ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಅನಾಮಧೇಯನ ಆಗಮನ ಮತ್ತು ನಿರ್ಗಮನ

ಅನಾಥ ಶವವಾಗಿ ಇವನ ಕೇಸ್ ಮುಗಿದು ಹೋಗಬೇಕಿತ್ತು. ಆದರೆ ಇವನು ತನ್ನ ಅಸ್ತಿತ್ವ ಮತ್ತು ಸಾವನ್ನು ಯೋಜಿಸಿಕೊಂಡ ರೀತಿ ಈ ಪ್ರಕರಣವನ್ನೂ ಬಗೆಹರಿಯದ ನಿಗೂಢವಾಗಿ ಮಾಡಿ ಬಿಟ್ಟಿತು. ಪುಟ್ಟ ನಗರ ಸ್ಲಿಗೊಗೆ ಶುಕ್ರವಾರ ಸಂಜೆ ಬಸ್ಸಿನಲ್ಲಿ ಬಂದಿಳಿದ ಇವನು ಕ್ವೇ ಸ್ಟ್ರೀಟ್‌ನಲ್ಲಿದ್ದ ಸ್ಲಿಗೊ ಸಿಟಿ ಹೋಟೆಲ್‌ಗೆ ಹೋದ. ಮುಂದಿನ ಮೂರು ದಿನಗಳಿಗೆ ಒಂದು ರೂಮನ್ನು ಬುಕ್ ಮಾಡಿದ.

ಅನಾಮಧೇಯನ ಆಗಮನ ಮತ್ತು ನಿರ್ಗಮನ

ಸುದ್ದಿ ಸಂಪಾದಕ, ಅಂಕಣಕಾರ ಹರೀಶ್‌ ಕೇರ

ಹರೀಶ್‌ ಕೇರ ಹರೀಶ್‌ ಕೇರ Apr 3, 2025 7:18 AM

ಕಾಡುದಾರಿ

2009ರ ಜೂನ್ ಮಾಹೆಯ ಒಂದು ಮಧ್ಯಾಹ್ನ, ಕಪ್ಪು ಬಟ್ಟೆ ಧರಿಸಿದ ತೆಳ್ಳಗಿನ ವ್ಯಕ್ತಿಯೊಬ್ಬ ಐರ್ಲೆಂಡ್‌ನ ಡೆರಿ ಎಂಬ ಪಟ್ಟಣದಿಂದ ಐರಿಶ್ ಗಡಿಯಿಂದ ದೂರದಲ್ಲಿರುವ ಸಣ್ಣ ಕರಾವಳಿ ಪಟ್ಟಣವಾದ ಸ್ಲಿಗೊಗೆ ಹೋಗುವ ಬಸ್ ಹತ್ತಿದ. ಸ್ಲಿಗೊದಲ್ಲಿ ಇಳಿದು ಒಂದು ಹೋಟೆಲ್‌ನಲ್ಲಿ ಮೂರು ದಿನ ಉಳಿದುಕೊಂಡ. ಮೂರನೇ ದಿನ ಅವನ ಶವ ಅಲ್ಲಿನ ಬೀಚ್‌ನಲ್ಲಿ ದೊರೆಯಿತು. ಡೆರಿಯಿಂದ ಬಸ್ ಹತ್ತುವ ಮೊದಲು ಅವನನ್ನು ನೋಡಿದವರು ಯಾರೂ ಇರಲಿಲ್ಲ. ಅವನ ಪರಿಚಯ ಐರ್ಲೆಂಡ್‌ನಲ್ಲಂತೂ ಯಾರಿಗೂ ಇರಲಿಲ್ಲ. ಇದಾಗಿ ಹದಿನೈದು ವರ್ಷಗಳಾದ ಬಳಿಕವೂ, ಇವನು ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು, ಪತ್ರಕರ್ತರು ಹೆಣಗಾಡುತ್ತಲೇ ಇದ್ದಾರೆ.

ಅನಾಥ ಶವವಾಗಿ ಇವನ ಕೇಸ್ ಮುಗಿದು ಹೋಗಬೇಕಿತ್ತು. ಆದರೆ ಇವನು ತನ್ನ ಅಸ್ತಿತ್ವ ಮತ್ತು ಸಾವನ್ನು ಯೋಜಿಸಿಕೊಂಡ ರೀತಿ ಈ ಪ್ರಕರಣವನ್ನೂ ಬಗೆಹರಿಯದ ನಿಗೂಢವಾಗಿ ಮಾಡಿ ಬಿಟ್ಟಿತು. ಪುಟ್ಟ ನಗರ ಸ್ಲಿಗೊಗೆ ಶುಕ್ರವಾರ ಸಂಜೆ ಬಸ್ಸಿನಲ್ಲಿ ಬಂದಿಳಿದ ಇವನು ಕ್ವೇ ಸ್ಟ್ರೀಟ್‌ನಲ್ಲಿದ್ದ ಸ್ಲಿಗೊ ಸಿಟಿ ಹೋಟೆಲ್‌ಗೆ ಹೋದ. ಮುಂದಿನ ಮೂರು ದಿನಗಳಿಗೆ ಒಂದು ರೂಮನ್ನು ಬುಕ್ ಮಾಡಿದ.

ತನ್ನ ಹೆಸರನ್ನು ಪೀಟರ್ ಬರ್ಗ್‌ಮನ್ ಎಂದು ಬರೆದ. ವಿಳಾಸದ ಜಾಗದಲ್ಲಿ ಆಸ್ಟ್ರಿಯಾದ ನಗರವೊಂದರ ವಿಳಾಸ ನಮೂದಿಸಿದ. ಯಾರೂ ಅವನನ್ನು ಐಡಿ ಪ್ರೂಫ್ ಕೇಳಲಿಲ್ಲ. ನೀಟಾಗಿ ಡ್ರೆಸ್ ಮಾಡಿಕೊಂಡು ಸಭ್ಯನಂತೆ ಕಾಣುತ್ತಿದ್ದ ಅವನನ್ನು ಸಂಶಯಿಸಲು ಯಾರಿಗೂ ಯಾವುದೇ ಕಾರಣ ವಿರಲಿಲ್ಲ. ಮರುದಿನ ಬೆಳಗ್ಗೆ ರೂಮಿನಿಂದ ಹೊರಟ ಅವನು ಸ್ಥಳೀಯ ಪೋಸ್ಟ್ ಆಫೀಸಿಗೆ ಹೋಗಿ ಕೆಲವು ಸ್ಟಾಂಪ್, ಏರ್‌ಮೇಲ್ ಸ್ಟಿಕರ್ ಕೊಂಡ. ನಗರದಲ್ಲಿ ಅಲ್ಲಿ ಇಲ್ಲಿ ಸುತ್ತಾಡಿದ. ಮರಳಿ ಹೋಟೆಲ್‌ಗೆ ಬಂದ.

ಇದನ್ನೂ ಓದಿ: Harish Kera Column: ಸುನಿತಾ ನೆಪದಲ್ಲಿ ಕೆಲವು ಸಂಗತಿಗಳು

ಭಾನುವಾರ ನಗರದಲ್ಲಿದ್ದ ಒಂದೇ ಒಂದು ಟ್ಯಾಕ್ಸಿ ಸ್ಟಾಂಡ್‌ಗೆ ಹೋಗಿ ಅಲ್ಲಿಂದ ಟ್ಯಾಕ್ಸಿ ಹಿಡಿದು, ಅಲ್ಲಿಗೆ ಸಮೀಪದ ಯಾವುದಾದರೂ ಪ್ರಶಾಂತ ಬೀಚ್‌ಗೆ ಕರೆದೊಯ್ಯಲು ಹೇಳಿದ. ಟ್ಯಾಕ್ಸಿಯವನು ಅವನನ್ನು ರೋಸೆಸ್ ಪಾಯಿಂಟ್‌ಗೆ ಕರೆದೊಯ್ದ. ಈತ ಕೆಲವೇ ನಿಮಿಷ ಅಲ್ಲಿದ್ದು ಹಿಂತಿರುಗಿದ. ಹೋಟೆಲ್‌ಗೆ ಬಂದು ಸಿಗರೇಟ್ ಸೇದಿದ. ಈ ನಡುನಡುವೆ ನೇರಳೆ ಬಣ್ಣದ ಪುಟ್ಟ ಬ್ಯಾಗ್‌ಗಳನ್ನು ಹಿಡಿದು ಹೊರಗೆ ಹೋಗಿ ಬರುತ್ತಿದ್ದ.

ಮರಳುವಾಗ ಆ ಬ್ಯಾಗ್‌ಗಳು ಅವನ ಬಳಿ ಇರುತ್ತಿರಲಿಲ್ಲ. ಸೋಮವಾರ ಮಧ್ಯಾಹ್ನ ಹೋಟೆಲ್ ರೂಮಿನಿಂದ ಚೆಕ್‌ಔಟ್ ಮಾಡಿದ. ಸ್ಥಳೀಯ ಬಸ್ ನಿಲ್ದಾಣಕ್ಕೆ ಹೋದ. ಜೇಬಿನಲ್ಲಿದ್ದ ತಾನೇ ಬರೆದುಕೊಂಡ ಪುಟ್ಟ ಚೀಟಿಗಳನ್ನು ಹೊರತೆಗೆದು ಓದಿಕೊಂಡು ಅವುಗಳನ್ನು ಚೂರುಚೂರಾಗಿ ಹರಿದು ಡಸ್ಟ್‌ಬಿನ್‌ಗೆ ಚೆಲ್ಲಿದ. ರೋಸೆಸ್ ಪಾಯಿಂಟ್‌ಗೆ ಹೋಗುವ ಬಸ್ ಹಿಡಿದ. ಅಂದು ಸಂಜೆ ಯಿಡೀ ಹತ್ತಾರು ಮಂದಿ ಆತ ರೋಸೆಟ್ ಪಾಯಿಂಟ್ ಬೀಚ್‌ನಲ್ಲಿ ಪ್ರಶಾಂತವಾಗಿ ನಿಂತಿದ್ದುದು, ಓಡಾಡುತ್ತಿದ್ದುದನ್ನು ನೋಡಿದರು.

Paint ok

ಮರುದಿನ ಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದವರು ಅವನ ಹೆಣವನ್ನು ಕಂಡರು. ಅದು ನೀರಿನಿಂದ ತೇಲಿಬಂದು ದಡದಲ್ಲಿ ಬಿದ್ದುಕೊಂಡಿತ್ತು. ಪೊಲೀಸರು ಬಂದರು. ವಿಚಿತ್ರ ಅನ್ನಿಸಿದ್ದು, ಈ ಮನುಷ್ಯ ತನ್ನ ಬಗ್ಗೆ ಯಾವುದೇ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ತನ್ನ ಗುರುತು ಹಿಡಿಯಲು ನೆರವಾಗಬಹುದಾದ ಎಲ್ಲ ಗುರುತುಗಳನ್ನೂ ಅಳಿಸಿ ಹಾಕಿದ್ದ. ತಾನು ಧರಿಸಿದ್ದ ಬಟ್ಟೆಗಳ ಲೇಬಲ್‌ ಗಳನ್ನು ಕೂಡ ಕತ್ತರಿಸಿ ತೆಗೆದಿದ್ದ. ಅವರು ಹೋಟೆಲ್‌ನಲ್ಲಿ ಕೊಟ್ಟಿದ್ದ ಹೆಸರು ನಕಲಿಯಾಗಿತ್ತು; ಕೊಟ್ಟ ವಿಳಾಸ ಇರಲೇ ಇಲ್ಲ. ಪಟ್ಟಣದಲ್ಲಿ ಓಡಾಡುವಾಗ ಹೆಚ್ಚಾಗಿ ಸಿಸಿ ಕ್ಯಾಮೆರಾಗಳು ಇಲ್ಲದ ಕಡೆ ಓಡಾಡಿದ್ದ.

ನೇರಳೆ ಬ್ಯಾಗ್‌ನಲ್ಲಿ ಆತ ತನ್ನಲ್ಲಿದ್ದ ಏನನ್ನೋ ಪ್ರತಿದಿನ ಒಯ್ದು ವಿಲೇವಾರಿ ಮಾಡುತ್ತಿದ್ದ ಎಂಬುದಂತೂ ಖಚಿತವಾಗಿತ್ತು. ಆದರೆ ಅದು ನಗರದಲ್ಲಿ ಎಲ್ಲೂ ಪತ್ತೆಯಾಗಲಿಲ್ಲ. ಅವನ ದೇಹದ ಪೋಸ್ಟ್ ಮಾರ್ಟಮ್ ಮಾಡಿದಾಗ ಒಂದು ಅಂಶ ಗೊತ್ತಾಯಿತು- ಅವನಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬೆಳೆದಿತ್ತು; ಮೂಳೆಯಲ್ಲಿ ಟ್ಯೂಮರ್ ಇತ್ತು. ಈ ಹಿಂದೆ ಹಾರ್ಟ್ ಅಟ್ಯಾಕ್‌ಗಳು ಆಗಿದ್ದವು ಅಂದರೆ ಹೃದಯ ಸಮಸ್ಯೆಯಿತ್ತು. ಒಂದು ಕಿಡ್ನಿ ಇರಲಿಲ್ಲ.

ಈತನ ಫೋಟೊಗಳನ್ನು ಯುರೋಪ್‌ನ ಎಡೆ ಪಸರಿಸಿ ಯಾರಾದರೂ ಗುರುತು ಹಚ್ಚುತ್ತಾರೋ ಎಂದು ನೋಡಲಾಯಿತು. 15 ವರ್ಷಗಳಾದರೂ ಇನ್ನೂ ಯಾರೂ ಇವನು ನಮ್ಮವನು ಎಂದು ಬಂದಿಲ್ಲ. ಇಂಟರ್‌ಪೋಲ್‌ನಂಥ ಸಂಸ್ಥೆಗಳೇ ಇವನ ಗುರುತು ಹಿಡಿಯಲಾಗದೆ ಕೈಚೆಲ್ಲಿವೆ. ಅವನ ಡಿಎನ್‌ಎಗಳನ್ನೂ ಹಲ್ಲುಗಳನ್ನೂ ಕೇಶವನ್ನೂ ಐರಿಶ್ ಪೊಲೀಸರು ಸಂಗ್ರಹಿಸಿ ಇಟ್ಟಿದ್ದಾರೆ- ಮುಂದೆ ಎಂದಾದರೂ ಇವನ ಗುರುತು ಪತ್ತೆ ಹಚ್ಚಬಹುದು ಎಂಬ ಭರವಸೆಯಲ್ಲಿ. ಡಿಎನ್‌ಎ ಮೂಲಕ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ.

ಅದಕ್ಕೆ ಮ್ಯಾಚಿಂಗ್ ಆಗುವ ಮಾದರಿಗಳು ಸಿಕ್ಕಿದರೆ ಮಾತ್ರ ರಹಸ್ಯ ಭೇದಿಸಲು ಸಾಧ್ಯ. ಹೀಗೂ ಆಗಿವೆ. ಆಸ್ಟ್ರೇಲಿಯಾದ ಬೀಚ್ ಒಂದರಲ್ಲಿ 1948ರಷ್ಟು ಹಿಂದೆಯೇ ದೊರೆತ, ಸಾಮರ್‌ಟನ್ ಮ್ಯಾನ್ ಎಂದು ಕರೆಯಲಾಗುವ ವ್ಯಕ್ತಿ ಯಾರೆಂಬುದನ್ನು 70 ವರ್ಷಗಳ ನಂತರ ಇದೀಗ ಭೇದಿಸ ಲಾಗಿದೆ ಎಂದು ತಜ್ಞರು ಹೇಳಿದ್ದಾರೆ.

2001ರಲ್ಲಿ ಇದೇ ರೀತಿ ವಾಷಿಂಗ್ಟನ್‌ನ ಹೋಟೆಲೊಂದಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ನಿಗೂಢ ವ್ಯಕ್ತಿಯ ಗುರುತನ್ನು 2018ರಲ್ಲಿ ಪತ್ತೆ ಹಚ್ಚಲಾಗಿದೆ. ಪೀಟರ್ ಬರ್ಗ್‌ಮನ್‌ನ ರಹಸ್ಯವೂ ಮುಂದೊಂದು ದಿನ ಬಯಲಾಗಬಹುದು. ಆದರೆ ಅವನು ಕೊನೆಯ ಕ್ಷಣದಲ್ಲಿ ಹೊತ್ತು ನಡೆದ ಭಾವಗಳ ಅಂದಾಜು ನಮಗೆ ಸಿಗದು. ಇವನು ಯಾರಿರಬಹುದು ಎಂಬುದರ ಬಗ್ಗೆ ಹತ್ತಾರು ಊಹೆ ಗಳನ್ನು ತೇಲಿಬಿಡಲಾಗಿದೆ. ತನ್ನೆಲ್ಲ ಸುಳಿವುಗಳನ್ನೂ ಯಶಸ್ವಿಯಾಗಿ ನಾಶ ಮಾಡಿದ ರೀತಿ ನೋಡಿ ದರೆ, ಇವನ್ಯಾರೋ ಬೇಹುಗಾರಿಕೆಯಲ್ಲಿ ಪಳಗಿದ ವ್ಯಕ್ತಿಯೇ ಇರಬಹುದು. ಅಥವಾ ವೈರಿಗಳಿಂದ ಪಾರಾಗಲು ಬಯಸಿ ಬಂದ ಗ್ಯಾಂಗ್ ಸ್ಟರ್ ಇರಬಹುದು.

ಎರಡನೇ ಮಹಾಯುದ್ಧದಲ್ಲಿ ಮಹಾಪಾತಕಗಳನ್ನು ಎಸಗಿದ ನಾಜಿ ಕ್ರಿಮಿನಲ್‌ನ ಮಗ ಇರಬಹುದು. ಮಿಲಿಟರಿ ಅಥವಾ ತನಿಖಾ ಹಿನ್ನೆಲೆಯವನಿರಬಹುದು. ಇನ್ನೂ ಯಾರೆಂದು ಪತ್ತೆ ಹಚ್ಚಲಿಕ್ಕಾಗದ, ಬಿಟ್‌ಕಾಯಿನ್‌ನ ಫೌಂಡರ್, ಸತೋಷಿ ನಕಮೊಟೊ ಇರಬಹುದು. ಕೆಲವರ ಊಹೆ ಇನ್ನಷ್ಟು ವೈಲ್ಡ್ ಆಗಿತ್ತು- ಅನ್ಯ ಗ್ರಹಜೀವಿಯೇ ಆಗಿರಬಹುದು. ಅಥವಾ ರುದ್ರಮನೋಹರ ತಾಣದಲ್ಲಿ ತನ್ನ ಪಾಡಿಗೆ ತಾನು ಅನಾಮಧೇಯನಾಗಿ ಸಾಯಲು ಬಂದ ಒಬ್ಬ ಸಾಮಾನ್ಯ ನಿರಬಹುದು; ಆದರೆ ಹಾಗೆ ಸಾಯುವಾಗ ತನ್ನ ಗುರುತು ಯಾರಿಗೂ ಆಗದಿರಲಿ ಅಂದುಕೊಂಡಿರ ಬಹುದು.

ಆದರೆ ಯಾವುದೂ ಸಮಂಜಸ ಊಹೆಯಾಗಿ ಕಾಣಿಸುವುದಿಲ್ಲ. ಇದ್ಯಾವುದನ್ನೂ ಸಮರ್ಥಿಸುವ ಅಂಶಗಳೂ ಇಲ್ಲ. ಪೀಟರ್ ಬರ್ಗ್‌ಮನ್‌ನ ಕೊನೆಯ ದಿನಗಳನ್ನು ಸ್ಲಿಗೋದ ಸಿಸಿಟಿವಿ ನೆಟ್‌ವರ್ಕ್ ಮೂಲಕ ಒಟ್ಟು ಗೂಡಿಸಲಾಯಿತು. ಆ ವ್ಯಕ್ತಿ ಪ್ರತಿದಿನ ಹೋಟೆಲ್ ನಿಂದ ತನ್ನ ನೇರಳೆ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ತುಂಬಿಕೊಂಡು ಹೊರಟು ಖಾಲಿ ಕೈಯಲ್ಲಿ ಹಿಂತಿರುಗುತ್ತಿದ್ದ. ನಡುವಿನ ಸಮಯದಲ್ಲಿ ಆತ ನಿಗೂಢವಾಗಿ ಕಣ್ಮರೆಯಾಗುತ್ತಿದ್ದ.

ಕಣ್ಗಾವಲು ಕ್ಯಾಮೆರಾಗಳಿಂದ ಸೆರೆಹಿಡಿಯಲ್ಪಡದಂತೆ ಪಟ್ಟಣದ ವಿವಿಧ ಕಸದ ಬುಟ್ಟಿಗಳಲ್ಲಿ ತನ್ನ ವಸ್ತುಗಳನ್ನು ಚೆಲ್ಲಿರಬಹುದು. ಆದರೆ ಅವು ಸಿಗಲಿಲ್ಲ. ಅವನು ಪೋಸ್ಟ್ ಆಫೀಸ್‌ನಿಂದ ಕಳಿಸಿರ ಬಹುದಾದ ಲೆಟರ್ ಗಳೂ ಯಾರಿಗೆ ಹೋದವು ಎಂದು ಗೊತ್ತಾಗಲಿಲ್ಲ. ಜೀವಂತ ಜಗತ್ತಿನಲ್ಲಿ ಒಂದು ನೆರಳು ಚಲಿಸಿದಂತೆ ಆತ ಚಲಿಸುತ್ತಿದ್ದ. ಆದರೆ ಅವನ ಪ್ರತಿಯೊಂದು ಕ್ರಿಯೆಯಲ್ಲೂ ಒಂದು ನಿಗೂಢ ಉದ್ದೇಶವಿತ್ತು. ನಮ್ಮ ನಡುವೆ ಎಷ್ಟೋ ಜನ ತುಂಬಾ ಒಂಟಿಯಾಗಿರುತ್ತಾರೆ.

ಅವರನ್ನು ನಾವು ಗಮನಿಸಿಯೂ ಗಮನಿಸದಂತೆ ಮುಂದೆ ಹೋಗುತ್ತೇವೆ. ಕೆಲವೊಮ್ಮೆ ಜನರ ನಡುವೆ ತುಂಬಾ ಬೆರೆಯುವ ಮನುಷ್ಯ ಕೂಡ ಇದು ಸಾಕಿನ್ನು ಎಂಬಂತೆ ಎದ್ದು ನಡೆದು ಬಿಡು ತ್ತಾನೆ. ಹಾಗಿರುವವನು ಕೂಡ ಡೆತ್ ನೋಟ್ ಬರೆದಿಡಲು ಯತ್ನಿಸುತ್ತಾನೆ. ‘ತಾನೊಬ್ಬ ಬದುಕಿz’ ಎಂದು ಇತರರಿಗೆ ಗೊತ್ತು ಮಾಡಿಸಲು ಮುಂದಾಗುತ್ತಾನೆ. ಆದರೆ ತಾನೆಂಬ ತಾನು ಎಂದೂ ಎಲ್ಲೂ ಇರಲೇ ಇಲ್ಲ ಎಂಬಂತೆ ಎಲ್ಲ ಸಾಕ್ಷಿಗಳನ್ನೂ ಅಳಿಸಿಹಾಕಿ ಮರೆಗೆ ಸರಿಯುವುದು ಬಲು ವಿಚಿತ್ರ.

ಮನುಷ್ಯನ ಮನಸ್ಸು ಮೆದುಳುಗಳು ಎಷ್ಟು ಜಟಿಲವಾಗಿ ಕಾರ್ಯಾಚರಿಸುತ್ತವೆ ಎಂಬುದರ ನಿದರ್ಶನ ಇದು. ಆತನ ಬಗ್ಗೆ ನಮಗೆ ತಿಳಿದಿರುವ ಒಂದೇ ಅಂಶವೆಂದರೆ ಆತನ ಮಾರಕ ಕಾಯಿಲೆ ಗಳು. ಅವನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಸಾಯಬಹುದಿತ್ತು. ಆದರೆ ತನ್ನ ಸಾವಿನ ದಿನ- ಕ್ಷಣವನ್ನು ಅವನೇ ವಿವರವಾಗಿ ಯೋಜಿಸಿ ಆಯ್ಕೆ ಮಾಡಿಕೊಂಡಿದ್ದ. ಎಲ್ಲಿಯೂ ತಪ್ಪಿರ ಲಿಲ್ಲ.

ಅದೊಂದು ಅವನ ದಾರುಣ ಬಾಳಿನ ನಡುವೆಯೂ ಅತ್ಯಂತ ಧೀರ ನಿಲುವು ಆಗಿತ್ತು; ಅವನನ್ನು ಕಾಡಿರಬಹುದಾದ ಕಟ್ಟೇಕಾಂತದ ನಡುವೆಯೂ ಅವನು ಮಾನಸಿಕ ಸ್ಥಿರತೆ ಕಾಪಾಡಿಕೊಂಡಿದ್ದ ಎನ್ನುವುದಕ್ಕೆ ಅವನು ತನ್ನ ನಿರ್ಗಮನಕ್ಕೆ ತಯಾರಿ ಮಾಡಿಕೊಂಡಿದ್ದ ರೀತಿಯೇ ಸಾಕ್ಷಿ. ಇದು ಆ ಕಾಯಿಲೆಗಳ ಮೇಲೆ ಅವನು ಸಮರ ಸಾರಿದ, ಅವುಗಳ ಮೇಲೆ ಗೆಲುವು ಸಾಧಿಸಿದ ರೀತಿಯೂ ಇರಬಹುದು. ನಮ್ಮಿಂದ ಗೆಲ್ಲಲಾಗದ ಸಂಗತಿಗಳ ಮುಂದೆ ಸೋಲದಿರಲು ನಾವು ಹೇಗೆ ಹೇಗೋ ಪ್ರಯತ್ನಿಸುತ್ತೇವಲ್ಲವೇ? ಹೀಗೆ ತನ್ನನ್ನು ತಾನೇ ಒಂದು ರಹಸ್ಯವಾಗಿ ಪರಿವರ್ತಿಸಿಕೊಂಡು ಪೀಟರ್ ಬರ್ಗ್‌ಮನ್ ತಾನು ಪ್ರೀತಿಸುವ ಅಥವಾ ತನ್ನನ್ನು ಪ್ರೀತಿಸುವ ಜನರಿಂದ ಕಣ್ಮರೆಯಾಗಲು ಬಯಸಿದ್ದು ಯಾಕೋ? ಹಾಗೆ ಪ್ರೀತಿಸುವವರಾದರೂ ಅವನಿಗೆ ಇದ್ದರೋ ಇಲ್ಲವೋ. ಆತ್ಮಹತ್ಯೆ ಮಾಡಿಕೊಳ್ಳುವವರು ಕೊನೆಯ ಕ್ಷಣದಲ್ಲಿ ತಮ್ಮನ್ನು ಯಾರಾದರೂ ಬದುಕಿಸಲಿ ಎಂದು ಅಪ್ರಜ್ಞಾಪೂರ್ವಕವಾಗಿ ಬಯಸುತ್ತಾರೆ.

ಯಾರಿಗಾದರೂ ಕರೆ ಮಾಡುತ್ತಾರೆ. ಆದರೆ ಇವನು ಅದನ್ನೇನೂ ಮಾಡಲಿಲ್ಲ. ಅವನು ಜನರಿಂದ ದೂರವಿದ್ದ. ತನ್ನ ವರ್ತನೆಯನ್ನು ಒಬ್ಬ ಪರ್ ಫೆಕ್ಟ್ ಜಂಟಲ್‌ಮ್ಯಾನ್‌ನಂತೆ ಇಟ್ಟುಕೊಂಡಿದ್ದ. ಯಾರಾದರೂ ಎದುರಿಗೆ ಸಿಕ್ಕರೆ ಮುಗುಳ್ನಕ್ಕು ಮುಂದೆ ಹೋಗುತ್ತಿದ್ದ ಬಿಟ್ಟರೆ ಮಾತನಾಡು ತ್ತಿರಲಿಲ್ಲ. ಅವನ ಕೊನೆಯ ದಿನಗಳಂತೆ ಅವನ ಬದುಕೂ ಅಷ್ಟೇ ಒಂಟಿಯಾಗಿದ್ದಿರಬಹುದೇ? ಅದು ಸಾಧ್ಯವಿದೆ.

ಯಾಕೆಂದರೆ ಬದುಕಿಡೀ ಒಂದು ರೀತಿಯ ವರ್ತನೆಯಲ್ಲಿದ್ದು, ಕೊನೆಯ ಮೂರು ದಿನಗಳು ಇನ್ನೊಂ ದು ರೀತಿ ಇರಲು ಸಾಧ್ಯವಿಲ್ಲ. ಇದೇ ಮೇ ತಿಂಗಳಲ್ಲಿ ನಡೆಯುತ್ತಿರುವ ಗಾಲ್ ವೇ ಥಿಯೇಟರ್ ಫೆಸ್ಟಿವಲ್‌ನಲ್ಲಿ ಇವನ ‘ಬದುಕು’ ಅಥವಾ ಕೊನೆಯ ದಿನಗಳನ್ನು ಆಧರಿಸಿದ ‘ಮಿ. ಬರ್ಗ್‌ಮನ್ ಆಫ್ ಡೆಡ್‌ಮ್ಯಾನ್ಸ್ ಪಾಯಿಂಟ್’ ಎಂಬ ನಾಟಕ ಪ್ರದರ್ಶಿತವಾಗಲಿದೆ. ನಾಟಕಕ್ಕೆ ತೆರೆ ಬೀಳಬ ಹುದು; ಇವನ ನಿಗೂಢಕ್ಕೆ ತೆರೆ ಬೀಳಬಹುದೇ ಎಂಬುದಷ್ಟೆ ಕುತೂಹಲ.