Saturday, 18th May 2024

ಜನಪದರಲ್ಲಿ ಒಬ್ಬ ಗುರು

ಡಾ.ಭಾರತಿ ಮರವಂತೆ

ಗುರು ಎಲ್ಲಿ ರೂಪುಗೊಳ್ಳುತ್ತಾನೆ? ಕಾಲೇಜಿನಲ್ಲೆ? ಜನಪದರ ಮಧ್ಯೆ ಜೀವನಾನುಭವವನ್ನು ದಕ್ಕಿಸಿಕೊಂಡು, ಹಿಂದೆ ಗುರುಗಳು ರೂಪುಗೊಳ್ಳುತ್ತಿದ್ದರಲ್ಲ! ಬರಲಿರುವ ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ಈ ಬರೆಹ.

ಮನೆಯೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಅ ಆ ಮಾತನಾಡಲು ಕಲಿಸಿದ ಅಮ್ಮ, ಅಪ್ಪ, ಬರೆಯಲು ಕಲಿಸಿದ ಗುರುಗಳ ನಡುವಿನ ಸೇತುವೆಯೇ ವಿದ್ಯಾರ್ಥಿ. ಇವರೊಳಗಿನ ಸಂವಹನದಲ್ಲಿ ವಿದ್ಯಾರ್ಥಿಯ ಬದುಕು ಕಟ್ಟುವಿಕೆಗೆ ಅಧ್ಯಾಪಕರ ಪಾತ್ರವೇ ಹೆಚ್ಚು. ವಿದ್ಯಾರ್ಥಿಯೆಂಬ ಮಣ್ಣಿನ ಮುದ್ದೆ ಮೂರ್ತಿಯಾಗಲು ಶಿಕ್ಷಣ ಪ್ರಮುಖ ಮೆಟ್ಟಿಲಾಗಿದೆ. ಇದು ಅನೌಪಚಾರಿಕ ದಿಂದ ಆರಂಭಗೊಂಡು ಔಪಚಾರಿಕವಾಗಿ ಅ ಆ ಇ ಅಕ್ಷರಗಳ ಕಲಿಕೆಯ ಒಂದು ಹಂತದ ಕ್ರಿಯೆ.

ಈ ಹಿನ್ನೆಲೆಯಲ್ಲಿ ಹಿರಿಯರು ಹೇಳಿದ ಮೂರರ ಬುದ್ಧಿ ನೂರರವರೆಗೆ, ಬಿತ್ತಿದಂತೆ ಬೆಳೆ ಇತ್ಯಾದಿ ಬದುಕಿನ ಪಾಠಗಳನ್ನು ಗಾದೆಗಳ ರೂಪದಲ್ಲಿ ನೆನಪಿಸಿ ಕೊಳ್ಳುತ್ತಲೇ ಬಂದಿದ್ದೇವೆ. ವಿದ್ಯಾರ್ಥಿಗಳಿಗೆ ತಂದೆ-ತಾಯಿ-ಹಿರಿಯರು ಮೊದಲ ಗುರುಗಳು. ಮುಂದಿನ ಹಂತದಲ್ಲಿ ತರಗತಿಯಲ್ಲಿ ವಿಷಯಾನುಸಾರ ಗುರು ಗಳಿರುತ್ತಾರೆ. ತರಗತಿ ಎಂದಾಗ ಟಿ.ಪಿ.ಕ್ಯೆಲಾಸಂರವರ ಟೊಳ್ಳುಗಟ್ಟಿ ನಾಟಕದ ಕಿಟ್ಟು ಪುಟ್ಟು ಪಾತ್ರಗಳು ಜೀವಂತಿಕೆ ಪಡೆಯುತ್ತವೆ.

ಸ್ಮರಣಾ ಶಕ್ತಿಯ ಸಾಮರ್ಥ್ಯದಲ್ಲಿ ಪರೀಕ್ಷೆಯಲ್ಲಿ ವಾಂತಿ ಮಾಡಿದ ಮತ್ತು ಆ ಸಾಮರ್ಥ್ಯವಿಲ್ಲದ ವಿದ್ಯಾರ್ಥಿಯ ನಡುವಿನ ಕಲಿಕೆಯ ಸಂಗತಿಯದು. ಈ ಹಿನ್ನೆಲೆ ಯಲ್ಲಿ ಔಪಚಾರಿಕ ಶಿಕ್ಷಣದ ಪಠ್ಯಗಳು ಮತ್ತು ಅನೌಪಚಾರಿಕ ಶಿಕ್ಷಣದ ಪಠ್ಯಗಳ ನಡುವಿನ ಗೆರೆಗಳು ಆಗಾಗ್ಗೆ ನೆನಪಾಗುವುದುಂಟು. ಈ ನೆಲೆಯಲ್ಲಿ ಜನಪದ ರಲ್ಲೊಬ್ಬ ಶಿಕ್ಷಕನೆಂಬ ಪರಿಕಲ್ಪನೆಯನ್ನು, ಸೆಪ್ಟೆಂಬರ್ ರ ಶಿಕ್ಷಕರ ದಿನಾಚರಣೆಯ ನೆಪದಲ್ಲಿ ಚರ್ಚಿಸಬಹುದು. ಕುಟುಂಬ ಮತ್ತು ತರಗತಿಯ ಕಲಿಕೆಯಲ್ಲಿ ವಿದ್ಯಾರ್ಥಿಗಳು ಎಡವಿದರೆ ಸಮಾಜ ಘಾತುಕ ಶಕ್ತಿಯಾಗುತ್ತಾರೆ. ಇಲ್ಲಿ ಅ ಆ ಇ ಮೂಲಭೂತ ಅಕ್ಷರಗಳ ಸಂದೇಶದ ಬಗ್ಗೆ ಯೋಚಿಸಿದಾಗ ಒಂದಿಷ್ಟು ವಿಚಾರ ಗಳು ಹೊಳೆದವು.

ಅ = ಅಧ್ಯಯನ
ಅಧ್ಯಾಪಕರು ಅಧ್ಯಯನದಿಂದ ತರಗತಿಯಲ್ಲಿ ಬೋಧಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಾರೆ. ಈ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಬದುಕು ಕಟ್ಟಿಕೊಳ್ಳುವ ಚಿಂತನೆಗಳು ಮೊಳಕೆಯೊಡೆಯುತ್ತವೆ. ಇದನ್ನೇ ಜನಪದರು ‘ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಎಂದಿದ್ದಾರೆ. ಜನಪದರು ಜೀವನಾ ನುಭವವೆಂಬ ಅನೌಪಚಾರಿಕ ಅಧ್ಯಯನದಿಂದ ಬದುಕು ಕಟ್ಟಿಕೊಂಡವರು. ಅನುಭವದಲ್ಲಿ ಕಂಡುಂಡ ಮೌಲ್ಯಗಳನ್ನು ಮಕ್ಕಳಿಗೆ ವರ್ಗಾಯಿಸಿದವರು.
ಉದಾ: ಜನಪದರಲ್ಲಿ ಮನೆ ಕಟ್ಟುವವರಿದ್ದಾರೆ. ಅವರಿಗೆ ಅನುಭವವೇ ಗುರು. ಅವರ ಕಣ್ಣಳತೆಯ ಪಠ್ಯದ ಲೆಕ್ಕಾಚಾರದಿಂದ ಮನೆಗೆ ತಳಪಾಯ ಹಾಕುವು ದರಿಂದ ಹಿಡಿದು ಚಾವಡಿ, ದೇವರ ಕೋಣೆ, ಜಗಲಿ, ಬಾವಿ ಎಲ್ಲವೂ ಪೂರ್ಣಗೊಳ್ಳುತ್ತಿದ್ದವು. ಕಟ್ಟಿದ ಮನೆ ನೂರು ವರ್ಷ ನಿಂತಿರುತ್ತಿತ್ತು. ಮಳೆ, ಬೆಳೆ, ಮಣ್ಣು, ಭೂಮಿಯನ್ನು ಅವರು ಗ್ರಹಿಸಿದ ರೀತಿ ಅನನ್ಯ. ಇವರಲ್ಲಿ ಅಧ್ಯಯನ ಸುಪ್ತವಾಗಿದೆಯಲ್ಲವೇ?

ಆ = ಆದರ್ಶಗಳು

ವಿದ್ಯಾರ್ಥಿಗಳಿಗೆ ಆದರ್ಶಗಳನ್ನು ಕಲಿಸುವುದೇ ಅಧ್ಯಾಪಕರ ವೃತ್ತಿಗೌರವವಾಗಿದೆ. ಸಾರ್ವಕಾಲಿಕ ಮೌಲ್ಯಗಳೆನಿಸುವ ಸತ್ಯ, ಅಹಿಂಸೆ, ವಿನಯ, ಕರುಣೆ, ಪ್ರಾಮಾಣಿಕತೆ, ಆತ್ಮವಿಶ್ವಾಸ ಇತ್ಯಾದಿ ಪ್ರೇರಣೆಯಿಂದ ವಿದ್ಯಾರ್ಥಿಗಳ ಬದುಕಿನ ಕಲಿಕೆಯಾಗುತ್ತದೆ. ಇದನ್ನೇ ಗಾಂಽಜಿಯವರು ‘ಭವ್ಯ ಭಾರತದ ಭವಿಷ್ಯ ತರಗತಿ ಕೋಣೆಯಲ್ಲಿ ರೂಪುಗೊಳ್ಳುತ್ತಿದೆ’ ಎಂದಿದ್ದಾರೆ.

ಸ್ವಾಮಿ ವಿವೇಕಾನಂದರ ‘ಒಂದಿಷ್ಟು ಮಂದಿ ಯುವ ಜನತೆಯನ್ನು ನನಗೆ ಕೊಡಿ, ಭವ್ಯ ಭಾರತವನ್ನು ಕಟ್ಟಬಲ್ಲೆ’ ಎಂಬ ನುಡಿಗಳು ಇಲ್ಲಿ ನೆನಪಾಗುತ್ತದೆ. ಜನಪದರು ಪ್ರಾಯೋಗಿಕವಾಗಿ ಬದುಕಿನ ಆದರ್ಶಗಳನ್ನು ಅನೌಪಚಾರಿಕವಾಗಿ ವಿವಿಧ ರೀತಿಯಲ್ಲಿ ಮಕ್ಕಳಿಗೆ ವರ್ಗಾಯಿಸಿದವರು. ಬಯಲಾಟ, ಗಾದೆಗಳು, ಒಗಟುಗಳು, ಪದಗಳು, ಕುಣಿತಗಳು, ಕಥೆಗಳು, ಐತಿಹ್ಯಗಳು ಇತ್ಯಾದಿ ಮನರಂಜನೆಯೊಂದಿಗೆ ಕಿರಿಯರಿಗೆ ಪಾಠ ಹೇಳುತ್ತಿದ್ದವು. ರೋಗ ಬಂದಾಗ ಎಲೆ, ಬೀಜ, ತೊಗಟೆ, ಬೇರು, ಹೂವು ಇವುಗಳೇ ಮದ್ದಾಗಿದ್ದವು.

ಹೆರಿಗೆ ಬೇನೆಯಂತಹ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸುವ ಕಲಾಕೌಶಲ್ಯದ ಜಾಣ್ಮೆ ಜನಪದರಲ್ಲಿತ್ತು. ವಾದ ವಿವಾದಗಳಾದಾಗ ಊರಿನ ಪಂಚಾಯತ್ ಕಟ್ಟೆಯ ಮುಖಂಡರು ಪೊಲೀಸರಾಗಿ, ವಕೀಲರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಗ್ರಾಮ ದೇವರ ಗುಡಿಯೇ ಅವರಿಗೆ ಕೋರ್ಟ್, ಗುಡಿಯಲ್ಲಿರುವ ದೇವರೇ ಇವರಿಗೆ ನ್ಯಾಯಾಧೀಶರು. ತೀರ್ಮಾವು ಸಾರ್ವತ್ರಿಕ ಮೌಲ್ಯಗಳ ಬದ್ಧತೆಯಲ್ಲಿ ನಡೆಯುತ್ತಿತ್ತು. ಇವರಲ್ಲೊಬ್ಬ ಬದುಕಿನ ಆದರ್ಶಗಳನ್ನು ಪ್ರೇರೇಪಿಸಿದ ಗುರು ಇದ್ದರಲ್ಲವೆ!

ಇ = ತಂದೆ ತಾಯಿಯ ಇಚ್ಛೆಯನ್ನು ಈಡೇರಿಸುವಿಕೆ
ಮಕ್ಕಳು ಸಮಾಜದಲ್ಲಿ ಸತ್ಪ್ರಜೆಯಾಗಿ ಬದುಕಬೇಕು ಎನ್ನುವುದೇ ತಂದೆ ತಾಯಿಯರ ಮೂಲಭೂತ ಇಚ್ಛೆಯಾಗಿರುತ್ತದೆ. ತರಗತಿಯಲ್ಲಿಯೂ ಈ ಮೌಲ್ಯಗಳಿಗೆ ಪ್ರೇರಣೆ ದೊರೆಯುತ್ತಿರುತ್ತದೆ. ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು, ಗಿಡಮರಗಳನ್ನು ನೆಡು, ಬಡವರಿಗೆ ದಾನ ಮಾಡು, ಪರೋಪಕಾರಿಯಾಗು, ಇತ್ಯಾದಿ ಮಾತುಗಳಿಂದ ಪರೋಕ್ಷವಾಗಿ ಆರೋಗ್ಯಕರ ಸಮಾಜದ ನಿರ್ಮಾಣವಾಗುತ್ತಿತ್ತು.

ಇಂದಿನ ಔಪಚಾರಿಕ ಶಿಕ್ಷಣದ ಪಠ್ಯಗಳು ವಿದ್ಯಾರ್ಥಿಯ ಬದುಕು ಕಟ್ಟುವಿಕೆಗೆ ಪೂರಕವಾಗಿದೆಯೇ? ಈ ಪಠ್ಯಗಳ ಬೋಧನೆಯಿಂದ ಆರೋಗ್ಯಕರ ಸಮಾಜ ನಿರ್ಮಾಣಗೊಳ್ಳುತ್ತದೆಯೇ? ಇದರಿಂದ ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಕಲಿಕೆಯಾಗುತ್ತಿದೆಯೇ? ಔಪಚಾರಿಕ ಶಿಕ್ಷಣದ ಅಧ್ಯಾಪಕರಿಗೆ ಅ ಆ ಇ ಮೂಲಭೂತ ಮೌಲ್ಯಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿದೆಯೇ? ಅನೌಪಚಾರಿಕ ಶಿಕ್ಷಣವನ್ನು ಜನಪದರು ಸಹಸ್ರಾರು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಶಿಕ್ಷಣವನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿದ ಜನಪದ ಶಿಕ್ಷಕರು ಈಗ ಎಲ್ಲಿದ್ದಾರೆ? ಈ ಪಠ್ಯಗಳು ಔಪಚಾರಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆಯೇ? ಜನಪದರ ಅನುಭವದ ಸಂಪತ್ತನ್ನು ಕೇಳುವ ತಾಳ್ಮೆ ನಮ್ಮ ವಿದ್ಯಾರ್ಥಿಗಳಿಗಿದೆಯೇ? ಜನ ಪದರಲ್ಲಿದ್ದ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಮುಗ್ಧತೆ, ಧೃಢತೆ, ಅನುಭವದ ಜ್ಞಾನ ಇತ್ಯಾದಿಗಳೇ ಶಿಕ್ಷಣದ ಸಾರವಾಗಿದೆ.

ಪ್ರಪಂಚದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ತಂತ್ರಜ್ಞಾನದಲ್ಲಿ ನಾವಿಂದು ನೋಡುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳನ್ನೂ ಅದೇ ದಾರಿಯಲ್ಲಿ ಮುನ್ನಡೆಸು ತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣಿಗೆ ಸಾಧ್ಯವೆ? ಇಂದಿನ ಕೆಲವು ಬೆಳೆವಣಿಗೆಗಳನ್ನು ಗಮನಿಸಿದಾಗ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದ ಪಠ್ಯಗಳಲ್ಲಿ ಎಡವುತ್ತಿದ್ದೇವೆಯೇ? ಜನಪದ ಶಿಕ್ಷಕ ಕಲಿಸಿದ ಮೌಲ್ಯಗಳ ಪಠ್ಯಗಳನ್ನು ಕಿರಿಯ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿ ಇಂದಿನ ಗುರುಗಳಿಗೆ ಇದೆಯಲ್ಲವೆ? ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಅನೌಪಚಾರಿಕ ಶಿಕ್ಷಣದ ಮಹತ್ತ್ವನ್ನು ಅರಿಯಬೇಕಾಗಿದೆ, ಈ ಶಿಕ್ಷಣವನ್ನು ಕಲಿಸಿದ ಗುಪ್ತ ಅಧ್ಯಾಪಕರನ್ನು ಗುರುತಿಸಿ ಗೌರವಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!