Tuesday, 23rd April 2024

ಹಾಸ್ಯ ಪ್ರಜ್ಞೆ ಇದ್ದವರಿಗೆ ಜೀವನ ಪ್ರಜ್ಞೆಯ ಲಾಸ್ಯ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ ೧೧೬

ನಗುತ್ತಲೇ ಇರಬೇಕು, ಯಾವುದನ್ನೂ ತಲೆಯಲ್ಲಿಟ್ಟು ಕೊರಗಬಾರದು: ಪ್ರೊ.ಕೃಷ್ಣೇಗೌಡ

ಬೆಂಗಳೂರು: ಹಾಸ್ಯ ಪ್ರಜ್ಞೆ ಯಾರಿಗೆ ಹೆಚ್ಚಾಗಿ ಇರುತ್ತದೆಯೋ ಅವರಿಗೆ ಜೀವನ ಪ್ರಜ್ಞೆ ಎನ್ನುವುದು ಉಳಿದವರಿಗಿಂತ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ, ನಾವು ಯಾವಾಗಲೂ ನಗುತ್ತಲೇ ಇರಬೇಕು, ಯಾವುದನ್ನೂ ತಲೆಯಲ್ಲಿಟ್ಟು ಕೊರಗಬಾರದು ಎಂದು ಪ್ರೊ.ಕೃಷ್ಣೇಗೌಡ ತಿಳಿಸಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಜೀವನ ಒಂದು ರೀತಿಯಲ್ಲಿ ಋಣದಿಂದ ತುಂಬಿ ಹೋಗಿದೆ. ಆದರೆ ನಾವು ಯಾರಿಗೆ ಋಣಿಯಾಗಿದ್ದೇವೆ ಎಂಬುದು ಮಾತ್ರ ನಮಗೆ ಗೊತ್ತೇ ಇರುವುದಿಲ್ಲ. ನಾವು ಪ್ರತಿ ದಿನ ಬೆಳಕನ್ನು ಉರಿಸುತ್ತೇವೆ. ಅದರೆ ಆ ಬೆಳಕಿನ ಹಿಂದೆ ಎಷ್ಟು ಜನರ ಕೃಪೆ ಇರುತ್ತೆ?, ಎಷ್ಟು ಶ್ರಮ ಅದರ ಹಿಂದೆ ಅಡಕವಾಗಿರುತ್ತದೆ ಎನ್ನುವುದು ನಮಗೆ ತಿಳಿದಿರುವುದಿಲ್ಲ.

ಹೀಗಾಗಿ ನಮ್ಮ ಜೀವನದಲ್ಲಿ ನಾವು ಅದೆಷ್ಟೋ ಸಾವಿರ ಜನರಿಗೆ ಋಣಿಯಾಗಿಯೇ ಇರಬೇಕಾಗುತ್ತದೆ. ಋಣ ನಮ್ಮನ್ನು ವಿನೀತರನ್ನಾಗಿ ಮಾಡುತ್ತದೆ. ಋಣದಿಂದ ಮುಕ್ತರಾಗುತ್ತೇವೆ ಅನ್ನುವುದು ಸೊಕ್ಕಿನ ಮಾತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೃಷ್ಣೇಗೌಡರು ತಮ್ಮ ಗುರುಗಳ  ಹಾಸ್ಯಪ್ರಜ್ಞೆ ಯನ್ನು ನೆನೆಯುತಾ, ಅವರ ಕೆಲವು ಘಟನೆಗಳನ್ನು ನೆನಪಿಸಿ ಕೇಳುಗರನ್ನ ನಗೆಯ ಕಡಲಿನಲ್ಲಿ ತೇಲಿಸಿದರು.

ಪ್ರಭುಶಂಕರರ ಹೆಂಡತಿ ಡಾ. ಶಾಂತಾ ತೀರಿದ್ದರು. ಇಡೀ ಮನೆಯಲ್ಲಿ ಮುಗ್ಗು ಕಟ್ಟಿದ ವಾತಾವರಣ, ಎಲ್ಲಿ ನೋಡಿದರೂ ಕಣ್ಣೀರು. ಆದರೆ ಪ್ರಭು ಶಂಕರರು ಮಾತ್ರ ಅತಿಯಾಗಿ ಪ್ರೀತಿಸುತ್ತಿದ್ದ ತನ್ನ ಪತ್ನಿ ಮರಣಶಯ್ಯೆಯ ಮೇಲೆ ಇದ್ದರೂ ಒಂದು ಹನಿ ಕಣ್ಣೀರನ್ನೂ ಸುರಿಸುತ್ತಿಲ್ಲ. ಅಲ್ಲಿದ್ದ ಕೆಲವು ಶಿಷ್ಯರಿಗೆ ಹೇಗಾದರೂ ಮಾಡಿ ಇವರ ಕಣ್ಣಿನಿಂದ ನೀರು ತರಿಸಬೇಕು ಇಲ್ಲದಿದ್ದರೆ ನೋವು ಯಾವಾಗಲೂ ಇದ್ದುಬಿಡುತ್ತದೆ ಅನ್ನುವುದನ್ನು ತಿಳಿದು ಇಬ್ಬರು ಹೆಣ್ಣುಮಕ್ಕಳು ಪ್ರಭು ಶಂಕರರ ಭುಜಗಳನ್ನ ಹಿಡಿದು ಬೇಜಾರಾಗಿದ್ರೆ ಅತ್ತು ಬಿಡಿ ಅಂತ ಪರಿಪರಿಯಾಗಿ ಹೇಳುತ್ತಿದ್ದರು. ಅದನ್ನ ನೋಡಿ ತನ್ನ ಮಗಳಿಗೆ ಹೇಳಿದ್ದರಂತೆ, ‘ಮಗಳೇ, ಇವತ್ತು ನನ್ನನ್ನು ಅಳಿಸುವುದಕ್ಕ ಅವರು ಪಡುತ್ತಿದ್ದ ಕಷ್ಟವನ್ನ ನೋಡಿ ನನಗೆ ನಗು ಬರುತ್ತಿತ್ತು. ಆದರೆ ಯಾವುದೇ ಕಾರಣಕ್ಕೂ ನಾನು ನಗಲಿಲ್ಲ“ ಎಂದರು. ಕೃಷ್ಣೇಗೌಡರು ಮತ್ತು ಪ್ರಭು ಶಂಕರರು ಸಾವಿನ ಮನೆಯೊಂದಕ್ಕೆ ಹೋಗಿ ದ್ದರು. ಇಬ್ಬರೂ ಹೆಣಕ್ಕೆ ಹೂ ಇಟ್ಟು ನಮಸ್ಕರಿಸಿದರು.

ಮನೆಯ ಹೊರಗೆ ಜನ ಸೇರಿದಲ್ಲಿ ಬಂದು ನೋಡುತ್ತಿದ್ದರೆ ಎಲ್ಲರೂ ತಲೆತಗ್ಗಿಸಿ ದುಖದಿಂದ ಕುಳಿತಿದ್ದರು. ಪ್ರಭುಶಂಕರರು ಗೌಡರ ಬಳಿ,‘ನಾನೊಂದು ವಿಚಾರವನ್ನ ಹೇಳ್ತೀನಿ ನೀನು ನಗಬಾರ್ದು’ ಅಂತ ಹೇಳಿದಾಗ ಗೌಡರು ‘ಸರಿ ಗುರುಗಳೆ ನಾನು ನಗಾಡಲ್ಲ, ಏನು ಹೇಳುತ್ತೀರೋ ಹೇಳಿ‘ ಅಂತ ಹೇಳಿದ ರಂತೆ, ಅದಕ್ಕೆ ಪ್ರಭುಶಂಕರರು ಒಂದು ಪ್ರಶ್ನೆ ಕೇಳುತ್ತಾರೆ. ‘ಇಲ್ಲಿ ಇರುವವರು ಏನಂತ ವಿಚಾರ ಮಾಡುತ್ತಿರಬಹುದು?’ ಗೌಡರು ಮೌನವಹಿಸಿ ಸುಮ್ಮ ನಾದರು. ಅದಕ್ಕೆ ಪ್ರಭು ಶಂಕರರು ‘ಇಲ್ಲಿ ಬಂದು ಕುಳಿತವರಲ್ಲಿ ಹೆಚ್ಚಿನವರು, ನಾವು ಸತ್ತಾಗಲೂ ಇಷ್ಟು ಜನ ಬರಬಹುದೇ!? ನಮ್ಮ ಮನೆಯ ಮುಂದೆ ಇಷ್ಟು ವಾಹನಗಳು ನಿಲ್ಲುವುದಕ್ಕೆ ಜಾಗ ಇದೆಯೇ? ಎಂದೇ ವಿಚಾರ ಮಾಡುತ್ತಿರುತ್ತಾರೆ“ ಎಂದು ಹೇಳಿ ಕೃಷ್ಣೇಗೌಡರಿಗೆ ಸತ್ತಮನೆಯಲ್ಲೂ ನಗುವನ್ನು ತರಿಸಿದ್ದರಂತೆ ಎಂಬ ಪ್ರಸಂಗ ವಿವರಿಸಿದರು.

ನಾವು ಯಾವಾಗಲೂ ಶಾಂತತೆಯಿಂದ ಬಂದಿದ್ದನ್ನು ಎದುರಿಸಬೇಕು ಎಂದು ಹೇಳುವಾಗ ತಮ್ಮ ಘಟನೆಯೊಂದನ್ನು ನೆನಪು ಮಾಡಿಕೊಂಡರು.
ಕೃಷ್ಣೇಗೌಡರ ಜೊತೆ ಒಬ್ಬ ಯಾವಾಗಲೂ ಗೊಣಗುತ್ತಿದ್ದನಂತೆ. ಅವನಿಗೆ ಗೊಣಗುವುದಕ್ಕ ದೊಡ್ಡ ವಿಷಯವೇ ಸಿಗಬೇಕು ಅಂತೇನೂ ಇರಲಿಲ್ಲ.
ಒಂದು ದಿನ ಅವನು ತುಂಬಾ ಗೊಣಗುತ್ತಿದ್ದ. ದನ್ನು ಗಮನಿಸಿದ ಗೌಡರು ವನಿಗೆ ಕೇಳುತ್ತಾರೆ, ಇವತ್ತು ಯಾಕೆ ದಿನಕ್ಕಿಂತಲೂ ಹೆಚ್ಚು ಗೊಣಗುತ್ತಿದ್ದೀಯೆ
ಎಂದು ಕೇಳಿದಾಗ ಅವನು ಹೇಳಿದ್ದನಂತೆ ‘ಛೇ, ನನ್ನ ಹಣೆಬರಹವೇ ಸರಿ ಇಲ್ಲ. ಇವತ್ತು ನಾನು ಬರುವ ಸಮಯಕ್ಕೆ ಸರಿಯಾಗಿ ರೈಲು ಹಳಿಗೆ ಅಡ್ಡಲಾಗಿ
ಗೇಟ್ ಹಾಕಿಬಿಟ್ಟರು. ಎಲ್ಲಿ ಹೋದರೂ ನನ್ನ ಹಣೆಬರಹವೇ ಸರಿಯಾಗಿ ಇರುವುದಿಲ್ಲ ಅಂತ  ಹೇಳಿದ್ದ ಎಂದು ಹಾಸ್ಯಾಸ್ಪದವಾಗಿ ಹೇಳಿದರು.

ಮುಲ್ಲಾನ ಕಥೆ ಹೇಳಿದ ಪ್ರೊ.ಕೃಷ್ಣೇಗೌಡರು 
ನಗುವಿನ ಕಡಲಿನಲ್ಲಿ ತೇಲಿಸುತ್ತಿದ್ದ ಕೃಷ್ಣೇಗೌಡರು, ಈಗಿನ ಜೀವನ ಹೇಗೆ ಬದಲಾಗಿದೆ ಎಂದು ಗಂಭೀರವಾಗಿಯೇ ಜನರಿಗೆ ಅರ್ಥ ಮಾಡಿಸುತ್ತಾ, ನಾವು ಮನೆಯನ್ನ ಕಾಯುವುದಕ್ಕೆ ಎಂದು ನಾಯಿಗಳನ್ನು ತರುತ್ತೇವ ಆದರೆ ನಂತರದ ದಿನಗಳಲ್ಲಿ ನಾಯಿಯನ್ನು ಕಾಯುವುದಕ್ಕೇ ನಾವು ಇದ್ದು ಬಿಡುತ್ತೇವೆ ಎಂದು ಹಣಕ್ಕೆ ರೂಪಕವನ್ನು ಕೊಟ್ಟರು. ಮುಲ್ಲಾನ ಮನೆಯ ಕತ್ತೆ ಅವನ ಪಕ್ಕದ ಮನೆಯವನಿಗೆ ಬೇಕು ಅಂತ ಅನಿಸಿ ಮುಲ್ಲನ ಬಳಿ ಕೇಳಿದ. ‘ಮುಲ್ಲಾ ನನಗೆ ಒಂದು ದಿನ ನಿನ್ನ ಕತ್ತೆ ಸಿಗಬಹುದಾ?’ ಅದಕ್ಕೆ ‘ಇಲ್ಲ’ಎನ್ನುವ ಉತ್ತರ ಮುಲ್ಲಾನಿಂದ ಬಂತು.

ಅದೇ ಸಮಯಕ್ಕೆ ಮನೆಯ ಹಿಂದಿನಿಂದ ಕತ್ತೆಯೂ ಕೂಗಿದ ಕಾರಣ ಮುಲ್ಲಾನ ಬಳಿ ಪಕ್ಕದ ಮನೆಯವನು ಕೇಳಿದು ‘ನೀನು ಸುಳ್ಳು ಹೇಳಿದೆ ಮುಲ್ಲಾ, ಅಂತ ಹೇಳಿದಾಗ ಮುಲ್ಲಾ, ‘ನೀನು ಮನುಷ್ಯರು ಹೇಳುವುದನ್ನು ಕೇಳುತ್ತೀಯೋ ಅಥವಾ ಕತ್ತೆಯದ್ದೋ?’ ಎಂದು ಕೇಳಿದ. ಕಥೆಯ ಮೂಲಕವೇ
ಕೃಷ್ಣೇಗೌಡರು, ಮಾತುಗಳ ಆಂತರ್ಯವನ್ನು ಅರಿಯುವ ಕಲೆ ನಮ್ಮಲ್ಲಿ ಇರಬೇಕು ಎಂದರು.

***

ಕೃಷ್ಣೇಗೌಡರು ಕೇವಲ ಮಾತುಗಾರರಲ್ಲ. ಅವರು ಮಾತಿನ ಮಂಟಪಕ್ಕೆ ತೋರಣ ಕಟ್ಟುತ್ತಾರೆ. ಅವರು ಕೇವಲ ಹಾಸ್ಯಗಾರರಲ್ಲ. ಅವರೊಬ್ಬ ದೊಡ್ಡ
ಸಂಸ್ಕೃತಿಯ ಚಿಂತಕರು. ಜನರಿಗೆ ವಿಚಾರವನ್ನು ತಿಳಿಸುವುದಕ್ಕೆ ನಗುವನ್ನು ಮಾರ್ಗವನ್ನಾಗಿ ಮಾಡಿಕೊಂಡಿದ್ದಾರೆ.

-ವಿಶ್ವೇಶ್ವರ್ ಭಟ್
ವಿಶ್ವವಾಣಿ ಪ್ರಧಾನ
ಸಂಪಾದಕರು

Leave a Reply

Your email address will not be published. Required fields are marked *

error: Content is protected !!