Monday, 20th May 2024

ಗ್ರಿಫಿತ್ ವೀಕ್ಷಣಾಲಯ

ಮಂಜುನಾಥ್ ಡಿ.ಎಸ್

ಆಗಸ ಎಂದರೆ ಮೊದಲಿನಿಂದಲೂ ಮಾನವನಿಗೆ ಅದಮ್ಯ ಕುತೂಹಲ. ಬಾಹ್ಯಾಕಾಶ ಅಧ್ಯಯನವೂ ಅಷ್ಟೇ ರೋಚಕ. ಜನಸಾಮಾನ್ಯರು ಬಾಹ್ಯಾಕಾಶದ ಪರಿಚಯ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವ ಗ್ರಿಫಿತ್ ವೀಕ್ಷಣಾಲಯದ ಸ್ಥಾಪನೆಯೂ ಅಷ್ಟೇ ಕುತೂಹಲಕಾರಿ.

ಹಾಲಿವುಡ್ ಸಮೀಪದಲ್ಲಿರುವ ಗ್ರಿಫಿತ್ ವೀಕ್ಷಣಾಲಯವು ಲಾಸ್ ಏಂಜಲಿಸ್ ನಗರದ ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಹಾಲಿವುಡ್ ಸೈನ್ ಇಲ್ಲಿಂದ ತುಂಬಾ ಚೆನ್ನಾಗಿ ಕಾಣಿಸುವುದರಿಂದ, ಅದನ್ನು ನೋಡಲೆಂದೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡು ತ್ತಾರೆ. ಜತೆಗೆ, ಇಲ್ಲಿನ ವೀಕ್ಷಣಾಲಯದಲ್ಲಿರುವ ವಿಜ್ಞಾನ ಮತ್ತು ಬಾಹ್ಯಾಕಾಶ ಸಂಬಂಧಿತ ಪ್ರದರ್ಶನಗಳನ್ನು ನೋಡುವುದೆಂದರೆ ಬಾಲಕರ ಜತೆ ವಯೋವೃದ್ಧರಿಗೂ ಬಹಳ ಕುತೂಹಲ.

ಯು.ಕೆ.ಮೂಲದ ಗ್ರಿಫಿತ್ ಜೆ. ಗ್ರಿಫಿತ್ (1850-1919) ಅಮೆರಿಕದ ಉದ್ಯಮಿ ಹಾಗು ಮಾನವಪ್ರೇಮಿ. ಇವರು ಖಗೋಳ ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂಬ ಆಶಯ ಹೊಂದಿದ್ದರು. ಇದನ್ನು ಈಡೇರಿಸುವ ಮೊದಲ ಹಂತವಾಗಿ, 1896ರ ಡಿಸೆಂಬರ್ 16ರಂದು, 3015 ಎಕರೆ ಪ್ರದೇಶವನ್ನು ಲಾಸ್ ಏಂಜಲಿಸ್ ನಗರಕ್ಕೆ ದತ್ತಿಯಾಗಿ ನೀಡಿದರು. ವೇದಶಾಲೆ, ತಾರಾಲಯ, ಹಾಗು ಪ್ರದರ್ಶನಗೃಹಗಳ ನಿರ್ಮಾಣದ ವೆಚ್ಚಕ್ಕೂ ಉಯಿಲಿನ ಮೂಲಕ ಹಣದ ವ್ಯವಸ್ಥೆ ಮಾಡಿದರು.

ವಾಸ್ತುಶಿಲ್ಪಿ ಜಾನ್ ಸಿ ಆಸ್ಟಿನ್ ಖಗೋಳ ವೀಕ್ಷಣಾಲಯದ ವಿನ್ಯಾಸ ಸಿದ್ಧ ಗೊಳಿಸಿದರು. 1933ರ ಜೂನ್ 20ರಂದು ನಿರ್ಮಾಣ ಕಾರ್ಯ ಆರಂಭವಾ ಯಿತು. ಮೌಂಟ್ ಹಾಲಿವುಡ್‌ನ ಶೃಂಗದಲ್ಲಿ ನಿರ್ಮಾಣಗೊಂಡ ವೀಕ್ಷಣಾಲಯ 1935ರ ಮೇ 14ರಂದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಯಿತು. ಗ್ರೀಕ್ ವಾಸ್ತುಶೈಲಿಯಿಂದ ಪ್ರಭಾವಿತವಾಗಿರುವ ಕಟ್ಟಡದ ಹೊರಭಾಗದಲ್ಲಿಯೇ ಗಮನ ಸೆಳೆಯುವ ಅನೇಕ ರಚನೆಗಳಿವೆ. ಖಗೋಳಶಾಸ್ತ್ರದ ಪ್ರಮುಖರಾದ ಹಿಪಾರ್ಕಸ್, ಕೋಪರ್ನಿಕಸ್, ಗೆಲಿಲಿಯೊ, ಕೆಪ್ಲರ್, ನ್ಯೂಟನ್, ಹಾಗು ಹರ್ಷೆಲ್‌ರ ಪ್ರತಿಮೆಗಳಿರುವ ಸ್ಮಾರಕ ಸ್ತಂಭವನ್ನು ವಿಶಾಲ ಉದ್ಯಾನವನದಲ್ಲಿ ಸ್ಥಾಪಿಸಲಾಗಿದೆ.

ಸೌರವ್ಯೂಹದ ಮಾದರಿ, ಸನ್ ಡಯಲ್, ಇತ್ಯಾದಿಗಳು ಸಹ ಗಮನ ಸೆಳೆಯುತ್ತವೆ. 1135 ಅಡಿ ಎತ್ತರದಲ್ಲಿರುವ ಈ ಸ್ಥಳದಿಂದ ನಗರದ ವಾಣಿಜ್ಯಕೇಂದ್ರ, ದೂರದ ಬೆಟ್ಟದ ಮೇಲಿನ ಹಾಲಿವುಡ್ ಎಂಬ ಆಂಗ್ಲಲಿಪಿಯ ಬರಹ, ಸುಂದರ ಕಣಿವೆ, ಮುಂತಾದುವು ಗಳ ವಿಹಂಗಮ ದೃಶ್ಯಗಳು ಕಾಣಸಿಗುತ್ತವೆ. ಹಾಗಾಗಿ, ಇದು ಲಾಸ್ ಏಂಜಲಿಸ್‌ನ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ವೀಕ್ಷಣಾಲಯವನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ದ ವೈಲ್ಡರ್ ಹಾಲ್ ಆಫ್ ದಿ ಐ ವಿಭಾಗವು ಖಗೋಳ ಪರಿಕರಗಳನ್ನೊಳಗೊಂಡಿದೆ. ದ ಅಮನ್ಸನ್ ಹಾಲ್ ಆಫ್ ದಿ ಸ್ಕೈ ಆಕಾಶ ಕಾಯಗಳ ಪರಿಚಯಕ್ಕೆ ಮೀಸಲಾಗಿದೆ. ಸೂರ್ಯನ ಬಿಂಬಗಳನ್ನು ಮೂಡಿಸುವ ಸೌರ ದೂರದರ್ಶಕ ಇಲ್ಲಿನ ಮುಖ್ಯ ಆಕರ್ಷಣೆ.

ಹಗಲು-ರಾತ್ರಿ, ಋತುಗಳು, ಗ್ರಹ-ನಕ್ಷತ್ರಗಳ ಪಥಗಳು, ಗ್ರಹಣಗಳು, ಚಂದ್ರನ ಕಲೆಗಳು, ಮುಂತಾದುವುಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಕಾಸ್ಮಿಕ್ ಕನೆಕ್ಷನ್ ಹೆಸರಿನ, 150 ಅಡಿ ಉದ್ದದ ಗಾಜಿನ ಗೋಡೆಗಳ ಸುರಂಗದ ಮೂಲಕ ಹಾದು ನೆಲ ಮಾಳಿಗೆಯಲ್ಲಿರುವ ಪ್ರದರ್ಶನಾಲಯವನ್ನು ತಲುಪಬಹುದು. ಇಲ್ಲಿನ ದರ್ಶಿಕೆಗಳು ಬ್ರಹ್ಮಾಂಡದ ಚರಿತ್ರೆಯನ್ನು ತಿಳಿಸಿ ಕೊಡು ತ್ತವೆ.

ದ ಗೂಂತರ್ ಡೆಪ್ತ್ಸ್ ಆಫ್ ಸ್ಪೇಸ್‌ನಲ್ಲಿ ಸೌರಮಂಡಲದ ಮಾದರಿಗಳಿವೆ. ವಿರ್ಗೊ (ಕನ್ಯಾ) ನಕ್ಷ್ರಪುಂಜದ ನಿಖರ ಚಿತ್ರಣ ನೀಡುವ ದ ಬಿಗ್ ಪಿಚ್ಚರ್ ಈ ವಿಭಾಗದ ವೈಶಿಷ್ಟ್ಯ. ಭೂಮಿಗೆ ಸಮೀಪದಲ್ಲಿರುವ ವ್ಯೋಮಕಾಯಗಳ ಮಾಹಿತಿ ಅರಿಯಲು ದ ಎಡ್‌ಜ್‌ ಆಫ್ ಸ್ಪೇಸ್ ವಿಭಾಗಕ್ಕೆ ಭೇಟಿ ನೀಡಬೇಕು. ಫುಕೋ ಲೋಲಕ ಹಾಗು ಟೆಸ್ಲಾ ಕಾಯಿಲ್ ಸೇರಿದಂತೆ ಅನೇಕ ಆಕರ್ಷಕ ದರ್ಶಿಕೆ ಗಳನ್ನು ಕೂಡ ಗ್ರಿಫಿತ್ ವೀಕ್ಷಣಾಲಯದಲ್ಲಿ ಕಾಣಬಹುದು. ಈ ವೀಕ್ಷಣಾಲಯವನ್ನು ದ್ವೀತೀಯ ವಿಶ್ವ ಸಮರ ಸಮಯದಲ್ಲಿ ಯುದ್ಧವಿಮಾನ ಚಾಲಕರಿಗೆ ಮತ್ತು 1960ರಲ್ಲಿ ಅಪೊಲೊ ಯೋಜನೆಯ ವ್ಯೋಮಯಾನಿಗಳಿಗೆ ತರಬೇತಿ ನೀಡಲು ಬಳಸಿಕೊಳ್ಳ ಲಾಯಿತು.

2002ರಲ್ಲಿ ನವೀಕರಣಕ್ಕೆಂದು ಮುಚ್ಚಲ್ಪಟ್ಟ ಈ ವೀಕ್ಷಣಾಲಯ 2006ರ ನವೆಂಬರ್ 3 ರಂದು ಪುನರಾರಂಭಗೊಂಡಿತು. ಶನಿವಾರ ಮತ್ತು ಭಾನುವಾ ರಗಳಂದು ಬೆಳಗಿನ ಹತ್ತು ಘಂಟೆ ಯಿಂದ ರಾತ್ರಿ ಹತ್ತು ಘಂಟೆಯ ತನಕ ಹಾಗು ಉಳಿದ ದಿನಗಳಲ್ಲಿ ಮಧ್ಯಾಹ್ನ ಹನ್ನೆರಡರಿಂದ ರಾತ್ರಿ ಹತ್ತರ ತನಕ ಇದನ್ನು ವೀಕ್ಷಿಸಬಹುದು. ವೀಕ್ಷಣಾಲಯದ ಭೇಟಿಗೆ ಪ್ರವೇಶ ಶುಲ್ಕವಿಲ್ಲ.

ದೂರದರ್ಶಕದ ದಾಖಲೆ
ಇಲ್ಲಿರುವ 12 ಇಂಚು ಜೀಸ್ ರಿಫ್ರಾಕ್ಟರ್ ದೂರದರ್ಶಕದ (ಟೆಲಿಸ್ಕೋಪ್) ಮೂಲಕ ನೋಡುವ ಚಟುವಟಿಕೆಯು ಬಹಳ ಜನಪ್ರಿಯ. 1930ರ ದಶಕದಲ್ಲಿ ಈ ವೀಕ್ಷಣಾಲಯ ಸಾರ್ವಜನಿಕರಿಗೆ ತೆರೆದುಕೊಂಡ ನಂತರ, ಇದುವರೆಗೆ ಸುಮಾರು ಏಳು ಮಿಲಿಯ ಜನರು ಈ ದೂರದರ್ಶಕದ ಮೂಲಕ ವೀಕ್ಷಣೆ ನಡೆಸಿದ್ದಾರೆ. ಇದು ಜಗತ್ತಿನ ಯಾವುದೇ ದೂರದರ್ಶಕ ಉಪಯೋಗಿಸಿದ
ಸಾರ್ವಜನಿಕರ ಸಂಖ್ಯೆಗಿಂತ ಅಧಿಕ ಎನಿಸಿದ್ದು, ಇದೊಂದು ದಾಖಲೆಯಾಗಿದೆ.

Leave a Reply

Your email address will not be published. Required fields are marked *

error: Content is protected !!