Saturday, 14th December 2024

ರಾಮಕೃಷ್ಣ ಸೇವಾಶ್ರಮ ವತಿಯಿಂದ ವಿಶ್ವ ಪರಿಸರ ದಿನಾಚಾರಣೆ

ಪಾವಗಡ : ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಇಂದು ವಿಶ್ವ ಪರಿಸರ ದಿನಾಚಾರಣೆಯನ್ನು ಪ್ರಗತಿಪರ ರೈತರೊಬ್ಬರ ಜಮೀನಿ ನಲ್ಲಿ ನೂರಾರು ಬೇವಿನ ಮರ, ನೇರಳೆ ಮರ, ಹೊಂಗೆ ಮರಗಳನ್ನು ನೆಡುವಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಗತಿಪರ ರೈತರಾದ ಈರಣ್ಣ ನವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಸ್ಯಶಾಮಲೆಯ ಮರುಸೃಷ್ಟಿಯನ್ನು ಮಾಡುವಂತಹ ಅತ್ಯದ್ಭುತವಾದ ಮತ್ತು ಜಗತ್ತಿನ ಹಿತದೃಷ್ಟಿಗೆ ಈ ವಿಶ್ವಪರಿಸರ ದಿನಾಚಾರಣೆಯನ್ನು ಸಸಿಗಳನ್ನು ನೆಡುವ ಕಾರ್ಯಕ್ರಮ ನೆರವೇರಿತು. ತುಮಕೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿಗಳಾದ ಬಾಲರಾಜ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ವಿಜಯಕುಮಾರ್, ಎ.ಸ್.ಎಫ್., ಮಧುಗಿರಿ ಉಪವಿಭಾಗ,  ಶಿವಪ್ಪ ಹೊಸಮನಿ, ತಾಲ್ಲೂಕು ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ, ರಂಗನಾಥ್, ನರೇಗಾ ಯೋಜನೆಯ ತಾಲ್ಲೂಕು ಅಧಿಕಾರಿ, ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ, ದೇಶಪಾಂಡೆ ಅಭಿಯಂತರರು, ರೈತರಾದ  ಕೆ.ವೆಂಕಟೇಶ್, ಕೆಂಪಣ್ಣ, ನರಸಿಂಹಪ್ಪ, ದೊಡ್ಡತಿಮ್ಮಯ್ಯ, ತಿಗಳಪ್ಪ ಮತ್ತಿತರರ ಸಮ್ಮುಖದಲ್ಲಿ ಅರ್ಥಗರ್ಭಿತ ಕಾರ್ಯಕ್ರಮ ನೆರವೇರಿತು. ಪೂಜ್ಯ ಸ್ವಾಮಿ ಜಪಾನಂದಜೀ ರವರು ಈ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.
ಇದೇ ಸಂದರ್ಭದಲ್ಲಿ ಇಂದು ಮನುಷ್ಯ ತನ್ನ ಸ್ವಾರ್ಥಕ್ಕೋಸ್ಕರ ಇಡೀ ಪ್ರಕೃತಿಯನ್ನೇ ಸರ್ವನಾಶದತ್ತ ದೂಡಿದ್ದು ಉಸಿರಾಟಕ್ಕೂ ಕೋಟಿಗಟ್ಟಲೆ ಹಣ ಸುರಿಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿರುವುದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಕೃತಿ ಮಾತೆಯ ಕೊಲೆ ಎನ್ನಬಹುದು.
ಈ ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಮನುಷ್ಯ ಸ್ವಲ್ಪ ಸಿಂಹಾವಲೋಕನ ಮಾಡಿಕೊಂಡಾಗ ಗೊತ್ತಾಗುತ್ತದೆ ತಾನೇ ತೋಡಿದ ವಿಷ ಕೂಪದಲ್ಲಿ ಬಿದ್ದು ತನ್ನ ಅಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳುವಂತಹ ಸ್ವಯಂಕೃತ ಅಪರಾಧವನ್ನು ಮಾಡು ತ್ತಲೇ ಬರುತ್ತಿದ್ದಾನೆ. ಹಾಗಾಗಿ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಅರ್ಥಗರ್ಭಿತವಾದ ಪರಿಸರ ದಿನಾಚಾರಣೆ ಆಚರಿಸಿದಂತೆ ಆಯಿತು.
ಪೂಜ್ಯ ಸ್ವಾಮೀಜಿಯವರ ಪ್ರಕಾರ ನಮ್ಮ ಸಂಸ್ಕೃತಿಯಲ್ಲಿ, ಪರಂಪರೆಯಲ್ಲಿ ಸಹಸ್ರಾರು ವರ್ಷಗಳಿಂದ ನಿರಂತರವಾಗಿ ಪ್ರಕೃತಿ ಮಾತೆಯನ್ನು ಹೆತ್ತ ತಾಯಿಗೂ ಮೀರಿ ಗೌರವಿಸಿ, ಸಂರಕ್ಷಿಸಿ ಜೊತೆ ಜೊತೆಯಲ್ಲಿ ವೃಕ್ಷಗಳ ಬೆಳವಣಿಗೆ, ಕಾಡುಗಳ ಅಭಿವೃದ್ಧಿಗೆ ಮಾನವ ಸದಾ ಗಮನವಿಟ್ಟು ದುಡಿಯುತ್ತಿದ್ದ, ಆದರಿಂದು ನಿಮಿಷ ನಿಮಿಷಕ್ಕೂ ತೆಗೆದುಕೊಳ್ಳುವ ಆಮ್ಲಜನಕಕ್ಕೆ ಹಣವನ್ನು ಸುರಿದು ಬದುಕಲು ಹೆಣಗಾಡುತ್ತಿರುವ ಮಾನವನ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಇಲಾಖೆಗಳು ಹಾಗೂ ದೇಶದ ನಾಗರಿಕರು ಪರಿಸರದ ಪ್ರಜ್ಞೆಯನ್ನು ಬೆಳೆಸಿಕೊಂಡು ಪ್ರಕೃತಿಮಾತೆಗೆ ಗೌರವವಿತ್ತು ತನ್ಮೂಲಕ ನಿಸರ್ಗವನ್ನು, ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದೇ ಆದಲ್ಲಿ ಈ ಭಯಾನಕ ಸ್ಥಿತಿ ನಮಗೆ ಬರುತ್ತಿರಲಿಲ್ಲ.
ಪೂಜ್ಯ ಸ್ವಾಮಿ ಜಪಾನಂದಜೀ ರವರ ಪ್ರಕಾರ 1985-86ರ ಸಂದರ್ಭದಲ್ಲಿ ಇದೇ ಬರಗಾಲ ಪೀಡಿತ ಪಾವಗಡದ ಭೂಮಿ ಹಸಿರಿ ನಿಂದ ಕಂಗೊಳಿಸುತ್ತಿದ್ದು ಎಲ್ಲೆಡೆ ಕಡಲೇಕಾಯಿ ಕೃಷಿ ಹಾಗೂ ಮೋಸಂಬಿ, ದಾಳಿಂಬೆ, ಸೀಬೆಹಣ್ಣು, ವೀಳ್ಯದೆಲೆ ಇತ್ಯಾದಿಗಳನ್ನು ಬೆಳೆಸುತ್ತಾ ಸಾವಿರಾರು ಮರಗಳ ಒಂದು ತಾಣವಾಗಿದ್ದು ಇಂದು ಕೇವಲ ನೆನಪು ಮಾತ್ರ. ಇದಕ್ಕೆ ಮುಖ್ಯ ಕಾರಣ ಅಭಿವೃದ್ಧಿಯ ಹೆಸರಿನಲ್ಲಿ ಮುಗ್ಧ ರೈತನನ್ನು ನಾನಾ ಆಮಿಷಗಳಿಗೆ ಎಡೆಮಾಡಿ ಇಂದು ಸಾವಿರಾರು ಟನ್ ಬೆಳೆಯುತ್ತಿದ್ದ ಧಾನ್ಯಗಳ ಹಾಗೂ ಭತ್ತದ ಪ್ರದೇಶಗಳು ಬೆಂಕಿಯನ್ನು ಕಾರುವ ಭೂಮಿಯಾಗಿ ಪರಿವರ್ತನೆಗೊಂಡಿದೆ.
 ಸರಿಸುಮಾರು 22000 ಎಕರೆಗಳಿಗೂ ಮಿಗಿಲಾದ ಕೃಷಿ ಭೂಮಿಯನ್ನು ಅಭಿವೃದ್ಧಿ ಎಂಬ ಹೆಸರಿನಲ್ಲಿ ನರರಾಕ್ಷಸರು ಮುಗ್ಧ ರೈತರಿಗೆ ವಂಚಿಸಿ ಸೋಲಾರ್ ಪಾರ್ಕ್ ಆಗಿ ಪರಿವರ್ತಿಸಿರುವುದು ಮನುಷ್ಯನ ಸ್ವಾರ್ಥಕ್ಕೆ ಕೈಗನ್ನಡಿ ಎಂಬಂತಿದೆ. ಇಂದು ಕರೊನಾ ಮಹಾಮಾರಿಯ ಸಂದರ್ಭದಲ್ಲಿ ಹಸಿವಿನಿಂದ, ಬಡತನದಿಂದ ಕಂಗೆಟ್ಟ ಇದೇ ಕೃಷಿ ಭೂಮಿಯ ಒಡೆಯ ಹಸಿವು ನೀಗಿಸಲು ವಿದ್ಯುಚ್ಚಕ್ತಿಯನ್ನು ಆಹಾರವನ್ನಾಗಿ ಪಡೆಯಬಲ್ಲನೇ? ಇದೇ ಸಂದರ್ಭದಲ್ಲಿ ಪ್ರಕೃತಿದತ್ತವಾಗಿ ಬಂದಿತ್ತ ಕಾನನ ಸಿರಿ, ವೃಕ್ಷ ಸಂಪತ್ತು, ವನಸ್ಪತಿ ಮತ್ತೆಲ್ಲದಕ್ಕಿಂತ ಮಿಗಿಲಾಗಿ ಸಾವಿರಾರು ಪಶು ಪ್ರಾಣಿಗಳು ಪಕ್ಷಿಗಳು ಈ ಪ್ರದೇಶವನ್ನೇ ತೊರೆದು ಇಡೀ ಭೂಮಿ ಅಗ್ನಿಸದೃಶವಾದ ಭೂಮಿಯಾಗಿ ಕಾಣಬರುತ್ತಿದೆ.
 ಇದಕ್ಕೆ ಮೂಲ ಕಾರಣ ಮನುಷ್ಯನ ಸ್ವಾರ್ಥತೆ ಹಾಗೂ ಪ್ರಕೃತಿ ಮಾತೆಯನ್ನು ಅಗೌರವದಿಂದ ಕಂಡು ಸಂಪೂರ್ಣ ನಿರ್ನಾಮ ಮಾಡುವಂತಹ ಸ್ಥಿತಿಗೆ ಬಂದು ನಿಂತಿದ್ದಾನೆ. ಇಂತಹ ಭಯಾನಕ ಸ್ಥಿತಿಯಲ್ಲಿಯೂ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ರೈತಾಪಿ ಬಂಧುಗಳು ಸೇರಿ ಪರಿಸರ ಜ್ಞಾನವನ್ನು ಹೆಚ್ಚುವಂತಾಗಿಸಿಕೊಂಡು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಅರ್ಥಗರ್ಭಿತ ಎನ್ನಬಹುದು. ಪೂಜ್ಯ ಸ್ವಾಮಿ ಜಪಾನಂದಜೀ ರವರ ಪ್ರಕಾರ ಈಗಲಾದರೂ ನಾಗರಿಕರು ಪರಿಸರ ಪ್ರಜ್ಞೆಯನ್ನು ಸಂಪೂರ್ಣವಾಗಿ ಅರಿತು ಮುಂದಿನ ಪೀಳಿಗೆಗೆ ಸುಂದರವಾದ ಭೂಮಿಯನ್ನು ನಿರ್ಮಾಣ ಮಾಡುವಂತಹ ಕಾರ್ಯಕ್ಕೆ ಧುಮುಕಬೇಕಾಗಿದೆ.
ಇದು ಕೇವಲ ಅರಣ್ಯ ಇಲಾಖೆ ಅಥವಾ ಮತ್ತೊಂದು ಇಲಾಖೆಯ ಜವಾಬ್ಧಾರಿಯೆಂದು ತಮ್ಮ ಜವಾಬ್ಧಾರಿಯಿಂದ ತಪ್ಪಿಸಿ ಕೊಳ್ಳುವ ಬದಲು ಇದು ದೇಶದ ನಾಗರಿಕರ ಜವಾಬ್ಧಾರಿ, ವಿಶ್ವವನ್ನು ಉಳಿಸಲು, ರಕ್ಷಿಸಲು ಹಾಗೂ ಪ್ರಕೃತಿಮಾತೆಯನ್ನು ಪುನಃ ಪ್ರತಿಷ್ಠಾಪಿಸಲು ಕೈಗೊಳ್ಳುವಂತಹ ಮಹತ್ಕಾರ್ಯ ಎಂದು ಭಾವಿಸಿ ವಿಶ್ವ ಪರಿಸರ ದಿನದಂದು ಒಬ್ಬ ನಾಗರಿಕ ಒಂದು ಮರ ವನ್ನು ಪೋಷಿಸಿದಲ್ಲಿ ಇಡೀ ವಿಶ್ವ ಸಸ್ಯಶಾಮಲೆಯಾಗಿ ನಳನಳಿಸು ತ್ತಿರುವುದನ್ನು ಕಾಣಬಹುದು ಎಂದು ತಮ್ಮ ಅನಿಸಿಕೆ ತಿಳಿಸಿದರು.