Friday, 13th December 2024

ಮಹಿಳಾ ಬ್ಯಾಡ್ಮಿಂಟನ್​: ಮಂಗೋಲಿಯಾವನ್ನು ಸೋಲಿಸಿದ ಭಾರತ

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನ ಟೀಮ್ ಈವೆಂಟ್​ನಲ್ಲಿ ಭಾರತ ಮಹಿಳಾ ಬ್ಯಾಡ್ಮಿಂ ಟನ್ ತಂಡವು ಮಂಗೋಲಿಯಾವನ್ನು 3-0 ಗೋಲುಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದೆ.

ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತ ತಂಡವು ಪ್ರಯಾಸ ಪಡದೇ ಪ್ರಾಬಲ್ಯ ಸಾಧಿಸಿ, ಅನಾಯಾಸವಾಗಿ ಜಯ ಸಾಧಿಸಿತು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಆರಂಭಿಕ ಪಂದ್ಯವನ್ನು ಆಡಿದರು. 21-3, 21-3 ನೇರ ಸೆಟ್​ಗಳ ಮೂಲಕ 20 ನಿಮಿಷಗಳಲ್ಲಿ ಮಯಾಗ್‌ ಮಾರ್ಟ್‌ ಸೆರೆನ್ ಗನ್‌ಬಾಟರ್ ವಿರುದ್ಧ ವಿಜಯ ಸಾಧಿಸಿದ್ದಾರೆ. ಸಿಂಧು ಪಾಯಿಂಟ್‌ ಗಳನ್ನು ಗಳಿಸಲು ಕಷ್ಟಪಡಲಿಲ್ಲ. ಪ್ರತಿ ಸರ್ವ್‌ನಲ್ಲಿ ಪಾಯಿಂಟ್‌ಗಳನ್ನು ಪಡೆದು, ಎದುರಾಳಿ ಯನ್ನು ಅನಾಯಾಸವಾಗಿ ಸೋಲಿಸಿದರು. ಸಿಂಧು ಕ್ವಾರ್ಟರ್‌ ಫೈನಲ್‌ನಲ್ಲಿ ಪೋರ್ನ್‌ ಪಾವೀ ಚೊಚುವಾಂಗ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಎರಡನೇ ಸಿಂಗಲ್ಸ್‌ನಲ್ಲಿ ಯುವ ಆಟಗಾರ್ತಿ ಅಶ್ಮಿತಾ ಚಲಿಹಾ ಭಾರತದ ಬ್ಯಾಡ್ಮಿಂಟನ್ ತಂಡದಿಂದ ಪ್ರಬಲ ಪ್ರದರ್ಶನವನ್ನು ಮುಂದುವರೆಸಿದರು. 21 ನಿಮಿಷಗಳ ಆಟದಲ್ಲಿ 21-2, 21-3 ನೇರ ಸೆಟ್​ಗಳ ಮೂಲಕ ಖೆರ್ಲೆನ್ ದರ್ಖಾನ್‌ಬಾಟರ್ ವಿರುದ್ಧ ಗೆದ್ದರು. ಅನುಪಮಾ ಉಪಾಧ್ಯಾಯ ಮೂರನೇ ಸಿಂಗಲ್ ಆಡಿದರು.

ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಗೆ ಇಂದು ವಿಶ್ರಾಂತಿ ನೀಡಲಾಗಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಥಾಯ್ಲೆಂಡ್‌ ತಂಡವನ್ನು ಭಾರತ ಎದುರಿಸಲಿದೆ. ವಿಶ್ವ ನಂ.12 ಶ್ರೆಯಾಂಕದ ಪೋರ್ನ್‌ಪಾವೀ ಚೊಚುವಾಂಗ್ ಮತ್ತು ವಿಶ್ವ ನಂ. 17 ಶ್ರೇಯಾಂಕದ ಸುಪಾನಿಡಾ ಕಟೆಥಾಂಗ್ ಅವರ ವಿರುದ್ಧ ಕ್ವಾರ್ಟರ್​ಫೈನಲ್​​ನಲ್ಲಿ ಭಾರತ ಸೆಣಸಲಿದೆ.