ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು..

ಬದುಕಿನ ಏರಿಳಿತಗಳ ನಡುವೆ ತನ್ನ ಎಲ್ಲಾ ಪ್ರಯತ್ನಕ್ಕೆ ಫಲ ಸಿಕ್ಕಿದ ಅಂದಿನ ಕ್ಷಣದಲ್ಲಿ ಕಟ್ಟೆಯೊಡೆದ ಕಣ್ಣೀರನ್ನು ನಿಯಂತ್ರಿಸಿ, ಗೆಲುವಿನ ರೂವಾರಿ ಎನಿಸಿ ನಗೆಬೀರಿ, ಆದಿತ್ಯ ವಾರದ ರಾತ್ರಿಯಲ್ಲಿ ಭಾರತೀಯ ಕ್ರಿಕೆಟ್ ಪಾಲಿಗೆ ಅಕ್ಷರಶಃ ‘ಆಕಾಶ ದೀಪ’ವಾಗಿ ಪ್ರಜ್ವಲಿಸಿ ಹೊಸ ಇತಿಹಾಸ ರಚಿಸಿಯೇ ಬಿಟ್ಟ ಈ ಹುಡುಗ!

ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು..

Profile Ashok Nayak Jul 8, 2025 1:36 PM

ಕ್ರೀಡಾಕಾಶ

ರವೀ ಸಜಂಗದ್ದೆ

ತನ್ನ ‘ರೋಲ್ ಮಾಡೆಲ್’ ಮೊಹಮ್ಮದ್ ಶಮಿ ಉತ್ತರ ಪ್ರದೇಶದ ಅಮ್ರೋಹಾದಿಂದ ಕೋಲ್ಕತ್ತಾಗೆ ಬಂದಿದ್ದನ್ನು ನೆನಪು ಮಾಡಿಕೊಳ್ಳುತ್ತಾ ತಾನೂ ರೈಲನ್ನೇರಿ ದುರ್ಗಾಪುರ ದಿಂದ ಕೋಲ್ಕತ್ತಾಗೆ ಬಂದಿಳಿದ ಆಕಾಶ್ ದೀಪ್. ಆದರೆ ಅಲ್ಲಿ ಬದುಕು ತುಂಬಾ ಕ್ಲಿಷ್ಟಕರ ವಾಗಿ ಸಾಗುತ್ತಿತ್ತು. ಅಂಥ ವೇಳೆ ಊರಿಗೆ ವಾಪಸಾಗುವ ಯೋಚನೆ ಬಂದಾಗಲೆಲ್ಲ, ‘ಏನಾದ ರಾಗಲಿ ಇಲ್ಲೇ ಬದುಕು, ಕ್ರಿಕೆಟ್‌ನ ಕನಸನ್ನು ನನಸಾಗಿಸಿಕೊಳ್ಳುವೆ’ ಎಂದು ತನಗೆ ತಾನೇ ಹೇಳಿಕೊಂಡು ಆತ್ಮವಿಶ್ವಾಸವನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುತ್ತಿದ್ದ.

ಅದು ಇಂಗ್ಲೆಂಡಿನ ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೆಯ ಟೆಸ್ಟ್ ಪಂದ್ಯದ ಕೊನೆಯ ದಿನ. ಗೆಲ್ಲುವ ಹುಮ್ಮಸ್ಸಿನೊಂದಿಗೆ ಭಾರತ ತಂಡವು ಮೈದಾನಕ್ಕಿಳಿಯಿತು. ಆ ದಿನದ ಕೊನೆಯ ಸೆಷನ್, ಭಾರತ ಗೆಲುವಿನ ದಡದಲ್ಲಿತ್ತು. ಇಂಗ್ಲೆಂಡಿನಲ್ಲಿ ಸೂರ್ಯ ಮುಳುಗಲು ಒಂದೆರಡು ಗಂಟೆ ಬಾಕಿಯಿದ್ದರೆ, ಭಾರತದಲ್ಲಿ ಸ್ಥಳೀಯ ಕಾಲಮಾನ ರಾತ್ರಿ ೯.೪೦ ಗಂಟೆಯಾಗಿತ್ತು.

ಇಲ್ಲಿ ಸೂರ್ಯ ಮುಳುಗಿ, ರಾತ್ರಿಯು ತನ್ನ ಎರಡನೆಯ ಪಾಳಿಯೆಡೆಗೆ ನಿಧಾನವಾಗಿ ಹೊರಳುತ್ತಿತ್ತು. ಭಾರತೀಯ ಬೌಲರ್ ಎಸೆದ ಚೆಂಡನ್ನು ಜೋರಾಗಿ ಹೊಡೆಯಲು ಇಂಗ್ಲೆಂಡಿನ ಬ್ಯಾಟ್ಸ್‌ಮನ್ ಯತ್ನಿಸಿದ, ಚೆಂಡು ಆಕಾಶದೆತ್ತರಕ್ಕೆ ಚಿಮ್ಮಿತು. ಅದನ್ನು ಹಿಡಿದು ಪಂದ್ಯವನ್ನು ಗೆಲ್ಲಲು ಜಾತಕಪಕ್ಷಿಯಂತೆ ಕಾಯುತ್ತಿದ್ದವನು, ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೆಯ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಯುವಕಪ್ತಾನ ಗಿಲ್. ಆತ ಕ್ಯಾಚ್ ಹಿಡಿದು ಥೇಟ್ ಸಿಂಹದಂತೆ ಗರ್ಜಿಸಿದ, ಪಂದ್ಯ ಗೆದ್ದ ಭಾರತದ ಸಂಭ್ರಮ ಮುಗಿಲು ಮುಟ್ಟಿತ್ತು. ಈ ಪಂದ್ಯದಲ್ಲಿ ಹೀಗೆ ಹತ್ತನೆಯ ವಿಕೆಟ್ ಪಡೆದ ಆ ಪೋರನೇ ‘ಆಕಾಶ್ ದೀಪ್’!

ಬದುಕಿನ ಏರಿಳಿತಗಳ ನಡುವೆ ತನ್ನ ಎಲ್ಲಾ ಪ್ರಯತ್ನಕ್ಕೆ ಫಲ ಸಿಕ್ಕಿದ ಅಂದಿನ ಕ್ಷಣದಲ್ಲಿ ಕಟ್ಟೆಯೊಡೆದ ಕಣ್ಣೀರನ್ನು ನಿಯಂತ್ರಿಸಿ, ಗೆಲುವಿನ ರೂವಾರಿ ಎನಿಸಿ ನಗೆಬೀರಿ, ಆದಿತ್ಯ ವಾರದ ರಾತ್ರಿಯಲ್ಲಿ ಭಾರತೀಯ ಕ್ರಿಕೆಟ್ ಪಾಲಿಗೆ ಅಕ್ಷರಶಃ ‘ಆಕಾಶ ದೀಪ’ವಾಗಿ ಪ್ರಜ್ವಲಿಸಿ ಹೊಸ ಇತಿಹಾಸ ರಚಿಸಿಯೇ ಬಿಟ್ಟ ಈ ಹುಡುಗ!

ಇದನ್ನೂ ಓದಿ: Ravi Sajangadde Column: ಅಂಚೆಗೂ ಸ್ಮಾರ್ಟ್ ಯೋಗ, ಬಂತು ಡಿಜಿಪಿನ್ ಯುಗ!

ಆಕಾಶ್ ದೀಪ್ ಮೂಲತಃ ಬಿಹಾರ ರಾಜ್ಯದ ಸಾಸರಾಮ್ ಪ್ರದೇಶದ ‘ಬಡ್ಡಿ’ ಹೆಸರಿನ ಪುಟ್ಟ ಹಳ್ಳಿಯ ಬಡಕುಟುಂಬದ ಹುಡುಗ. ಇತರರಂತೆ ಇವನಿಗೂ ಕ್ರಿಕೆಟ್ ಹುಚ್ಚು, ಮೊಹಮ್ಮದ್ ಶಫಿ ಮತ್ತು ಆಶಿಶ್ ನೆಹ್ರಾ ಬೌಲಿಂಗ್ ಶೈಲಿ ಈತನಿಗೆ ಅಚ್ಚುಮೆಚ್ಚು. ಆದರೆ, ‘ಕ್ರಿಕೆಟ್’ ಎನ್ನುವ ಶಬ್ದ ಕೇಳಿದರೆ ಕೆಂಡಾಮಂಡಲರಾಗುತ್ತಿದ್ದ ಈತನ ಅಪ್ಪ, “ಈ ಆಟ ನಮ್ಮಂಥ ಬಡವರಿಗೆ ಹೇಳಿ ಮಾಡಿಸಿದ್ದಲ್ಲ.

ಅದೇನಿದ್ದರೂ ಶ್ರೀಮಂತರಿಗೆ. ಕ್ರಿಕೆಟ್ ಆಡಿ ಉದ್ಧಾರವಾದವರು ತೀರಾ ಕಡಿಮೆ. ನೀನು ಕ್ರಿಕೆಟ್ ಆಡಿ ನಮ್ಮನ್ನು, ನಮ್ಮೂರನ್ನು ಉದ್ಧಾರ ಮಾಡಬೇಕಿಲ್ಲ. ಮೊದಲು ಒಂದಷ್ಟು ಕಲಿತು, ನಂತರ ಒಂದು ಕೆಲಸ ಹುಡುಕಿಕೊಂಡು ನಿನ್ನ ಜೀವನ ನೋಡಿಕೋ. ಕ್ರಿಕೆಟ್ ನಮಗೆ ಅನ್ನ ಹಾಕಲಾರದು" ಎಂಬ ಖಡಕ್ ಆಜ್ಞೆಯನ್ನು ಮಾಡಿದ್ದರು.

ಆದರೆ, ಮನೆಯವರ ವಿರೋಧ ಮತ್ತು ತಂದೆಯ ಬುದ್ಧಿಮಾತಿಗೆ ‘ಕ್ಯಾರೇ’ ಎನ್ನದೆ, ಕ್ರಿಕೆಟ್‌ನಲ್ಲಿಯೇ ಬದುಕನ್ನು ಕಟ್ಟಿಕೊಳ್ಳಲು ನಿರ್ಧರಿಸಿ ಹುಟ್ಟೂರನ್ನು ತೊರೆದು, ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ರೈಲಿನಲ್ಲಿ ಬಂದಿಳಿದ ಆಕಾಶ್ ದೀಪ್. ಕಿಸೆ ಖಾಲಿಯಿದ್ದರೂ ತಲೆತುಂಬಾ ಕ್ರಿಕೆಟ್ ತುಂಬಿತ್ತು!

ಅಲ್ಲಿ ಸಣ್ಣ ಕೆಲಸ ಹುಡುಕಿಕೊಂಡು, ಬಿಡುವು ಮಾಡಿಕೊಂಡು ಸ್ಥಳೀಯ ಕ್ರಿಕೆಟ್ ಸಂಸ್ಥೆಯಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಾ ಜೀವನ ಸಾಗಿಸತೊಡಗಿದ. ದೇಶಕ್ಕಾಗಿ ಆಡಬೇಕೆಂಬ ತವಕ ದಿನಗಳೆದಂತೆ ಜಾಸ್ತಿಯಾಗುತ್ತಿತ್ತು. ಊರು ಬಿಟ್ಟ ಕೆಲ ತಿಂಗಳಲ್ಲಿ, ಪಾರ್ಶ್ವವಾಯು ಹೊಡೆತಕ್ಕೆ ಒಳಗಾಗಿ ತಂದೆಯವರ ಆರೋಗ್ಯ ಕ್ಷೀಣಿಸಿ ಇಹಲೋಕ ತ್ಯಜಿಸಿದ ಸುದ್ದಿ ಆಕಾಶ್‌ಗೆ ಬೌನ್ಸರ್‌ನಂತೆ ಅಪ್ಪಳಿಸಿತು. ಈ ದುಃಖದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮನೆಯ ಆಧಾರಸ್ತಂಭವಾಗಿದ್ದ ಅಣ್ಣನೂ ಹಠಾತ್ ತೀರಿಕೊಂಡ. ಆಕಾಶ್‌ಗೆ ಮತ್ತೊಂದು ಡೆಡ್ಲಿ ಬೌನ್ಸರ್... ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂಥ, ಭೂಮಿಯೇ ಬಾಯ್ತೆರೆದಂಥ ಅನುಭವ.

‘ಬದುಕು ಯಾಕೋ ಕಷ್ಟ ಕೊಡುತ್ತಿದೆ, ಏನೇನನ್ನೋ ಕಲಿಸುತ್ತಿದೆ, ಜತೆಗೆ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನೂ ನನ್ನೊಳಗೆ ತುಂಬುತ್ತಿದೆ’ ಎಂದು ಸ್ವತಃ ಸಮಾಧಾನಮಾಡಿಕೊಂಡ ಆಕಾಶ್, ಮನೆಯಲ್ಲಿ ಒಂಟಿಯಾಗಿದ್ದ ತಾಯಿಗೋಸ್ಕರ ತನ್ನ ಕನಸನ್ನು ಕೈಬಿಟ್ಟು ಊರಿಗೆ ವಾಪಸಾದ. ಕ್ರಿಕೆಟ್ ಆಟದಿಂದ ಮೂರು ವರ್ಷದವರೆಗೆ ‘ರಿಟೈರ್ಡ್ ಹರ್ಟ್’ ಆದ.

ಹೊಂಡಗಳೇ ತುಂಬಿರುವ ರಸ್ತೆಯಲ್ಲಿ ಬ್ರೇಕಿಲ್ಲದ ವಾಹನದಂತಾಗಿದ್ದ ತನ್ನ ಬದುಕನ್ನು ಮತ್ತೆ ಹಳಿಗೆ ತಂದುಕೊಳ್ಳಲು ಆಕಾಶ್ ನಿರಂತರ ಯತ್ನಿಸುತ್ತಲೇ ಇದ್ದ. ಬದುಕಿನ ಗುರಿಯೇ ಆಗಿದ್ದ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಕನಸು ಆಗಾಗ ಕಣ್ಣಮುಂದೆ ಬಂದುಹೋಗುತ್ತಿತ್ತು. ಅದನ್ನು ನನಸಾಗಿಸಿಕೊಳ್ಳಲು ದೃಢನಿರ್ಧಾರ ಮಾಡಿಯೇಬಿಟ್ಟ.

ಜೀವನ ಒಂದಷ್ಟು ಸುಧಾರಿಸಿದೆ, ಅಮ್ಮ ತನ್ನನ್ನು ತಾನು ನಿಭಾಯಿಸಿಕೊಳ್ಳುವಷ್ಟು ಗಟ್ಟಿಯಾಗಿ ದ್ದಾಳೆ ಎನಿಸಿದಾಗ, ಒಂದು ಮುಂಜಾನೆ ಆಕೆಯ ಕಾಲಿಗೆರಗಿ, “ನನ್ನನ್ನು ನೀನು ಮುಂದೊಂದು ದಿನ ಟಿವಿಯಲ್ಲಿ ಕಾಣುವಿಯಂತೆ. ಆಗ ನಿನಗೊಂದು ಹೊಸ ಟಿವಿಯನ್ನು ತಂದುಕೊಡುವೆ. ಆಶೀರ್ವದಿಸು" ಎಂದು ಹೇಳಿದ. ಅಮ್ಮನ ಉತ್ತರಕ್ಕೂ ಕಾಯದೆ ತನ್ನೂರು ‘ಬಡ್ಡಿ’ಯಿಂದ ದುರ್ಗಾಪುರ ನಗರಕ್ಕೆ ಬಂದ.

ತನ್ನ ‘ರೋಲ್ ಮಾಡೆಲ್’ ಮೊಹಮ್ಮದ್ ಶಮಿ ಉತ್ತರ ಪ್ರದೇಶದ ಅಮ್ರೋಹಾದಿಂದ ಕೋಲ್ಕತ್ತಾಗೆ ಬಂದಿದ್ದನ್ನು ನೆನಪು ಮಾಡಿಕೊಳ್ಳುತ್ತಾ ತಾನೂ ರೈಲನ್ನೇರಿ ದುರ್ಗಾಪುರದಿಂದ ಕೋಲ್ಕತ್ತಾಗೆ ಬಂದಿಳಿದ. ಆಗ ಅವನಲ್ಲಿದ್ದುದು ನೂರರ ಕೆಲವೇ ನೋಟುಗಳು ಮತ್ತು ಕ್ರಿಕೆಟ್‌ನಲ್ಲಿ ಸಾಧಿಸುವ ಮಹತ್ವಾಕಾಂಕ್ಷೆ ಮಾತ್ರ. ಬಾಡಿಗೆಗೆ ಸಣ್ಣ ರೂಮು ಹಿಡಿದ. ಆದರೆ ಅಲ್ಲಿ ಬದುಕು ತುಂಬಾ ಕ್ಲಿಷ್ಟಕರವಾಗಿ ಸಾಗುತ್ತಿತ್ತು. ಅಂಥ ವೇಳೆ ಊರಿಗೆ ವಾಪಸಾಗುವ ಯೋಚನೆ ಬಂದಾಗಲೆಲ್ಲ, ‘ಏನಾದರಾಗಲಿ ಇಲ್ಲೇ ಬದುಕು, ಕ್ರಿಕೆಟ್‌ನ ಕನಸನ್ನು ನನಸಾಗಿಸಿಕೊಳ್ಳುವೆ’ ಎಂದು ತನಗೆ ತಾನೇ ಹೇಳಿಕೊಂಡು ಆತ್ಮವಿಶ್ವಾಸವನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುತ್ತಿದ್ದ.

ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಟೆನಿಸ್ ಬಾಲ್ ಪಂದ್ಯಾವಳಿಗಳಲ್ಲಿ ಆಡಿ ಒಂದಷ್ಟು ಕಾಸು ಸಂಪಾದಿಸಿ ದಿನದೂಡತೊಡಗಿದ. ಸ್ಥಳೀಯ ಕ್ರಿಕೆಟ್ ಸಂಸ್ಥೆಯಲ್ಲಿ ದಿನವೂ ಬೌಲಿಂಗ್ ಅಭ್ಯಾಸ ಜಾರಿಯಲ್ಲಿತ್ತು. ಈತನ ಪ್ರತಿಭೆಯು 23 ವರ್ಷಕ್ಕಿಂತ ಕಿರಿಯರ ಬಂಗಾಳ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ದಕ್ಕಿಸಿಕೊಟ್ಟಿತು, ಭಾಗ್ಯದ ಮೊದಲ ಬಾಗಿಲು ತೆರೆಯಿತು. ಅಂದೇ ಸಾಲ ಮಾಡಿ, ಗೆಳೆಯರಲ್ಲಿ ಹೇಳಿ ಊರಿನ ಮನೆಯಲ್ಲಿ ಅಮ್ಮನಿಗಾಗಿ ಸಣ್ಣದೊಂದು ಟಿವಿಯನ್ನು ವ್ಯವಸ್ಥೆ ಮಾಡಿದ.

ಮಗನನ್ನು ಅದರಲ್ಲಿ ಕಂಡು ಅಮ್ಮನ ಕಣ್ಣುತುಂಬಿ ಬಂತು. ಕಠಿಣ ಪರಿಶ್ರಮ ಮತ್ತು ಒಳ್ಳೆಯ ಪ್ರದರ್ಶನದ ಫಲವಾಗಿ ರಣಜಿ ತಂಡದಲ್ಲಿ ಆಕಾಶ್‌ಗೆ ಸ್ಥಾನ ದಕ್ಕಿತು. ಒಂದೆರಡು ಸ್ಥಿರ ಪ್ರದರ್ಶನ ಗಳ ಪರಿಣಾಮವಾಗಿ ‘ಆರ್‌ಸಿಬಿ’ ತಂಡದ ಐಪಿಎಲ್ ಆಟಗಾರನಾಗಿ ಬಡ್ತಿ ಸಿಕ್ಕಿತು, ಮನೆಯಲ್ಲೂ ದೊಡ್ಡ ಎಲ್‌ಇಡಿ ಟಿವಿ ಬಂತು! ದೇಶಕ್ಕೆ ಆಡುವ ತುಡಿತ ಇನ್ನೂ ಜಾಸ್ತಿಯಾಯಿತು.

ಆ ಅದೃಷ್ಟದ ದಿನ ಬಂದೇಬಿಟ್ಟಿತು. 2024ರಲ್ಲಿ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆ ಅದೃಷ್ಟದ ದಿನ ಬಂದೇಬಿಟ್ಟಿತು. 2024ರಲ್ಲಿ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಗನ ಆಟವನ್ನು ಕಂಡು, ಗ್ಯಾಲರಿಯಲ್ಲಿ ಕೂತಿದ್ದ ಅಮ್ಮ ಹೆಮ್ಮೆಪಟ್ಟರು. ಟೆನಿಸ್ ಬಾಲ್ ಆಡುತ್ತಿದ್ದ ಆಕಾಶ್ ದೀಪ್, ಹೀಗೊಂದು ಅವಕಾಶ ಸಿಕ್ಕಾಕ್ಷಣ ಅಂತಾರಾಷ್ಟ್ರೀಯ ಆಟಗಾರನಾಗಿ ಗುರುತಿಸಿಕೊಂಡ, ಉತ್ತಮ ಪ್ರದರ್ಶನ ನೀಡತೊಡಗಿದ.

ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಎರಡನೆಯ ಪಂದ್ಯಕ್ಕೆ ಬುಮ್ರಾ ಅಲಭ್ಯನಾದ ಹಿನ್ನೆಲೆಯಲ್ಲಿ ಅವಕಾಶ ಸಿಕ್ಕಿತ್ತು. ಎದುರಾಳಿ ತಂಡದ ಬ್ಯಾಟಿಂಗ್ ಬುಡವನ್ನು ಎರಡೂ ಇನ್ನಿಂಗ್ಸ್‌ಗಳಲ್ಲಿ ಅಲುಗಾಡಿಸಿದ ಆಕಾಶ್, ಪಂದ್ಯವೊಂದರಲ್ಲಿ 10 ವಿಕೆಟ್ ಗಳಿಸಿ ‘ಗೆಲುವಿನ ರೂವಾರಿ’ ಎನಿಸಿಕೊಂಡ.

ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾದ ಮೊದಲ ತಂಡ ಎಂಬ ಗರಿಮೆಯನ್ನು ಭಾರತವು ದಕ್ಕಿಸಿಕೊಳ್ಳುವಂತಾಗುವಲ್ಲಿ ಮಹತ್ವದ ಕೊಡುಗೆ ನೀಡಿದ. ಮೈದಾನ ದಿಂದ ಹೊರಬರುವಾಗ, ಗೆಲುವಿನ ಸ್ಮರಣಾರ್ಥವಾಗಿ ಒಂದು ವಿಕೆಟ್ ಮತ್ತು ಬಾಲನ್ನು ಕೈಯಲ್ಲಿ ಹಿಡಿದು ಪೆವಿಲಿಯನ್‌ನತ್ತ ಸಾಗುವಾಗ ಅವನಲ್ಲಿ ಒಬ್ಬ ಶ್ರೇಷ್ಠ ಬೌಲರ್ ಮಾತ್ರವಲ್ಲದೆ, ಹೋರಾಟ ಗಾರನೂ ಕಾಣುತ್ತಿದ್ದ. What a journey!.

ತಾನು ಪಡೆದ ೧೦ ವಿಕೆಟ್ಟುಗಳ ಸಾಧನೆಯನ್ನು, ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಅರ್ಪಿಸುವ ಮೂಲಕ ಮತ್ತಷ್ಟು ಗೌರವ ಸಂಪಾದಿಸಿಕೊಂಡ ಆಕಾಶ್ ದೀಪ್. ಒಂದು ಕಾಲಕ್ಕೆ ‘ಕ್ರಿಕೆಟ್ ಆಡಬೇಡ’ ಎಂದು ಹೇಳಿ ಸಿಟ್ಟಾಗಿದ್ದ ಅವನ ಅಪ್ಪ, ಮಗನ ಈ ಸಾಧನೆಯನ್ನು ಕಂಡು ತಾವಿರುವಲ್ಲಿಂದಲೇ ಹರಸಿ ಸಂತಸ ಪಡುತ್ತಿರಬಹುದು.

ಮೊಹಮ್ಮದ್ ಶಮಿ, ಬುಮ್ರಾ ನಂತರ ಭಾರತದ ವಿಶ್ವಾಸಾರ್ಹ ಬೌಲರ್ ಯಾರು? ಎಂಬ ಪ್ರಶ್ನೆಗೆ ತನ್ನ ಸ್ಥಿರ ಪ್ರದರ್ಶನದ ಮೂಲಕ ಉತ್ತರಿಸಿದ್ದಾನೆ ಆಕಾಶ್ ದೀಪ್. ಈ ಸರಣಿಯ ಮಿಕ್ಕ ಪಂದ್ಯ ಗಳಲ್ಲೂ ಈತ ಅವಕಾಶ ದಕ್ಕಿಸಿಕೊಂಡು ಉತ್ತಮ ಪ್ರದರ್ಶನವನ್ನು ನೀಡುವಂತಾಗಲಿ, ತನ್ನ ಸಾಮರ್ಥ್ಯ ಮತ್ತು ಶ್ರೇಷ್ಠ ಪ್ರದರ್ಶನದಿಂದ ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸೋಣ. ಭಾರತದ ಟೆಸ್ಟ್ ಕ್ರಿಕೆಟ್‌ನಲ್ಲಿ ‘ಭರವಸೆಯ ನಾಳೆಗಳು ನಮ್ಮದು’ ಎನಿಸಿದೆ...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)