Sunday, 19th May 2024

ತಾಯಿಯ ಹೃದಯ

ಬೇಲೂರು ರಾಮಮೂರ್ತಿ

‘ಮಗುವಿಗೆ ಜನ್ಮ ನೀಡಿದ ತಾಯಿ ಅದು ಸುಖವಾಗಿರಲಿ ಎಂದು ಏನೇನು ಬೇಕೋ ಎಲ್ಲವನ್ನೂ ಮಾಡುತ್ತಾಳೆ. ಇದಕ್ಕಾಗಿ ದಿನನಿತ್ಯ ತ್ಯಾಗ ಮಾಡುತ್ತಲೇ ಇರುತ್ತಾಳೆ, ಇದು ವಂಶವನ್ನು ಮುನ್ನಡೆಸುವ ಪರಿ’ ಎಂದು ಅಂದಿನ ಪಾಠವನ್ನು ಗುರುಗಳು ಪ್ರಾರಂಭ ಮಾಡಿದರು.

‘ತಾಯಿಗೆ ತನ್ನ ಮಗ ಏನಾಗಬೇಕು ಎನ್ನುವುದರ ಬಗೆಗೆ ಆಸೆಯಿರುತ್ತೆ. ಆದರೆ ಕಾಲಕ್ರಮೇಣ ಮಗು ತಾಯಿಯ ಇಚ್ಛೆಯನ್ನು ಬಿಟ್ಟು ತನ್ನ ಇಚ್ಛೆಯಂತೆ ಬೆಳೆಯು ತ್ತದೆ. ಅದಕ್ಕೆ ತಾಯಿ ಆಕ್ಷೇಪ ಮಾಡದೇ ನೀನು ಏನಾದರೂ ಆಗು, ಏನಾದರೂ ಮಾಡು ಆದರೆ ಜನ ನಿನ್ನನ್ನು ನಿಂದಿಸುವ ಹಾಗೆ, ಶಾಪ ಹಾಕುವ ಹಾಗೆ, ಬದುಕಬೇಡ ಎನ್ನುತ್ತಾಳೆ. ಯಾವುದೇ ಕಾರಣಕ್ಕೂ ತನ್ನ ಕರುಳ ಕುಡಿ ತನ್ನ ಕಣ್ಣೆದುರಿಗೆ ಸಾವನ್ನಪ್ಪುವ ಸಂಗತಿಯನ್ನು ಯಾವ ತಾಯಿಯೂ ಊಹಿಸಲಾರಳು. ಅಂತಹ ಸಂದರ್ಭ ಬಂದರೆ ತನ್ನ ಮಗು ಹೇಗಾದರೂ ಸರಿ ಒಟ್ಟಿನಲ್ಲಿ ಚನ್ನಾಗಿದ್ದರೆ ಸಾಕು ಅಂದು ಹರಸಿ ಬಿಡುತ್ತಾಳೆ.

ಹೀಗೆ ಹರಸಿದ್ದರಿಂದಲೇ ನಮಗೆ ಆಧ್ಯಾತ್ಮ ಗುರು ಆದಿ ಶಂಕರಾಚಾರ್ಯರು ದೊರೆತದ್ದು. ಎಲ್ಲವೂ ಕಾಳದ ನ್ವಯವೇ ನಡೆಯುವುದು ಎನ್ನುವುದಕ್ಕೂ ಈ ಘಟನೆ ಉದಾಹರಣೆಯಂತಿದೆ. ನದೀ ನೀರಿನಲ್ಲಿ ಸ್ನಾನಕ್ಕೆ ಇಳಿದಾಗ ತನ್ನ ಕಾಲನ್ನು ಹಿಡಿದ ಮೊಸಳೆಯಿಂದ ತಪ್ಪಿಸಿಕೊಳ್ಳಲು ‘ನನಗೆ ಸನ್ಯಾಸಿಯಾಗಿರುವುದೇ
ಪರಿಹಾರ’ ಎಂದು ತಾಯಿಗೆ ಹೇಳುತ್ತಾರೆ ಶಂಕರರು. ಪತಿಯ ಅಗಲಿಕೆ ಯಾದ ಮೇಲೆ ಒಂದೇ ಆಸರೆಯಾದ ಮಗನು ಮುಂದೆ ಓದಿ, ವಿವಾಹಿತನಾಗಿ, ಸಂಸಾರಿಯಾಗಿ ನನ್ನ ಮನಕ್ಕೆ ಸಂತಸ ಕೊಡುವನೆಂದುಕೊಂಡಿದ್ದ ತಾಯಿಗೆ ಮಗ ಸನ್ಯಾಸಿಯಾಗುತ್ತೇನೆ ಎಂದಾಗ ಹೇಗಾಗಿರುತ್ತೆ.

ತಾಯಿ ಮಗನ ನಡುವೆ ಅನೇಕ ರೀತಿಯ ಮಾತುಕತೆಗಳು ನಡೆದು ಮಗ ಸನ್ಯಾಸಿಯಾಗಿರುವುದು ಅನಿವಾರ್ಯ ಎನಿಸಿದಾಗ ಮೊಸಳೆಯ ಬಾಯಿಗೆ ಸಿಕ್ಕು ಮಗ ಮೃತನಾಗುವ ಬದಲು ‘ಸನ್ಯಾಸಿಯಾಗಿಯಾದರೂ ಎಲ್ಲಾದರೂ ಹೇಗಾದರೂ ಸುಖವಾಗಿರಲಿ’ ಎಂದು ತಾಯಿ ಮಗನಿಗೆ ಹರಸುತ್ತಾಳೆ. ಆದರೂ ಆಕೆಗೆ ಕಣ್ಣಿಲ್ಲದವಳ ಕೈನಲ್ಲಿದ್ದ ಕೋಲನ್ನು ಕಿತ್ತುಕೊಂಡಂತೆ ಭಗವಂತ ನನ್ನಾಸೆಯಂತೆ ಮಗನನ್ನು ಕೊಟ್ಟು ಮತ್ತೆ ನನ್ನಿಂದ ಅವನನ್ನು ದೂರಮಾಡುತ್ತಿದ್ದಾನಲ್ಲ ಅಂದು ಪರಿತಪಿಸುತ್ತಾಳೆ. ಆದರೆ ಅವಳಿಗೆ ಒಂದು ಕುಟುಂಬದ, ಒಂದು ಜೀವದ, ಹಿತಕ್ಕಿಂತ ನಾಡಿನ ಹಿತ ಬಹಳ ಮುಖ್ಯವಾಗುತ್ತೆ.

ಮಗನ ಅಗಲಿಕೆಯಿಂದ ನಿರಂತರವಾಗಿ ನೋವು ತಿನ್ನುವ ಬದಲು ಅವನು ಎಲ್ಲಿಯಾದರೂ ಸರಿ ಬದುಕಿದ್ದಾನೆ, ನಾನು ಕರೆದಾಗ ಬರುತ್ತಾನೆ, ನನ್ನ ಅಂತ್ಯಸಂಸ್ಕಾರವನ್ನೂ ಮಾಡುತ್ತಾನೆ ಎನ್ನುವ ಸುಖವೇ ಹೆಚ್ಚು ಎನ್ನುತ್ತಾಳೆ. ನಮ್ಮ ದೇಶದಲ್ಲಿ ತ್ಯಾಗಕ್ಕೆ ಬಹಳ ಮಹತ್ವವಾದ ಸ್ಥಾನವಿದೆ. ಅದರಿಂದಾಗಿ ಶಿಷ್ಯರೇ ನೀವುಗಳೂ ನಿಮ್ಮ ಜೀವನದಲ್ಲಿ ಮತ್ತೊಬ್ಬರ ಸುಖಕ್ಕೆ ಸಂತೋಷಕ್ಕೆ, ನಾಡಿನ ಹಿತಕ್ಕೆ ನಿಮ್ಮ ಸುಖವನ್ನು ಒಂದಿಷ್ಟಾದರೂ ತ್ಯಾಗ ಮಾಡಬೇಕಾಗಿ ಬಂದಾಗ ಹಿಂದೆ ಮುಂದೆ ನೋಡಬಾರದು’ ಎಂದು ಉಪದೇಶಿಸಿ ಗುರುಗಳು ಅಂದಿನ ಪಾಠವನ್ನು ಮುಕ್ತಾಯಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!