Tuesday, 17th September 2024

ನೆಮ್ಮದಿಗೆ ಧಕ್ಕೆಯಾಗದಿರಲಿ

ದೇಶದ ಉದ್ದಗಲಕ್ಕೂ ಲೋಕಸಭಾ ಚುನಾವಣೆಯ ಕಾವು ಏರುತ್ತಿದೆ. ಬಹಿರಂಗ ರ‍್ಯಾಲಿಗಳು, ರೋಡ್ ಷೋಗಳು, ಮನೆಮನೆ ಭೇಟಿ ಹೀಗೆ ವಿವಿಧ ಮಾರ್ಗೋ ಪಾಯಗಳನ್ನು ಅಪ್ಪಿರುವ ಅಭ್ಯರ್ಥಿಗಳು, ಗೆಲುವು ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಬೆವರು ಸುರಿಸುತ್ತಿದ್ದಾರೆ. ತಂತಮ್ಮ ಕ್ಷೇತ್ರಗಳಿಗೆ ರಾಷ್ಟ್ರೀಯ ನಾಯಕರನ್ನು, ಚಲನಚಿತ್ರ ನಟ-ನಟಿಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಕರೆಸಿ ವೇದಿಕೆ ಹತ್ತಿಸಿ ಭಾಷಣ ಮಾಡಿಸುವ ಕಸರತ್ತುಗಳೂ ಅವರಿಂದ ನಡೆಯುತ್ತಿವೆ.

ಇದೆಲ್ಲವೂ ಸ್ವೀಕಾರಾರ್ಹವೇ. ಆದರೆ ಜನರಿಗೆ ಅಪಥ್ಯವಾಗಿರುವುದು, ಈ ಜನನಾಯಕರೆನಿಸಿಕೊಂಡವರು ಭಾಷಣದ ವೇಳೆ ಬಳಸುತ್ತಿರುವ ಭಾಷೆ. ಎದುರಾಳಿ ಪಕ್ಷದ ಸಿದ್ಧಾಂತವನ್ನು ಅಲ್ಲಗಳೆಯುವುದಕ್ಕೆ, ವಿಷಯಾಧಾರಿತ ಟೀಕೆಗೆ ಮತ್ತು ತಮ್ಮ ಪಕ್ಷಸ್ಥರ ಸಮರ್ಥನೆಗೆ ಮೀಸಲಾಗಿರಬೇಕಿದ್ದ ಚುನಾವಣಾ ಪ್ರಚಾರ ಭಾಷಣದಲ್ಲಿ ಅಪಸವ್ಯ ಇಣುಕುತ್ತಿದೆ. ಏಕವಚನ ಪ್ರಯೋಗ, ರಾಜಕೀಯ ಎದುರಾಳಿಗಳ ವೈಯಕ್ತಿಕ ಚಾರಿತ್ರ್ಯವಧೆ ನಡೆಯುತ್ತಿದೆ. ಇದು ಸರ್ವಥಾ ಸ್ವೀಕಾರಾರ್ಹ ವಲ್ಲ. ಮತ್ತೊಂದೆಡೆ, ತಂತಮ್ಮ ರಾಜಕೀಯ ನಾಯಕರು ಅಥವಾ ತಮ್ಮಿಷ್ಟದ ಪಕ್ಷಗಳನ್ನು ಬೆಂಬಲಿಸುವ ಹುಕಿಗೆ ಬಿದ್ದು ಸಾರ್ವಜನಿಕರು ಪರಸ್ಪರ ದೂಷಣೆ ಹಾಗೂ ಕೆಸರೆರಚಾಟಕ್ಕೆ ಇಳಿದುಬಿಡುವುದೂ ಚುನಾವಣೆಯ ಸಂದರ್ಭದ ಅಪಾಯಗಳಲ್ಲೊಂದು.

ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು- ಕೆಲ ರಾಜಕೀಯ ನಾಯಕರು ಚುನಾವಣಾ ಅಖಾಡದಲ್ಲಿ ಪರಸ್ಪರರ ಮೇಲೆ ಟೀಕಾಪ್ರಹಾರ ಮಾಡಿದರೂ, ಚುನಾವಣೆ ಮುಗಿದ ನಂತರ ಮತ್ತು ಸಂದರ್ಭಾನುಸಾರವಾಗಿ ‘ಅನುಕೂಲಸಿಂಧು’ ಧೋರಣೆಯನ್ನೂ ತಳೆಯುವುದಿದೆ. ಆದರೆ ಶ್ರೀಸಾಮಾನ್ಯರಲ್ಲಿ ಇಂಥದೊಂದು ಸಲೀಸು ಪ್ರವೃತ್ತಿ ಕೆನೆಗಟ್ಟಿರುತ್ತದೆ ಎನ್ನಲಾಗದು; ಹೀಗಾಗಿ ಚುನಾವಣೆಯ ವೇಳೆ ಯಾರದ್ದೋ ಉಸಾಬರಿಗೆ ಸಿಲುಕಿ, ಅವರು ತಾವು ಪ್ರತಿ ದಿನವೂ ಒಡನಾಡುವ ಸಹವರ್ತಿಗಳೊಂದಿಗೇ ದ್ವೇಷ ಕಟ್ಟಿಕೊಳ್ಳುವ ಅಪಾಯವೂ ಇರುತ್ತದೆ. ವಿಶೇಷವಾಗಿ, ಪರಸ್ಪರ ಕೊಡು-ಕೊಳ್ಳುವಿಕೆಯ ಪ್ರವೃತ್ತಿಯೇ ಬದುಕಿನ ಮೂಲಸೆಲೆ ಯಾಗಿರುವ ಹಳ್ಳಿಗಳಲ್ಲಿ ಇಂಥ ದ್ವೇಷ-ಮತ್ಸರ ತಾರಕಕ್ಕೇರಿದರೆ ಬಾಳಿನಬಂಡಿ ಸರಾಗವಾಗಿ ಸಾಗದು. ಹೀಗಾಗಿ ಶ್ರೀಸಾಮಾನ್ಯರು ಚುನಾವಣೆಯನ್ನು ವೈಯಕ್ತಿಕ ರಾಗ-ದ್ವೇಷಗಳಿಗೆ ಬಳಸಿಕೊಳ್ಳದೆ, ಮತದಾನದ ಮೂಲಕ ಸಮರ್ಥ ವ್ಯಕ್ತಿಯನ್ನು ಚುನಾಯಿಸುವ ಹೊಣೆಗಾರಿಕೆ ಯನ್ನು ನಿಭಾಯಿಸಿದರೆ ಸಾಕು. ಕಾರಣ, ಬದುಕಿನಲ್ಲಿ ಶಾಂತಿ-ನೆಮ್ಮದಿಗಿಂತ ಮಿಗಿಲಾದುದು ಯಾವುದೂ ಇಲ್ಲ.

Leave a Reply

Your email address will not be published. Required fields are marked *