Sunday, 19th May 2024

ಮನೆಗೆ ಬರುವ ಮಗಳು ಮೊಮ್ಮಗ

ಟಿ. ಎಸ್. ಶ್ರವಣಕುಮಾರಿ

ಗಣೇಶನನ್ನು ಬೀಳ್ಕೊಡುವ ಸಡಗರವೇನು ಕಡಿಮೆಯದೇ? ಗೌರಮ್ಮನಿಗೆ ಉಡಿಯಕ್ಕಿಯಿಟ್ಟು, ಗಣಪನನ್ನು ಮತ್ತೆ ಪೂಜಿಸಿ ಮನೆಯಿಂದಾಚೆಗೆ ಕರೆದೊಯ್ದು,
ಗುರುತು ಮರೆಯಬಾರದು ಎನ್ನುವಂತೆ ತಿರುಗಿಸಿ ಮತ್ತೊಮ್ಮೆ ಮನೆಯನ್ನು ತೋರಿಸುತ್ತಾರೆ.

ನಮ್ಮ ಚಿಕ್ಕಂದಿನ ಗೌರಿಹಬ್ಬದ ಸಂಭ್ರಮವನ್ನು ಈಗ ನೆನಪಿಸಿಕೊಂಡರೂ ಅಷ್ಟೇ ಖುಷಿಯಾಗುತ್ತದೆ. ಇದು ಹೆಂಗಳೆಯರ ಜಾನಪದೀಯ ಹಬ್ಬ. ಅಂದು ಗೌರಿ ದೇವತೆಯಲ್ಲ, ಮನೆಮನೆಯ ಹೆಣ್ಣುಮಗಳು. ಅಂದಿನ ಪ್ರತಿಯೊಂದು ಆಚರಣೆಯಲ್ಲೂ ಮದುವೆಯಾದ ಮಗಳನ್ನು ಮನೆಗೆ ಕರೆಸಿ, ಆದರಿಸಿ, ಉಪಚರಿಸಿ, ಉಡುಗೊರೆಗಳನ್ನು ಕೊಟ್ಟು ಸಂಭ್ರಮಿಸುವ, ಮಮತೆ, ಕಳಕಳಿ ಎದ್ದುಕಾಣುತ್ತದೆ.

ಹದಿನಾರು ಜೊತೆ ಬಾಗಿನ

ಇಷ್ಟೇ ಅಲ್ಲದೆ ಮದುವೆಯ ನಂತರದ ಮೊದಲ ಗೌರಿಹಬ್ಬಕ್ಕೆ ಹೆಣ್ಣುಮಕ್ಕಳನ್ನು ತವರಿಗೆ ಕರೆಸಿಕೊಳ್ಳುವ ಸಂಪ್ರದಾಯವಿದೆ. ಆ ವರ್ಷ ವಿಶೇಷವಾಗಿ ಹದಿನಾರು ಜೊತೆ ಬಾಗಿನಗಳನ್ನು ಕೊಡಿಸುತ್ತಾರೆ. ಹಿಂದಿನ ದಿನ ಅಕ್ಕಿಯ ತಟ್ಟೆಯಲ್ಲಿ ಕುಳಿತು ಮನೆಗೆ ಬರುವ ಗೌರಿ, ಗಣೇಶರನ್ನು ಬಾಗಿಲಲ್ಲಿ ಕದಲಾರತಿ ಮಾಡಿ ಕರೆತರುವಾಗ ಅಲ್ಲಿರುವುದು ಮಗಳನ್ನು, ಮೊಮ್ಮಗನನ್ನು ಮನೆಯೊಳಗೆ ಕರೆತರುವ ಆದರ, ಹಿಗ್ಗು. ಗೌರಿಯು, ಅವರವರ ಮನೆಯ ಪದ್ಧತಿಯಂತೆ (ಅರಿಶಿನದ ಗೌರಿ, ಮರಳು ಗೌರಿ, ಅಲಂಕಾರದ ಗೌರಿ) ಈ ರೂಪಗಳಲ್ಲೂ ಬಂದು ಬಾಳೆಯ ಕಂದು, ಹೂವುಗಳು, ಇತರ ಅಲಂಕಾರಗಳಿಂದ ಅಲಂಕೃತವಾದ ಸಿಂಹಾಸನದಲ್ಲಿ ಆಸೀನಳಾಗು ತ್ತಾಳೆ. ಕಳಶವನ್ನು ಸ್ಥಾಪಿಸುತ್ತಾರೆ. ಮನೆಯಲ್ಲಿ ಗೌರಿಯನ್ನು ಕೂರಿಸುವ ಪದ್ಧತಿ ಇಲ್ಲದಿರುವವರು ಇಟ್ಟವರ ಮನೆಗೆ ಪೂಜೆಗೆ ಹೋಗುತ್ತಾರೆ.

ಹೆಂಗಳೆಯರೆಲ್ಲರೂ ಹೆಚ್ಚಾಗಿ ತಮ್ಮ ಮದುವೆಯ ಸೀರೆಗಳನ್ನುಟ್ಟು ಒಟ್ಟಾಗಿ ಸೇರಿ ಪೂಜೆ ಮಾಡುವ ಸಂಭ್ರಮ ನೋಡುವಂತದು. ಪೈಪೋಟಿಯ ಮೇಲೆ ಹೂವುಗಳನ್ನು ಏರಿಸುತ್ತಾರೆ, ತಿಂಗಳಾನುಗಟ್ಟಲೆ ಕಷ್ಟಪಟ್ಟು ಮಾಡಿದ ವಿಧವಿಧದ ಗೆಜ್ಜೆವಸಗಳನ್ನು ತೊಡಿಸುತ್ತಾರೆ. ಸಂಪ್ರದಾಯದ ಹಾಡುಗಳನ್ನು ಹಾಡುತ್ತಿರು ತ್ತಾರೆ. ಆರತಿಯೆತ್ತಿ, ಪೂಜೆ ಮುಗಿದು, ಜೋಯಿಸರು ಹೊರಟರೂ ಇವರ ಸಡಗರ ಮುಗಿದಿರುವುದಿಲ್ಲ. ಗೌರಿಗೆ ಮೊರದ ಬಾಗಿನ ವನ್ನು ಕೊಟ್ಟನಂತರ ಪರಸ್ಪರ ಬಾಗಿನಗಳನ್ನು ಕೊಟ್ಟುಕೊಳ್ಳುತ್ತಾರೆ. ಮಧ್ಯಾಹ್ನ ಮತ್ತೆ ಗೌರಿಯ ಊಟಕ್ಕೆಂದು ಅಕ್ಕಿ, ಬೇಳೆಯನ್ನು, ನೈವೇದ್ಯವನ್ನು ತಂದಿಟ್ಟು ಧನ್ಯತಾ ಭಾವವನ್ನನು ಭವಿಸುತ್ತಾರೆ.

ವ್ಯವಧಾನವಿಲ್ಲದವರು ಆ ದಿನವೇ ಗೌರಮ್ಮನನ್ನು ಮಗನೊಂದಿಗೆ ಕಳುಹಿಸಿದರೆ, ಅನುಕೂಲವಿದ್ದವರು ವರ್ಷಕ್ಕೊಂದ್ಸಲ ಬರ್ತಾಳೆ, ನಾಕ್ದಿನ ನ ಮ್ಜೊತೇಲಿರ್ಲಿ ಎಂದು ದಿನ, ವಾರ, ನಕ್ಷತ್ರಗಳನ್ನು ನೋಡಿಕೊಂಡು ಗೌರಿಯನ್ನು ಕಳುಹಿಸಿಕೊಡುತ್ತಾರೆ. ಮಗಳಿಗೆ ಇಷ್ಟು ಸಂಭ್ರಮವಿದ್ದ ಮೇಲೆ ಮೊಮ್ಮಗನಿಗೆ ಕಡಿಮೆಯೇ. ಹಬ್ಬದಂದು ಗೌರಿ ಭೂಲೋಕಕ್ಕೆ ಬಂದಾಗ ಅವಳನ್ನು ಬಿಟ್ಟಿರಲಾಗದ ಶಂಕರ ಕರೆತರಲು ಗಣಪತಿ ಯನ್ನು ಹಿಂದೆಯೇ ಕಳುಹಿಸಿದನಂತೆ! ತಾತನ ಮನೆ
ಯಾರಿಗಾದರೂ ಅಚ್ಚುಮೆಚ್ಚೆ. ಕುಣಿಯುತ್ತಲೇ ಬಂದು ಗೌರಿಯ ಪೀಠದ ಕೆಳಗೇ ತನ್ನ ಸಿಂಹಾಸನವನ್ನೂ ಸ್ಥಾಪಿಸಿಕೊಂಡು ಕುಳಿತುಬಿಡುತ್ತಾನೆ. ಹೇಳಿಕೇಳಿ ಭೋಜನ ಪ್ರಿಯ.

ವರ್ಷಕ್ಕೊಮ್ಮೆ ಬರುವ ಮೊಮ್ಮಗನಿಗೆ ಎಷ್ಟೆಷ್ಟು ಮಾಡಿದರೂ ಕಡಿಮೆಯೇ. ಗೌರಿಗೆ ಹೋಳಿಗೆಯಾದರೆ ಗಣಪನಿಗೆ ಕಡುಬು, ಮೋದಕ, ಚಕ್ಕುಲಿ, ಪಾಯಸ
ಪರಮಾನ್ನಗಳೆಂದು ಅವನ ಹೆಸರು ಹೇಳಿ ಎಲ್ಲರಿಗೂ ಭೂರಿ ಭೋಜನವೇ. ಗೌರಿಯ ಪೂಜೆ ಇಲ್ಲದವರ ಮನೆಯಲ್ಲೂ ವಿಘ್ನನಿವಾರಕನ ಪೂಜೆಯಂತೂ ಇರುತ್ತದೆ.

ಮನೆಗೆ ಬಂದ ಮೊಮ್ಮಗ
ಗೌರಮ್ಮ ಮನೆಮನೆಯಲ್ಲಿ ಮಾತ್ರ ಪೂಜೆಗೊಂಡರೆ ಗಣೇಶನಿಗೆ ಆ ಬೇಧವಿಲ್ಲ. ಬೀದಿಬೀದಿಯಲ್ಲೂ ವಿಜೃಂಭಿಸುತ್ತಾನೆ. ಅಮ್ಮನನ್ನು ಮನೆಯಲ್ಲಿ ಬಿಟ್ಟು ಮೂಷಿಕದ
ಮೇಲೆ ಊರೆ ಸುತ್ತುತ್ತಿರುತ್ತಾನೆ. ವಿವಿಧ ಭಕ್ಷ್ಯ ಭೋಜ್ಯಗಳನ್ನು ಸೇವಿಸಿಕೊಂಡು ಕೈಲಾಸವನ್ನು, ಅಮ್ಮನ ಕರೆದುಕೊಂಡು ಹೋಗುವುದನ್ನು ಮರೆತು, ಭಾಜಾ
ಭಜಂತ್ರಿಯೊಂದಿಗೆ ಕಳಿಸುವ ತನಕವೂ ಹಾಯಾಗಿ ಅಡ್ಡಾಡಿಕೊಂಡಿರುತ್ತಾನೆ. ಎಷ್ಟೋ ವೇಳೆ ಹಬ್ಬ ಮುಗಿದು ಅಮ್ಮನೊಂದಿಗೆ ಕೈಲಾಸಕ್ಕೆ ತೆರಳಿದ ಹದಿನೈದು ದಿನ, ತಿಂಗಳ ನಂತರವೂ ಇದ್ದಕ್ಕಿದ್ದಂತೆ ಯಾವಯಾವುದೋ ಬೀದಿಯಲ್ಲಿ ಪ್ರತ್ಯಕ್ಷನಾಗಿ ಆರ್ಕೆಸಾಗಳನ್ನು ಕೇಳುತ್ತಾ, ನಾಟಕವನ್ನು ನೋಡುತ್ತಾ, ಸಂಗೀತವನ್ನು ಆಲಿಸುತ್ತಾ ಬೇಸಿಗೆಯ ರಜೆಯಲ್ಲಿ ತಾತನ ಮನೆಗೆ ಬಂದ ಮೊಮ್ಮಗ ನಂತೆ ದಿನಕ್ಕೊಂದು ಮನರಂಜನೆಯಲ್ಲಿ ಮುಳುಗಿರುತ್ತಾನೆ.

ಬಾಲ ಗಂಗಾಧರ ತಿಲಕರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸಂಘಟನೆಗಾಗಿ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವುದನ್ನು ಚಾಲ್ತಿಗೆ ತಂದರಂತೆ. ಮೂಲ ಕಾರಣ ಏನೇ ಇರಲಿ, ಈಗಲೂ ಬೀದಿಯ ಹುಡುಗರಿಗೆ, ಯುವಕರಿಗೆ ಗಣೇಶೋತ್ಸವ ಬಿಲ್ಡಪ್ ಕೊಟ್ಟುಕೊಂಡು ಓಡಾಡಲು ಒಳ್ಳೆಯ ಅವಕಾಶವಾಗಿದೆ ಎಂಬುದಂತೂ ಸತ್ಯ. ಗಣಪನೂ ಮಕ್ಕಳೊಂದಿಗೆ ಮಗುವಾಗಿ ವಿದ್ಯಾ ಗಣಪತಿಯಾಗಿ, ನಾಟ್ಯ ಭಂಗಿಯಲ್ಲಿ ನಿಂತು, ದೋಣಿಯಲ್ಲಿ ಕುಳಿತು, ವೀರಪ್ಪನ್ನನ್ನು ಹುಡುಕುವ ಪೋಲೀಸಿನವನಾಗಿ, ರಾಕೆಟ್‌ನಲ್ಲಿ ಚಂದ್ರಮಂಡಲದಲ್ಲಿ ಇಳಿಯುತ್ತಾ, ಕರೋನ ವಾಸಿ ಮಾಡುವ ಸಿಬ್ಬಂದಿಯಾಗಿ ಹೀಗೆ ಹಲವು ಪಾತ್ರ ಧರಿಸಿ ರಂಜಿಸುತ್ತಿರುತ್ತಾನೆ.

ಗಣೇಶನನ್ನು ಬೀಳ್ಕೊಡುವ ಸಡಗರವೇನು ಕಡಿಮೆಯದೇ? ಗೌರಮ್ಮನಿಗೆ ಉಡಿಯಕ್ಕಿಯಿಟ್ಟು, ಗಣಪನನ್ನು ಮತ್ತೆ ಪೂಜಿಸಿ ಮನೆಯಿಂದಾಚೆಗೆ ಕರೆದೊಯ್ದು, ಗುರುತು ಮರೆಯಬಾರದು ಎನ್ನುವಂತೆ ತಿರುಗಿಸಿ ಮತ್ತೊಮ್ಮೆ ಮನೆಯನ್ನು ತೋರಿಸುತ್ತಾರೆ. ಜಲಸ್ಥಾನದಲ್ಲಿ ಪೂಜಿಸಿ, ದಾರಿಬುತ್ತಿಗೆ ಮೊಸರವಲಕ್ಕಿಯನ್ನು ಕಟ್ಟಿಕೊಟ್ಟು, ಮಂಗಳಾರತಿಯೆತ್ತಿ ‘ಕ್ಷೇಮದಲ್ಲಿ ತೆರಳಿ ಲಾಭದಲ್ಲಿ ಮತ್ತೆ ಬನ್ನಿ’ ಎನ್ನುವಂತಹ ವಾತ್ಸಲ್ಯದಿಂದ ಜಲಸಮರ್ಪಣೆ ಮಾಡಿ ಹಿಂತಿರುಗಿದಾಗ ಮನೆಮಗಳನ್ನು ಕಳಿಸಿಕೊಟ್ಟಂತೆ ಮನ ಮೂಕವಾಗಿ ಮನೆಯೆ ಭಣಗುಡುತ್ತಿರುತ್ತದೆ.

ಇಂದಿನ ಅವಸರದ ಯುಗದಲ್ಲಿ ಅಂದಿನ ಶ್ರದ್ಧಾ ಭಕ್ತಿಗಳಿಲ್ಲದಿದ್ದರೂ ಸಂಪ್ರದಾಯವನ್ನು ಉಳಿಸಿಕೊಂಡು ಅಷ್ಟಿಷ್ಟು ಮಾರ್ಪಾಡುಗಳೊಂದಿಗೆ ಹಬ್ಬವನ್ನಾಚರಿಸುವ
ಖುಷಿಯಿದೆ.

Leave a Reply

Your email address will not be published. Required fields are marked *

error: Content is protected !!