Thursday, 19th September 2024

ಆಸ್ವಾದಿಸುವವರಿಗಷ್ಟೇ ಹಾಸ್ಯ, ಕೊಂಕು ತೆಗೆಯುವವರಿಗೆ ಮಾಡುವುದೇನು ?

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 28

ರಾಜಕಾರಣಕ್ಕೆ ಹೋಗುವುದು ಸಾಧ್ಯವೇ ಇಲ್ಲ
ತಿಳಿದುಕೊಂಡವರಿಗೆ ರಾಜಕಾರಣ ಒಗ್ಗುವುದೂ ಇಲ್ಲ

ಬೆಂಗಳೂರು: ಸಾವಿರಾರು ಜನರು ನಮ್ಮ ಹಾಸ್ಯವನ್ನು ನೋಡಿ ಮೆಚ್ಚುತ್ತಾರೆ. ಆದರೆ, ಕೆಲವರು ಮಾತ್ರ ನಾವು ಮಾತನಾಡುವ ವಿಷಯದಲ್ಲಿ ಕೊಂಕು ತೆಗೆಯುತ್ತಾರೆ. ನಾವು ನಮ್ಮ ಮಾತು ಕೇಳಿ ನಗುವವರ ಬಗ್ಗೆ ಯೋಚಿಸಬೇಕೇ ಹೊರತು, ಕೊಂಕು ತೆಗೆಯುವವರ ಬಗ್ಗೆ ಅಲ್ಲ ಎಂದು ಹಾಸ್ಯ ಮಾತುಗಾರ ಹಾಗೂ ವಿಶ್ವವಾಣಿ ಅಂಕಣಕಾರ ಗಂಗಾವತಿ ಪ್ರಾಣೇಶ್ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ಕಾರ್ಯಕ್ರಮ ‘ಜೀವನದಲ್ಲಿ ಹಾಸ್ಯ‘ ಎಂಬ ಕುರಿತು ಮಾತನಾಡಿದ ಅವರು, ಹಾಸ್ಯ ಎಂಬುದು ನನ್ನ ವೃತ್ತಿ. ಆದರೆ, ಗಂಭೀರವಾಗಿ ಬರೆಯುವುದು, ಹೇಳುವುದು ನನಗೆ ಬಲು ಇಷ್ಟ. ಹೀಗಾಗಿ, ನನ್ನ ಬರವ ಣಿಗೆಯಲ್ಲಿ ನಾನು ಎಂದೂ ಹಾಸ್ಯ ತರುವುದಿಲ್ಲ. ಗಂಭೀರ ವಿಷಯಗಳ ಮೂಲಕ ಬರವಣಿಗೆ ನಡೆಸುತ್ತೇನೆ. ಹಾಸ್ಯದ ಮೂಲಕ ಜನ ನನಗೆ ಐಡೆಂಟಿಟಿ ಕೊಟ್ಟಿದ್ದಾರೆ. ನನ್ನ ಮಾತುಗಳನ್ನು ಕೇಳಿ ಗೌರವಿಸಿದ್ದಾರೆ. ಬೆಂಗಳೂರು ಜನರೂ ನನ್ನ ಮಾತನ್ನು ಮೆಚ್ಚಿಕೊಳ್ಳುತ್ತಾರೆ. ಉಳಿದಂತೆ ಕರ್ನಾಟಕದ ಎಲ್ಲ ಊರುಗಳಿಗೂ ನಾನು ಋಣಿಯಾಗಿದ್ದೇನೆ ಎಂದರು.

ಪದಪಲ್ಲಟಗಳಿಂದಲೇ ಹಾಸ್ಯ ಹುಟ್ಟುತ್ತದೆ. ಸುಂದರ ಮೂಗುಳ್ಳವಳೆ ಎಂದರೆ ಅಲ್ಲಿ ಹಾಸ್ಯವಿಲ್ಲ. ಆದರೆ, ವಿದೂಷಕ ಸುಂದರವಾದ ಒಂದೇ ಮೂಗುಳ್ಳವಳೆ ಎಂದರೆ ಹಾಸ್ಯವಾಗುತ್ತದೆ. ಒಂದೇ ಎಂಬ ಒಂದು ಶಬ್ದದಿಂದ ನಗು ಹುಟ್ಟುತ್ತದೆ. ‘ತಾರಾಬಾಯಿ ತೆರೆದಾಳ’ ಎಂಬುದನ್ನು ಕೂಡಿಸಿ ಹೇಳಿದಾಗ ‘ತಾರಾಬಾಯಿ ತೆರೆದಾಳ’ ಎಂಬ ಶಬ್ದ ಹಾಸ್ಯ ಹುಟ್ಟಿಸುತ್ತದೆ. ಹುಡುಗಿ ಅಂದ ಎಷ್ಟೊಂದು ಚಂದಾ ಅನ್ನುವುದಕ್ಕಿಂತ, ಕೈ ತೊಳೆದುಕೊಂಡು ಮುಟ್ಟಬೇಕು ಅಂತಾರೆ, ಆದ್ರೆ, ಮುಟ್ಟಿ ಕೈ ತೊಳೆದುಕೊಳ್ಳಬೇಕು ಎಂದರೆ ಎಷ್ಟು ಅಪಾರ್ಥವಾಗುತ್ತೆ ನೋಡಿ ಎಂದು ಕೇಳುಗರನ್ನು ನಗೆಗಡಲಲ್ಲಿ ತೇಲಿಸಿದರು.

ಒಬ್ಬ ದರೋಡೆಕೋರ ಹಗಲೊತ್ತು ದೊಂಬರಾಟ ನೋಡುತ್ತಿದ್ದ. ಅಲ್ಲಿನ ಹುಡುಗ ನೇರವಾದ ಗಳವನ್ನು ಕೋತಿ ಏರಿದ್ಹಾಗೆ ಏರುತ್ತಿದ್ದ. ಆ ಹುಡುಗನನ್ನು ನನಗೆ ಕೊಡಿ ಎಂದು ಪಡೆದ ದರೋಡೆಕೋರ, ತನಗೆ ಅನುಕೂಲವಾಗುತ್ತೆ ಎಂದುಕೊಂಡ. ಅರಮನೆ ಗೋಡೆ ಮೇಲೆ ಆತನನ್ನು ಏರಿಸಿ ಅರಮನೆ ವಜ್ರಾಭರಣ ತಗೊಂಡು ಬಾ ಎಂದ. ಆ ಹುಡುಗ ಡೋಲು ಬಾರಿಸು ಏರುವೆ ಅಂದ. ಡೋಲು ಬಾರಿಸಿದರೆ ನಮ್ಮ ಜೀವ ಹೋಗುತ್ತೆ ಅಂದ ಈತ. ಆ ಹುಡುಗನಿಗೆ ದೊಂಬರಾಟ ದಲ್ಲಿ ಡೋಲು ಬಾರಿಸಿದಾಗಲೇ ಗಳ ಏರಲು ಸ್ಫೂರ್ತಿ ಬರುತ್ತಿದ್ದುದ್ದು. ಹೀಗೆ, ನಮಗೆ ಚಪ್ಪಾಳೆ ಶಬ್ದ ಮತ್ತು ಮುಂದೆ ಜನ ಇದ್ದರೆ ಸ್ಫೂರ್ತಿ ಬರುತ್ತೆ. ಆದರೆ, ವಿಶ್ವವಾಣಿ ಕ್ಲಬ್ ಹೌಸ್‌ನ ಮೂಲಕ ಎಲ್ಲೆಲ್ಲೋ ಇರುವ ಜನರಿಗೆ ಹಾಸ್ಯದ ಬಗ್ಗೆ ಹೇಳಬೇಕಾಗಿದೆ. ಇದು ಅನಿವಾರ್ಯ ಕೂಡ ಎಂದರು.

ಬರವಣಿಗೆಗೆ ಭಟ್ಟರೇ ಸ್ಫೂರ್ತಿ: ನನ್ನನ್ನು ಲೇಖಕನ್ನಾಗಿ ಮಾಡಿದವರು ವಿಶ್ವೇಶ್ವರ ಭಟ್ ಅವರು. ಮೊದಲು ನನಗೆ ಬರೆಯಲು ಕೇಳಿದಾಗ ನಾನು ಗಂಟೆಗಟ್ಟಲೇ ಮಾತಾಡ್ತೀನಿ, ಆದರೆ, ಬರೆಯುವುದು ಕಷ್ಟ ಎಂದೆ. ಅದಕ್ಕವರು ನೀವು ಮಾತನ್ನಾಡುವುದನ್ನೇ ಬರೆಯಿರಿ ಎಂದರು. ಎರಡು ವರ್ಷಗಳಿಂದ ಬರೆಯುತ್ತಿದ್ದು, ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಅಂಕಣಗಳು ಐದು ಪುಸ್ತಕಗಳಾಗಿವೆ. ನನ್ನ ಮೂವತ್ತು ಲೇಖನಗಳಾಗುತ್ತಿದ್ದಂತೆ ಜಮೀಲ್ ಅವರು ಪುಸ್ತಕ ರೆಡಿ
ಮಾಡಿರುತ್ತಾರೆ. ಆ ಪುಸ್ತಕಗಳು ರಾಜ್ಯಾ ದ್ಯಂತ ಜನಪ್ರಿಯವೂ ಆಗುತ್ತಿವೆ. ಹೀಗಾಗಿ, ನನಗೆ ಮಾತಿನ ಜಾಡು ತೋರಿಸಿದ್ದು ನನ್ನ ಗುರುಗಳಾದ ಬೀಚಿ ಅವರು, ಬರವಣಿಗೆಯ ಜಾಡು ತೋರಿಸಿದ್ದು ವಿಶ್ವೇಶ್ವರ ಭಟ್ ಅವರು ಎಂದರೆ ತಪ್ಪಾಗುವುದಿಲ್ಲ ಎಂದು ತಿಳಿಸಿದರು.

ಬೀಚಿ ನನ್ನ ಭಾವಕೋಶದ ಗುರು: ನಾನು ಇಂದು ಏನಾಗಿದ್ದೇನೋ ಅದಕ್ಕೆಲ್ಲ ಬೀಚಿ ಅವರ ಬರಹಗಳೇ ಕಾರಣ ಎಂಬುದು ಗಂಗಾವತಿ ಪ್ರಾಣೇಶ್ ಅವರ ಅಭಿಮತ. ಅವರ ಬರಹಗಳನ್ನು ಓದಿ ಅದನ್ನು ಜನರಿಗೆ ಹೇಳುವುದನ್ನೇ ರೂಢಿ ಮಾಡಿಕೊಂಡೆ. ಜನರು ನಕ್ಕರು, ನನ್ನನ್ನು ಹರಸಿದರು. ಅವರ ಜೋಕ್‌ಗಳನ್ನೆಲ್ಲ ಬರೆದಿಟ್ಟುಕೊಂಡಿದ್ದೆ. ಅದೇ ಇಂದು ನನಗೆ ಅನ್ನ ನೀಡುತ್ತಿದೆ ಎಂದರು. ಕೋರ್ಟಿನಲ್ಲಿ ಜಡ್ಜ್ ಹೇಳಿದ, ಸುಬ್ಬಣ್ಣ ಸುವರ್ಣಮ್ಮನ ಮಗ ಎಂದು ಕರೆ ಎಂದರು. ಆಗ ಅಲ್ಲಿ ಇದ್ದ ಮುಸ್ಲಿಂ ಕಾರಕೂನ ’ಸುಬ್ಬಣ್ಣ ಸುವರ್ ನನ್  ಮಗ’ ಎಂದು ಕೂಗಿದ ಎಂಬ ಬೀಚಿಯವರ ಹಾಸ್ಯ ಚಟಾಕಿಯೊಂದನ್ನು ಹಾರಿಸಿದರು.

ಬೀಚಿಯವರ ಅನರ್ಥ ಕೋಶ: ಬೀಚಿ ಅವರ ಅನರ್ಥ ಕೋಶದ ಬಗ್ಗೆ ಮಾತನಾಡಿ, ನೌಕರಿಗೆ ಅರ್ಜಿ ಹಾಕಿ ಕಾಯುವನೇ ಅರ್ಜುನ, ಉಡುಪಿ- ಉಡುಪು ಧರಿಸು ವಳು, ಕಾಂತಾ ಸಮ್ಮಿತ ಎಂದರೆ ಕಿವಿ ಹಿಂಡಿ ಹೇಳುವುದು, ಗುರು ಎಂದರೆ ಕಳ್ಳನಾಗಿ ಕತ್ತಲಲ್ಲಿ ಮಲಗಬೇಡ, ಮಠದಲ್ಲಿ ಮಲಗು, ಪಂಚಾಕ್ಷರಿ ಎಂದರೆ ಏನೂ ಗೊತ್ತಿಲ್ಲ, ಷಡಕ್ಷರಿ ಎಂದರೆ ಏನೇನೂ ಗೊತ್ತಿಲ್ಲ, ಭಸ್ಮಾಸುರ ಎಂದರೆ ಸಿಗರೇಟ್ ಸೇದುವವ. ಅಕ್ಕನ ಬಳಗ ಎಂದರೆ ಅಕ್ಕನ ಬಳಗ ಇರುವಲ್ಲಿ ಭಾವನ ಬಳಗ ಹುಡುಕುತ್ತಾ ಬರುತ್ತದೆ, ಇದರ ಪರಿಣಾಮವೇ ಶಿಶುವಿಹಾರ.

ಅರಮನೆ ಎಂದರೆ ಅರ್ಧ ಕಟ್ಟಿದ ಮನೆ, ದೇವರ ಬೀಡಿ ಎಂದರೆ ಊದುಗಡ್ಡಿ, ಎಲೆಮರೆ ಪ್ರತಿಭೆ ಎಂದರೆ ಇಸ್ವೀಟ್ ಆಡುವವನು, ಡಾಕ್ಟರ್ ಎಂದರೆ ಒಂದೇ ಬಾರಿಗೆ ನಾಲ್ಕು ಜನರಿಗೆ ಕೆಲಸ ಕೊಡುವ ವ್ಯಕ್ತಿ ಎಂಬ ಅಪಾರ್ಥಗಳ ಸಂಗ್ರಹದ ಬಗ್ಗೆ ಸಾರಸ್ಯಕರವಾಗಿ ಹೇಳಿದರು.

ಪ್ರಾಣೇಶ್ ಪಂಚ್
? ನಗುವಿಗೆ ವೈಜ್ಞಾನಿಕ ಕಾರಣವಿದೆ
? ರಾಜ್ ಕುಮಾರ್ ಮನಸು ಮಾಡಿದರೆ ಏನಾದರೂ ಆಗಬಹುದಿತ್ತು
? ನಾವು ಯಾವ್ಯಾವ ರಂಗದಲ್ಲಿದ್ದೆವೋ ಅಲ್ಲಿಯೇ ಸಂಶೋಧನೆ, ಪ್ರಯೋಗ ಮಾಡಬೇಕು
? ಮಕ್ಕಳಿಗೆ ಕನ್ನಡ ಭಾಷೆಯ ಸ್ವಾರಸ್ಯ ಗೊತ್ತಾಗಲು ಹಾಸ್ಯದ ಮೂಲಕ ತಿಳಿಸಬೇಕು
? ಸಾಹಿತ್ಯವೇ ಮನುಷ್ಯನ ಜೀವನ ಬದಲಿಸುವ ವಸ್ತು.

***

ಪ್ರಾಣೇಶ್ ದೊಡ್ಡ ಸ್ಟಾರ್ ಹಾಗೂ ಸೆಲೆಬ್ರೆಟಿ. ಇವರ ಕಾರ್ಯಕ್ರಮಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಬರುತ್ತಾರೆ. ನಟ-ನಟಿಯರ ಕಾರ್ಯಕ್ರಮಕ್ಕೂ ಅಷ್ಟು
ಮಂದಿ ಬರಲ್ಲ. ಬದುಕಿನ ನೀತಿ, ಜೀವನ ವಿಧಾನ, ಆಧುನಿಕ ಬದುಕಿನ ವೈರುಧ್ಯ ಅವರ ಹಾಸ್ಯಗಳ ಪ್ರಧಾನ ವಸ್ತು. ಯಾರನ್ನೂ ಗೇಲಿ ಮಾಡಲ್ಲ. ಅವರ
ಹಾಸ್ಯಗಳು ಪ್ಯೂರ್ ವೆಜ್ ಜೋಕ್ಸ್.
– ವಿಶ್ವೇಶ್ವರ ಭಟ್
ವಿಶ್ವವಾಣಿ ಪ್ರಧಾನ
ಸಂಪಾದಕರು

Leave a Reply

Your email address will not be published. Required fields are marked *