ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Vinayaka M Bhatta Column: ಬಹುಮುಖಿ ಪ್ರತಿಭಾ ಸಂಪನ್ನ ಡಾ.ಕುಮಾರ್‌ ವಿಶ್ವಾಸ್

ವಿಶ್ವಾಸ್ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕುತೂಹಲಕಾರಿ ಸಂಗತಿ ಯೆಂದರೆ, ಅವರು ಅಣ್ಣಾ ಹಜಾರೆಯವರ ‘ಭ್ರಷ್ಟಾಚಾರ ವಿರೋಧಿ ಅಭಿಯಾನ’ವನ್ನು ಬೆಂಬ ಲಿಸಿದ್ದು, ಕೃತಿಚೌರ್ಯದ ಆರೋಪಗಳು ಮತ್ತು ಆಮ್ ಆದ್ಮಿ ಪಕ್ಷದ ನೀತಿಗಳನ್ನು ಕೆಲವೊಮ್ಮೆ ಬಹಿರಂಗವಾಗಿ ಟೀಕಿಸಿದ್ದು ಮುಂತಾದ ಕಾರಣಕ್ಕೆ ಆಗಾಗ ವಿವಾದಕ್ಕೀಡಾದದ್ದೂ ಇದೆ. ಒಟ್ಟಿ ನಲ್ಲಿ ಅವರ ಜೀವನವು ವೈವಿಧ್ಯಮಯವೂ ವರ್ಣರಂಜಿತವೂ ಆಗಿರುವುದಂತೂ ಖರೆ!

ಬಹುಮುಖಿ ಪ್ರತಿಭಾ ಸಂಪನ್ನ ಡಾ.ಕುಮಾರ್‌ ವಿಶ್ವಾಸ್

ಅಂಕಣಕಾರ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

Profile Ashok Nayak Feb 23, 2025 10:44 AM

ಕೆಲ ದಿನಗಳ ಹಿಂದೆ, ಕಮೆಡಿಯನ್ ಕಪಿಲ್ ಶರ್ಮಾ ಅವರ ಬಗ್ಗೆ ನಾನು ಬರೆದಿದ್ದೆ, ಈಗ ಅಂಥದೇ ಮತ್ತೊಬ್ಬ ಪ್ರೇರಣಾದಾಯಕ ‘ಯುವ ಐಕಾನ್’, ಪ್ರಭಾವಶಾಲಿ ವ್ಯಕ್ತಿತ್ವದ ಡಾ. ಕುಮಾರ್ ವಿಶ್ವಾಸ್ ಅವರನ್ನು ಪರಿಚಯಿಸುತ್ತಿದ್ದೇನೆ. ಡಾ.ಕುಮಾರ್ ಅವರದ್ದು ಸಾಕಷ್ಟು ಆಸಕ್ತಿದಾಯಕ, ವರ್ಣರಂಜಿತ ಮತ್ತು ಬಹು ಆಯಾಮದ ವ್ಯಕ್ತಿತ್ವ. ನೀವು ಅವರ ಬಗ್ಗೆ ತಿಳಿದುಕೊಂಡಷ್ಟೂ ಇನ್ನೂ ಹೆಚ್ಚು ಕುತೂಹಲಿಯಾಗುತ್ತೀರಿ. ಒಂದು ಹಂತದಲ್ಲಿ ನಿಮಗೆ ಅವರು ಕಟ್ಟಾ ದೇಶಭಕ್ತನಾಗಿ, ಕ್ರಾಂತಿಕಾರಿಯಾಗಿ ಕಂಡರೆ, ಇನ್ನೊಂದು ಹಂತದಲ್ಲಿ ಕವಿ ಯಾಗಿ, ಪ್ರವಚನಕಾರನಾಗಿ, ರಾಜಕಾರಣಿಯಾಗಿ ಕಾಣುತ್ತಾರೆ. ಅವರು ಕಾಲೇಜು ಅಧ್ಯಾ ಪಕರಾಗಿ, ಕವಿಯಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ತಮ್ಮ ಭಾಷಣ ಕೌಶಲದಿಂದಾಗಿ ಇಂದು ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ.

ರಾಜಕಾರಣಿಗಳಲ್ಲಿ ‘ಕವಿತ್ವ’ ಇರುವುದು ಹೊಸದೇನಲ್ಲ, ಇದಕ್ಕೆ ಅಟಲ್ ಬಿಹಾರಿ ವಾಜ ಪೇಯಿಯವರೇ ಉತ್ತಮ ಉದಾಹರಣೆ. ಆದರೆ, ಎರಡರಲ್ಲೂ ಸಮಾನವಾಗಿ ಬೆಳೆಯು ವುದು ಅಪರೂಪದ ವಿಷಯ. ಕುಮಾರ್ ವಿಶ್ವಾಸ್ ಕೇವಲ ಹವ್ಯಾಸಿ/ಅರೆಕಾಲಿಕ ಕವಿ ಯಲ್ಲ; ಅವರು ಹಿಂದಿ ಭಾಷೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿವೆತ್ತ ಕವಿವರ್ಯ.

ಇದನ್ನೂ ಓದಿ: Vinayaka M Bhatta Column: ಭಾರತದಲ್ಲಿ ಆದಾಯ ತೆರಿಗೆ: ಸಿಂಹಾವಲೋಕನ

ಅವರ ‘ಕೋಯಿ ದೀವಾನಾ ಕೆಹ್ತಾ ಹೈ’ ಕೃತಿಯು ಹಿಂದಿ ಸಾಹಿತ್ಯದಲ್ಲಿ ತನ್ನ ಆಳವಾದ, ಕಾವ್ಯಾತ್ಮಕ ಮತ್ತು ಭಾವನಾತ್ಮಕ ಅನುರಣನಕ್ಕೆ ಹೆಸರುವಾಸಿಯಾಗಿದ್ದರೆ, ‘ಫಿರ್ ಮೇರಿ ಯಾದ್’ ಕೃತಿಯು ‘ಬೆಸ್ಟ್ ಸೆಲ್ಲರ್’ ಎನಿಸಿಕೊಂಡು ಗಮನಾರ್ಹ ಸಾಧನೆಯನ್ನು ದಾಖ ಲಿಸಿದೆ.

ಅವರ ಅಭಿಮಾನಿ ಬಳಗವು ಭಾರತಕ್ಕಷ್ಟೇ ಸೀಮಿತವಾಗದೆ ದುಬೈ, ಜಪಾನ್, ಸಿಂಗಾಪುರ, ಅಮೆರಿಕಗಳವರೆಗೂ ಹಬ್ಬಿದೆ. ಅವರು ಮುಖ್ಯವಾಗಿ ಶೃಂಗಾರ ರಸದ ಕವಿ- ಸೌಂದರ್ಯ, ಪ್ರೀತಿ, ಪ್ರಣಯ ಮತ್ತು ಆಕರ್ಷಣೆಯ ಬಗ್ಗೆ ಹೆಚ್ಚು ಬರೆಯುತ್ತಾರೆ.

ವಿಶ್ವಾಸ್ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕುತೂಹಲಕಾರಿ ಸಂಗತಿ ಯೆಂದರೆ, ಅವರು ಅಣ್ಣಾ ಹಜಾರೆಯವರ ‘ಭ್ರಷ್ಟಾಚಾರ ವಿರೋಧಿ ಅಭಿಯಾನ’ವನ್ನು ಬೆಂಬಲಿಸಿದ್ದು, ಕೃತಿಚೌರ್ಯದ ಆರೋಪಗಳು ಮತ್ತು ಆಮ್ ಆದ್ಮಿ ಪಕ್ಷದ ನೀತಿಗಳನ್ನು ಕೆಲವೊಮ್ಮೆ ಬಹಿರಂಗವಾಗಿ ಟೀಕಿಸಿದ್ದು ಮುಂತಾದ ಕಾರಣಕ್ಕೆ ಆಗಾಗ ವಿವಾದಕ್ಕೀಡಾ ದದ್ದೂ ಇದೆ. ಒಟ್ಟಿನಲ್ಲಿ ಅವರ ಜೀವನವು ವೈವಿಧ್ಯಮಯವೂ ವರ್ಣರಂಜಿತವೂ ಆಗಿರು ವುದಂತೂ ಖರೆ!

pp11 ok

ಉತ್ತರ ಪ್ರದೇಶದ ಪಿಲ್ಖುವಾ ಎಂಬ ಪಟ್ಟಣದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕುಮಾರ್ ವಿಶ್ವಾಸ್, ತಮ್ಮ ತಂದೆಯ ಆಸೆಯಂತೆ ಎಂಜಿನಿಯರ್ ಆಗಲು ಅಲಹಾಬಾದಿನ ಪ್ರತಿಷ್ಠಿತ ಎಂಎನ್‌ಐಟಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದರು. ಆದರೆ, ಪ್ರತಿಭಾವಂತ ರಾಗಿದ್ದರೂ ಅವರಿಗೆ ಯಾಕೋ ಎಂಜನಿಯರಿಂಗ್ ಹಿಡಿಸಲೇ ಇಲ್ಲ. ಹೀಗಾಗಿ ಅದನ್ನು ತೊರೆದು ಸಾಹಿತ್ಯಾಧ್ಯಯನ ಮಾಡಿ ಕಾವ್ಯಸೃಷ್ಟಿಯಲ್ಲಿ ವೃತ್ತಿಜೀವನವನ್ನು ಕಂಡು ಕೊಳ್ಳುವ ಹೃದಯದ ಬಯಕೆಗೆ ಓಗೊಟ್ಟು, ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪೂರ್ಣಗೊಳಿಸಿದರು.

“ಎಂಜಿನಿಯರಿಂಗ್ ತೊರೆಯುವುದು ನನಗೆ ಕಠಿಣ ನಿರ್ಧಾರವಾಗಿತ್ತು, ಆದರೆ ಅದನ್ನು ಮುಂದುವರಿಸಿದ್ದಿದ್ದರೆ ಸರಾಸರಿಗಿಂತ ಕಡಿಮೆ ದರ್ಜೆಯ ತಂತ್ರಜ್ಞನಾಗುತ್ತಿದ್ದೆ" ಎನ್ನುತ್ತಾರೆ ಅವರು. 1994ರಲ್ಲಿ ರಾಜಸ್ಥಾನದಲ್ಲಿ ಪದವಿ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದಾಗಲೇ ಅವರು ಭಾರತ ಮತ್ತು ವಿದೇಶಗಳಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಕವಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದರು.

2012ರಲ್ಲಿ ಬೋಧನಾ ವೃತ್ತಿಯನ್ನು ತೊರೆದು ಪೂರ್ಣಕಾಲಿಕ ಕವಿ, ಸಾಮಾಜಿಕ ಕಾರ್ಯ ಕರ್ತ ಮತ್ತು ರಾಜಕಾರಣಿಯಾಗಿ ಮಾರ್ಪಟ್ಟರು. ಹಿಂದಿ ದೂರದರ್ಶನ ಮತ್ತು ಬಾಲಿವುಡ್‌ ಗೂ ತಮ್ಮ ಕವಿತ್ವದ ಪ್ರತಿಭೆಯನ್ನು ಧಾರೆಯೆರೆದಿರುವ ಅವರು, ವಿವಿಧ ಟಿವಿ ಕಾರ್ಯ ಕ್ರಮಗಳ ಶೀರ್ಷಿಕೆ ಗೀತೆಗಳನ್ನು ರಚಿಸಿದ್ದಾರೆ.

ಐಐಟಿ, ಐಐಎಂ, ಎನ್‌ಐಟಿ, ಬಿಟ್ಸ್ ಪಿಲಾನಿ ಮತ್ತು ಎಂಡಿಐ ಗುರ್‌ಗಾಂವ್ ಸೇರಿದಂತೆ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಲೈವ್ ಪ್ರದರ್ಶನಗಳನ್ನು ನೀಡಿದ್ದಾರೆ. ಕ್ಯಾಲಿ ಫೋರ್ನಿಯಾದ ಗೂಗಲ್ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತೀಯ ಉದ್ಯೋಗಿ ಗಳನ್ನು ಉದ್ದೇಶಿಸಿ ಮಾತನಾಡಲೂ ಅವರು ಆಹ್ವಾನಿತರಾಗಿದ್ದುಂಟು.

ಡಾ.ಕುಮಾರ್ ವಿಶ್ವಾಸ್‌ರದ್ದು ಪ್ರೇಮವಿವಾಹ, ಪತ್ನಿ ಡಾ.ಮಂಜು ಶರ್ಮಾ ವಿಶ್ವಾಸ್ ಕೂಡ ಹಿಂದಿ ಪ್ರಾಧ್ಯಾಪಕಿ, ಹಿಂದಿ ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆದವರು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. “ಮಂಜು ಅವರನ್ನು ಮೆಚ್ಚಿಸಲು ಕವಿತೆಗಳನ್ನು ಬರೆಯು ತ್ತಿದ್ದ ನಾನು, ಆ ದಿನಗಳಲ್ಲಿ ಶೃಂಗಾರ ರಸದಲ್ಲಿ ಆಸಕ್ತಿ ಬೆಳೆಸಿಕೊಂಡೆ" ಎನ್ನುತ್ತಾರೆ ಕುಮಾರ್ ವಿಶ್ವಾಸ್.

ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಕಾವ್ಯಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಕುಮಾರ್ ವಿಶ್ವಾಸ್, ಭ್ರಷ್ಟಾಚಾರ- ಮುಕ್ತ ಸಮಾಜ ನಿರ್ಮಾಣದ ಯತ್ನದ ಭಾಗವಾಗಿ ಅಣ್ಣಾ ಹಜಾರೆ ನೇತೃತ್ವದ ‘ಭ್ರಷ್ಟಾಚಾರ ವಿರೋಽ ಚಳವಳಿ’ಯಲ್ಲಿ ಅರವಿಂದ ಕೇಜ್ರಿ ವಾಲರ ಜತೆಗೆ ಸಕ್ರಿಯವಾಗಿ ಭಾಗವಹಿಸಿ, ನಂತರ ಆಮ್ ಆದ್ಮಿ ಪಕ್ಷವನ್ನು ಸೇರಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಅವರು, ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ವಿರುದ್ಧ ಅಮೇಥಿಯಿಂದ ಸ್ಪರ್ಧಿಸಿದ್ದರು.

ಅವರ ಈ ನಡೆಯು, ‘ಈ ಯುವಕವಿ ಆಮ್ ಆದ್ಮಿಯ ಭವಿಷ್ಯದ ನಾಯಕನಾಗಬಹುದು’ ಎಂಬ ಸಂದೇಶವನ್ನು ದೇಶಕ್ಕೆ ನೀಡಿತು. ವ್ಯಾಪಕ ಪ್ರಚಾರ ಮಾಡಿದ ವಿಶ್ವಾಸ್, ಸ್ಥಳೀ ಯರು ಯಾವುದೇ ವೇಳೆ ತಮ್ಮನ್ನು ತಲುಪುವಂತಾಗಲು ಅಮೇಥಿಯಲ್ಲಿ ಮನೆಯನ್ನೂ ಖರೀದಿಸಿದರು. ಆ ಚುನಾವಣೆಯಲ್ಲಿ ವಿಶ್ವಾಸ್ ಸೋತರೂ, ಅನೇಕ ವರ್ಷಗಳಲ್ಲಿ ಅದೇ ಮೊದಲ ಬಾರಿಗೆ ರಾಹುಲ್ ಮತ್ತು ಅವರ ಪಕ್ಷವು ಅಮೇಥಿ ಚುನಾವಣೆಯನ್ನು ಗಂಭೀರ ವಾಗಿ ಪರಿಗಣಿಸಬೇಕಾಯಿತು.

ನಂತರ ವಿಶ್ವಾಸ್ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿಯ ‘ತಾರಾ ಪ್ರಚಾರಕ’ರಲ್ಲಿ ಒಬ್ಬರೆನಿಸಿ ಕೊಂಡು ತಮ್ಮ ವಿಚಕ್ಷಣತೆಯಿಂದಾಗಿ ಪಕ್ಷವು ಭಾರಿ ಗೆಲುವು ಪಡೆಯುವುದಕ್ಕೆ ನೆರವಾ ದರು. ಆ ಚುನಾವಣೆಯಲ್ಲಿ ಆಮ್ ಆದ್ಮಿ 70 ಸ್ಥಾನಗಳ ಪೈಕಿ 67ನ್ನು ಗೆದ್ದಿತ್ತು. ಮುಂದೆ ಕೇಜ್ರಿವಾಲರ ವಿರೋಧ ಕಟ್ಟಿಕೊಂಡು ‘ಆಮ್ ಆದ್ಮಿ’ಗೆ ವಿದಾಯ ಹೇಳಿದರು.

ನೇರ ನಡೆ-ನುಡಿಯ ವಿಶ್ವಾಸ್ ಯಾರನ್ನೂ ಎದುರುಹಾಕಿಕೊಂಡು ದಕ್ಕಿಸಿಕೊಳ್ಳಬಲ್ಲ ಚಾಣಾಕ್ಷ. ಇತ್ತೀಚೆಗೆ ಅಮಿತಾಭ್ ಬಚ್ಚನ್‌ರ ವಿಷಯದಲ್ಲಿ ಅವರು ಸಾಮಾಜಿಕ ಮಾಧ್ಯಮ ದಲ್ಲಿ ಮತ್ತೊಮ್ಮೆ ಚರ್ಚೆಗೊಳಗಾಗಿದ್ದುಂಟು. ಪ್ರಸಿದ್ಧ ಹಿಂದಿ ಕವಿಗಳಿಗೆ ಗೌರವ ಸಲ್ಲಿಸಲು ‘ತರ್ಪಣ್’ ಶೀರ್ಷಿಕೆಯ ಸರಣಿ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದ ವಿಶ್ವಾಸ್, ಅದರಲ್ಲಿ ಬಚ್ಚನ್‌ರ ತಂದೆ ಹರಿವಂಶ್ ರಾಯ್ ಬಚ್ಚನ್‌ರ ಕವಿತೆಯನ್ನು ಬಳಸಿ ದ್ದರು.

ಅದನ್ನು ಬಳಸಿದ ರೀತಿಗೆ ಕೋಪಗೊಂಡ ಅಮಿತಾಭ್, ಅದನ್ನು ‘ಕೃತಿಸ್ವಾಮ್ಯ ಉಲ್ಲಂಘನೆ’ ಎಂದು ಕರೆದು, ಈ ವಿಡಿಯೋದಿಂದ ಗಳಿಸಿದ ಆದಾಯದ ಲೆಕ್ಕ ನೀಡುವಂತೆ ವಿಶ್ವಾಸ್‌ ರನ್ನು ಕೇಳಿದರು. ಜತೆಗೆ, ಅದನ್ನು 24 ಗಂಟೆಯೊಳಗೆ ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಬೇಕೆಂದು ತಾಕೀತು ಮಾಡಿದರು.

ವಿಶ್ವಾಸ್ ಇದಕ್ಕೆ ಪ್ರತಿಕ್ರಿಯಿಸುತ್ತಾ, “ಇತರೆಲ್ಲ ಕವಿಗಳ ಸಂದಣಿಯಿಂದಾಗಿ ನನ್ನ ಪ್ರಯತ್ನ ಮೆಚ್ಚುಗೆಯನ್ನೇನೋ ಪಡೆಯಿತು; ಆದರೆ ನಿಮ್ಮಿಂದ ಮಾತ್ರ ನೋಟಿಸ್ ಪಡೆಯು ವಂತಾಯ್ತು ಸರ್" ಎಂದು ಬಚ್ಚನ್‌ರ ಕಾಲೆಳೆದು, “ಈಗಾಗಲೇ ವಿಡಿಯೋವನ್ನು ಅಳಿಸಿ ಹಾಕಲಾಗಿದ್ದು, ಯೂಟ್ಯೂಬ್ ಜಾಹೀರಾತುಗಳಿಂದ ಪಡೆದ ಆದಾಯವಾಗಿ ನಿಮಗೆ 32 ರುಪಾಯಿಗಳನ್ನು ಕಳುಹಿಸುತ್ತಿದ್ದೇನೆ, ತುಂಬಾ ಧನ್ಯವಾದಗಳು" ಎಂದು ಹೇಳಿ ‘ಬಿಗ್ ಬಿ’ಯನ್ನು ಟ್ರೋಲ್ ಮಾಡುವ ಧೈರ್ಯವನ್ನು ತೋರಿದ್ದರು.

ರಾಜಕಾರಣಿಯಾಗಿ ಅವರ ನಡವಳಿಕೆಯು ಅಧಿಕಾರ ಮತ್ತು ಹಣದ ದುರಾಸೆಯನ್ನು ಸೂಚಿಸುವಂತೆ ಕಾಣುವುದಿಲ್ಲ. ಇಲ್ಲದಿದ್ದರೆ ಅವರು 2015ರ ದೆಹಲಿ ವಿಧಾನಸಭಾ ಚುನಾ ವಣೆಯಲ್ಲಿ ಸ್ಪರ್ಧಿಸಿ ಕ್ಯಾಬಿನೆಟ್‌ನಲ್ಲಿ ಸುಲಭವಾಗಿ ಸ್ಥಾನ ಪಡೆಯಬಹುದಾಗಿತ್ತು. ಮುಖ್ಯ ಮಂತ್ರಿ ಕೇಜ್ರಿವಾಲರು ತಮ್ಮ ಆಪ್ತರಾಗಿದ್ದರೂ, ಪಕ್ಷದ ನೀತಿಗಳಲ್ಲಿ ತಪ್ಪಾಗಿದೆ ಎನಿಸಿದರೆ ಮಾತಾಡಲು ವಿಶ್ವಾಸ್ ಎಂದೂ ಹಿಂಜರಿಯುತ್ತಿರಲಿಲ್ಲ.

ಹೀಗೆ, ಅನೇಕ ವಿವಾದಗಳ ಹೊರತಾಗಿಯೂ ವಿಶ್ವಾಸ್ ಅವರಿಂದು ದೇಶದ ‘ಯೂತ್ ಐಕಾನ್’ಗಳಲ್ಲಿ ಒಬ್ಬರು ಎಂಬುದರಲ್ಲಿ ಸಂಶಯವಿಲ್ಲ. ಈ ಮನುಷ್ಯನ ಜೀವನ ಪರಿ ಪೂರ್ಣವಾಗಿಲ್ಲದಿರಬಹುದು, ಆದರೆ ಸ್ಪೂರ್ತಿದಾಯಕವಾಗಿರುವುದರಲ್ಲಿ ಎರಡು ಮಾತಿ ಲ್ಲ. ಭಾರತದಲ್ಲಿ ಸಾಕಷ್ಟು ನಿರ್ಲಕ್ಷಿಸಲ್ಪಡುತ್ತಿರುವ ಕಾವ್ಯಜಗತ್ತಿನಲ್ಲಿ ದೊಡ್ಡದನ್ನು ಸಾಧಿಸಲೆಂದು ತಮ್ಮ ಎದೆಯ ದನಿಗೆ ಓಗೊಟ್ಟ ಇವರ ಸಾಹಸ ಮತ್ತು ಏರಿದ ಎತ್ತರವು, ಕಾವ್ಯಸೃಷ್ಟಿಯನ್ನು ವೃತ್ತಿಯಾಗಿಸಿಕೊಳ್ಳಬಯಸುವ ಯುವಜನರಿಗೆ ಖಂಡಿತ ಸ್ಪೂರ್ತಿ ಯಾಗಬಲ್ಲದು, ಉತ್ಸಾಹವನ್ನು ನೀಡಬಲ್ಲದು. ಕಾರಣ ಅವರ ಕವಿತೆಗಳು ಉತ್ತಮ ಜೀವನ ಕ್ಕಾಗಿ ಜನರನ್ನು ಪ್ರೇರೇಪಿಸುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಅವರ ಪ್ರವಚನವಿದೆಯಲ್ಲಾ, ಅದು ಅದ್ಭುತ ರಸಗವಳದ ಭಂಡಾರ! ಹೀಗಾಗಿ ವಿಶ್ವಾಸ್ ಇಂದು ದೇಶ-ವಿದೇಶಗಳಲ್ಲಿ ಬಹುಬೇಡಿಕೆಯ ಪ್ರವಚನಕಾರ. ವಿಶೇಷವಾಗಿ ರಾಮಾಯಣದ ಕುರಿತ ಪ್ರವಚನಗಳು ಅವರ ಅಧ್ಯಯನದ ಆಳ ಮತ್ತು ಭಾವನಾತ್ಮಕತೆಯ ಎತ್ತರವನ್ನು ಸಾರಿ ಹೇಳುತ್ತವೆ. ಅವರು ಮೂಲ ವಾಲ್ಮೀಕಿ ರಾಮಾ ಯಣವನ್ನು, ಉತ್ತರದ ತುಳಸೀ ರಾಮಾಯಣ ಮತ್ತು ದಕ್ಷಿಣದ ಕಂಬ ರಾಮಾಯಣ ಗಳೊಂದಿಗೆ ಸಮೀಕರಿಸಿ ತನ್ಮಯತೆಯಂದ ಅನುಭವಿಸಿ ಹೇಳುವ ಚಂದವೇ ಬೇರೆ.

ಆ ಸುಖವನ್ನು ಕೇಳಿಯೇ ಅನುಭವಿಸಬೇಕು. ಅವರ ಪ್ರವಚನದ ಭಾಷೆ ಹಿಂದಿಯಾದರೂ, ಎಲ್ಲ ಭಾಷಿಕರಿಗೂ ಅರ್ಥವಾಗುವಂತಿರುತ್ತದೆ, ಶೈಲಿಯೂ ಮನಮೋಹಕವಾಗಿರುತ್ತದೆ. ಹಾಗಾಗಿ ಅವರ ಪ್ರವಚನ ಸಭೆಗಳಿಗೆ ಹತ್ತಾರು ಸಾವಿರ ಪ್ರೇಕ್ಷಕರು ಸೇರುತ್ತಾರೆ. ಒಂದು ಪ್ರವಚನ ಸರಣಿಗೆ ವಿಶ್ವಾಸ್ ಹತ್ತಾರು ಲಕ್ಷಗಳನ್ನು ಗೌರವ ಸಂಭಾವನೆಯಾಗಿ ಪಡೆಯು ತ್ತಾರೆ. ಅವರ ಯೂಟ್ಯೂಬ್ ವಿಡಿಯೋಗಳಿಗಂತೂ ಲಕ್ಷಾಂತರ ವೀಕ್ಷಕರಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಅವರ ಪ್ರವಚನಗಳನ್ನು ಒಮ್ಮೆ ಕೇಳಿದರೂ ಸಾಕು, ಅವರು ನಿಮ್ಮನ್ನು ಆವರಿಸಿಬಿಡುತ್ತಾರೆ ಮತ್ತು ನೀವೂ ಅವರನ್ನು ಅಭಿಮಾನದಿಂದ ಸ್ವೀಕರಿಸುವುದು ನಿಶ್ಚಿತ. ಹತ್ತು ಸಾವಿರಕ್ಕೊಬ್ಬ ವಾಗ್ಮಿ ದೊರಕುತ್ತಾನಂತೆ (ವಕ್ತಾ ದಶ ಸಹಸ್ರೇಷು). ವಿಶ್ವಾಸ್ ಅವರು ನಮ್ಮ ದೇಶದ ಅಂಥ ಅಪರೂಪದ ವಾಗ್ಮಿಗಳಲ್ಲೊಬ್ಬರು ಎಂಬುದು ನಿರ್ವಿವಾದಿತ ಸಂಗತಿ.

‘ಅಪ್ನೆ ಅಪ್ನೆ ರಾಮ್’ ಯೂಟ್ಯೂಬ್ ಚಾನಲ್‌ನಲ್ಲಿ ಒಮ್ಮೆ ಅವರನ್ನು ಕೇಳಿದರೆ, ನನ್ನ ಮಾತು ದಿಟವೆಂಬುದು ನಿಮಗೆ ಅರಿವಾಗುತ್ತದೆ. ಕುಮಾರ್ ವಿಶ್ವಾಸ್ ಅನೇಕ ಅನಗತ್ಯ ಹಗರಣಗಳು, ವಿವಾದಗಳನ್ನು ಎದುರಿಸಿದ್ದಿರಬಹುದು. ಆದರೆ ಪ್ರತಿ ಬಾರಿಯೂ ತಮ್ಮ ಸ್ವಯಾರ್ಜಿತ ಪ್ರತಿಭೆಯಿಂದ ಅವರು ಮೇಲಕ್ಕೇರಿ ಬಂದಿದ್ದಾರೆ.

ಅವರ ಆತ್ಮವಿಶ್ವಾಸ, ಕಲಿಕೆಯಲ್ಲಿನ ನಿರಂತರತೆ, ಸರಿಯಾದ ಸಮಯದಲ್ಲಿ ಯೋಗ್ಯರ ಸಹವಾಸ ಇವು ಅವರ ಯಶಸ್ಸಿಗೆ ಮುಖ್ಯಕಾರಣ ಎನ್ನಬಹುದೇನೋ! ಅದೇನೇ ಇರಲಿ, ದೇಶಪ್ರೇಮ, ನಮ್ಮ ಸನಾತನ ಪರಂಪರೆಯ ಕುರಿತಾದ ಆಸ್ಥೆ, ಸರಳ ಜೀವನ, ಪ್ರಾಧ್ಯಾ ಪಕತ್ವ, ಕವಿತ್ವಗಳಷ್ಟೇ ಅಲ್ಲದೆ, ದೇಶದ ಅತ್ಯಂತ ಕಿರಿಯ ಪಕ್ಷದ ರಾಜಕಾರಣಿಯಾಗಿ ಅದನ್ನು ಅಧಿಕಾರಕ್ಕೆ ತಂದ ಸಾಧನೆಯವರೆಗಿನ ಒಬ್ಬ ಸಾಮಾನ್ಯ ಹುಡುಗನ ಬಹು ಆಯಾಮಗಳ ಪಯಣವು ನಿಜಕ್ಕೂ ಪ್ರೇರಣಾದಾಯಿ. ವ್ಯಕ್ತಿಯೊಬ್ಬ ತನ್ನ ಜನ್ಮಜಾತ ಪ್ರತಿಭೆಯಲ್ಲಿ ನಂಬಿಕೆಯಿಟ್ಟು ಪರಿಶ್ರಮದ ಹಾದಿಯಲ್ಲಿ ಹೆಜ್ಜೆಹಾಕಿದರೆ ಏನೆಲ್ಲಾ ಯಶಸ್ಸ ನ್ನು ಸಾಧಿಸಬಹುದು ಎಂಬುದಕ್ಕೆ ಡಾ.ಕುಮಾರ್ ವಿಶ್ವಾಸ್ ಜೀವಂತ ಸಾಕ್ಷಿ. ದೇಶದ ಯುವ ಪೀಳಿಗೆಗೆ ಉತ್ತಮ ಮಾದರಿಯಾಗಿರುವ ಇಂಥವರ ಸಂಖ್ಯೆ ಸಾವಿರವಾಗಲಿ...