Sunday, 13th October 2024

ಏಕದಿನ ಸರಣಿ ಗೆದ್ದ ಹರ್ಮನ್ ಪ್ರೀತ್ ಕೌರ್ ಪಡೆ

ಪಲ್ಲೆಕೆಲೆ: ಶ್ರಿಲಂಕಾ ವಿರುದ್ಧ ಭಾರತ ವನಿತೆಯರ ತಂಡ ಏಕದಿನ ಸರಣಿ ಯನ್ನೂ ಗೆದ್ದುಕೊಂಡಿದೆ.

ಸೋಮವಾರ ಪಲ್ಲೆಕೆಲೆಯಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ಪಡೆ 10 ವಿಕೆಟ್ ಅಂತರದಿಂದ ಭರ್ಜರಿಯಾಗಿ ಜಯಿಸಿದೆ.

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡಕ್ಕೆ ವೇಗಿ ಗಳಾದ ರೇಣುಕಾ ಸಿಂಗ್ ಮತ್ತು ಮೇಘನಾ ಸಿಂಗ್ ಕಾಡಿದರು. ರೇಣುಕಾ ನಾಲ್ಕು ವಿಕೆಟ್ ಪಡೆದರೆ, ಮೇಘನಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಿತ್ತರು. ಲಂಕಾ ಪರ ಎಮಾ ಕಾಂಚನಾ ಅಜೇಯ 47 ರನ್, ನೀಲಾಕ್ಷಿ ಡಿಸಿಲ್ವ 32 ರನ್, ನಾಯಕಿ ಅತ್ತಪತ್ತು 27 ರನ್, ಅನುಶ್ಕಾ ಸಂಜಿವನಿ 25 ರನ್ ಗಳಿಸಿದರು.

ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ ನೆರವಾದರು. ಇಬ್ಬರೂ ಅಜೇಯ ಅರ್ಧ ಶತಕ ಬಾರಿಸಿದರು. ಮಂಧನಾ 83 ಎಸೆತಗಳಿಂದ 94 ರನ್ ಗಳಿಸಿದರೆ, ಶಫಾಲಿ ವರ್ಮಾ 71 ಎಸತೆಗಳಿಂದ 71 ರನ್ ಬಾರಿಸಿದರು. ಭಾರತ 25.4 ಓವರ್ ಗಳಲ್ಲಿ ಗುರಿ ತಲುಪಿತು.

ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿ ಮೊದಲ ಏಕದಿನ ಸರಣಿಯಲ್ಲೇ ಯಶಸ್ವಿಯಾದರು. ನಾಲ್ಕು ವಿಕೆಟ್ ಕಿತ್ತ ರೇಣುಕಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಲಂಕಾ 50 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 173 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಭಾರತ ವಿಕೆಟ್ ನಷ್ಟವಿಲ್ಲದೆ ಜಯಿಸಿದೆ.