Monday, 20th May 2024

ಫ್ರಾಂಕೆನ್‌’ಸ್ಟೈನ್‌ ಅರಮನೆಯ ಸುತ್ತಮುತ್ತ

ಡಾ.ಉಮಾಮಹೇಶ್ವರಿ ಎನ್‌

ಜರ್ಮನಿಯ ಡಾರ್ಮ್ ಸ್ಟಾಟ್ ನಗರದ ಹೊರವಲಯದಲ್ಲಿರುವ ಎತ್ತರದ ಬೆಟ್ಟದ ಮೇಲಿದೆ ಫ್ರಾಂಕೆನ್ ಸ್ಟೈನ್ ಅರಮನೆಯ ಅವಶೇಷಗಳು. ಶಿಥಿಲವಾದ ಈ ಜಾಗದ ಅವಶೇಷಗಳು ತಮ್ಮದೇ ಆದ ಕಾರಣದಿಂದ ಪ್ರಸಿದ್ಧವಾಗಿವೆ. ಫ್ರಾಂಕ್‌ಫರ್ಟ್‌ನಿಂದ 35 ಕಿ. ಮೀ. ದೂರದಲ್ಲಿರುವ ಈ ಸ್ಥಳವು ತುಸು ನಿಗೂಢ ಎನಿಸಿದೆ.

ಫ್ರಾಂಕೆನ್‌ಸ್ಟೈನ್ ಎಂಬ ನಿಗೂಢ ಹೆಸರನ್ನು ಹೊತ್ತ ಈ ಅರಮನೆಯ ಅವಶೇಷಗಳು 370 ಮೀಟರ್ ಎತ್ತರದ ಬೆಟ್ಟದ ಮೇಲಿದೆ. ಓಡೆನ್ ವಾಲ್ಡ್ ಎಂಬ ಪರ್ವತಶ್ರೇಣಿಯ ಭಾಗವಾಗಿದೆ ಈ ಬೆಟ್ಟ. ‘ಫ್ರಾಂಕ್ಸ್‌’ ಎನ್ನುವುದು ಜರ್ಮನಿಯ ಜನಾಂಗ ಒಂದರ ಹೆಸರು ಮತ್ತು ಸ್ಟೈನ್ ಎಂದರೆ ‘ಕಲ್ಲು’. ‘ಫ್ರಾಂಕ್ ಕಲ್ಲು’ ಎಂದು ಈ ಹೆಸರನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಜರ್ಮನಿಯ ಹಲವು ಜಾಗ, ಅರಮನೆಗಳ ಹೆಸರುಗಳು ’ಸ್ಟೈನ್’ ಪದದಿಂದ ಅಂತ್ಯವಾಗುವುದರಿಂದ ‘ಫ್ರಾಂಕೆನ್ ಸ್ಟೈನ್’ ಬರೀ ಒಂದು ಸ್ಥಳದ ನಾಮಧೇಯವಷ್ಟೇ ಎಂದು ತಿಳಿಯಬಹುದು.

1250ರ ಮೊದಲು ಬ್ರ್ಯೂಬೆರ್ಗ್ ನ ಎರಡನೇ ಕೊನ್ ರಾಡ್ ರಾಜ ಇಲ್ಲಿ ಅರಮನೆ ನಿರ್ಮಿಸಿ ವಾಸ್ತವ್ಯ ಹೂಡಿ ತಾನೇ ಸುತ್ತ ಮುತ್ತಲಿನ ಪ್ರದೇಶಗಳಿಗೆ ಅಧಿಪತಿ ಎಂದು ಘೋಷಿಸಿಕೊಂಡ. 1292ರಲ್ಲಿ ಬೇರೆ ರಾಜನೊಡನೆ ಒಪ್ಪಂದ ಮಾಡಿಕೊಂಡು ತನ್ನ  ರಾಜ್ಯವನ್ನು ವಿಲೀನಗೊಳಿಸಿದ. ಆಗ ಈ ಅರಮನೆಯ ದ್ವಾರ ಬೇರೆಯವರಿಗೂ ತೆರೆಯಿತು. 1363ರಲ್ಲಿ ಅರಮನೆ ಇಬ್ಭಾಗವಾಗಿ ಎರಡು ಕುಟುಂಬಗಳು ಪ್ರತ್ಯೇಕವಾಗಿ ವಾಸಿಸತೊಡಗಿದವು. 15 ನೇ ಶತಮಾನದಲ್ಲಿ ಇದನ್ನು ವಿಸ್ತರಿಸಿ ನವೀಕರಿಸಲಾಯಿತು. ಈ ಸಮಯದಲ್ಲಿ ಮತ್ತೆ ಫ್ರಾಂಕೆನ್ ಸ್ಟೈನ್ ರಾಜರು ಬೇರೆಯ ವರಿಂದ ಸ್ವತಂತ್ರರಾಗಿ ವ್ಯವಹರಿಸ ತೊಡಗಿದರು.

ಪ್ರೊಟೆಸ್ಟೆಂಟ್ ಚಳವಳಿಗೆ ವಿರೋಧ
ಇಲ್ಲಿನ ರಾಜರು ಪಕ್ಕಾ ಕೆಥೊಲಿಕ್ ಪಂಥದವರಾಗಿದ್ದು ಪ್ರೊಟ್ಟೆಂಟ್ ಚಳವಳಿಯನ್ನು ವಿರೋಧಿಸುತ್ತಿದ್ದರು. ಇದರಿಂದಾಗಿ ಪಕ್ಕದ ಡಾರ್ಮ್ ಸ್ಟಾಟ್ ನ ಮುಖ್ಯಸ್ಥರೊಂದಿಗೆ ಮನಸ್ತಾಪ ಉಂಟಾಯಿತು. ಪರಿಣಾಮ ಒಂದನೇ ಜಾನ್ ರಾಜ ಈ ಅರಮನೆ ಯನ್ನು ಡಾರ್ಮ್ ಸ್ಟಾಟ್‌ನ ರಾಜನಿಗೆ ಮಾರಬೇಕಾಯಿತು. ತದ ನಂತರ ಈ ಜಾಗ ನಿರ್ಗತಿಕರ ವಸತಿ ಹಾಗೂ ಆಸ್ಪತ್ರೆಯಾಗಿ ಬಳಕೆಯಾಯಿತು. 18 ನೇ ಶತಮಾನದಲ್ಲಿ ಪೂರ್ತಿಯಾಗಿ ಶಿಥಿಲವಾಯಿತು.

19 ನೇ ಶತಮಾನದ ಮಧ್ಯ ಭಾಗದಲ್ಲಿ ಚರಿತ್ರೆಯ ಆಧಾರದಿಂದ ಅಂದಾಜಿನ ಮೇರೆಗೆ ನಿರ್ಮಿತವಾದ ಎರಡು ಗೋಪುರಗಳು ಅರಮನೆಯ ಅವಶೇಷಗಳನ್ನು ಪ್ರತಿನಿಧಿಸುತ್ತವೆ. ಸದ್ಯಕ್ಕೆ ಈ ಬೆಟ್ಟದ ತುದಿಯಲ್ಲಿರುವುದು ಎರಡು ಗೋಪುರಗಳು, ಒಂದು ಚರ್ಚ್ ಮತ್ತು ಒಂದು ಉಪಹಾರ ಗೃಹದ ಕಟ್ಟಡ.

ಸರ್ವ ರೋಗ ನಿವಾರಕ ಮದ್ದು
1673 ರಲ್ಲಿ ಫ್ರಾಂಕೆನ್‌ಸ್ಟೈನ್ ಅರಮನೆಯಲ್ಲಿ ಜನಿಸಿದಾತ ಯೋಹಾನ್ ಕೊನ್ ರಾಡ್ ಡಿಪ್ಪೆಲ್. ಈತ ರಸಾಯನ ಶಾಸ್ತ್ರದ
ಪರಿಣಿತನಾಗಿದ್ದ. ಈತ ತನ್ನದೇ ಔಷಧಗಳನ್ನು ತಯಾರಿಸುತ್ತಿದ್ದ ಹಾಗೂ ತನ್ನದೇ ರೋಗನಿಧಾನ ವಿಧಾನಗಳನ್ನು ಅನುಸರಿಸು
ತ್ತಿದ್ದ. ಸ್ಮಶಾನಗಳಲ್ಲಿ ಹೂಳಿರುವ ಹೆಣಗಳನ್ನು ಗುಟ್ಟಾಗಿ ಅಗೆದು ತಂದು ತನ್ನ ಪ್ರಯೋಗಗಳನ್ನು ನಡೆಸುತ್ತಿದ್ದನೆಂಬ ಪ್ರತೀತಿ
ಇದೆ. ಎರಡು ಹೆಣಗಳ ನಡುವೆ, ಲಾಳಿಗಳ ಸಹಾಯದಿಂದ ಆತ್ಮಗಳ ವರ್ಗಾವಣೆ ಸಾಧ್ಯವೆಂದು ನಂಬಿದ್ದ. ಪ್ರಾಣಿಗಳ ಅಂಗಾಂಗ ಗಳನ್ನು ಸಂಸ್ಕರಿಸಿ ತಯಾರಿಸಿದ ಎಣ್ಣೆಯೊಂದನ್ನು ಸಕಲರೋಗಗಳಿಗೂ ಔಷಧಿಯಾಗಿ ಕೊಡುತ್ತಿದ್ದ. ಇದಕ್ಕೆ ‘ಡಿಪ್ಪೆಲ್‌ನ ಪ್ರಾಣಿಜನ್ಯ ಎಣ್ಣೆ’ ಎಂದೇ ಹೆಸರಿಟ್ಟಿದ್ದ.

ಕಾಲಾಂತರದಲ್ಲಿ ಈ ಎಣ್ಣೆೆಯ ಕಮಟು ವಾಸನೆ ಮತ್ತು ಅಹಿತಕರವಾದ ರುಚಿ ಹಾಗೂ ವೈದ್ಯವಿಜ್ಞಾನದ ಹೊಸ ಆವಿಷ್ಕಾರ ಗಳಿಂದ ಇದರ ಉಪಯೋಗ ಕಡಿಮೆಯಾಯಿತು. ಚಿನ್ನವನ್ನು ಕೃತಕವಾಗಿ ತಯಾರಿಸುವುದು ಹಾಗೂ ಇತರ ವೈದ್ಯಕೀಯ
ಪ್ರಯೋಗಗಳನ್ನೂ ನಡೆಸುತ್ತಿದ್ದನಂತೆ. ಬರ್ಲಿನ್ ನಗರದಲ್ಲಿ ಚಿನ್ನ ತಯಾರಿಕೆಗೋಸ್ಕರ ಸಂಸ್ಥೆಯೊಂದನ್ನು ಹುಟ್ಟು ಹಾಕಲು ನೆರವಾದ. ನಂತರ ರಾಜಕೀಯ ಕಾರಣಗಳಿಂದಾಗಿ ಬಂಧಿತನಾಗಿ, ಡ್ಯಾನಿಷ್ ದ್ವೀಪದ ಜೈಲಿನಲ್ಲಿ ಏಳು ವರ್ಷಗಳ ಕಾಲ ಕಳೆಯ ಬೇಕಾಯಿತು. 1734ರಲ್ಲಿ ಪಕ್ಷವಾತದಿಂದಾಗಿ ವಿಟ್ಟಿಂಗೆನ್ ಸ್ಟೈನ್ ಎಂಬ ಅರಮನೆಯಲ್ಲಿ ಅಸುನೀಗಿದ. ಕೆಲವರು ಈತನ ಸಾವು ವಿಷಪ್ರಾಶನ ದಿಂದ ಆಗಿರಬಹುದೆಂದು ಸಂದೇಹ ವ್ಯಕ್ತ ಪಡಿಸುತ್ತಾರೆ.

ಹ್ಯಾಲೋವಿನ್ ಸಡಗರ
ಮೇರಿ ಶೆಲ್ಲಿ ಬರೆದ ಫ್ರಾಂಕೆನ್‌ಸ್ಟೈನ್ ಕತೆಯು ಈ ಜಾಗಕ್ಕೆ ಪ್ರಚಾರ ತಂದುಕೊಟ್ಟಿದೆ. ಆಕೆಯ ಕತೆಯಿಂದ ಪ್ರೇರಿತರಾಗಿ ಅದೇ ಹೆಸರಿನ ಶಿಥಿಲ ಕಟ್ಟಡವನ್ನು ವೀಕ್ಷಿಸಲು ಬರುವ ಜನಸಂಖ್ಯೆ ಗಮನಾರ್ಹ. ಅಕ್ಟೋಬರ್ ಕೊನೆ ಹಾಗೂ ನವೆಂಬರ್ ಕೊನೆ ತಿಂಗಳಲ್ಲಿ ನಡೆಯುವ ಹ್ಯಾಲ್ಲೋವಿನ್ ಹಬ್ಬ ತನ್ನದೇ ಆಕರ್ಷಣೆ ಹೊಂದಿದೆ.

ಚಿತ್ರವಿಚಿತ್ರವಾಗಿ, ಭಯಾನಕವಾಗಿ ವೇಷಧರಿಸಿಕೊಂಡು ಸಂಭ್ರಮಿಸುವವರ ಪಡೆಯೇ ಇಲ್ಲಿ ಸೇರುತ್ತದೆ. ಜನಪ್ರಿಯವಾದ ಹ್ಯಾಲೋವಿನ್ ಹಬ್ಬವನ್ನು ಆಚರಿಸುವ ಪದ್ಧತಿ ಎರಡನೇ ಮಹಾಯುದ್ಧದ ನಂತರ ಇಲ್ಲಿ ವಾಸ್ತವ್ಯ ಹೂಡಿದ್ದ ಅಮೆರಿಕದ ಪಡೆಗಳಿಂದ 1978ರಲ್ಲಿ ಆರಂಭವಾಯಿತು. ಯುರೋಪಿನಲ್ಲೇ ಅತಿ ಹೆಚ್ಚಿನ ಸಂಭ್ರಮದಿಂದ ಆಚರಿಸಲಾಗುವ ಹ್ಯಾಲೋವಿನ್ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಘೋಸ್ಟ್‌ ಹಂಟರ್ಸ್
ಇದಲ್ಲದೆ ಪ್ರತಿ ವರ್ಷವೂ ಡಾರ್ಮ್ ಸ್ಟಾಟ್ ನಗರದಿಂದ ಬೆಟ್ಟದ ತುದಿಯ ವರೆಗೆ ಓಟದ ಸ್ಪರ್ಧೆಯನ್ನು ಅಮೆರಿಕದ ಸೈನಿಕರು 1977 ರಿಂದ ಆಯೋಜಿಸುತ್ತಿದ್ದರು. 2008ರಲ್ಲಿ ಅಮೆರಿಕದ ಪಡೆ ತನ್ನದೇಶಕ್ಕೆ ಮರಳಿದ ನಂತರ ಇದು ನಿಂತು ಹೋಯಿತು. 2008ರಲ್ಲಿ ‘ಘೋಸ್ಟ್‌ ಹಂಟರ್ಸ್ ಇಂಟರ್‌ನ್ಯಾಷನಲ್’ ಎಂಬ ಪ್ರಸಿದ್ಧ ಕಾರ್ಯಕ್ರಮ ಇಲ್ಲಿಂದ ಬಿತ್ತರವಾಯಿತು.

ಡಿಪ್ಪೆಲ್ ಒಂದು ದೈತ್ಯಪ್ರಾಣಿಯನ್ನು ಸೃಷ್ಟಿಸಿದ್ದ. ಒಮ್ಮೆ ಸಿಡಿಲು ಬಡಿದಾಗ ಇದು ಜೀವಂತವಾಯಿತು ಎಂಬ ದಂತಕತೆಯೂ ಇದೆ. ಇದರ ವಿವರಣೆ ಮೇರಿ ಶೆಲ್ಲಿಯ ಕತೆಯಲ್ಲಿ ಇಲ್ಲದಿದ್ದರೂ ಆಕೆಯ ಕೃತಿಯನ್ನು ಆಧರಿಸಿ ನಿರ್ಮಿಸಿದ ಚಲನಚಿತ್ರದಲ್ಲಿದೆ. 18 ನೇ ಶತಮಾನದಲ್ಲಿ ಇಲ್ಲಿ ಅಪಾರವಾದ ಚಿನ್ನ ಇದೆಯೆಂಬ ಸುದ್ದಿ ಹರಡಿ ಜನ ಮುಗಿಬಿದ್ದು ಭೂಮಿ ಅಗೆದರು. ಅಗೆಯುವಾಗ ಒಬ್ಬನ ಮೇಲೆ ಮಣ್ಣು ಬಿದ್ದು ಸಾವನ್ನಪ್ಪುವವರೆಗೆ ಅಗೆತ ಮುಂದುವರಿಯಿತು.

ಅಯಸ್ಕಾಂತೀಯ ಶಕ್ತಿ
ಅರಮನೆಯ ಹಿಂಭಾಗದ ಬೆಟ್ಟ ಪ್ರದೇಶ ಒಂದರಲ್ಲಿರುವ ಕಲ್ಲುಗಳಲ್ಲಿ ಅಯಸ್ಕಾಂತೀಯ ಶಕ್ತಿ ಇದೆ ಎನ್ನುತ್ತಾರೆ. ಹಾಗಾಗಿ ಇಲ್ಲಿ ಅಯಸ್ಕಾಂತಗಳ ಕೆಲಸ ವ್ಯತ್ಯಾಸ ಹೊಂದುತ್ತದೆ ಎನ್ನುತ್ತಾರೆ. ಈ ಕಾರಣದಿಂದ ಈ ಪರ್ವತದ ಮೇಲೆ ಅತೀಂದ್ರಿಯ ಶಕ್ತಿಗಳು ಕಾರ್ಯನಿರ್ವಹಿಸುತ್ತಿರಬಹುದೆಂಬ ಗುಮಾನಿ ಕೆಲವು ಜನರಲ್ಲಿ ಇನ್ನೂ ಇದೆ.

ಇದು ಇನ್ನೂ ದೊಡ್ಡ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿಲ್ಲ. ಸ್ಥಳೀಯರು ಚಾರಣ ಹಾಗೂ ಸೈಕ್ಲಿಂಗ್ ಗಳಿಗೆ ಈ ಜಾಗವನ್ನು ಆಯ್ದುಕೊಳ್ಳುವುದು ಸಾಮಾನ್ಯ. ಅವಶೇಷಗಳ ಬುಡದಲ್ಲೇ ವಾಹನ ನಿಲ್ದಾಣವಿದೆ. ಸಾಧಾರಣವಾಗಿ ಅವಶೇಷಗಳ ಪ್ರವೇಶ ಉಚಿತ. ಹ್ಯಾಲೋವಿನ್ ನಂತಹ ವಿಶೇಷ ಸಂದರ್ಭಗಳಲ್ಲಿ ಶುಲ್ಕ ವಿಧಿಸಲಾಗುತ್ತದೆ.

ಗೋಪುರಗಳ ಮೇಲೆ ಹತ್ತಿದರೆ ಸುತ್ತಲ ಮನಮೋಹಕ ದೃಶ್ಯ ಲಭ್ಯ. ಹಾಗೆಯೇ ಇಲ್ಲಿನ ರೆಸ್ಟೋರೆಂಟ್ ಕಟ್ಟಡದಿಂದಲೂ
ಸುತ್ತಲಿನ ವೀಕ್ಷಣೆ ಸಾಧ್ಯ. ರೆಸ್ಟೋರೆಂಟ್ನಲ್ಲಿ ವಿವಿಧ ಖಾದ್ಯಗಳು, ವೀಗನ್ ಖಾದ್ಯಗಳು, ಆಲ್ಕೋಹಾಲ್ ಇಲ್ಲದ ಪೇಯಗಳೂ ಲಭ್ಯ. 2000 ಇಸವಿಯಿಂದ ಇಲ್ಲಿನ ಚರ್ಚ್‌ನಲ್ಲಿ ಸಿವಿಲ್ ಮದುವೆಗಳಿಗೆ ಅವಕಾಶ ನೀಡಲಾಯಿತು.

ಕಾಲ್ಪನಿಕ ಪಾತ್ರಕ್ಕೆ ಸ್ಫೂರ್ತಿ
ದಟ್ಟ ಕಾಡುಗಳು, ಆಳಕಣಿವೆಗಳನ್ನು ಹೊಂದಿರುವ ಈ ಪರ್ವತದ ಸುತ್ತ ಮುತ್ತ ಹಲವಾರು ಕತೆಗಳು ಹೆಣೆದುಕೊಂಡಿವೆ.
ಇವುಗಳಲ್ಲಿ ಮುಖ್ಯವಾದದ್ದು ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್ ಕತೆ. ಪ್ರಸಿದ್ಧವಾದ ಈ ಕತೆಯ ಬರವಣಿಗೆಗೆ ಡಿಪ್ಪೆಲ್‌ನ ಕತೆ ಪ್ರೇರಣೆಯಾಯಿತೇ? ಇದಿನ್ನೂ ನಿಗೂಢ. ಮೇರಿ ಶೆಲ್ಲಿ ಜೆರ್ನ್ ಶೈಮ್ ಎಂಬ ಜಾಗದಲ್ಲಿ ಮೂರು ಗಂಟೆಗಳ ಕಾಲ ಕಳೆದಿದ್ದ ಳೆಂಬುದಕ್ಕೆೆ ಪುರಾವೆಗಳಿವೆ.

ಅಲ್ಲಿಂದ ಹತ್ತು ಮೈಲಿಗಳ ದೂರದಲ್ಲಿರುವ ಅರಮನೆಗೆ ತೆರಳಿ ವೀಕ್ಷಿಸಿರುವ ಸಾಧ್ಯತೆಗಳು ವಿರಳ. ದೂರದಿಂದಲೇ ಫ್ರಾಂಕೆನ್ ‌ಸ್ಟೈನ್ ಅರಮನೆಯನ್ನು ನೋಡಿಕೊಂಡು, ಇತರರು ಹೇಳಿದ ಕತೆಗಳಿಂದ ಪ್ರೇರೇಪಿತಳಾಗಿ ತನ್ನ ಪ್ರಸಿದ್ಧ ಕೃತಿಯನ್ನು ಬರೆದಳೇ? ಉತ್ತರ ಸ್ಪಷ್ಟವಿಲ್ಲ.

Leave a Reply

Your email address will not be published. Required fields are marked *

error: Content is protected !!