ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vaibhav Suryavanshi: ಪೋರನಲ್ಲ, ದಾಖಲೆ ಶಿಖರವೇರಿದ ಪ್ರಖರ ಸೂರ್ಯ

ವೈಭವ್ ಅವರ ಕ್ರಿಕೆಟ್ ಜೀವನದ ಪ್ರಮುಖ ಘಟ್ಟವೊಂದು ಆರಂಭವಾಗಿದ್ದು, ಇವರ ಸಾಧನೆಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌, ವಿಂಡೀಸ್‌ನ ಬ್ರಿಯಾನ್‌ ಲಾರಾ ಸೇರಿ ಅನೇಕರು ಸಲಾಂ ಹೊಡೆದಿದ್ದಾರೆ. ಈಗಾಗಲೇ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಮ್‌ ಇಂಡಿಯಾದ ಮುಂದಿನ ರನ್‌ ಮಷೀನ್‌ ಎಂದು ಬಿಂಬಿಸಲಾಗಿದೆ.

ಪೋರನಲ್ಲ, ದಾಖಲೆ ಶಿಖರವೇರಿದ ಪ್ರಖರ ಸೂರ್ಯ

Profile Abhilash BC Apr 29, 2025 1:19 PM

ಬೆಂಗಳೂರು: ಸದ್ಯ ಕ್ರಿಕೆಟ್‌ ಲೋಕದಲ್ಲಿ ಕೇಳಿ ಬರುತ್ತಿರುವ ಹೆಸರೆಂದರೆ ಅದು, 14 ವರ್ಷದ ವೈಭವ್‌ ಸೂರ್ಯವಂಶಿ. ರಾಜಸ್ಥಾನ್‌ ರಾಯಲ್ಸ್‌ ತಂಡದ ಈ ಯುವ ಕ್ರಿಕೆಟಿಗ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡುವ ಮೂಲಕ ಕ್ರಿಕೆಟ್‌ ದಿಗ್ಗಜರನ್ನೇ ಬೆರಗಾಗುವಂತೆ ಮಾಡಿದ್ದಾನೆ. ಸೋಮವಾರ ಪಿಂಕ್‌ ಸಿಟಿ ಜೈಪುರದಲ್ಲಿ ನಡೆದಿದ್ದ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ದಂಡಿಸಿ ಕೇವಲ 35 ಎಸೆತಗಳಲ್ಲೇ ಶತಕ ಬಾರಿಸಿ ಮೆರೆದಾಡಿದ್ದಾನೆ. ಜತೆಗೆ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ. ಅಲ್ಲದೆ ಐಪಿಎಲ್‌ನಲ್ಲಿ 2ನೇ ಅತಿ ವೇಗದ ಸೆಂಚುರಿ ದಾಖಲೆಯನ್ನೂ ಬರೆದಿದ್ದಾನೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ‘ಪೋಸ್ಟರ್ ಬಾಯ್’ ಆಗಿರುವ ಸೂರ್ಯವಂಶಿಯ ಕ್ರಿಕೆಟ್‌ ಸಾಧನೆಯ ಇಣುಕು ನೋಟ ಇಲ್ಲಿದೆ.

ತಂದೆಯ ತ್ಯಾಗ ಅಪಾರ...

ಸದಾ ವಿವಾದ, ಗೊಂದಲ ಮತ್ತು ಅವ್ಯವಸ್ಥೆಗಳಿಂದಲೇ ಸುದ್ದಿಯಾಗುವ ಬಿಹಾರದ ಕ್ರಿಕೆಟ್ ಆಡಳಿತದಲ್ಲಿ ಆಟಗಾರರು ಬೆಳೆಯುವುದು ಅಷ್ಟು ಸುಲಭವಲ್ಲ. ಅಂತಹ ವ್ಯವಸ್ಥೆಯಲ್ಲಿ ವೈಭವ್‌ ಸೂರ್ಯವಂಶಿ ಈ ಹಂತಕ್ಕೆ ಬರಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಅವರ ಭವಿಷ್ಯ ರೂಪಿಸಲು ತಂದೆ ಸಂಜೀವ್ ಸೂರ್ಯವಂಶಿ ಅವರ ತ್ಯಾಗ ಕೂಡ ದೊಡ್ಡದು.

ಎಂಟನೇ ವಯಸ್ಸಿಗೆ ಕ್ರಿಕೆಟ್ ಆಡಲು ಶುರು ಮಾಡಿದ ವೈಭವ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ತಂದೆಯೇ. ಎಸೆತದ ವೇಗವನ್ನು ಗುರುತಿಸುವ ವೈಭವ್ ಅವರ ಚುರುಕಿನ ದೃಷ್ಟಿ, ಅದರ ಜತೆಗೆ ವೇಗವಾಗಿ ಚಲಿಸುತ್ತಿದ್ದ ಕೈಗಳು, ಬ್ಯಾಟ್‌ ಗ್ರಿಪ್‌ ಎಲ್ಲವೂ ವಿಶೇಷವೇ ಆಗಿದ್ದವು. ಮಗನ ಈ ವಿಶೇಷ ಶಕ್ತಿಯನ್ನು ಮನಗಂಡ ತಂದೆ ಸಂಜೀವ್ ತಡ ಮಾಡದೆ ಸಮಸ್ತಿಪುರದಲ್ಲಿದ್ದ ಕೋಚ್ ಬ್ರಜೇಶ್ ಝಾ ಅವರ ಅಕಾಡೆಮಿಗೆ ಸೇರಿಸಿದರು. ಅದು ವೈಭವ್ ಜೀವನಕ್ಕೆ ಸಿಕ್ಕ ಮಹತ್ವದ ತಿರುವು.



ಮಗನ ಕ್ರಿಕೆಟ್‌ ಭವಿಷ್ಯಕ್ಕೆ ಜಮೀನು ಮಾರಾಟ

ಮಗನ ಕ್ರಿಕೆಟ್ ತರಬೇತಿಯ ಖರ್ಚು ಮತ್ತು ಕಟುಂಬ ನಿಭಾಯಿಸುವುದು ತಂದೆಗೆ ಕಷ್ಟವಾಗಿತ್ತು. ಈ ವೇಳೆ ತಮ್ಮ ಹಳ್ಳಿಯಲ್ಲಿದ್ದ ಕೃಷಿ ಭೂಮಿಯನ್ನು ಹಿಂದೆಮುಂದೆ ಯೋಚಿಸದೇ ಸಂಜೀವ್‌ ಮಾರಿಬಿಟ್ಟರು. ಅದರಿಂದ ಬಂದ ದುಡ್ಡನ್ನು ಮಗನ ಕ್ರಿಕೆಟ್ ಕಲಿಕೆಗೆ ಹಾಕಿದರು. ಈ ಮೂಲಕ ಮಗನ ಕ್ರಿಕೆಟ್‌ಗೆ ಬೆನ್ನೆಲುಬಾಗಿ ನಿಂತರು. ಬಾಲ್ಯದಿಂದಲೂ ಕ್ರಿಕೆಟ್‌ಪ್ರೇಮಿಯಾಗಿದ್ದ ಸಂಜೀವ್ ಬಡತನದ ಕಾರಣಕ್ಕೆ ಆಟಗಾರನಾಗಿ ಬೆಳೆಯಲಿಲ್ಲ. ತಮ್ಮ ಕನಸನ್ನು ಮಗ ಈಡೇರಿಸುವ ಭರವಸೆಯೊಂದಿಗೆ ಬಹಳಷ್ಟು ಕಷ್ಟ ಅನುಭವಿಸಿದರು.

ಅಪ್ಪನ ಶ್ರಮ ವ್ಯರ್ಥವಾಗಲು ಬಿಡದ ಮಗ

ತನ್ನನ್ನು ಕ್ರಿಕೆಟಿಗನಾಗಿಸಲು ತಂದೆ ಪಟ್ಟ ಶ್ರಮವನ್ನು ವೈಭವ್‌ ಸೂರ್ಯವಂಶಿ ವ್ಯರ್ಥವಾಗಲು ಬಿಡಲಿಲ್ಲ. 12ರ ಹರೆಯದಲ್ಲೇ ಬಿಹಾರ ಪರ ರಣಜಿ ಆಡಿದ್ದರು. ಆಸ್ಟ್ರೇಲಿಯ ಎದುರಿನ ಅಂಡರ್‌-19 ಟೆಸ್ಟ್‌ನಲ್ಲಿ 62 ಎಸೆತ ಗಳಿಂದ ಸೆಂಚುರಿ ಬಾರಿಸಿ ಭಾರತೀಯ ದಾಖಲೆ ಸ್ಥಾಪಿಸಿದ್ದರು. ಇದೆಲ್ಲವನ್ನು ಸೂಕ್ಷವಾಗಿ ಗಮನಿಸಿದ ದಿಗ್ಗಜ ಕ್ರಿಕೆಟಿಗ, ರಾಜಸ್ಥಾನ ರಾಯಲ್ಸ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಪಟ್ಟು ಬಿಡದೆ 1.1 ಕೋಟಿ ಕೊಟ್ಟು ತಂಡಕ್ಕೆ ಖರೀದಿಸಿದ್ದರು. ಇದೀಗ ಸೂರ್ಯವಂಶಿ ವೀಲ್‌ ಚೇರ್‌ನಲ್ಲಿದ್ದ ದ್ರಾವಿಡ್‌ ಅವರನ್ನೇ ಎದ್ದು ನಿಂತು ಸಂಭ್ರಮಿಸುವಲ್ಲಿ ಯಶಸ್ಸು ಕಂಡಿದ್ದಾರೆ.



ವಿವಾದವೂ ಕೇಳಿ ಬಂದಿತ್ತು!

ವೈಭವ್‌ ಸೂರ್ಯವಂಶಿ ವಯಸ್ಸು ಕುರಿತ ವಿವಾದವೂ ಕೇಳಿ ಬಂದಿತ್ತು. ಇದಕ್ಕೆ ವೈಭವ್ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ. ಈ ವೇಳೆ ತಂದೆ ಎಲ್ಲ ದಾಖಲೆಗಳ ಮೂಲಕ ಸ್ಪಷ್ಟಣೆ ನೀಡಿ ‘ಎಂಟನೇ ವಯಸ್ಸಿಗೇ ಮಗನ ಬೋನ್ ಟೆಸ್ಟ್ (ಎಲುಬು ಸಾಂದ್ರತೆ ಪರೀಕ್ಷೆ) ಆಗಿದೆ. ವಯಸ್ಸು ಸರಿಯಾಗಿದೆ. ಯಾವುದೇ ಮೋಸ ಮಾಡಿಲ್ಲ. ಎಲ್ಲ ದಾಖಲೆಗಳೂ ಇವೆ’ ಎಂದು ಹೇಳಿ ವಿವಾದವನ್ನು ತಣ್ಣಗಾಗಿಸಿದ್ದರು.

ಇದನ್ನೂ ಓದಿ IPL 2025: ಸೂರ್ಯವಂಶಿ ಶತಕ ಕಂಡು ವೀಲ್‌ ಚೇರ್‌ನಿಂದ ಎದ್ದು ಸಂಭ್ರಮಿಸಿದ ದ್ರಾವಿಡ್‌

ವೈಭವ್ ಅವರ ಕ್ರಿಕೆಟ್ ಜೀವನದ ಪ್ರಮುಖ ಘಟ್ಟವೊಂದು ಆರಂಭವಾಗಿದ್ದು, ಇವರ ಸಾಧನೆಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌, ವಿಂಡೀಸ್‌ನ ಬ್ರಿಯಾನ್‌ ಲಾರಾ ಸೇರಿ ಅನೇಕರು ಸಲಾಂ ಹೊಡೆದಿದ್ದಾರೆ. ಈಗಾಗಲೇ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಮ್‌ ಇಂಡಿಯಾದ ಮುಂದಿನ ರನ್‌ ಮಷೀನ್‌ ಎಂದು ಬಿಂಬಿಸಲಾಗಿದೆ. ಸಮಯ ಮತ್ತು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಮುಂದೊಂದು ದಿನ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಎಲ್ಲ ಸಾಮರ್ಥ್ಯ ಇವರಲ್ಲಿದೆ.