Saturday, 27th April 2024

ನಕಲಿ ಬೀಜಗಳ ಬಗ್ಗೆ ರೈತರು ಎಚ್ಚರಿಕೆ ವಹಿಸಲು ಮುಖ್ಯಮಂತ್ರಿಗಳ ಮನವಿ

ಬೆಂಗಳೂರು:

ಮುಂಗಾರು ಬಿತ್ತನೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಅದರಲ್ಲೂ ಅನುಮೋದಿತ ( certified) ಬೀಜಗಳ ಮೇಲೆ ಅವಲಂಬಿತವಾಗಿರುವವರು , ನಕಲಿ ಬೀಜಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಸೂಚನೆಯ ಮೇರೆಗೆ ದಿನಾಂಕ: 24-04-2020 ರಂದು ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಕೆಲವು ಗೋಡೌನ್ ಗಳ ಮೇಲೆ ಅವರ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಮೆಕ್ಕೇಜೋಳ ಬೀಜದ ದಾಸ್ತಾನುಗಳನ್ನು ವಶಪಡಿಸಿಕೊಂಡಿದ್ದು, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನಕಲಿ ಬೀಜ ಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಶೀಥಲೀಕರಣ ಘಟಕಗಳಿಂದ ಸುಮಾರು 7026 ಕ್ವಿಂಟಾಲ್ ಮತ್ತು ಧಾರವಾಡ ಜಿಲ್ಲೆಯಲ್ಲಿ 270.60 ಕ್ವಿಂಟಾಲ್, ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ 70 ಕ್ವಿಂಟಾಲ್ ಒಟ್ಟು 7366 ಕ್ವಿಂಟಾಲ್ ಬೀಜಗಳ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೊತ್ತ ರೂ.10.00 ಕೋಟಿಗಳಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಗಾತ್ರದ ನಕಲಿ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃಷಿ ಸಚಿವರ ಶ್ರಮ ಮತ್ತು ರೈತಪರ ಕಾಳಜಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ನಕಲಿ ಬೀಜ ದಾಸ್ತಾನುದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೃಷಿ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ರಾಜ್ಯದ ಸುಮಾರು 10-11 ಜಿಲ್ಲೆಗಳಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿರುವ ರೈತರು ದೃಢೀಕರಿಸಿದ ಬೀಜಗಳ ಮೇಲೆ ಅವಲಂಬಿತರಾಗಿದ್ದಾರೆ. ರೈತರು ದೃಢೀಕರಣಗೊಂಡ ಮತ್ತು ಅನುಮೋದಿತ ಬೀಜಗಳನ್ನು ಖರೀದಿ ಮಾಡಿ, ಬಿಡಿ ಬೀಜಗಳನ್ನು ಖರೀದಿ ಮಾಡಬಾರದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಸರ್ಕಾರ ನಕಲಿ ಬೀಜ ಮತ್ತು ಕೀಟ ನಿಯಂತ್ರಕ ಔಷಧಿಗಳ ಮಾರಾಟಗಾರರ ಮಾಫಿಯಾವನ್ನು ಹತ್ತಿಕ್ಕಲು ದೃಢ ನಿರ್ಧಾರ ತೆಗೆದುಕೊಂಡಿದ್ದು, ರಾಜ್ಯದಲ್ಲಿ ನಕಲಿ ಬೀಜ ಮತ್ತು ಕೀಟ ನಿಯಂತ್ರಕ ಔಷಧಿಗಳ ಮಾರಾಟವನ್ನು ಸಂಪೂರ್ಣವಾಗಿ ಮೂಲೋಚ್ಛಾಟನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ರೈತರಿಗೆ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!