BY Vijayendra: ಅಕ್ರಮವಾಗಿ 14 ನಿವೇಶನ ಬಂದಿಲ್ಲ ಎಂದಾದರೆ, ಹಿಂತಿರುಗಿಸಿದ್ದೇಕೆ? ವಿಜಯೇಂದ್ರ ಪ್ರಶ್ನೆ
BY Vijayendra: ಲೋಕಾಯುಕ್ತದ ಕ್ಲೀನ್ ಚಿಟ್ ಫೇಕ್ ಕ್ಲೀನ್ ಚಿಟ್ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು, ಮುಖ್ಯಮಂತ್ರಿಗಳೇ ಆಯ್ಕೆ ಮಾಡಿದ ಅಧಿಕಾರಿಗಳೇ ತನಿಖೆ ಮಾಡಿದ್ದಾರೆ. ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ? ಇದರ ಬಗ್ಗೆ ಬಿಜೆಪಿ ಏನು ಮಾಡಬೇಕೆಂಬ ಬಗ್ಗೆ ಹಿರಿಯರ ಜತೆ ಚರ್ಚಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ.

ಬೆಂಗಳೂರು: ಕಳೆದ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಬಳಸಬೇಕಾದ ಸುಮಾರು 14-15 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿಗಳಿಗೆ ಬಳಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ʼಎಸ್‍ಸಿಪಿ- ಟಿಎಸ್‍ಪಿ ಹಣ ದುರ್ಬಳಕೆ ಮಾಡಿಕೊಂಡ ದಲಿತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ (State Congress Government) ವಿರುದ್ಧ ಜನಾಂದೋಲನʼ ಕುರಿತು ಪೂರ್ವಭಾವಿ ಕಾರ್ಯಾಗಾರವನ್ನು ಇವತ್ತು ಏರ್ಪಡಿಸಲಾಗಿದೆ ಎಂದು ತಿಳಿಸಿದ ಅವರು, ಇದೀಗ ಮತ್ತೆ ಇನ್ನೊಂದು ಬಜೆಟ್ ಮಂಡನೆ ಹತ್ತಿರವಾಗುತ್ತಿದೆ. ಅಲ್ಲೂ ಕೂಡ 18 ರಿಂದ 20 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗಳಿಗೆ ಬಳಸುವವರಿದ್ದಾರೆ ಎಂದು ದೂರಿದರು.
ಮುಂದಿನ ದಿನಗಳಲ್ಲಿ 14 ತಂಡಗಳಲ್ಲಿ ನಮ್ಮ ಮುಖಂಡರು ಪ್ರವಾಸ ಮಾಡಲಿದ್ದಾರೆ. ಲೋಕಸಭಾ ಕ್ಷೇತ್ರ, ಜಿಲ್ಲಾ ಕೇಂದ್ರಗಳಿಗೆ ತೆರಳಿ ಅಲ್ಲಿ ಪತ್ರಿಕಾಗೋಷ್ಠಿ ಮಾಡಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡಲಿದೆ. ಒಟ್ಟಾರೆಯಾಗಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಅವರಿಗೇ ಬಳಸಬೇಕಿದೆ ಎಂದು ಆಗ್ರಹಿಸಿದರು.
ಮುಡಾ ವಿಚಾರದಲ್ಲಿ ಕ್ಲೀನ್‍ಚಿಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ಏನು ಹೇಳುತ್ತಾರೆಂಬುದು ಮುಖ್ಯವಲ್ಲ. ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಅಥವಾ ಲೋಕಾಯುಕ್ತ ಕೊಟ್ಟ ಬಿ ರಿಪೋರ್ಟ್ ನಮಗೆ ಆಶ್ಚರ್ಯವನ್ನು ಉಂಟು ಮಾಡಿಲ್ಲ ಎಂದು ತಿಳಿಸಿದ ಅವರು, ಹಿಂದೆಯೂ ಇದನ್ನೇ ನಾವು ಹಲವಾರು ಬಾರಿ ಹೇಳಿದ್ದೆವು ಎಂದರು.
ಲೋಕಾಯುಕ್ತ ಸಂಸ್ಥೆ ತನಿಖೆ ಮಾಡುತ್ತಿರುವಾಗ ರಾತ್ರಿ 8- 9 ಗಂಟೆಗೆ ಮುಖ್ಯಮಂತ್ರಿಗಳ ಕುಟುಂಬಸ್ಥರು ಮಾವನ ಮನೆಗೆ ಹೋದ ಮಾದರಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಚೇರಿಗೆ ಭೇಟಿ ಕೊಡುತ್ತಿದ್ದರು. ಮೈಸೂರಿನ ಮುಡಾ ಹಗರಣದಲ್ಲಿ ಸುಮಾರು 5 ಸಾವಿರ ಕೋಟಿಯ ಅಕ್ರಮ ನಡೆದಿದೆ. ಮುಡಾದಲ್ಲಿ ಯಾವುದೇ ರೀತಿಯ ಹಗರಣ ಆಗಿಲ್ಲ ಎಂದು ಸಿದ್ದರಾಮಯ್ಯನವರು ಆರಂಭದಲ್ಲಿ ಹೇಳಿದ್ದರು. ತಮ್ಮ ಕುಟುಂಬಕ್ಕೆ ಕಾನೂನುಬಾಹಿರವಾಗಿ 14 ನಿವೇಶನಗಳು ಬಂದಿಲ್ಲ ಎಂದು ತಿಳಿಸಿದ್ದಾಗಿ ಹೇಳಿದರು.
ಬಿಜೆಪಿ- ಜೆಡಿಎಸ್ ಈ ವಿಷಯ ಮುಂದಿಟ್ಟು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿತ್ತು. ಸಿದ್ದರಾಮಯ್ಯನವರು ನಮ್ಮ ಹೋರಾಟದ ಒತ್ತಡಕ್ಕೆ ಮಣಿದು 14 ನಿವೇಶನಗಳನ್ನು ರಾತ್ರೋರಾತ್ರಿ ಹಿಂದಿರುಗಿಸುವುದಾಗಿ ಮುಡಾಕ್ಕೆ ಪತ್ರ ಬರೆದಿದ್ದರು.
ಅಕ್ರಮವಾಗಿ 14 ನಿವೇಶನ ಬಂದಿಲ್ಲ ಎಂದಾದರೆ, ಅದನ್ನು ಹಿಂತಿರುಗಿಸಿದ್ದೇಕೆ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ಅವರು, ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ. ಒಬ್ಬ ಅಪರಾಧಿ ತಪ್ಪು ಮಾಡಿದ ಮೇಲೆ ಆ ಮಾಲನ್ನು ಹಿಂತಿರುಗಿಸಿದರೆ ನಿರಪರಾಧಿ ಎಂದು ಕ್ಲೀನ್ ಚಿಟ್ ಕೊಡಲಾಗಿದೆ ಎಂದರೆ, ಇದನ್ನು ಮಾಧ್ಯಮ ಸ್ನೇಹಿತರು ಮುಖ್ಯಮಂತ್ರಿಗಳಿಗೆ ಪ್ರಶ್ನಿಸಬೇಕು ಎಂದರು.
ಲೋಕಾಯುಕ್ತದ ಕ್ಲೀನ್ ಚಿಟ್ ಫೇಕ್ ಕ್ಲೀನ್ ಚಿಟ್ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿಗಳೇ ಆಯ್ಕೆ ಮಾಡಿದ ಅಧಿಕಾರಿಗಳೇ ತನಿಖೆ ಮಾಡಿದ್ದಾರೆ; ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಇದರ ಬಗ್ಗೆ ಬಿಜೆಪಿ ಏನು ಮಾಡಬೇಕೆಂಬ ಬಗ್ಗೆ ಹಿರಿಯರ ಜತೆ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Karnataka Weather: ಕಲಬುರಗಿಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲು; ರಾಜ್ಯದಲ್ಲಿ ಮುಂದಿನ 5 ದಿನ ಹೇಗಿರಲಿದೆ ಹವಾಮಾನ?
ಯತ್ನಾಳ್ ಅವರ ಆರೋಪಗಳ ಕುರಿತು ಒಂದೇ ಸಲ ಉತ್ತರ ಕೊಡಲಿದ್ದೇನೆ. ದಿನನಿತ್ಯ ಉತ್ತರಿಸಲು ಸಾಧ್ಯವಿಲ್ಲ. ನಾನು ರಾಜ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ನಿರತನಾಗಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.