Vishweshwar Bhat Column: ಒಂದು ಮರ ಉಳಿಸಲು ಯೋಜನೆ ಬದಲಾಯಿಸಿದ ಜಪಾನ್ !
ಅಷ್ಟು ಹಳೆಯ, ಅಪರೂಪದ ಮರವನ್ನು ಯಾವ ಕಾರಣಕ್ಕೂ ಕಡಿಯುವಂತಿಲ್ಲ. ಆ ಜಾತಿಯ ಮರಗಳ ಸಂಖ್ಯೆ ಹೆಚ್ಚಿಲ್ಲ. ಆ ತಳಿಯನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಅಲ್ಲದೇ ಆ ಮರವನ್ನು ಆಶ್ರಯಿಸಿ, ಅಸಂಖ್ಯ ಪಕ್ಷಿಗಳು, ಜೀವಿಗಳು ಬದುಕು ಕಟ್ಟಿಕೊಂಡಿರುತ್ತವೆ. ಅಂಥ ಮರವನ್ನು ಏಕಾಏಕಿ ಕಡಿದು ಹಾಕಿದರೆ, ಅದರಿಂದ ಆಗುವ ಹಾನಿಯನ್ನು ಊಹಿಸುವುದು ಕಷ್ಟ.


ನೂರೆಂಟು ವಿಶ್ವ
vbhat@me.com
ಜಪಾನಿನ ಟೋಕಿಯೋ ಮತ್ತು ನಗೋಯಾ ಮಧ್ಯೆ ಹೈಸ್ಪೀಡ್ ರೈಲು ಮಾರ್ಗ ನಿರ್ಮಿಸಲು ಅಲ್ಲಿನ ರೈಲ್ವೆ ಇಲಾಖೆ ಸರಕಾರಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಿತು. ಜಪಾನಿನಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ರೂಪಿಸುವಾಗ, ಗಮನದಲ್ಲಿರಿಸಿಕೊಳ್ಳಬೇಕಾದ ಒಂದು ಮುಖ್ಯ ಅಂಶ ಅಂದ್ರೆ ಪರಿಸರಕ್ಕೆ ಧಕ್ಕೆಯಾಗುವ ಯಾವ ಅಂಶಗಳೂ ಇರಕೂಡದು. ಅದರಲ್ಲೂ ಕಾಡು, ಕೊಳ, ಕೆರೆ, ಜಲಾಶಯ, ನದಿ ಮುಖಜ ಭೂಮಿಗೆ ಸ್ವಲ್ಪವೂ ಹಾನಿಯಾಗಲೇಬಾರದು. ಪರಿಸರ ಹಿತ ಕಾಪಾಡುವ ದೃಷ್ಟಿಯಿಂದ ಆ ಸದರಿ ಯೋಜನೆಯಲ್ಲಿ ಯಾವ ಐಬು ಇದ್ದಿರಲಿಲ್ಲ. ಆದರೆ ಒಂದೇ ಒಂದು (ಸಣ್ಣ) ಕಾರಣಕ್ಕೆ ಆ ಯೋಜನೆಗೆ ಸರಕಾರ ಅನುಮತಿ ನೀಡಲು ನಿರಾ ಕರಿಸಿತು. ಜಪಾನಿನ ಒಬ್ಬ ರೈತನ ತೋಟದ ಮೂಲಕ ಆ ರೈಲು ಮಾರ್ಗ ಹಾದುಹೋಗುತ್ತಿತ್ತು.
ಅಲ್ಲಿ ಸುಮಾರು ನೂರಾ ನಲವತ್ತು ವರ್ಷಗಳ ಒಂದು ಅಪರೂಪದ ತಳಿಯ ಮರವೊಂದು ಇತ್ತು. ಉದ್ದೇಶಿತ ನೂತನ ರೈಲು ಮಾರ್ಗ ಆ ಮರವನ್ನು ನೆಲ ಸಮಾಧಿ ಮಾಡಿ ಸಾಗುತ್ತಿತ್ತು. ಆ ರೈಲು ಯೋಜನೆಗೆ ಅನುಮತಿ ನಿರಾಕರಿಸಲು ಜಪಾನ್ ಸರಕಾರಕ್ಕೆ ಅದೊಂದೇ ಕಾರಣ ಸಾಕಾಯಿತು!
ಅಷ್ಟು ಹಳೆಯ, ಅಪರೂಪದ ಮರವನ್ನು ಯಾವ ಕಾರಣಕ್ಕೂ ಕಡಿಯುವಂತಿಲ್ಲ. ಆ ಜಾತಿಯ ಮರಗಳ ಸಂಖ್ಯೆ ಹೆಚ್ಚಿಲ್ಲ. ಆ ತಳಿಯನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಅಲ್ಲದೇ ಆ ಮರ ವನ್ನು ಆಶ್ರಯಿಸಿ, ಅಸಂಖ್ಯ ಪಕ್ಷಿಗಳು, ಜೀವಿಗಳು ಬದುಕು ಕಟ್ಟಿಕೊಂಡಿರುತ್ತವೆ. ಅಂಥ ಮರವನ್ನು ಏಕಾಏಕಿ ಕಡಿದು ಹಾಕಿದರೆ, ಅದರಿಂದ ಆಗುವ ಹಾನಿಯನ್ನು ಊಹಿಸುವುದು ಕಷ್ಟ. ಹೀಗಾಗಿ ಆ ಮರವನ್ನು ಉಳಿಸಿಕೊಂಡು ಯೋಜನೆಯನ್ನು ಮಾರ್ಪಡಿಸಿ ಎಂದು ಸರಕಾರ ರೈಲ್ವೆ ಇಲಾಖೆಗೆ ಸೂಚಿಸಿ, ಕಡತವನ್ನು ವಾಪಸ್ ಕಳಿಸಿತು.
ಇದನ್ನೂ ಓದಿ: Vishweshwar Bhat Column: ಕಂಪನಿಗಳಲ್ಲಿ ಬೆಳಗ್ಗಿನ ಪ್ರಾರ್ಥನೆ
ಇದಕ್ಕೆ ರೈಲ್ವೆ ಇಲಾಖೆ ಪರಿಹಾರ ರೂಪಿಸಿ, ಯೋಜನೆಯನ್ನು ಪುನಃ ಮಂಡಿಸಿತು. ಆ ಪ್ರಕಾರ, ಆ ಮರವನ್ನು ಕಡಿಯುವುದಿಲ್ಲ, ಆದರೆ ಆ ಮರವನ್ನು ಅನಾಮತ್ತು ಎತ್ತಿ ಬೇರೆಡೆ ಸ್ಥಳಾಂತರಿಸಿ, ಸೂಕ್ತವಾದ ಜಾಗದಲ್ಲಿ ನೆಡುತ್ತೇವೆ. ಇದರಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದು ಹೇಳಿತು.
ಆದರೂ ಸರಕಾರ ಆ ಯೋಜನೆಯನ್ನು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಸರಕಾರ ನೀಡಿದ ಕಾರಣ - ನೂರಾ ನಲವತ್ತು ವರ್ಷಗಳ ಆ ಮರದ ಬೇರುಗಳು ಬಹುದೂರ ಹರಡಿಕೊಂಡಿರುತ್ತವೆ. ಆ ಮರ ವನ್ನು ಅನಾಮತ್ತು ಎತ್ತುವುದರಿಂದ ಅದರ ಬೇರುಗಳು ಘಾಸಿಯಾಗುವ ಸಂಭವಗಳೇ ಹೆಚ್ಚು. ಇದು ಆ ಮರದ ಅಸ್ತಿತ್ವಕ್ಕೇ ಧಕ್ಕೆ ತರಬಹುದು. ಅಂಥ ಮರವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಬೇಕು. ರೈಲ್ವೆ ಮಾರ್ಗವನ್ನು ಬದಲಿಸಬಹುದು. ಆದರೆ ಆ ತಳಿಯ ಇನ್ನೊಂದು ಮರವನ್ನು ಸೃಷ್ಟಿಸುವುದು ಅಸಾಧ್ಯ. ಆದ್ದರಿಂದ ಮರವನ್ನು ಸ್ಥಳಾಂತರಿಸುವ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ.

ಆಗ ರೈಲ್ವೆ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಂಡರು. ಒಂದು ಮರ ಕಡಿಯುವುದಕ್ಕೆ ಪ್ರಾಯ ಶ್ಚಿತವಾಗಿ ಸಾವಿರ ಗಿಡಗಳನ್ನು ನೆಡುತ್ತೇವೆ, ಒಂದು ಸಣ್ಣ ನೆಡುತೋಪನ್ನು ನಿರ್ಮಿಸುತ್ತೇವೆ ಎಂಬ ಪರಿಹಾರದೊಂದಿಗೆ ಯೋಜನೆಯನ್ನು ಮರು ಮಂಡಿಸಿದರು. ಅದಕ್ಕೂ ಸರಕಾರ ಸೈ ಎನ್ನಲಿಲ್ಲ.
ಸರಕಾರದ ವಾದವೇ ಬೇರೆ ಇತ್ತು. ‘ಸಾವಿರ ಗಿಡ ನೆಡುವುದು ನೂರಾ ನಲವತ್ತು ವರ್ಷಗಳ ಮರ ವನ್ನು ಸಾಯಿಸುವುದಕ್ಕೆ ಪರಿಹಾರವಾಗಲಾರದು. ಸಾವಿರ ಗಿಡಗಳು ಮರವಾಗಲು ಇಪ್ಪತ್ತು-ಮೂವತ್ತು ವರ್ಷಗಳಾದರೂ ಬೇಕು. ಅಲ್ಲಿಯ ತನಕ ಪರಿಸರಕ್ಕೆ ಆಗುವ ಹಾನಿಯನ್ನು ಲೆಕ್ಕ ಹಾಕಲೂ ಸಾಧ್ಯವಿಲ್ಲ. ಮರದ ಜಾಗದಲ್ಲಿ ಮನುಷ್ಯರನ್ನು ಕಲ್ಪಿಸಿಕೊಳ್ಳಿ, ಆಗ ನಮ್ಮ ಉತ್ತರ ಇದೇ ರೀತಿ ಇರುವುದಾ? ಸಾಧ್ಯವೇ ಇಲ್ಲ. ಹೊಸ ಮರಗಳನ್ನು ಬೆಳೆಸೋಣ, ಆದರೆ ಇರುವ ಮರವನ್ನು ಉಳಿಸಿಕೊಳ್ಳುವುದು ಅದಕ್ಕಿಂತ ಮುಖ್ಯ. ಇಲ್ಲಿ ಮರಗಳ ಸಂಖ್ಯೆ ಮುಖ್ಯವಲ್ಲ. ಮರವಷ್ಟೇ ಮುಖ್ಯ. ಒಂದು ಮರವನ್ನು ಸಂರಕ್ಷಿಸುವುದೂ ನಮ್ಮ ಧೋರಣೆಯಾಗಬೇಕು. ಆ ಚಿಂತನೆಯಲ್ಲಿ ಯೋಜನೆ ಯನ್ನು ನಿರ್ಮಿಸೋಣ.’
ಆ ಹಂತದಲ್ಲಿ ಅಕ್ಷರಶಃ ರೈಲ್ವೆ ಅಧಿಕಾರಿಗಳ ತಲೆ ಚಿಟ್ಟು ಹಿಡಿದು ಹೋಯಿತು. ಆಗ ಉಳಿದಿದ್ದು ರೈಲು ಮಾರ್ಗ ಬದಲಿಸುವ ಉಪಾಯವೊಂದೇ. ಅದು ಸುಲಭವಾಗಿರಲಿಲ್ಲ. ಕಾರಣ ರೈಲು ಮಾರ್ಗದ ಪುನರ್ ನಕ್ಷೆ ರೂಪಿಸಬೇಕು, ಬದಲಿ ಮಾರ್ಗವನ್ನು ಸೂಚಿಸಬೇಕು, ಆ ಮಾರ್ಗದಲ್ಲೂ ಯಾವ ಮರಗಳು ಇರಕೂಡದು, ಆಗ ಮಾರ್ಗ ನೇರವಾಗಿರದೇ ಸುತ್ತು ಬಳಸಿ ಹೋಗುತ್ತದೆ, ಇದರಿಂದ ಯೋಜನೆ ವಿಳಂಬವಾಗುತ್ತದೆ, ಖರ್ಚು ಹೆಚ್ಚುತ್ತದೆ... ಇತ್ಯಾದಿ, ಇತ್ಯಾದಿ.
ಈ ಯಾವ ಕಾರಣವನ್ನೂ ಸರಕಾರ ಒಪ್ಪಿಕೊಳ್ಳಲಿಲ್ಲ. ರೈಲ್ವೆ ಇಲಾಖೆಯ ಆ ವಾದವನ್ನೇ ಸಾರಾ ಸಗಟು ತಿರಸ್ಕರಿಸಿಬಿಟ್ಟಿತು! ಆಗ ರೈಲ್ವೆ ಅಧಿಕಾರಿಗಳು ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟರು. ಆ ಹೊತ್ತಿಗೆ ಎರಡು ತಿಂಗಳು ಕಳೆದು ಹೋಗಿತ್ತು. ಸರಕಾರದ ಆಲೋಚನೆ ಏನು ಎಂಬುದನ್ನು ತಿಳಿದುಕೊಳ್ಳದಷ್ಟು ಆ ಅಧಿಕಾರಿಗಳು ದಡ್ಡರಾಗಿರಲಿಲ್ಲ. ಆ ಮರವನ್ನು ಉಳಿಸುವ ಉದ್ದೇಶದಿಂದ ರೈಲು ಮಾರ್ಗವನ್ನು ಒಂದೂವರೆ ಕಿಮೀ ಸುತ್ತುಬಳಸಿ ಮಾರ್ಪಡಿಸಲು ನಿರ್ಧರಿಸಿದರು. ಅದಕ್ಕಾಗಿ ಹೆಚ್ಚುವರಿ ಇನ್ನೂರಾ ಹತ್ತು ಕೋಟಿ ಯೆನ್ ಖರ್ಚಾಗುತ್ತದೆ ಎಂದು ಅಂದಾಜು ಹಾಕಿದರು. ಮಾರ್ಗ ಬದಲಾವಣೆಯಿಂದ ಮೂರು ತಿಂಗಳು ಯೋಜನೆ ವಿಳಂಬವಾಗುತ್ತದೆ ಎಂದು ಲೆಕ್ಕ ಹಾಕಿದರು.
ಈ ಎಲ್ಲ ಮಾರ್ಪಾಡುಗಳೊಂದಿಗೆ ಹೊಸ ಯೋಜನೆಯನ್ನು ಸರಕಾರದ ಅನುಮತಿಗಾಗಿ ಮತ್ತೊಮ್ಮೆ ಮಂಡಿಸಿದರು. ಸರಿ, ಕೇವಲ ಐದು ದಿನಗಳಲ್ಲಿ ಸರಕಾರ ಅದಕ್ಕೆ ಸಮ್ಮತಿ ಸೂಚಿಸಿತು. ಒಂದೇ ಒಂದು ಮರ ಉಳಿಸಲು ಸರಕಾರ ಅಷ್ಟೊಂದು ಹಠ ಹಿಡಿಯಿತು. ರೈಲ್ವೆ ಅಽಕಾರಿಗಳು ಹೇಳುವ ಯಾವ ಕಾಗಕ್ಕ-ಗುಬ್ಬಕ್ಕನ ಕಥೆಯನ್ನೂ ಕೇಳಲಿಲ್ಲ. ಅದಕ್ಕಾಗಿ ಸಮಯ ಹಿಡಿಯಬಹುದು, ಇನ್ನೂರಾ ಹತ್ತು ಕೋಟಿ ಯೆನ್ ಖರ್ಚಾಗಬಹುದು, ಆಗಲಿ ಪರವಾಗಿಲ್ಲ, ಆದರೆ ಒಂದು ಮರಕ್ಕಾಗಿ ಇಂಥ ಕಠಿಣ ನಿರ್ಧಾರವನ್ನು ಜಪಾನ್ ಸರಕಾರ ತೆಗೆದುಕೊಂಡಿತು ಎಂಬುದು ಜಗತ್ತಿಗೂ ಗೊತ್ತಾಗಲಿ, ಅವರಲ್ಲೂ ಪರಿಸರ ಕಾಳಜಿ ಇನ್ನಷ್ಟು ಜಾಗೃತವಾಗಲಿ, ಪ್ರಗತಿ ಹೆಸರಿನಲ್ಲಿ ಪ್ರಕೃತಿ ಯನ್ನು ಧ್ವಂಸ ಮಾಡುವುದು ತಪ್ಪು ಎಂಬುದು ಎಲ್ಲರಿಗೂ ತಿಳಿಯಲಿ, ಅಭಿವೃದ್ಧಿಗೆ ಪರಿಸರವನ್ನು ಬಲಿ ಕೊಡಬಾರದು.
ಹೆಚ್ಚು ದೇಶಗಳು, ನಗರಗಳು ಮತ್ತು ಸಂಸ್ಥೆಗಳು ಇಂಥ ಕ್ರಮಗಳನ್ನು ಅನುಸರಿಸಬೇಕು, ಭವಿಷ್ಯದ ತಲೆಮಾರುಗಳಿಗೆ ಆರೋಗ್ಯಕರ, ಹಸಿರು ಭೂಮಿಯನ್ನು ಉಳಿಸಿ ಕೊಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಸರಕಾರ ಅಷ್ಟೊಂದು ಜಿಗುಟು ನಿಲುವು ತಾಳಿತು. ಈ ನಿರ್ಧಾರದಿಂದಾಗಿ ಕೇವಲ ಒಂದು ಮರ ಉಳಿಯಲಿಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಮತ್ತು ಪರಿಸರ ಹಾನಿಯ ನಡುವಿನ ಸಮತೋಲನ ಸಾಧಿಸುವ ಬಗ್ಗೆ ದೊಡ್ಡ ಚರ್ಚೆ ಶುರುವಾಯಿತು.
ಇದು ಮುಂದಿನ ಪೀಳಿಗೆಗೆ ಅ’ಮರ’ ಪಾಠವಾಯಿತು. ಈ ರೀತಿ ಭಾವನಾತ್ಮಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದರ ಮೂಲಕ ಮಾತ್ರ ನಿಜವಾದ ಪ್ರಗತಿ ಸಾಧ್ಯ ಎಂಬುದನ್ನು ಜಪಾನ್ ತೋರಿಸಿಕೊಟ್ಟಿತು. ವಿಕಾಸ ಮತ್ತು ಪರಿಸರ ಒಂದೇ ಹಾದಿಯಲ್ಲಿ ಸಾಗಬೇಕು, ಆರ್ಥಿಕ ಲಾಭದ ಮೊದಲು, ಮಾನವ ಕುಲವು ಭೂಮಿಯ ಬಗ್ಗೆ ಭದ್ರತೆ ಮತ್ತು ಪ್ರೀತಿ ತೋರಿಸಬೇಕು, ಒಂದು ಮರವನ್ನು ಉಳಿಸುವುದು ಕೇವಲ ಪರಿಸರ ಸಂರಕ್ಷಣೆಯಲ್ಲ, ಅದು ಮುಂದಿನ ಪೀಳಿಗೆಗೆ ನಾವು ನೀಡುವ ಹಸಿರು ಭರವಸೆ, ಇದು ಹೆಚ್ಚುವರಿ ವೆಚ್ಚ ಉಂಟುಮಾಡಿದರೂ, ಅತಿ ದೊಡ್ಡ ಹಿತವೆಂದರೆ ಪರಿಸರಕ್ಕೆ ಕೊಡುವ ಗೌರವ ಎಂಬ ಸಂದೇಶವನ್ನು ಎತ್ತಿ ಹಿಡಿಯುವುದು ಮುಖ್ಯ, ಮರವನ್ನು ಕಡಿಯುವ ಪ್ರಸಂಗ ಬಂದಾಗ ಅದನ್ನು ಸ್ಥಳಾಂತರಿ ಸುವುದಕ್ಕಿಂತ ಅದರ ಐತಿಹಾಸಿಕ ಮಹತ್ವ ವನ್ನು ಉಳಿಸುವುದು, ಅದನ್ನು ಅವಲಂಬಿಸಿರುವ ಜೀವಿಗಳ ಯೋಗಕ್ಷೇಮದ ಬಗ್ಗೆಯೂ ಯೋಚಿಸುವುದು ಮುಖ್ಯ. ಈ ಎಲ್ಲ ಕಾರಣಗಳಿಂದ, ಜಪಾನ್ ತನ್ನ ಸಂಸ್ಕೃತಿಯಲ್ಲಿರುವ ಪರಿಸರ ಪ್ರೇಮವನ್ನು ಮತ್ತೊಮ್ಮೆ ದೃಢಪಡಿಸಿತು.
ನಮ್ಮ ರಾಜ್ಯದ ಬಗ್ಗೆ ಮಾತಾಡದಿರುವುದೇ ಒಳ್ಳೆಯದು. ಯಾಕೆಂದರೆ ಒಂದು ರಸ್ತೆ ಅಗಲೀಕರಣದ ನೆಪವೊಡ್ಡಿ ನಾವು ಹಿಂದೆ ಮುಂದೆ ನೋಡದೇ ಸಾವಿರಾರು ಮರಗಳನ್ನು ನಿರ್ದಯವಾಗಿ ಕತ್ತರಿಸಿ ಹಾಕುತ್ತೇವೆ. ಆ ಬಗ್ಗೆ ಜನರೂ ಚಕಾರ ಎತ್ತುವುದಿಲ್ಲ. ಸರಕಾರಕ್ಕೆ ಅದು ಕಾಣುವುದೂ ಇಲ್ಲ. ಯಾರಾದರೂ ಬೊಬ್ಬೆ ಹೊಡೆದರೆ, ಯಾರೂ ಕೇಳಿಸಿಕೊಳ್ಳುವುದೂ ಇಲ್ಲ. ನಮಗೆ ಅದೊಂದು ಅತಿ ಮುಖ್ಯ ವಿಷಯ ಎಂದು ಅನಿಸುವುದೂ ಇಲ್ಲ.
ಅಷ್ಟಕ್ಕೂ ಪರಿಸರವಾದಿಗಳಿಂದ ಪ್ರತಿರೋಧ ವ್ಯಕ್ತವಾಯಿತೆನ್ನಿ, ಕಂಟ್ರಾಕ್ಟರುಗಳು ಕಡಿದ ಮರ ಗಳಿಗೆ ಸಮ ಸಂಖ್ಯೆಯ ಗಿಡಗಳನ್ನು ನೆಡುತ್ತೇವೆ ಎಂಬ ವಚನ ನೀಡಿದರೆ, ಆ ಕಳ್ಳ ಕಂಟ್ರಾಕ್ಟರುಗಳು ತಮ್ಮ ಭರವಸೆಯಂತೆ ನಡೆದುಕೊಂಡರಾ ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಿರು ವಾಗ ಒಂದು ಮರವನ್ನು ಉಳಿಸಿಕೊಳ್ಳುವ ಮಾತನ್ನಾಡಿದರೆ ನಮ್ಮಲ್ಲಿ ಅದೊಂದು ಶುದ್ಧ ಜೋಕ್ ಆದೀತು,
ಅಪಹಾಸ್ಯಕ್ಕೀಡಾಗಬೇಕಾದೀತು. ರಸ್ತೆ ಅಗಲೀಕರಣಕ್ಕೇ ಕೊಡಲಿಗೆ ನೆಲಸಮವಾಗುವ ಮರಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ನಾವು, ಇನ್ನು ದೊಡ್ಡ ದೊಡ್ಡ ಯೋಜನೆಗಳ ಹೆಸರಿನಲ್ಲಿ ಮಾರಣಹೋಮಕ್ಕೆ ತುತ್ತಾಗುವ ಮರಗಳಿಗೆ ಮಮ್ಮಲ ಮರುಗಲು ನಮಗೆ ಸಮಯ, ಸಂಯಮ ಎಲ್ಲಿದೆ? ‘ಒಂದು ಮರ ಉಳಿಸಲು ಯೋಜನೆ ಬದಲಿಸಿದ ಜಪಾನ್ ಸರಕಾರ’ ಎಂಬ ಶೀರ್ಷಿಕೆಯನ್ನು ನಮ್ಮ ಅರಣ್ಯ ಸಚಿವ ರಾಗಲಿ, ರಾಜಕಾರಣಿಗಳೇನಾದರೂ ಓದಿದರೆ, ಇದ್ಯಾಕೋ ಅತಿಯಾಯ್ತು’ ಎಂದೋ, sheer uninteresting ಎಂದೋ, boring ಎಂದೋ, ಒಣ ಆದರ್ಶ ಎಂದೋ ಮುಖ ಕಿವುಚಿ ಪುಟ ತಿರುವಿ ಹಾಕಬಹುದು.
ಈ ವರ್ಷದ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ ಬೆಂಗಳೂರಿನಂದೇ ೨,೮೪೮ ಮರಗಳನ್ನು ಕಡಿಯಲು ಅನುಮತಿ ನೀಡಿತು. ಕಡಿಯುವ ಒಂದು ಮರಕ್ಕೆ ತಲಾ ಹತ್ತು ಗಿಡಗಳನ್ನು ನೆಡುವಂತೆ ಆದೇಶಿಸಿತು. (ಅಂದು ಇಂಡಿಯನ್ ಎಕ್ಸ್‌ಪ್ರೆಸ್ ನೀಡಿದ ಹೆಡ್ ಲೈನ್ - Karnataka High Court allows felling of 2,848 trees in Bengaluru: The Court noted that against each tree to be felled, ten saplings should be planted).
ಆಯ್ತು.. ಅಂದರೆ ಕಡಿಯುವ ಒಂದುಮರಕ್ಕೆ ತಲಾ ಹತ್ತು ಗಿಡ ನೆಡಬೇಕು, ಅವುಗಳಿಗೆ ಬೇಲಿ ಕಟ್ಟಬೇಕು, ನೀರೆರೆಯಬೇಕು, ಪಾಲಿಸಬೇಕು, ಪೋಷಿಸಬೇಕು, ನಂತರ ಮರವಾಗಿ ಬೆಳೆಸಬೇಕು... ಇವನ್ನೆಲ್ಲ ಯಾರು ನೋಡಬೇಕು? ನಿಗಾ ಇಡಬೇಕು? ಲಕ್ಷ್ಯವಹಿಸಬೇಕು? ಈ ತೀರ್ಪಿನ ಪ್ರಕಾರ, ಮರ ಕಡಿದಿದ್ದಕ್ಕಾಗಿ 28,480 ಗಿಡಗಳನ್ನು ನೆಡಬೇಕು. ಎಲ್ಲಿ ನೆಡಬೇಕು? ಅಷ್ಟು ಜಾಗ ಇದೆಯಾ? ಅಷ್ಟು ಬೇಲಿಗಳು ಇವೆಯಾ? ಅವುಗಳಿಗೆ ನೀರನ್ನು ಹಾಕುವವರಾರು? ಅಷ್ಟು ಸಸ್ಯಗಳು ನರ್ಸರಿಯಲ್ಲಿ ಇವೆಯಾ? ಯಾವ ಜಾತಿಯ ಗಿಡಗಳನ್ನು ನೆಡಬೇಕು? ಈ ಯಾವ ವಿಷಯಗಳ ಬಗ್ಗೆಯೂ ತೀರ್ಪಿ ನಲ್ಲಿ ಇರಲಿಲ್ಲ. ಕೆಲ ತಿಂಗಳು, ವರ್ಷಗಳ ಬಳಿಕ ಈ ತೀರ್ಪು ನೀಡಿದ ನ್ಯಾಯಾಧೀಶರು ವರ್ಗವಾ ಗಿಯೋ, ನಿವೃತ್ತರಾಗಿಯೋ ಹೋಗಿರುತ್ತಾರೆ, ಈ ಆದೇಶವನ್ನು ಪಾಲಿಸಬೇಕಾದ ಕಂಟ್ರಾಕ್ಟರ್ ಇಂಥ ನಾಲ್ಕು ಯೋಜನೆ ಟೆಂಡರ್ ಗಿಟ್ಟಿಸಿಕೊಂಡು ಕೊಬ್ಬಿ ನೆಮ್ಮದಿಯಿಂದಿರುತ್ತಾನೆ, ಅದನ್ನು ನೋಡ ಬೇಕಾದ ಅಧಿಕಾರಿಗಳು ಆ ಹೊತ್ತಿಗೆ ನಿವೃತ್ತರಾಗಿರುತ್ತಾರೆ, ಇದನ್ನು ವರದಿ ಮಾಡಿದ ಪತ್ರಕರ್ತರು ಇಡೀ ವಿಷಯವನ್ನೇ ಮರೆತಿರುತ್ತಾರೆ.
ಅರಣ್ಯ ಸಚಿವರ ಖಾತೆಯೂ ಬದಲಾಗಿರುತ್ತದೆ ಅಥವಾ ಆತ ಮುಂದಿನ ಚುನಾವಣೆಯಲ್ಲಿ ಸೋತಿ ರುತ್ತಾನೆ, ಸರಕಾರ ಬದಲಾಗಿರುತ್ತದೆ, ಅಷ್ಟಕ್ಕೂ ಇವನ್ನೆಲ್ಲ ಯಾರು ನೆನಪಿಟ್ಟುಕೊಂಡಿರುತ್ತಾರೆ? ತಪ್ಪಿತಸ್ಥರ ವಿರುದ್ಧ ಹೋರಾಡಲು ಯಾರಿಗೆ ವ್ಯವಧಾನವಿದೆ? ಇದಕ್ಕೆಲ್ಲ ಯಾರನ್ನು ದೂರೋಣ?