Tuesday, 17th September 2024

ಯುದ್ಧೋನ್ಮಾದ ನಿಲ್ಲುವುದೆಂದು?

‘ಹೇಯುದ್ಧ… ನೀನೇಕೆ ಬರುವೆ ಈ ಭೂಮಿಗೆ, ತೊಲಗಾಚೆ ನೀನು ಧರೆಯಾಚೆಗೆ, ಮಾನವನ ಮಾರಣಹೋಮಕ್ಕೆ ಸಿದ್ಧ, ಜಗ
ನುಂಗೋ ಯಮದೂತ! ಜನ ನುಂಗೋ ರಣಭೂತ! ನಿನಗಿನ್ನೂ ದಾಹ ಹಿಂಗಿಲ್ವಾ?’ ಎಂದು ಪ್ರಶ್ನಿಸುತ್ತದೆ ಚಿತ್ರಗೀತೆಯೊಂದರ ಸಾಲು.

ಆದರೆ ರಕ್ತದಾಹಿಗಳಿಗೆ ಯುದ್ಧದ ಭೀಕರತೆ ಮತ್ತು ತರುವಾಯದ ನರಳಾಟಗಳು ಇನ್ನೂ ಅರಿವಾದಂತಿಲ್ಲ. ಹೀಗಾಗಿ ವಿಶ್ವದ ಕೆಲವೆಡೆ ಯುದ್ಧೋನ್ಮಾದ ಅಬಾಧಿತವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಸಮರ ಏರ್ಪಟ್ಟು ಗಣನೀಯ ಜೀವನ ಷ್ಟಕ್ಕೆ ಮತ್ತು ಅಗಾಧ ಸ್ವತ್ತುಹಾನಿಗೆ ಅದು ಕಾರಣವಾದಾಗ, ‘ಈ ಯುದ್ಧ ಇನ್ನಾದರೂ ನಿಲ್ಲಬಾರದೇ?’ ಎಂದು ಅಮಾಯಕರು ಚೀರಿದ್ದುಂಟು.

ಆದರೆ ಅದೊಂದು ಅರಣ್ಯರೋದನ ಎಂದು ಖಾತ್ರಿಯಾಗಿದ್ದು ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಘರ್ಷಣೆ ಶುರುವಾಗಿ ತಾರಕಕ್ಕೇರಿದಾಗ. ಈ ಸಮರದಲ್ಲೂ ಉಭಯ ಪಾಳಯಗಳಿಗೆ ಆಗಿರುವ ವಿವಿಧ ನೆಲೆಗಟ್ಟಿನ ನಷ್ಟಗಳನ್ನು ಬಿಡಿಸಿ ಹೇಳಬೇಕಿಲ್ಲ. ಇವೆರಡು ನಿದರ್ಶನಗಳಿಂದಲೇ ಶಾಂತಿಪ್ರಿಯರು ಏದುಸಿರು ಬಿಡುತ್ತಿರುವಾಗಲೇ, ಅತ್ತ ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ ಮಳೆಯನ್ನೇ ಸುರಿಸಿದೆ ಇರಾನ್. ಡಮಾಸ್ಕಸ್‌ನಲ್ಲಿನ ತನ್ನ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿ ಅಧಿಕಾರಿಗಳ ಸಾವಿಗೆ ಕಾರಣವಾಗಿದ್ದ ಇಸ್ರೇಲ್ ಮೇಲೆ ಪ್ರತೀಕಾರ ಸ್ವರೂಪದಲ್ಲಿ ಇರಾನ್ ನಡೆಸಿದ ದಾಳಿಯಂತೆ ಇದು.

ಕಾರಣಗಳೇನೇ ಇರಲಿ, ಒಂದೆಡೆ ಕೂತು ಸಮಾಲೋಚಿಸಿ ಇತ್ಯರ್ಥಪಡಿಸಿಕೊಳ್ಳಬೇಕಾದ ಚರ್ಚಾವಿಷಯಗಳನ್ನು, ಬುಲೆಟ್ಟು-ಬಾಂಬುಗಳ ಮೇಲುಸ್ತುವಾರಿಕೆಯಲ್ಲಿ ಬಗೆಹರಿಸಿಕೊಳ್ಳಲು ಮುಂದಾಗುವವರನ್ನು ಮೂಢರೆನ್ನಬೇಕಾಗುತ್ತದೆ. ಕಾರಣ, ಎಲ್ಲ ಸಮಸ್ಯೆಗಳಿಗೂ ಯುದ್ಧವೊಂದೇ ಉತ್ತರವಲ್ಲ. ಎರಡನೇ ಮಹಾಯುದ್ಧದ ವೇಳೆ ಜಪಾನಿನ ಹಿರೋಷಿಮಾ-ನಾಗಸಾಕಿ ನಗರಗಳ ಮೇಲಾದ ಬಾಂಬ್ ದಾಳಿ ಅದೆಷ್ಟು ಘೋರವಾಗಿತ್ತೆಂದರೆ, ಅದರಿಂದ ಚೇತರಿಸಿಕೊಳ್ಳುವುದಕ್ಕೆ ಜಪಾನ್‌ಗೆ ವರ್ಷಗಳೇ ಹಿಡಿಯಿತು.

ಯುದ್ಧೋನ್ಮಾದದಲ್ಲಿ ಬಾಂಬು-ಬುಲೆಟ್ಟುಗಳನ್ನು ಕೈಯಲ್ಲಿ ಹಿಡಿದಿರುವವರಿಗೆ ಇಂಥ ಭೀಕರತೆಯ ಅರಿವಿಲ್ಲವೇ? ‘ಜಗತ್ತಿಗೆ ಮತ್ತೊಂದು ಯುದ್ಧವನ್ನು ನಿಭಾಯಿಸುವ ಶಕ್ತಿ ಇಲ್ಲ’ ಎಂದು ವಿಶ್ವಸಂಸ್ಥೆಯೂ ಹೇಳಿಕೊಂಡಿದೆ. ಆದರೆ ಯುದ್ಧೋನ್ಮಾದಿಗಳಿಗೆ ಇಂಥ ಸೂಕ್ಷ್ಮ ಎಲ್ಲಿ ಅರ್ಥವಾಗಬೇಕು?!

Leave a Reply

Your email address will not be published. Required fields are marked *