚ್.

ಕನ್ಹಾ ರಾಷ್ಟ್ರೀಯ ಉದ್ಯಾನವನ (Kanha National Park), ಮಧ್ಯ ಪ್ರದೇಶ
ಇಂಗ್ಲಿಷ್ ಲೇಖಕ ರುಡ್ಯರ್ಡ್ ಕಿಪ್ಲಿಂಗ್ ಅವರ ಜನಪ್ರಿಯ ಮಕ್ಕಳ ಪುಸ್ತಕ ಸರಣಿ ‘ಜಂಗಲ್ ಬುಕ್’ಗೆ ಸ್ಫೂರ್ತಿಯಾಗಿದ್ದೇ ಮಧ್ಯ ಪ್ರದೇಶದ ಈ ಕನ್ಹಾ ರಾಷ್ಟ್ರೀಯ ಉದ್ಯಾನವನ. ಭಾರತದ ಅತ್ಯಂತ ದೊಡ್ಡ ವನ್ಯಧಾಮಗಳಲ್ಲೊಂದು. 1879ರಲ್ಲಿ ಇದನ್ನು ಮೀಸಲು ಅರಣ್ಯ ಎಂದು ಗುರುತಿಸಿದರೆ, 1955ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಯಿತು. 1974ರಲ್ಲಿ ಹುಲಿ ಮೀಸಲು ಪ್ರದೇಶವಾಯಿತು. ಇಲ್ಲಿ ಪ್ರಮುಖವಾಗಿ ರಾಯಲ್ ಬೆಂಗಾಲ್ ಟೈಗರ್, ಚಿರತೆ, ಸಾಂಬಾರ್, ಕಾಡು ಹಂದಿಗಳು, ಬಾರಸಿಂಗ, ಚುಕ್ಕೆ ಜಿಂಕೆ, ಕರಡಿ, ಗ್ರೇ ಲಂಗೂರ್ ಇನ್ನಿತರ ಪ್ರಾಣಿಗಳು ಕಾಣ ಸಿಗುತ್ತವೆ. ನಾನಾ ಜಾತಿಯ 300ಕ್ಕೂ ಹೆಚ್ಚು ಬಗೆಯ ಪಕ್ಷಿಗಳಿಗೂ ಇದು ಆಶ್ರಯ ತಾಣ.
ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ನಿಂದ ಜೂನ್.

ಪಿಚಾವರಂ ಮ್ಯಾಂಗ್ರೋವ್ ಕಾಡು (Pichavaram Mangrove Forest), ತಮಿಳುನಾಡು
ವಿಶ್ವದ 2ನೇ ಅತೀ ದೊಡ್ಡ ಮ್ಯಾಂಗ್ರೋ ಕಾಡು ಪಿಚಾವರಂ ತಮಿಳುನಾಡಿನಲ್ಲಿದೆ. 1,100 ಹೆಕ್ಟೇರ್ನಲ್ಲಿ ವ್ಯಾಪಿಸಿದೆ. ಇದು 50ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿದೆ.
ಭೇಟಿ ನೀಡಲು ಉತ್ತಮ ಸಮಯ: ನವೆಂಬರ್ನಿಂದ ಫೆಬ್ರವರಿ.

ಗಿರ್ ರಾಷ್ಟ್ರೀಯ ಉದ್ಯಾನವನ (Gir National Park), ಗುಜರಾತ್
ಗುಜರಾತ್ನ ಈ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಏಷ್ಯಾಟಿಕ್ ಸಿಂಹಗಳನ್ನು ನೀವು ಹತ್ತಿರದಿಂದ ನೋಡಬಹುದು. ಚಿರತೆಗಳು, ಜಿಂಕೆಗಳು ಮತ್ತು ವೈವಿಧ್ಯಮಯ ಪಕ್ಷಿ ಪ್ರಭೇದಗಳು ಇಲ್ಲಿವೆ. ಆಫ್ರಿಕಾ ಹೊರತುಪಡಿಸಿ ಸಿಂಹಗಳು ಮುಕ್ತವಾಗಿ ವಿಹರಿಸುವ ಏಕೈಕ ಸ್ಥಳ ಗಿರ್ ರಾಷ್ಟ್ರೀಯ ಉದ್ಯಾನವನ. 1913ರಲ್ಲಿ ಕೇವಲ 20 ಸಿಂಹಗಳಿದ್ದ ಗಿರ್ ಅರಣ್ಯದಲ್ಲಿ ಇದೀಗ ಅವುಗಳ ಸಂಖ್ಯೆ ಗಮನಾರ್ಹವಾಗಿ ವೃದ್ಧಿಸಿದೆ.
ಭೇಟಿ ನೀಡಲು ಉತ್ತಮ ಸಮಯ: ನವೆಂಬರ್ನಿಂದ ಮಾರ್ಚ್.