Monday, 20th May 2024

ಕಾಳಿ ಕಣಿವೆ ಕೌಂಟಿಯ ವೈಭವ್

ರಾಜಾ ಅಡಕಳ್ಳಿ

ಇಲ್ಲಿ ಪರ್ಣಕುಟಿಯ ಪರಿಕಲ್ಪನೆ, ಹಳ್ಳಿ ಜೀವನದ ಸೊಗಡು, ಕಾಡಿನ ಸುಗಂಧದ ಘಮಲು ಎಲ್ಲವೂ ಲಭ್ಯ. ಪರಿಸರ, ಪ್ರಕೃತಿಯೊಡನೆ ಬೆರೆಯುವ ಅಪೂರ್ವ ಅವಕಾಶ ದೊರೆಯುವ ಅಪೂರ್ವ ರೆಸಾರ್ಟ್ ಇದು.

ಉತ್ತರ ಕನ್ನಡ ಜಿಲ್ಲೆಯ ಕಾಳಿ ಕಣಿವೆಯಲ್ಲಿರುವ ಜೋಯಿಡಾ ತಾಲ್ಲೂಕಿನ ಜಗಲ್‌ಪೇಟೆಯ ‘ಜಂಗಲ್ ಕೌಂಟಿ’ ಉಳಿದ ರೆಸಾರ್ಟ್
ಗಳಂತಲ್ಲ. ಇಲ್ಲಿ ಕಾಡು, ಮಣ್ಣು, ಪ್ರಾಣಿ, ಪಕ್ಷಿ, ತೋಟ, ನೀರು, ನದಿ, ಕೃಷಿ… ಹೀಗೆ ಪರಿಸರದ ಬಗ್ಗೆ ಆಸಕ್ತಿಯಿರುವವರಿಗಷ್ಟೇ ಇದು ರಂಗಸ್ಥಳವಾಗಬಹುದೇ ವಿನಃ ಮೋಜು, ಮಸ್ತಿ, ದಾಂಧಲೆಗಳ ಅಡ್ಡೆ ಬೇಕೆಂಬುವವರಿಗೆ ಇದು ಲಾಯಕ್ಕಾಗಲಿಕ್ಕಿಲ್ಲ.

ಇಲ್ಲಿ ಉಳಿದ ಎಷ್ಟೋ ರೆಸಾರ್ಟುಗಳಂತೆ ದೊಡ್ಡ ದೊಡ್ಡ ಸೂಟ್‌ರೂಮ್‌ಗಳಿಲ್ಲ. ಬದಲಿಗೆ ದಟ್ಟ ಕಾನನದ ನಡುವೆ ಬೆಚ್ಚಗಿರುವುದಕ್ಕೆ ಸೂಕ್ತ ಕಾಟೇಜುಗಳಿವೆ. ಜಿಮ್, ಸ್ವಿಮ್‌ಗಳಿಗೆ ಇಲ್ಲಿ ಅವಕಾಶವಿಲ್ಲ. ಬದಲಿಗೆ ಕಾಡುಮೇಡುಗಳನ್ನು ನಿರ್ಭಿಡೆ ಯಿಂದ ಸುತ್ತಾಡುವಷ್ಟರಲ್ಲೇ ಮೈಮನವು ಜುಂ ಎಂದೀತು. ಇಲ್ಲಿ ಕೆಮಿಕಲ್ ಹಾಕಿ ಈಜು ಕೊಳ ನಿರ್ಮಿಸಿ ಸುತ್ತಮುತ್ತಲಿನ
ನೀರನ್ನೆಲ್ಲಾ ರಾಡಿ ಮಾಡಿಲ್ಲ. ಬದಲಿಗೆ ಗುಡ್ಡದ ಮೇಲೆ ಕೆರೆ ನಿರ್ಮಿಸಿ ತಿಳಿನೀರು ಸಂಗ್ರಹಿಸಿ ಇಳಿಜಾರಿನಲ್ಲಿ ಗಿಡಬಳ್ಳಿಗಳಿಗೆ
ಬಸಿದುಹೋಗುವಂತೆ ಮಾಡಲಾಗಿದೆ.

ಇಲ್ಲಿ ಜೀಪು, ವ್ಯಾನುಗಳಲ್ಲಿ ಸಫಾರಿಗೆ ಕರೆದೊಯ್ದು ಪ್ರಾಣಿಪಕ್ಷಿಗಳಿಗೆ ಕಿರಿಕಿರಿ ಮಾಡುವುದಿಲ್ಲ. ಬದಲಿಗೆ ಕಾಳಿ ಕಣಿವೆಯ ನಿಗೂಢ ದಟ್ಟಡವಿಯಲ್ಲಿ ಚಾರಣಕ್ಕೆ ಕರೆದೊಯ್ದು ಪರಿಸರ ಪಾಠ ತಿಳಿಸುತ್ತಾರೆ. ಅಕ್ಕಪಕ್ಕದ ಹಳ್ಳಿಗಳಿಗೆ ಕರೆದೊಯ್ದು ಭತ್ತ, ತರಕಾರಿ, ಅಡಿಕೆ, ತೆಂಗು, ಜಾಯಿಕಾಯಿಯಂಥವುಗಳನ್ನು ಬೆಳೆಸುವ ಕೃಷಿಯನ್ನು ಪರಿಚಯಿಸುತ್ತಾರೆ. ಇಲ್ಲಿ ಕಾಂಟಿನೆಂಟಲ್ ಫುಡ್ ಹೆಸರಲ್ಲಿ ಹೊಟ್ಟೆೆ ಕೆಡಿಸುವಂತಹ ತಿನಿಸುಗಳನ್ನು ತಿನ್ನಿಸುವುದಿಲ್ಲ.

ಬದಲಿಗೆ ಅಲ್ಲಿಯ ಕಾಡಿನಲ್ಲೇ ಸಿಗುವ ನೆಲ್ಲಿ ಕಾಯಿ, ಅಪ್ಪೆಕಾಯಿಗಳ ತಂಬುಳಿ, ಸೊಪ್ಪು, ಹಣ್ಣುಗಳ ಭಕ್ಷ್ಯಗಳನ್ನು ನೀಡುತ್ತಾರೆ.  ಐಸ್‌ಕ್ರೀಂ ಬದಲಿಗೆ ರುಚಿರುಚಿಯಾದ ಗಿಣ್ಣು, ಪಿಜ್ಜಾದ ಬದಲಿಗೆ ಪತ್ರೊಡೆ, ಬರ್ಗರ್ ಬದಲಿಗೆ ಹಲಸಿನ ಹಣ್ಣಿನ ಕಡಬು, ಫ್ರೆಂಚ್‌ಫ್ರೈ ಬದಲಿಗೆ ಮೂಡ ಹಾಗಲಕಾಯಿಯ ಚಿಪ್ಸ್, ವೆಜ್‌ಕರಿ ಬದಲು ಬಸಳೆಸೊಪ್ಪಿನ ಸಾಂಬಾರು, ದೋಸೆ ಜೊತೆ ಜೋನಿಬೆಲ್ಲ-ಜೇನುತುಪ್ಪ ಹೀಗೆ…. ಎಲ್ಲವೂ ಇಲ್ಲಿ ಸಸ್ಯ ಶ್ಯಾಮಲೆಯ ಕೊಡುಗೆಗಳೇ.

ಪರ್ಣ ಕುಟಿ ಆತಿಥ್ಯ
ಇಲ್ಲಿ ಊಟ, ತಿಂಡಿಗಳಿಗೆಂದು ದೊಡ್ಡ ಡೈನಿಂಗ್ ಹಾಲ್ ಇಲ್ಲ. ಬದಲಿಗೆ ಅಲ್ಲಿಯ ಗುಡ್ಡದ ಇಳಿಜಾರಿನಲ್ಲೇ ಪರ್ಣಕುಟಿಯನ್ನು ಕಟ್ಟಿ ಅಲ್ಲಿಯ ಅಂಗಳದಲ್ಲೇ ಅತಿಥಿಗಳಿಗೆ ಊಟ-ತಿಂಡಿ ನೀಡುವುದರಿಂದ ದಟ್ಟಡವಿಯ ಸಹಜ ಸಮೃದ್ಧ ಪರಿಸರದಲ್ಲೇ
ಅವುಗಳನ್ನು ಆಸ್ವಾದಿಸಲು ಅವಕಾಶ. ಊಟವಾದ ನಂತರ ಕೋಕಂ, ಶುಂಠಿ, ಜ್ಯೂಸ್, ವೀಳ್ಯದೆಲೆ ಅಡಿಕೆಯ ಆತಿಥ್ಯ.

ಸಂಜೆಯಾಗುತ್ತಲೇ ಕ್ಯಾಂಪ್ ಫೈರ್‌ನೊಂದಿಗೆ ಬೆಚ್ಚಗೆ ಮೈ ಕಾಯಿಸಿಕೊಳ್ಳುತ್ತಾ ಕಾಡಿನ ಕೌತುಕದ ಬಗ್ಗೆ, ವನ್ಯಜೀವಿ ವೈವಿಧ್ಯಗಳ ಬಗ್ಗೆ ಪ್ರಸಿದ್ಧ ಚಲನ ಚಿತ್ರಗಳನ್ನು ವೀಕ್ಷಿಸಲು ಇಲ್ಲಿದೆ ವ್ಯವಸ್ಥೆ. ಬೆಳಿಗ್ಗೆ ಸುತ್ತಾಡಲು ಪಕ್ಕದ ಕ್ಯಾಸಲ್‌ರಾಕ್, ಅಣಶಿ, ದಾಂಡೇಲಿ, ಕಾಡುಗಳಿಗೆ ಮತ್ತು ಸಿಂಥೇರಿ ರಾಕ್, ಕಾಳಿನದಿ ಹಾರ, ರಾಫ್ಟಿಂಗ್‌ಗಳಿಗೆ ತೆರಳಬೇಕೆನ್ನುವವರಿಗೂ ಜಂಗಲ್ ಕೌಂಟಿಯಿಂದಲೇ ವ್ಯವಸ್ಥೆಯಿದೆ.

ಹೀಗೆ… ಮರಳಿ ಮಣ್ಣಿಗೆ ಎಂಬ ಸೂತ್ರವನ್ನಿಟ್ಟುಕೊಂಡು, ಪ್ರಕೃತಿ ಪ್ರೇಮವನ್ನೇ ಪ್ರವಾಸಿಗರಿಗೆ ಧಾರೆ ಎರೆಯುವಂತೆ ಜಂಗಲ್ ‌ಕೌಂಟಿಯನ್ನು ರೂಪಿಸಿರುವ ಶ್ರೇಯಸ್ಸು ವೈಭವ್ ಕಾಮತ್-ರೂಪಾಲಿ ದಂಪತಿಗಳದ್ದು. ಕೋವಿಡ್ ಬಂತು ಎಂದು ಹೆದರಿ ಇವರು ಪೇಟೆ ಬಿಟ್ಟು ಹಳ್ಳಿಗೆ ಬಂದವರಲ್ಲ. ಕಾಡಿನ ಮೇಲಿನ ಅದಮ್ಯ ಪ್ರೀತಿಯಿಂದಲೇ ಕಾಡು ಸೇರಿದವರು. ವೈಭವ್ ಹಿಂದೆ ಬೆಳಗಾವಿಯಲ್ಲಿ ಪ್ರವಾಸೋದ್ಯಮದಲ್ಲಿ ತೊಡಗಿಕೊಂಡ ಉದ್ಯಮಿ.

ರೂಪಾಲಿ ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದವರು. ಆದರೆ ಇವರಿಬ್ಬರಿಗೂ
ನಾಡಿಗಿಂತಲೂ ಕಾಡಿನ ಬಗ್ಗೆಯೇ ಹೆಚ್ಚು ಸೆಳೆತ. ಹಣ ಗಳಿಸಬೇಕೆಂಬ ಆಸೆಗಿಂತಲೂ ಹೆಚ್ಚಿನ ಗಿಡಮರ ಬೆಳೆಸುವುದೇ ಇವರಿಗಿಷ್ಟ.
ಕಾಡು ಕೈಬೀಸಿ ಕರೆಯಿತು ಹೀಗೆ ಅವರಿಗೆ ಸದಾ ಕಾಡುತ್ತಿದ್ದ ಕಾಡಿನ ಪ್ರೀತಿಯೇ ಐದು ವರ್ಷ ಗಳ ಹಿಂದೆ ಜಗಲ್ ಪೇಟೆಯ ಕಾಡಿಗೆ ಕರೆತಂದಿತು.

ಇಬ್ಬರೂ ನಗರ ಬದುಕಿಗೆ ತಿಲಾಂಜಲಿ ನೀಡಿ ಇಲ್ಲಿಗೆ ಬಂದು ಬಿಡಾರ ಹೂಡಿ ಜಂಗಲ್ ಕೌಂಟಿ ಕಟ್ಟಿ ಬರುವವರಿಗೆ ಪರಿಸರದ ಪಾಠ- ಪ್ರೀತಿ ಕಾಳಜಿ ಕಲಿಸಿಕೊಡುತ್ತಿದ್ದಾರೆ. ಸ್ಥಳೀಯ ಕುಣುಬಿ, ಸಿದ್ದಿ ಮಂದಿಗೂ ಉದ್ಯೋಗ ನೀಡಿದ್ದಾರೆ. ವೈಭವ್ ಅವರಂತೂ ಮಂಗಟ್ಟೆ ಹಕ್ಕಿ ಹಣ್ಣು ತಿಂದು ಬೀಜ ಉಗುಳುತ್ತಾ ಕಾಡು ಬೆಳೆಸುವ ಕಥೆಯಿಂದ ಹಿಡಿದು, ಮರಕುಟುಕ, ಜೇನು ಗೂಡು
ಕಟ್ಟುವವರೆಗೂ ಕಾಡಿನ ಸೂಕ್ಷ್ಮ, ಸಂಘರ್ಷ ಜೀವನದ ಎಲ್ಲ ವಿಷಯಗಳನ್ನೂ ಆಳವಾಗಿ ತಿಳಿದುಕೊಂಡು ವಿವರಿಸುವ
ಮೇಷ್ಟ್ರಾಗಿ ನಮ್ಮೊಂದಿಗಿರುತ್ತಾರೆ.

ಹೀಗಾಗಿ, ಸಹಜವಾಗೇ ಪ್ರವಾಸದ ವಿಲಾಸದ ಜತೆ ಪರಿಸರ ಪಾಠವೂ ಉಚಿತವಾಗಿ ಲಭ್ಯ. ಜಂಗಲ್‌ಕೌಂಟಿಯಲ್ಲಿ ಹೆಚ್ಚು ಸಂಖ್ಯೆ ಯ ಕಾಟೇಜುಗಳಿದ್ದರೆ ಅಲ್ಲಿಯ ಕಾಡಿನ ನಿರ್ಮಲ ಪರಿಸರಕ್ಕೆ ಧಕ್ಕೆಯಾದೀತೆಂದು 8 ಕಾಟೇಜುಗಳನ್ನು ಮಾತ್ರ ನಿರ್ಮಿಸಿರುವ ವೈಭವ್, ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಾರದೆಂದು ವೆಬ್‌ಸೈಟ್ ಕೂಡಾ ಇಟ್ಟಿಲ್ಲ.

ಕೇವಲ ಅವರ ದೂರವಾಣಿ ಸಂಖ್ಯೆೆ 9448133270 ಮೂಲಕ ಮಾತ್ರ ಬುಕ್ಕಿಂಗ್ ಸಾಧ್ಯ. ಹೀಗೆ ವೈಭವ್ ಅವರ ಕಾಡುಮಾತು,
ಕಾನನದ ಸುತ್ತಾಟ, ದೇಶಿ ಆತಿಥ್ಯ ಮುಗಿಸಿ ವಾಪಸ್ಸಾಗುವಾಗ ಮನಸ್ಸಿನಲ್ಲಿಯೇ ನಿಸರ್ಗ ಪ್ರೀತಿಯ ಹೊಸ ಚಿಗುರು ಮೂಡಿ
ಮತ್ತೆ ಮತ್ತೆ ಕಾಳಿ ಕಾಡು ಕಾಡುವಂತಾಗುತ್ತದೆ.

ಫೋಟೋ ಇಲ್ಲಿ ಸುಲಭ
ಅದೃಷ್ಟ ಖುಲಾಯಿಸಿದರೆ ಈ ಅಭಯಾರಣ್ಯದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಹುಲಿ, ಚಿರತೆಗಳೂ ಪ್ರತ್ಯಕ್ಷವಾಗ ಬಹುದು. ಪಕ್ಷಿಗಳ ಛಾಯಾಗ್ರಹಣ (ಬಡ್ ವಾರ್ಚ್) ಮಾಡುವುದಿದ್ದರೆ ಜಂಗಲ್‌ಕೌಂಟಿಯ ಕಾಟೇಜುಗಳ ಮೇಲಿನ ಅಟ್ಟಣಿಗೆ ಯನ್ನೂ ಏರಿದರೂ ಸಾಕು. ಬಣ್ಣಬಣ್ಣದ ಹಕ್ಕಿಗಳೇ ನಿಮ್ಮ ಕ್ಯಾಮರಾವನ್ನು ಮುತ್ತಿಕೊಳ್ಳುತ್ತವೆ. ಕಾರಣ ಆ ಕಾಟೇಜುಗಳ ಸುತ್ತ ನೀರಿನ ಆಶ್ರಯಗಳನ್ನು ನಿರ್ಮಿಸಿರುವುದರಿಂದ ಅಲ್ಲಿಗೆ ನೀರು ಕುಡಿಯಲು ಹಕ್ಕಿಗಳು ದಂಡಿಯಾಗಿ ದಾಂಗುಡಿಯಿಡುತ್ತವೆ.

ಜಿಂಕೆಯೂ ಇದೆ ಏಲಕ್ಕಿಯೂ ಇದೆ
19 ಎಕರೆ ಜಂಗಲ್‌ಕೌಂಟಿಯ ಒಂದು ಸುತ್ತು ಹಾಕಿದರೂ ಸಾಕು… ವೈವಿಧ್ಯಮಯ ಗಿಡಗಂಟಿಗಳ ದರ್ಶನವಾಗುತ್ತದೆ. ಅರಿಶಿನ, ಶುಂಠಿ, ಕಾಳು ಮೆಣಸು, ಏಲಕ್ಕಿ, ಬಾಳೆ, ಹಲಸುಗಳಂಥ ಬೆಳೆಗಳ ಪರಿಚಯವಾಗುತ್ತದೆ. ಸೂರ್ಯ ರಶ್ಮಿಯೂ ನೆಲಕ್ಕೆ ತಾಗದಂಥ ಅಲ್ಲಿಯ ಪರಿಸರದಲ್ಲಿನ ದಿವ್ಯ ಮೌನ, ಅಪರೂಪದ ಮಂಗಟ್ಟೆಗಳ (ಹಾರ್ನ್‌ಬಲ್) ರೋಮ್ಯಾನ್ಸ್‌, ವಾನರ ಸೈನ್ಯಗಳ ಕಕರುತನ, ಥಟ್ಟನೇ ಮಿಂಚಿ ಮರೆಯಾಗುವ ಜಿಂಕೆ ಮರಿಗಳ ತುಂಟತನ, ಕಾಲಂಚಲ್ಲೇ ಮುಲುಗುಡುವ ಮೊಲಗಳು….ಹೀಗೆ ಪ್ರಕೃತಿಯ ಹಲವು ಲಯ- ಲಾಸ್ಯ-ಸ್ವಾರಸ್ಯಗಳನ್ನು ಮೆಲ್ಲಬೇಕೆಂದರೆ ಜಂಗಲ್‌ಕೌಂಟಿ ಪ್ರಶಸ್ತ.

Leave a Reply

Your email address will not be published. Required fields are marked *

error: Content is protected !!