Hubballi murder case: ಮೃತ ಬಾಲಕಿ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು: ಜಗದೀಶ್ ಶೆಟ್ಟರ್ ಆಗ್ರಹ
Hubballi murder case: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಹತ್ಯೆ ಹಿನ್ನೆಲೆಯಲ್ಲಿ ಮೃತ ಬಾಲಕಿ ಮನೆಗೆ ಸಂಸದ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಂಗಳವಾರ ಭೇಟಿ ನೀಡಿ, ಬಾಲಕಿ ತಂದೆ-ತಾಯಿಗೆ ಸಾಂತ್ವನ ಹೇಳಿ ಮಾತನಾಡಿದ್ದಾರೆ.


ಹುಬ್ಬಳ್ಳಿ: ನಗರದಲ್ಲಿ ಬಾಲಕಿ ಹತ್ಯೆ ಪ್ರಕರಣ (Hubballi murder case) ಜನರ ಮನಸ್ಸಿಗೆ ತುಂಬಾ ಘಾಸಿಗೊಳಿಸಿದೆ. ಈ ರೀತಿ ಪ್ರಕರಣ ನಡೆಯಬಾರದಿತ್ತು. ಮೃತ ಬಾಲಕಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಹತ್ಯೆ ಹಿನ್ನೆಲೆಯಲ್ಲಿ ಮೃತ ಬಾಲಕಿ ಮನೆಗೆ ಮಂಗಳವಾರ ಭೇಟಿ ನೀಡಿ, ತಂದೆ-ತಾಯಿಗೆ ಸಾಂತ್ವನ ಹೇಳಿ ಮಾಜಿ ಸಿಎಂ ಮಾತನಾಡಿದ್ದಾರೆ.
ಬಾಲಕಿಯ ತಂದೆ-ತಾಯಿ ಅತ್ಯಂತ ಬಡಕುಟುಂಬದವರು. ಈ ರೀತಿ ಬಾಲಕಿ ಮೇಲೆ ನಡೆಸಿರುವ ಕೃತ್ಯ ಅತ್ಯಂತ ರಾಕ್ಷಸಿ ಕೃತ್ಯ. ಈ ಬಗ್ಗೆ ಅಧಿಕಾರಿಗಳ ಜೊತೆಗೂ ಸಹ ನಾನು ಮಾತನಾಡಿದ್ದೇನೆ. ಪೊಲೀಸರು ಈ ಬಗ್ಗೆ ಶೀಘ್ರವೇ ಕ್ರಮಕೈಗೊಂಡಿದ್ದಾರೆ ಎಂದರು.
ಈ ರೀತಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನ್ಯಾಯ ಕೊಡಿಸಿರುವುದು ಅತ್ಯಂತ ಶ್ಲಾಘನೀಯ. ಮಹಿಳಾ ಪಿಎಸ್‌ಐ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ. ಆದರೆ ಇತ್ತೀಚೆಗೆ ಗೃಹ ಸಚಿವರು ಇಂತಹ ಪ್ರಕರಣಗಳ ವಿಚಾರದಲ್ಲಿ ಬೇಜವಾಬ್ದಾರಿತನದ ಹೇಳಿಕೆ ನೀಡಿದರು. ಇಂತಹ ಹೇಳಿಕೆ ನೀಡುವುದು ಒಬ್ಬ ಗೃಹಮಂತ್ರಿಗೆ ಶೋಭೆ ತರುವಂತದ್ದಲ್ಲ ಎಂದು ತಿಳಿಸಿದರು.
ಇನ್ನು ನಗರದ ಪ್ರದೇಶಗಳಲ್ಲಿ ಗಾಂಜಾ ಸೇವನೆ, ಗಾಂಜಾ ಮಾರಾಟ ಯಥೇಚ್ಚವಾಗಿ ನಡೆಯುತ್ತಿದೆ. ಈ ವಿಚಾರದಲ್ಲಿ ಗಾಂಜಾ ಮಾರಾಟ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಮುಂದಾಗಬೇಕು. ಗಾಂಜಾ ಮೂಲವನ್ನ ಪತ್ತೆಹಚ್ಚು ಕೆಲಸಕ್ಕೆ ಮುಂದಾದ್ರೆ ಮಾತ್ರ ಇಂತಹ ಪ್ರಕರಣಗಳನ್ನ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Hubballi news: ʼಇನ್ನಷ್ಟು ಸಿಸಿಟಿವಿ ಅಳವಡಿಸಿʼ: ಹುಬ್ಬಳ್ಳಿಯ ಮೃತ ಬಾಲಕಿ ಮನೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭೇಟಿ
ರಾಜ್ಯಸರಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ, ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ಸರಕಾರ ಮುಂದಾಗಬೇಕು. ಮೃತ ಬಾಲಕಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಜಗದೀಶ್ ಶೆಟ್ಟರ್ ಇದೇ ಸಮಯದಲ್ಲಿ ಒತ್ತಾಯಿಸಿದರು.