Saturday, 14th December 2024

ರಾಣಿ ರಾಶ್‌ಮೊನಿ ನಿರ್ಮಿಸಿದ ಕೋಲ್ಕತ್ತಾದ ಕಾಳಿ ಮಂದಿರ

ಡಾ. ಕೆ.ಎಸ್. ಪವಿತ್ರ

ರಾಣಿ ರಾಶ್‌ಮೊನೆ ಎಂಬ ಮಹಿಳೆ ನಿರ್ಮಿಸಿದ ದಕ್ಷಿಣೇಶ್ವರದ ಕಾಳಿ ಮಂದಿರವು ಇಂದು ಬಹು ಪ್ರಸಿದ್ಧ. ಆದರೆ ಅದನ್ನು ನಿರ್ಮಿಸಲು ಆಕೆ ಸಣ್ಣ ಹೋರಾಟವನ್ನೇ ಮಾಡಬೇಕಾಗಿತ್ತು!

ದಕ್ಷಿಣೇಶ್ವರ ಕಾಳಿ ಮಂದಿರದ ಮುಂದೆ ನಾನು- ಭೂಮಿ-ಭರತ ನಿಂತಿದ್ದೆವು. ಬೇಲೂರು ಮಠ ದಿಂದ ಲಾಂಚ್‌ನಲ್ಲಿ ಪಯಣಿಸಿ, ‘ವಿವೇಕಾನಂದ ಸೇತು’ವಿನ ಮೇಲೆ ನಡೆದು ಕಾಳಿ ಮಂದಿರದ ಸಾಲಿನಲ್ಲಿ ಕಾಯುತ್ತಿದ್ದೆವು. ಹಿಂದೆ ನೋಡಿದ್ದಕ್ಕಿಂತ ಮಂದಿ ರದ ಸುತ್ತಲ ಪರಿಸರ ಸ್ವಚ್ಛವಾಗಿತ್ತು.

ಹೊರಗೆ ಕಾಯುತ್ತ ನಿಂತಿದ್ದಾಗ ಅಲ್ಲಿಯೇ ಇದ್ದ ಇನ್ನೊಂದು ಚಿಕ್ಕ ಮಂದಿರದತ್ತ ಬಿತ್ತು. ನಮ್ಮ ಕ್ಯೂನಲ್ಲಿದ್ದ ಹಿಂದಿನ-ಮುಂದಿನ ಬೆಂಗಾಲಿ ಮಹಿಳೆಯರಿಗೆ ನಮ್ಮ ಸರತಿ ಕಾಯ್ದಿರಿಸಲು ಹೇಳಿ, ಆ ಬಿಳೀ ಮಂದಿರ ದತ್ತ ಹೋದೆವು. ‘ರಾಣಿಮಾ’ ಎಂದು ಬರೆದಿದ್ದ ಆ ಮಂದಿರದಲ್ಲಿದ್ದದ್ದು ಸುಂದರ ಹೂಗಿಡಗಳ ಮಧ್ಯೆ ಒಂದು
ಗೌರವ ಪೂರ್ಣ ಸೀಮೂರ್ತಿ. ಲೋಕಮಾತಾ ರಾಣೀ ರಾಶ್ ಮೊನಿಗೆ ಅರ್ಪಿತವಾದ ಮಂದಿರ.

ದಕ್ಷಿಣೇಶ್ವರ ಕಾಳಿ ಮಂದಿರ ನಿರ್ಮಿಸಲು ಕಾರಣಕರ್ತಳೇ ರಾಣಿ ರಾಶ್‌ಮೊನಿ. ಬಹುಶಃ ರಾಸಮಣಿಯೋ ರಸಮಣಿ ಎಂಬ ರೂಪವೋ ಬಂಗಾಲಿಗಳ ಬಾಯಲ್ಲಿ ‘ರಾಶ್ ಮೊನಿ’ ಯಾಗಿರಬೇಕು. ರಾಣಿ ರಾಶ್‌ಮೊನಿ ಕಾಳಿ ಮಂದಿರವನ್ನು ನಿರ್ಮಿಸಿದ ಘಟನೆಯ ಹಿಂದು-ಮುಂದುಗಳನ್ನು ಅವಲೋಕಿಸಿದರೆ ಬಂಗಾಲದೊಂದಿಗೆ ನಾವು ಜೋಡಿಸಿಕೊಳ್ಳುವ ಗಂಗೆ-ಕಾಳಿ-ಬಂಗಾಲಿ ಸೀಯರ ಅಪರಿಮಿತ ಸಾಮರ್ಥ್ಯಗಳ ಬಗೆಗೆ ಬೆರಗು ಮೂಡದೇ ಇರದು.

ಬ್ರಿಟಿಷ್ ಆಡಳಿತದ ಕಪಿಮುಷ್ಠಿಯಲ್ಲಿ ಸಿಲುಕಿ ಭಾರತ ನಲುಗುತ್ತಿದ್ದ ಕಾಲ. ದಕ್ಷಿಣೇಶ್ವರದ ಹತ್ತಿರದಲ್ಲಿರುವ ಬರ್ರಾಕ್ ಪುರ್‌ನ ಸಿಪಾಯಿಗಳ ದೇಶ ಭಕ್ತಿಯಿಂದ ಉದ್ರಿಕ್ತವಾಗಿಯೇ ಸಿಪಾಯಿದಂಗೆಯ ಕಿಡಿ ಹೊತ್ತಿದ್ದು. ಆಗ ಕೊಲ್ಕೊತ್ತಾ ಭಾರತದ ರಾಜಧಾನಿಯಷ್ಟೇ ಅಲ್ಲ, ಬ್ರಿಟಿಷ್ ಸಾಮ್ರಾಜ್ಯದಲ್ಲಿ ಲಂಡನ್ ನಂತರ ಎರಡನೇ ದೊಡ್ಡ ನಗರವೂ ಆಗಿತ್ತು. ದೇಶಭಕ್ತಿಯ ಜ್ವರ ಇಡೀ ನಗರದ ಪ್ರಮುಖ ವ್ಯಕ್ತಿಗಳಲ್ಲಿ ಹರಡತೊಡಗಿತ್ತು. ವಿದೇಶೀ ಆಡಳಿತದ ವಿರುದ್ಧ ನಿಶ್ಯಬ್ಧವಾಗಿ ದಂಗೆಯೆದ್ದವರಲ್ಲಿ ರಾಣಿ ರಾಶ್‌ಮೊನಿ ಪ್ರಮುಖಳು. 1800ರ ದಶಕಗಳಲ್ಲಿ ದಕ್ಷಿಣೇಶ್ವರ ಗಂಗೆಯ ಪೂರ್ವ ದಡಗಳಲ್ಲಿ ಇದ್ದ ಒಂದು ಪುಟ್ಟ ಹಳ್ಳಿ. ಈಗ ಕಾಳಿ ಮಂದಿರವಿರುವೆಡೆ ದಟ್ಟ ಕಾಡು ಆಗ ಇತ್ತು. ಅನತಿ ದೂರದ ಈಗ ರಾಣಿ ರಾಶ್‌ಮೊನಿ ಬಾಜಾರ್ ಎಂದು ಕರೆಯಲ್ಪಡುವ ಬೆಲಿಯಾಘಾಟ್‌ನ ಮುಂದೆ ಹಿಂದಿನ ದಿನವಷ್ಟೇ ಓಡಾಡಿ ಬಂದಿದ್ದೆವು. ಈಗ ಕಲ್ಕತ್ತಾದ ಕೊಳೆಯಿಂದ ತುಂಬಿ ತುಳುಕುವ ಬೆಲಿಯಾಘಾಟ್ ಕಾಲುವೆ ಮೊದಲು ಹೀಗಿರಲಿಲ್ಲ.

ರಾಶ್‌ಮೊನಿಯ ಕುಟುಂಬದ ಶ್ರೀಮಂತಿಕೆ ಕಾರಣವಾದದ್ದು ಈ ಕಾಲುವೆಯಲ್ಲಿ ನಡೆಯುತ್ತಿದ್ದ ವ್ಯಾಪಾರವೇ. ವ್ಯಾಪಾರಿಗಳಾದ ‘ಬನಿಕ್’ರಿಂದ ಜಮೀನ್ದಾರರಾಗಿ ಅವರ ಅಂತಸ್ತು ಬೆಳೆದದ್ದೂ ಹಾಗೆಯೇ. ಜಮೀನ್ದಾರರಾದರೂ ಅವರ ಜಾತಿ ಮಾತ್ರ ‘ಶೂದ್ರ’ ರಾಗಿದ್ದರಿಂದ ಮೇಲಂತಸ್ತುಗಳಲ್ಲಿ ಅವರನ್ನು ಇತರರು ಸೇರಿಸಲಿಲ್ಲ. ಆದರೆ ರಾಶ್‌ಮೊನಿಯ ಸಲಹೆಯಂತೆ, ಆಕೆಯ ಪತಿ ರಾಜ್ ಚಂದ್ರದಾಸ್ ಕಲ್ಕತ್ತೆಯ ಕೇಂದ್ರವಾಗಿದ್ದ ಹೂಗ್ಲಿ-ಗಂಗೆಯ ಸುತ್ತ ಮುತ್ತಲ ಜಾಗಗಳನ್ನು ಕೊಂಡು ಕೊಂಡ. ಸ್ನಾನ-ಅಂತ್ಯಸಂಸ್ಕಾರ-ವಾಣಿಜ್ಯಗಳ ಕೇಂದ್ರವಾಗಿದ್ದ ನದಿಯ ಘಟ್ಟಗಳು ಪ್ರಾಬಲ್ಯದ ಹೆಗ್ಗುರುತಾಗಿದ್ದವು.

ಇಂದಿಗೂ ದಾಸ್ ಕುಟುಂಬ ನಿರ್ಮಿಸಿದ ಬಾಬು ರಾಜ್‌ಚಂದ್ರ ದಾಸ್ ಘಾಟ್ (ಬಾಬು ಘಾಟ್) ಮತ್ತು ಆಹಿರಿತೋಲಾ ಘಾಟ್ ಕಲ್ಕತ್ತೆಯ ನದೀತೀರದ 42 ಐತಿಹಾಸಿಕ ಘಾಟ್‌ಗಳಲ್ಲಿ ಪುರಾತನವಷ್ಟೇ ಅಲ್ಲ, ಜನನಿಬಿಡವೂ ಹೌದು. ರಾಶ್‌ಮೊನಿಯಾ ಪತಿ ರಾಜ್‌ಚಂದ್ರ ದಾಸ್ ಅಕಾಲಿಕ ಮರಣ ಹೊಂದಿದ. ತದನಂತರ ಬಂಗಾಲದ ಶ್ರೀಮಂತ ಕುಟುಂಗಳಲ್ಲಿ ಒಂದಾದ ದಾಸ್ ಕುಟುಂಬದ ಎಸ್ಟೇಟ್ ರಾಶ್‌ಮೊನಿಯ ಕೈಗೆ ಬಂದಿತು. ಅಲ್ಲಿಂದ ಸುಮಾರು 30 ವರ್ಷಗಳವರೆಗೆ ರಾಶ್
ಮೊನಿ ತನ್ನ ವ್ಯವಹಾರ ಚಾತುರ್ಯ, ಕೆಳವರ್ಗಗಳನ್ನು ಗೌರವಿಸುವ ಬುದ್ಧಿ, ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯಗಳಿಂದ ಕಲ್ಕತ್ತೆಯಲ್ಲಿ ಹೆಸರಾದಳು.
ರಾಶ್‌ಮೊನಿ ಕಲ್ಕತ್ತೆಯ ಹೆಸರಾಂತ ಪ್ರಮುಖರನ್ನು (ಉದಾಹರಣೆಗೆ ರಬೀಂದ್ರನಾಥ ಠ್ಯಾಗೋರ್‌ರ ಅಜ್ಜ ದ್ವಾರಕನಾಥ್ ಠ್ಯಾಗೋರ್) ಎದುರಿಸಿ ತನ್ನ ಕುಟುಂಬಕ್ಕೆ ನ್ಯಾಯವಾಗಿ ಬರಬೇಕಿದ್ದ ಸಾಲವನ್ನು ವಸೂಲು ಮಾಡಿದಳು. ಜೊತೆಗೇ ಈಸ್ಟ್ ಇಂಡಿಯಾ ಕಂಪೆನಿಯನ್ನೂ ಆಕೆ ಬಿಡಲಿಲ್ಲ.

1857ರ ದಂಗೆಯ ನಂತರ ಬಹುಜನ ಯೂರೋಪಿಯನ್ನರು ತಮ್ಮ ಈಸ್ಟ್ ಇಂಡಿಯಾ ಕಂಪೆನಿ ಷೇರುಗಳನ್ನು ಕೊಟ್ಟು ದೇಶ ಬಿಡುವಾಗ, ರಾಶ್‌ಮೊನಿ ಅವೆಲ್ಲವನ್ನೂ ಅತಿ ಕಡಿಮೆ ಬೆಲೆಗೆ ಕೊಂಡಳು. ದಂಗೆಯ ನಂತರ ಅಪಾರ ಲಾಭ ಗಳಿಸಿದಳು. ತನ್ನ ಪತಿಯ ಮರಣಾನಂತರ ಸುಮಾರು ಒಂಬತ್ತು ಘಾಟ್‌ಗಳನ್ನು ನವೀಕರಣಗೊಳಿಸಿದಳು. ಕಲ್ಕತ್ತೆಯ ಅಂದಿನ ಪಿತೃಪ್ರಧಾನ ವ್ಯವಸ್ಥೆಯಲ್ಲಿ, ಕೆಳಜಾತಿಯ ಮಹಿಳೆಯೊಬ್ಬಳು ಹೀಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ದುಡ್ಡನ್ನು ವ್ಯಯಿಸಿ ಸಾರ್ವಜನಿಕ ಕೆಲಸಗಳನ್ನು ಮಾಡುವುದು, ಪ್ರಸಿದ್ಧಳಾಗುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಇದರ ಮೇಲೆ ರಾಶ್‌ಮೊನಿ ಮಾಡಿದ್ದು ದಕ್ಷಿಣೇಶ್ವರದ ಕಾಳಿಮಂದಿರವನ್ನು ನಿರ್ಮಾಣ ಮಾಡುವ ಮಹತ್ಕಾರ್ಯ.

ಸ್ಥಳೀಯರ ವಿರೋಧ
ಒಂಭತ್ತು ಗೋಪುರಗಳ ದಟ್ಟ ಕೆಂಪು ಮತ್ತು ಅರೆ ಬಿಳಿ ಬಣ್ಣದ ದೇವಾಲಯ ಹಿಂದೂಗಳ ಒಂದು ಪವಿತ್ರ ಸ್ಥಳ ದಕ್ಷಿಣೇಶ್ವರದ ಕಾಳಿ ಮಂದಿರ. ರಾಶ್‌ಮೊನಿಯ ಒಂದು ಕನಸಿನಿಂದಲೇ ಇದರ ಹುಟ್ಟು. ವಾರಣಾಸಿಗೆ ಒಮ್ಮೆ ಯಾತ್ರೆ ಹೋಗುವಾಗ ಕಾಳಿಯೇ ರಾಶ್‌ಮೊನಿಯ ಕನಸಿನಲ್ಲಿ ಬಂದು ತನಗೊಂದು ಮಂದಿರವನ್ನು
ಹೂಗ್ಲಿಯ ದಂಡೆಯಲ್ಲಿ ನಿರ್ಮಿಸುವಂತೆ ಹೇಳಿದಳಂತೆ. ಆದರೆ ‘ಕಾಳಿ’ ಬಯಸಿದಂತೆ ಹೂಗ್ಲಿಯ ದಂಡೆಯಲ್ಲಿ ಮಂದಿರ ನಿರ್ಮಿಸುವುದು ಒಬ್ಬ ಮಹಿಳೆಗೆ, ಅದರಲ್ಲಿಯೂ ಒಬ್ಬ ಶೂದ್ರ ವಿಧವೆಗೆ ಸುಲಭವಾಗಿರಲಿಲ್ಲ. ದುಡ್ಡಿದ್ದರೆ ಸಾಲದಷ್ಟೆ!

ಸುದ್ದಿ ಹರಡುತ್ತಿದ್ದಂತೆ ರಾಶ್‌ಮೊನಿಗೆ ಯಾರೂ ಭೂಮಿ ನೀಡದಂತೆ ನಿಷೇಧ ಹೇರಲಾಯಿತು. ರಾಶ್‌ಮೊನಿ, ಪಶ್ಚಿಮ ದಂಡೆಯಲ್ಲಿ ಭೂಮಿ ಸಿಗದಾಗ ಪೂರ್ವ ದಂಡೆಯಲ್ಲಿ ಹುಡುಕಲಾರಂಭಿಸಿದಳು. ಕೊನೆಗೆ ರಾಶ್‌ಮೊನಿಗೆ ಸಿಕ್ಕ 33 ಎಕರೆಗಳ ಭೂಮಿ ಸರ್ವ ಧರ್ಮ ಸಮನ್ವಯದಿಂದ ಕೂಡಿತ್ತು! ಈ ಜಮೀನಿನ ಒಂದು
ಭಾಗವನ್ನು ಇಂಗ್ಲಿಷ್ ಉದ್ಯಮಿ ಪ್ರಾಟೆಸ್ಟೆಂಟ್ ಕ್ರೈಸ್ತ ಜಾನ್ ಹೆಸ್ಟಿಯ ಕುಟುಂಬದಿಂದ ರಾಶ್‌ಮೊನಿ ಕೊಂಡರೆ, ಇನ್ನೊಂದು ಭಾಗ ಮುಸಲ್ಮಾನರ ಸ್ಮಶಾನ-ಗಾಜಿಬಾಬಾ ಎಂಬ ಸಂತನ ದರ್ಗಾ ಆಗಿತ್ತು. ಮತ್ತೊಂದು ಭಾಗ ಹಿಂದೂಗಳ ಮಾವಿನ ತೋಪಾಗಿತ್ತು. ರಾಶ್‌ಮೊನಿ ದೇವಸ್ಥಾನಕ್ಕಾಗಿ ಇತಿಹಾಸವನ್ನೇನೂ
ಅಳಿಸಿ ಹಾಕಲಿಲ್ಲ. ಮೂರೂ ಭಾಗಗಳಿಗೆ ಸೇರಿದ್ದ ಕೆರೆಯನ್ನು ಪುನರುಜ್ಜೀವನಗೊಳಿಸಿ ದೇವಸ್ಥಾನದ ಒಂದೆಡೆ ಗಂಗೆ, ಇನ್ನೊಂದೆಡೆ ಗಾಜೀಪುಕುರ್ ಕೆರೆ ಬರುವಂತೆ ರೂಪಿಸಿದಳು.

ಹೆಜ್ಜೆ ಹೆಜ್ಜೆಗೂ ಅಡೆ ತಡೆ
ಮಂದಿರ ಪೂರ್ಣವಾಗುತ್ತಿದ್ದಂತೆ, ಮತ್ತೊಂದು ಅಡ್ಡಿ ಎದುರಾಯಿತು. ಕಲ್ಕತ್ತೆಯ ಅರ್ಚಕರು ಶೂದ್ರ ವಿಧವೆಯೊಬ್ಬಳಿಂದ ನಿರ್ಮಿಸಲ್ಪಟ್ಟಿದ್ದ ಮಂದಿರದಲ್ಲಿ ಪೂಜೆ ಮಾಡಲು ನಿರಾಕರಿಸಿದರು. ಬಡ ಬ್ರಾಹ್ಮಣ ವಿದ್ವಾಂಸ ರಾಮ್‌ಕುಮಾರ ಚಟ್ಟೋಪಾಧ್ಯಾಯ ರಾಶ್‌ಮೊನಿಯ ನೆರವಿಗೆ ನಿಂತ. ರಾಶ್ ಮೊನಿ ಆತನಿಗೆ ಅದನ್ನು ನೀಡಿ, ಆತನಿಂದ ವಿಗ್ರಹ ಪ್ರತಿಷ್ಠಾಪನೆ ಮಾಡಿಸಿದಳು. ರಾಮ್‌ಕುಮಾರನ ತಮ್ಮ ಗದಾಧರ (ನಂತರದ ರಾಮಕೃಷ್ಣ ಪರಮಹಂಸ) ಮೊದಲು ರಾಶ್‌ಮೊನಿಯ ಬಳಿ ಕೆಲಸ ಮಾಡಲಾಗಲಿ, ಆಕೆ ನಿರ್ಮಿಸಿದ ದೇವಸ್ಥಾನದ ಪ್ರಸಾದ ತಿನ್ನಲಾಗಲಿ ನಿರಾಕರಿಸಿದನಂತೆ. ಆದರೆ ನಂತರದ ದಿನಗಳಲ್ಲಿ ಆಕೆಯ ಅಧ್ಯಾತ್ಮದ ಗುರುವಾಗಿ, ಜಾತಿ-ಧರ್ಮಗಳನ್ನು ಮೀರಿದ ಎಲ್ಲರನ್ನೂ ಒಳಗೊಳ್ಳುವ ವಿಶಾಲ ಹಿಂದೂ ಧರ್ಮದ ತತ್ವಜ್ಞಾನಿಯಾಗಿ ‘ರಾಮಕೃಷ್ಣ ಪರಮಹಂಸ’ ನಾದರು.

ಕೆಂಪು ಬೆಳಕಿನಲ್ಲಿ ಮಂದಿರ
ಇಂದು ದಕ್ಷಿಣೇಶ್ವರದ ದೇವಸ್ಥಾನದ ಘಟ್ಟಗಳು ಜನರಿಂದ ತುಂಬಿ ತುಳುಕುತ್ತವೆ. ಸಂಜೆಯ, ಬೇಗ ಕತ್ತಲಾಗುವ ಕಲ್ಕತ್ತೆಯ ಕೆಂಪು ಬೆಳಕಿನಲ್ಲಿ ಇಡೀ ಮಂದಿರ ಬಂಗಾಲಿ ಭಜನೆಯೊಂದಿಗೆ ತುಂಬಿಕೊಳ್ಳುತ್ತದೆ. ಕೆಂಪು ದುಂಡು ಕುಂಕುಮ, ಹತ್ತಿಯ ಸೀರೆ, ಅಲ್ತಾಗಳಿಂದ ಅಲಂಕೃತರಾದ ಬಂಗಾಲಿ ಮಹಿಳೆಯರು, ಬಾಯಿ ತುಂಬ ಪಾನ್ ತುಂಬಿಕೊಂಡ ಪುರುಷರು ಕಾಲಿ ಮಂದಿರಕ್ಕೂ, ಸುತ್ತ ಇರುವ ಈಶ್ವರ ಲಿಂಗಗಳಿಗೂ ನಮಿಸುವುದನ್ನು ನೋಡಲು ಸಂತಸದೊಂದಿಗೆ, ಜನ ಜಂಗುಳಿಯ ಮಧ್ಯೆ ಗಾಬರಿಯೂ ಆಗಬಹುದು. ಆದರೆ ಹೊರಗಿರುವ ರಾಣಿ ರಾಶ್ ಮೊನಿಯ ಪುಟ್ಟ ಮಂದಿರದ ಮುಂದೆ ನಿಲ್ಲುವವರು, ಕೈಮುಗಿಯುವವರು ಕಡಿಮೆ.

ಬಂಗಾಲಿ ಸಮಾಜ ಸುಧಾರಕರನ್ನು ಹೆಸರಿಸಿ ಎಂದರೆ ರಾಜಾರಾಂ ಮೋಹನ್‌ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ರಾಮಕೃಷ್ಣ ಪರಮಹಂಸ, ವಿವೇಕಾ ನಂದರ ಹೆಸರು ಥಟ್ಟನೆ ಹೊಳೆಯುತ್ತವೆ. ದೇವಿಯಾಗಿದ್ದಕ್ಕೆ ‘ಕಾಳಿ’ಯ ಹೆಸರು ಬಿಟ್ಟರೆ ಬಂಗಾಲದ ಬೇರೆ ಮಹಿಳೆಯರ ಹೆಸರು ಥಟ್ಟೆಂದು ಬಾಯಲ್ಲಿ ಬರುವುದು ಕಡಿಮೆ. ಆದರೆ ಜನಪದರ ನಡುವೆ ರಾಣಿ ರಾಶ್ ಮೊನಿಗೆ ಅಪಾರ ಗೌರವ ಇಂದೂ ಇದೆ. ಹಾಗಾಗಿಯೇ ‘ಗಂಗಾಮಾತಾ’ ಎಂದಂತೆ ‘ರಾಣಿ ರಾಶ್‌ಮೊನಿ’ ಎಂಬ ಹೆಸರು ಬಂಗಾಲಿಗಳ ಬಾಯಲ್ಲಿ ನಲಿದಾಡುತ್ತದೆ. ಗಂಗಾ ಜಲ-ರಾಣಿ ರಾಶ್‌ಮೊನಿ ಜಲ್ ಎರಡೂ ಒಂದಾಗುತ್ತವೆ.

ಶೂದ್ರ ಮಹಿಳೆ- ಪವಿತ್ರ ನದಿ ಒಂದಾಗುವಂತೆ! ಈಗ ಕಲ್ಕತ್ತಾದ ಗಲ್ಲಿಗಲ್ಲಿಗಳಲ್ಲಿ ಶಕ್ತಿಯ ಆರಾಧನೆ ಮೊದಲಾಗಿದೆ. ಜಾತಿ-ಧರ್ಮಗಳನ್ನು ಮೀರಿ ಮಹಿಳೆಯ ರೆಲ್ಲರಲ್ಲಿ ಇರುವ ಶಕ್ತಿಯ ಕಥೆಯನ್ನೇ ರಾಣಿ ರಾಶ್ ಮೊನಿಯ ಜೀವನಗಾಥೆಯೂ ಬಿಂಬಿಸುತ್ತದೆ, ಅಲ್ಲವೇ!