Laxmi Hebbalkar: ಸಿಎಂ, ಡಿಸಿಎಂ ದಿಲ್ಲಿ ಭೇಟಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಲ್ಲಿಗೆ ಭೇಟಿ ಕೊಡುವುದು ಹೊಸದೇನಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಭೇಟಿ ಕೊಡುವುದು ಹೊಸದೇನಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾತ್ಮಕ ವಿಷಯವಾಗಿ ಕೇಂದ್ರ ಸಚಿವರನ್ನು ಭೇಟಿಯಾಗಲು ಹೋಗಿದ್ದಾರೆ. ಇಲಾಖೆ ವಿಷಯವಾಗಿ ನಾನು ಕೂಡ ದೆಹಲಿಗೆ ಹೋಗುತ್ತಾ ಇರುತ್ತೇನೆ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಸರ್ಕಾರ ಬದಲಾವಣೆ, ಮುಖ್ಯಮಂತ್ರಿಗಳ ಬದಲಾವಣೆ ವಿಷಯಗಳನ್ನಷ್ಟೇ ಸುಖಾಸುಮ್ಮನೆ ಮಾತನಾಡುತ್ತಿರುತ್ತಾರೆ. ನಮ್ಮ ಪಕ್ಷದಲ್ಲಿ ಎಲ್ಲದಕ್ಕೂ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ನಮ್ಮ ಶಾಸಕ ಮಿತ್ರರು ಭೇಟಿಯಾಗುವುದು ಹೊಸದೆನಲ್ಲ. ಇದು ನಿರಂತರ ಪ್ರತಿಕ್ರಿಯೆ. ಈ ಬಾರಿ ಸ್ಪಲ್ವ ತಡವಾಗಿದೆ ಅಷ್ಟೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮೊಟ್ಟೆ ಬಿಲ್ ಹಾಗೂ ಅಂಗನವಾಡಿ ಕಟ್ಟಡಗಳ ಬಾಡಿಗೆ ಕಟ್ಟಿಲ್ಲ ಎಂಬುದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದೇ ನಮ್ಮ ಗುರಿ. ಹಾಲಿನ ಪೌಡರ್ ಬಿಲ್ ಆಗಲಿ, ಮೊಟ್ಟೆ ಬಿಲ್ ಆಗಲಿ ಆಯಾ ತಿಂಗಳು ಪಾವತಿಸಿಕೊಂಡು ಬರಲಾಗುತ್ತಿದೆ ಎಂದರು.
ಈ ಸುದ್ದಿಯನ್ನೂ ಓದಿ | Laxmi Hebbalkar: ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ: ಹೆಬ್ಬಾಳ್ಕರ್
ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಕಾರ್ಮಿಕ ಕಾರ್ಡ್ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹಲಕ್ಷ್ಮಿ ಯೋಜನೆಗೆ ಕಾರ್ಮಿಕರು ಒಳಪಟ್ಟಿದ್ದಾರೆ. ಯಾರಿಗಾದರೂ ತಪ್ಪಿದ್ದರೆ ಆ ಬಗ್ಗೆ ಕಾರ್ಮಿಕ ಸಚಿವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.