Vishweshwar Bhat Column: ಇಲ್ಲಿ ಮೀನು ಮಾರುಕಟ್ಟೆ ಶಾಂತ, ಜನಜೀವನ ಪ್ರಶಾಂತ !
ನಾನು ಯಾವುದೇ ಊರಿಗೆ ಹೋದರೂ, ಬೆಳಗ್ಗೆ ರೂಮಿಗೆ ಪತ್ರಿಕೆ ಹಾಕುವಂತೆ ಹೇಳುತ್ತೇನೆ. ಒಂದು ವೇಳೆ ಸಾಧ್ಯವಿಲ್ಲ ಅಂತ ಹೇಳಿದರೆ, ನನ್ನ ಬುಕಿಂಗ್ ರದ್ದು ಮಾಡುವುದಾಗಿ ಹುಸಿ ಕೋಪ ಪ್ರದರ್ಶಿಸುತ್ತೇನೆ. ಒಂದು ಪತ್ರಿಕೆಯನ್ನು ಪೂರೈಸಲು ಆಗದಿದ್ದರೆ ಹೇಗೆ ಎಂದು ಸಣ್ಣ ಮುನಿಸು ವ್ಯಕ್ತಪಡಿಸಿದ ಬಳಿಕ ಯಾರೂ ಇಲ್ಲ ಎಂದು ಹೇಳುವುದಿಲ್ಲ.


ನೂರೆಂಟು ವಿಶ್ವ
vbhat@me.com
ಪತ್ರಕರ್ತರಾದರೆ ಯಾವತ್ತೂ ಇದೊಂದು ಗೋಳು. ಬೆಳಗ್ಗೆ ಏಳುವ ಹೊತ್ತಿಗೆ ಪತ್ರಿಕೆ ಮನೆ ಮುಂದೆ ಬಿದ್ದಿರಬೇಕು. ಕೆಲವರಿಗೆ ಹಾಸಿಗೆಯಿಂದ ಏಳುತ್ತಿದ್ದಂತೆ, ಕಾಫಿ ಕುಡಿಯದಿದ್ದರೆ, ಸಿಗರೇಟ್ ಸೇದದಿದ್ದರೆ ‘ಟಾಯ್ಲೆಟ್’ ಬರುವುದಿಲ್ಲ. ಪತ್ರಕರ್ತರಿಗೆ ಎದ್ದ ತಕ್ಷಣ ಪತ್ರಿಕೆ ಓದದಿದ್ದರೆ ಹಾಗೇ ಆಗುತ್ತದೆ. ಇಡೀ ದಿನ ಪತ್ರಿಕೆ ಸಿಗದಿದ್ದರೆ, ಮೂಡ್ ಆಫ್. ಏನೋ ಕಳೆದುಕೊಂಡ ಅನುಭವ. ಇಡೀ ದಿನ ಸಿಡಸಿಡ. ಅದರಲ್ಲೂ ಕೋವಿಡ್ ನಂತರ ವಿಶ್ವದೆಡೆ ಹೊಟೇಲುಗಳಲ್ಲಿ ರೂಮಿಗೆ ಪತ್ರಿಕೆ ಪೂರೈಸುವ ಪರಿಪಾಠವೇ ನಿಂತು ಹೋಗಿದೆ.
ನಾನು ಯಾವುದೇ ಊರಿಗೆ ಹೋದರೂ, ಬೆಳಗ್ಗೆ ರೂಮಿಗೆ ಪತ್ರಿಕೆ ಹಾಕುವಂತೆ ಹೇಳುತ್ತೇನೆ. ಒಂದು ವೇಳೆ ಸಾಧ್ಯವಿಲ್ಲ ಅಂತ ಹೇಳಿದರೆ, ನನ್ನ ಬುಕಿಂಗ್ ರದ್ದು ಮಾಡುವುದಾಗಿ ಹುಸಿ ಕೋಪ ಪ್ರದರ್ಶಿಸುತ್ತೇನೆ. ಒಂದು ಪತ್ರಿಕೆಯನ್ನು ಪೂರೈಸಲು ಆಗದಿದ್ದರೆ ಹೇಗೆ ಎಂದು ಸಣ್ಣ ಮುನಿಸು ವ್ಯಕ್ತಪಡಿಸಿದ ಬಳಿಕ ಯಾರೂ ಇಲ್ಲ ಎಂದು ಹೇಳುವುದಿಲ್ಲ.
ವಿದೇಶಗಳಲ್ಲಿ ಹೋಟೆಲ್ ರೂಮಿಗೆ ಪತ್ರಿಕೆ ಪೂರೈಸುವ ಸಂಪ್ರದಾಯ ನಿಂತು ಹೋಗಿದೆ. ಆದರೂ ಅಲ್ಲೂ ವರಾತ ಮಾಡಿದರೆ, ಕೋರಿಕೆಯನ್ನು ಈಡೇರಿಸುತ್ತಾರೆ. ಎರಡು ತಿಂಗಳ ಹಿಂದೆ, ರಷ್ಯಾಕ್ಕೆ ಹೋದಾಗ ಹೋಟೆಲ್ ನವರನ್ನು ಪರೀಕ್ಷಿಸಲೆಂದು ಪತ್ರಿಕೆಯನ್ನು ಕೇಳಿದಾಗ, ‘ನಿಮಗೆ ರಷ್ಯನ್ ಭಾಷೆ ಬರುತ್ತಾ?’ ಎಂದು ಸ್ವಾಗತಕಾರಿಣಿ ಕೇಳಿದಳು.
ಇದನ್ನೂ ಓದಿ: Vishweshwar Bhat Column: ವಿಮಾನವನ್ನು ಪಾರ್ಕ್ ಮಾಡುವುದು
‘ನನಗೆ ರಷ್ಯನ್ ಗೊತ್ತಿಲ್ಲ. ಆದರೂ ಬೆಳಗ್ಗೆ ಎದ್ದ ತಕ್ಷಣ ಪತ್ರಿಕೆಯನ್ನು ನೋಡಬೇಕು. ಇದನ್ನು ನಾನು ಕಳೆದ ನಾಲ್ಕೂವರೆ ದಶಕಗಳಿಂದ ರೂಢಿಸಿಕೊಂಡು ಬಂದ ಸಂಪ್ರದಾಯ’ ಎಂದು ಹೇಳಿದ್ದೆ. ಪ್ರತಿದಿನ ನನ್ನ ರೂಮಿಗೆ ‘ಪ್ರಾವ್ದಾ’ ಮತ್ತು ‘ಇಜ್ವೇಸ್ತಿಯಾ’ ದೈನಿಕಗಳನ್ನು ಆಕೆ ತಪ್ಪದೇ ಕಳಿಸಿ ಕೊಟ್ಟಳು. ನನಗೆ ಆ ಭಾಷೆಯ ಗಂಧ ಗಾಳಿ ಗೊತ್ತಿಲ್ಲದಿದ್ದರೂ, ಬೆಳಗ್ಗೆ ಪತ್ರಿಕೆ ನೋಡುವುದರ ಸಮಾಧಾನ ಅದರಿಂದ ಸಿಕ್ಕಿತ್ತು. ಯಾವತ್ತೂ ಬೇರೆ ದೇಶಗಳ ಪತ್ರಿಕೆಗಳನ್ನು ನೋಡುವುದು ಪತ್ರಕರ್ತರಿಗೆ ನಿಜಕ್ಕೂ ಖುಷಿ ಕೊಡುವ ಸಂಗತಿಯೇ.
ಕೆಲ ವರ್ಷಗಳ ಹಿಂದೆ, ನಾನು ಮತ್ತು ಈಗಿನ ‘ಕನ್ನಡ ಪ್ರಭ’ ಸಂಪಾದಕ ಮಿತ್ರ ರವಿ ಹೆಗಡೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿದ್ದೆವು. ನಾವು ತಂಗಿದ್ದ ‘ಬಿಗ್ ಡ್ಯಾಡಿ’ ಎಂಬ ಹೋಟೆಲಿನಲ್ಲಿ ಸ್ಥಳೀಯ ಪತ್ರಿಕೆಯೊಂದಿತ್ತು. ಅಂದು ಆ ಪತ್ರಿಕೆಯ ಮುಖಪುಟ ವಿನ್ಯಾಸ ವಿಶೇಷವಾಗಿತ್ತು. ಯಾವ ಪತ್ರಿಕೆಯೂ ಆ ಪ್ರಯೋಗ ಮಾಡಿದ್ದನ್ನು ನಾನು ನೋಡಿರಲಿಲ್ಲ.
ಊರಿಗೆ ಬಂದವನೇ ಆಗ ನಾನು ಸಂಪಾದಕನಾಗಿದ್ದ ‘ಕನ್ನಡ ಪ್ರಭ’ದಲ್ಲಿ ಅದೇ ಪ್ರಯೋಗವನ್ನು ತುಸು ಮಾರ್ಪಾಡಿನೊಂದಿಗೆ ಅನುಷ್ಠಾನಗೊಳಿಸಿದ್ದೆ. ಅದನ್ನು ಮೊನ್ನೆ ಮೊನ್ನೆ ರವಿ ನನಗೆ ಜ್ಞಾಪಿಸಿದರು. ಆ ಪ್ರಯೋಗ ಓದುಗರಿಗೂ ಬಹಳ ಇಷ್ಟವಾಗಿತ್ತು. ಬೇರೆ ಊರಿನ, ದೇಶಗಳ ಪತ್ರಿಕೆ ಯನ್ನು ನೋಡುವ, ಓದುವ ಅವಕಾಶವನ್ನು ಎಂದೂ ತಪ್ಪಿಸಿಕೊಳ್ಳಬಾರದು.
ಮೊನ್ನೆ ಸೀಶೆಲ್ಸ್ ಎಂಬ ದ್ವೀಪ ರಾಷ್ಟ್ರಕ್ಕೆ ಬಂದ ಮೊದಲ ದಿನ, ವಿಮಾನ ನಿಲ್ದಾಣ ಸೇರಿದಂತೆ ಸುತ್ತೆಲ್ಲ ಕಣ್ಣು ಹಾಯಿಸಿದರೂ ಒಂದೇ ಒಂದು ಪತ್ರಿಕೆ ಕಣ್ಣಿಗೆ ಬೀಳಲಿಲ್ಲ. ನಂತರ ನಾನು ಉಳಿದು ಕೊಂಡ ಪ್ರಾಲಿನ್ ಎಂಬ ಮತ್ತೊಂದು ದ್ವೀಪದ ಹೋಟೆಲಿನಲ್ಲೂ ಪತ್ರಿಕೆ ಕಾಣಿಸಲಿಲ್ಲ. ನಾನು ಹೋಟೆಲ್ ಸ್ವಾಗತಕಾರಿಣಿಗೆ ನನ್ನ ರೂಮಿನಿಂದ ಫೋನ್ ಮಾಡಿ, ಸೀಶೆಲ್ಸ್ ನಲ್ಲಿ ಜನಪ್ರಿಯ ವಾಗಿರುವ ಪತ್ರಿಕೆ ಯಾವುದು?’ ಎಂದು ಕೇಳಿದೆ.
ಅದಕ್ಕೆ ಆಕೆ, ‘ Seychelles Nation’ ಎಂದಳು. ಆಕೆಗೆ ನನ್ನ ಪರಿಚಯ ಮತ್ತು ಪತ್ರಿಕೆ ಓದದಿದ್ದರೆ ನನಗಾಗುವ ಸಮಸ್ಯೆಯನ್ನು ವಿವರಿಸಿ, ಹೇಗಾದರೂ ಮಾಡಿ, ಮುಂದಿನ ಆರು ದಿನಗಳ ಕಾಲ ನನ್ನ ರೂಮಿಗೆ ದಯವಿಟ್ಟು ಪತ್ರಿಕೆ ಹಾಕಬೇಕು’ ಎಂದು ಹೇಳಿದೆ. ಆಕೆ ನನ್ನ ಕೋರಿಕೆಯನ್ನು ತಕ್ಷಣ ನೆರವೇರಿಸಿದಳು. ಆಗಲೇ ನನಗೆ ಸಮಾಧಾನ ಆಗಿದ್ದು. ನಂತರ ಪ್ರತಿದಿನ ಬೆಳಗಾಗುತ್ತಲೇ ರೂಮಿಗೆ ಪತ್ರಿಕೆ ಬರಲಾರಂಭಿಸಿತು.
ನನ್ನ ರೂಮನ್ನು ಸ್ವೀಟ್ ರೂಮಿಗೆ ಅಪ್ಗ್ರೇಡ್ ಮಾಡಿದ್ದರೂ ನನಗೆ ಅಷ್ಟು ಖುಷಿ ಆಗುತ್ತಿರಲಿಲ್ಲ ವೇನೋ? ಅಂದು ಇಂಗ್ಲಿಷ್ ಪತ್ರಿಕೆಯಾಗಿದ್ದರಿಂದ, ನನಗೆ ಓದು ಸಲೀಸಾಯಿತು. ಅಷ್ಟೇ ಅಲ್ಲ, ಸೀಶೆಲ್ಸ ನ ಜನಜೀವನ, ಸಮಾಜ ಜೀವನ, ರಾಜಕೀಯ, ಕ್ರೈಂ.. ಮುಂತಾದ ಸುದ್ದಿಯಿಂದ ಆ ದೇಶವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಯಿತು. ‘ಸೀಶೆಲ್ಸ್ ನೇಷನ್’ ಪತ್ರಿಕೆ ಕಳೆದ 49 ವರ್ಷಗಳಿಂದ (1976 ರಲ್ಲಿ ಆರಂಭವಾಗಿದ್ದು) ಪ್ರಕಟವಾಗುತ್ತಿದೆ.
ನ್ಯಾಷನಲ್ ಇನೋರ್ಮೇಷನ್ ಸರ್ವಿಸಸ್ ಏಜೆನ್ಸಿ ಎಂಬ ಸರಕಾರಿ ಸಂಸ್ಥೆ ಈ ಪತ್ರಿಕೆಯ ಮಾಲೀಕತ್ವವನ್ನು ಹೊಂದಿದೆ. ಸೋಮವಾರದಿಂದ ಶನಿವಾರ ಪ್ರಕಟವಾಗುವ, ಈ ಪತ್ರಿಕೆ ಬ್ರಾಡ್ ಶೀಟೂ ಅಲ್ಲ, ಟ್ಯಾಬ್ಲಾಯಿಡ್ಡೂ ಅಲ್ಲ, ಅವೆರಡರ ಮಧ್ಯದ ‘ಬರ್ಲಿನರ್’ ಸೈಜಿನದು. (ಮೊದ ಮೊದಲಿಗೆ ಈ ಗಾತ್ರದ ಪತ್ರಿಕೆಗಳು ಜರ್ಮನಿಯಲ್ಲಿ ಜನಪ್ರಿಯವಾಗಿತ್ತು, ಈಗ ವಿಶ್ವದ ಹಲವೆಡೆ ಬಳಕೆಯಲ್ಲಿವೆ.) ಹಿಡಿದು ಓದಲು ಸಲೀಸು. ಕಾಗದವೂ ಉಳಿತಾಯ.
‘ಪ್ರವಾಸಿ ಪ್ರಪಂಚ’ವನ್ನೂ ಇದೇ ಸೈಜಿನಲ್ಲಿ ಮಾಡಬೇಕೆಂದು ಆರಂಭದಲ್ಲಿ ಅಂದುಕೊಂಡಿದ್ದೆ. ಆದರೆ ಕಾಗದ ವೇಸ್ಟ್ ಆಗುತ್ತೆ ಮತ್ತು ಜಾಹೀರಾತಿನ ಗಾತ್ರ ನಮಗಾಗಿ ಪ್ರತ್ಯೇಕ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಆ ನಿರ್ಧಾರ ಬಿಟ್ಟೆ. ಇರಲಿ. ‘ಸೀಶೆಲ್ಸ್ ನೇಷನ್" ಜತೆಗೆ ಇನ್ನೊಂದು ದಿನಪತ್ರಿಕೆ ಯಿದೆ. ಅದರ ಹೆಸರು Today in Seyshelles. ಮೊದಲನೆಯದು ಸರಕಾರದ ಮುಖವಾಣಿಯಾದರೆ, ಎರಡನೆಯದು ಖಾಸಗಿ ಒಡೆತನಕ್ಕೆ ಸೇರಿದ್ದು.
ಕಳೆದ ಹದಿನಾಲ್ಕು ವರ್ಷಗಳ ಹಿಂದೆ ಆರಂಭವಾದ ಟುಡೇ ಇನ್ ಸೀಶೆಲ್ಸ್’, ಸೀಶೆಲ್ಸ್ ನೇಷನ್’ ಪತ್ರಿಕೆಗಿಂತ ವಾಸಿ. ಕಳೆದ ಐದು ದಿನಗಳಿಂದ ಈ ಎರಡೂ ಪತ್ರಿಕೆಗಳನ್ನು ಓದಿದ ಬಳಿಕ ನನಗೆ ಅನಿಸಿದ್ದೇನೆಂದರೆ, ಸೀಶೆಲ್ಸ್ ಸುಂದರ, ಆದರೆ ಅಲ್ಲಿನ ಪತ್ರಿಕೆ ಮಾತ್ರ ಶುದ್ಧ ನೀರಸ ಅಥವಾ ಬೋರಿಂಗ್. ಲಂಡನ್ ನ ಪ್ರತಿಷ್ಠಿತ ‘ಸಂಡೇ ಟೈಮ್ಸ್’ ಪತ್ರಿಕೆಯ ಲೆಜೆಂಡರಿ ಸಂಪಾದಕ ಹೆರಾಲ್ಡ್ ಇವಾನ್ಸ್ ಹೇಳಿದ ಒಂದು ಮಾತು ನೆನಪಾಯಿತು - ‘ಯಾವ ದೇಶ ನೈಸರ್ಗಿಕವಾಗಿ ಸುಂದರವಾಗಿ ರುವುದೋ, ಆ ದೇಶದ ಪತ್ರಿಕೆಗಳು ಮಾತ್ರ ನೀರಸ, ಬೋರು’. ಈ ಮಾತು ಸೀಶೆಲ್ಸ್ ಪತ್ರಿಕೆಗಳ ವಿಚಾರ ದಲ್ಲಂತೂ ನೂರಕ್ಕೆ ನೂರು ನಿಜ.
ಕಳೆದ ಐದು ದಿನಗಳ ಇಡೀ ಪತ್ರಿಕೆಯಲ್ಲಿ ರಾಜಕಾರಣಿಗಳ ಒಂದೇ ಒಂದು ಹೇಳಿಕೆಯಿಲ್ಲ, ಟೀಕೆ ಯಿಲ್ಲ, ಕರ್ಮಕಾಂಡ-ಹಗರಣಗಳಿಲ್ಲ, ರಾಜಕೀಯ ನಾಯಕರ ಆರೋಪ- ಪ್ರತ್ಯಾರೋಪ ಗಳಿಲ್ಲ. ಅಪಘಾತ, ಅಪರಾಧ ಇಲ್ಲವೇ ಇಲ್ಲ. ಹೋಗಲಿ ಜಾತಿಗಣತಿಯಾದರೂ ಇದೆಯಾ? ಉಹುಂ ಅದೂ ಇಲ್ಲ. ವಿದ್ಯುತ್ ತಂತಿ ಹರಿದು ಸಾರ್ವಜನಿಕರ ಮೇಲೆ ಬಿದ್ದು ಯಾರೂ ಸತ್ತಿಲ್ಲ. ಇಡೀ ಪತ್ರಿಕೆಯಲ್ಲಿ ಒಂದೇ ಒಂದು ಪ್ರತಿಭಟನೆ, ಖಂಡನೆ, ಆಗ್ರಹ, ಧರಣಿ, ಸತ್ಯಾಗ್ರಹ, ಮುಷ್ಕರ.. ಕೇಳಬೇಡಿ.
ಇಡೀ ದೇಶದಲ್ಲಿ ಒಬ್ಬಳೇ ಒಬ್ಬ ರನ್ಯಾ ರಾವ್ ಇಲ್ಲ. ಸಂವಿಧಾನ ಇದೆಯಾ ಇಲ್ಲವಾ ಗೊತ್ತಿಲ್ಲ, ಕಾರಣ ಯಾರೂ ಆ ಬಗ್ಗೆ ಮಾತಾಡುವುದಿಲ್ಲ. ಇಲ್ಲಿ ಯಾರೂ ಯಾರೊಂದಿಗೂ ಜಗಳವಾಡುವು ದಿಲ್ಲ. ಹಲ್ಲೆ ಮಾಡುವುದಿಲ್ಲ. ಪ್ರಾಣ ಬೆದರಿಕೆಯೊಡ್ಡುವುದಿಲ್ಲ. ವನ್ಯಪ್ರಾಣಿಗಳಿಗೆ ಯಾರೂ ವಿಷ ಹಾಕಿ ಸಾಯಿಸುವುದಿಲ್ಲ.
ಮರ ಕಡಿಯುವುದಿಲ್ಲ. ಮರಳು ಸಾಗಿಸುವುದಿಲ್ಲ. ಅಕ್ರಮ ಗಣಿಗಾರಿಕೆಯಂತೂ ಇಲ್ಲವೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ, ಪಕ್ಷದ ಅಧ್ಯಕ್ಷರ ಬದಲಾವಣೆ ಮಾಡಲು ಲಾಬಿ ಮಾಡಬೇಕೆಂಬುದು ಇಲ್ಲಿನ ಪತ್ರಿಕಾಗೋಷ್ಠಿ ರಾಜಕಾರಣಿಗಳಿಗೆ ಗೊತ್ತಿಲ್ಲ. ಮಾಡಿ ಸುದ್ದಿ ಹೇಳಬೇಕು, ಸುದ್ದಿ ಮಾಡಬೇಕು ಎಂಬುದೂ ಗೊತ್ತಿದ್ದಂತಿಲ್ಲ.
ಅಷ್ಟೇ ಅಲ್ಲ, ಮಂತ್ರಿಗಳಿಗೆ ಭ್ರಷ್ಟಾಚಾರ ಮಾಡಿ ಹಣ ಮಾಡಬೇಕು ಎಂಬುದು ಸಹ ಗೊತ್ತಿಲ್ಲ. ಇಲ್ಲಿನ ಕಂಟ್ರಾಕ್ಟರುಗಳಿಗೆ ಪರ್ಸೆಂಟೇಜ್ ಲೆಕ್ಕಾಚಾರ ಗೊತ್ತಿಲ್ಲ. ಕಾರಣ ಎಲ್ಲ ಸೇತುವೆ, ಕಟ್ಟಡ, ರಸ್ತೆಗಳೆಲ್ಲ ಮಜಬೂತಾಗಿವೆ. ಇನ್ನು ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ, ಕಳ್ಳತನ ಹೋಗಲಿ, ಕನಿಷ್ಠ ಪಿಕ್ ಪಾಕೆಟ, ಹುಡುಗಿಯರನ್ನು ಚುಡಾಯಿಸುವ ಘಟನೆಗಳೂ ಜರುಗುವುದಿಲ್ಲ.
ಮೂರು ವರ್ಷಗಳಿಂದ ಹಿಂದೆ, ತಂದೆ ತನ್ನ ಮೂರು ವರ್ಷದ ಮಲಮಗಳನ್ನು ಕೊಂದಿದ್ದು ದೊಡ್ಡ ಸುದ್ದಿಯಾಗಿತ್ತಂತೆ. ಇಡೀ ದೇಶದಲ್ಲಿ ಕ್ರೈಂ ರೇಟ್ ಹೆಚ್ಚು-ಕಮ್ಮಿ ಸೊನ್ನೆ. ನಾನು ಐದು ದಿನಗಳಲ್ಲಿ ಎರಡು ಪೊಲೀಸ್ ಸ್ಟೇಷನ್ ಹಾಗೂ ಒಬ್ಬ ಪೊಲೀಸ್‌ನನ್ನು ನೋಡಿದೆ. ಟ್ರಾಫಿಕ್ ಪೊಲೀಸ್ ಕೂಡ ಎಲ್ಲೂ ಕಾಣಿಸುವುದಿಲ್ಲ. ಪರಸ್ಪರ ಉಜ್ಜಿಕೊಂಡ, ತರಚಿ ಗಾಯ ಮಾಡಿಕೊಂಡ ವಾಹನಗಳು ಕಾಣಲಿಲ್ಲ.
ಒಂದೇ ಒಂದು ಹಾರ್ನ್ ಸದ್ದು ಕೇಳಲಿಲ್ಲ. ಒಂದೇ ಒಂದು ಕಸ, ಚಿಪ್ಸ್ ಪ್ಯಾಕೆಟ್, ಒಡೆದ ಬಿಯರ್ ಬಾಟಲಿ ಕಾಣಲಿಲ್ಲ. ಎಲ್ಲೂ ಗೌಜು-ಗದ್ದಲ ಇಲ್ಲ. ಮೀನು ಮಾರುಕಟ್ಟೆಯೂ ಶಾಂತ. ಜನಜೀವನ ವೂ ಪ್ರಶಾಂತ. ಜನ ತಮ್ಮ ಪಾಡಿಗೆ ತಾವು. ಹೀಗಿರುವಾಗ ಪತ್ರಿಕೆಗಳಿಗೆ ಸುದ್ದಿಯಾದರೂ ಯಾವುದು? ಅವುಗಳಿಗೆ ಕೆಲಸವಾದರೂ ಏನು? ನೊಣಗಳಿಗೆ ಕಬ್ಬಿಣದ ಅಂಗಡಿಯಲ್ಲಿ ಏನು ಕೆಲಸ? ಹೀಗಾಗಿ ಇಲ್ಲಿನ ಪತ್ರಿಕೆಗಳು ಕೆಲಸಕ್ಕೆ ಬಾರದ ಸಂಗತಿಗಳನ್ನೇ ಮುಖಪುಟದ ಲೀಡ್ ಸುದ್ದಿಯನ್ನಾಗಿ ಮಾಡಿ ಪ್ರಕಟಿಸುತ್ತಿವೆ.
ನಾನು ಸೀಶೆಲ್ಸ್ ಗೆ ಬಂದ ಮಾರನೇ ದಿನ, ‘ಸೀಶೆಲ್ಸ್ ನೇಷನ್’ ಪತ್ರಿಕೆ, ‘ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ಆರಂಭ’ ಎಂಬ ಸುದ್ದಿಯನ್ನು ಮುಖಪುಟದಲ್ಲಿ ಮುಖ್ಯ ಸುದ್ದಿಯಾಗಿ ಪ್ರಕಟಿಸಿತ್ತು. ಮರುದಿನ ‘ಮಹಿಳೆಯರ ಹೊಸ ಡ್ರೆಸ್ ಮಾರುಕಟ್ಟೆಗೆ’ ಎಂಬ ಸುದ್ದಿ ಮುಖಪುಟದ ಪ್ರಧಾನ ಜಾಗವನ್ನು ಅಲಂಕರಿಸಿತ್ತು. ಕಳೆದ ಒಂದು ವಾರದಲ್ಲಿ ಒಬ್ಬೇ ಒಬ್ಬ ರಾಜಕೀಯ ನಾಯಕನ ಹೇಳಿಕೆಯಾಗಲಿ, ಸಚಿವರ ಘೋಷಣೆಯಾಗಲಿ, ಮುಖಪುಟದಲ್ಲಿ ಕಾಣಲಿಲ್ಲ. ಒಂದು ವೇಳೆ ಈ ದೇಶದಲ್ಲಿ ನ್ಯೂಸ್ ಚಾನೆಲ್ ಆರಂಭಿಸುವ ಕೆಲಸವನ್ನು ನಮ್ಮ ಕನ್ನಡ ಚಾನೆಲ್‌ಗಳಿಗೆ ಕೊಟ್ಟರೆ, ಅವು ಒಂದೇ ವಾರದಲ್ಲಿ ಸುದ್ದಿಯ ಬರದಿಂದ ಉಪವಾಸ ಬಿದ್ದು ಬಾಗಿಲು ಹಾಕೋದು ಗ್ಯಾರಂಟಿ.
ಇನ್ನು ಬ್ರೇಕಿಂಗ್ ನ್ಯೂಸ್ ಇಲ್ಲದ ನ್ಯೂಸ್ ಚಾನೆಲ್ ಗಳ ಸ್ಥಿತಿ-ಗತಿಯನ್ನು ಯೋಚಿಸುವುದಕ್ಕೂ ಆಗದು! ಇನ್ನು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಣ್ಣ ಸಣ್ಣ ಸಂಗತಿಗಳೂ ದಪ್ಪಕ್ಷರಗಳ ಮುಖಪುಟ ಸುದ್ದಿಯೇ. ಚೀನಾದ ಚೆಂಗ್ದುದಿಂದ ನೇರ ವಿಮಾನ ಆರಂಭವಾದರೆ, ಅದು ಲೀಡ್ ಸುದ್ದಿ.
ಸೀಶೆಲ್ಸ್ ಪಾಸ್ ಪೋರ್ಟ್ ಹೊಂದಿದ್ದರೆ ನೂರಾ ಐವತ್ತಾರು ದೇಶಗಳಲ್ಲಿ ವೀಸಾ ಬೇಕಿಲ್ಲ ಎಂಬ ಸುದ್ದಿಗೆ ಮುಖಪುಟದಲ್ಲಿ ಎಂಟು ಕಾಲಂ ತೋರಣ. ಪ್ರವಾಸಿಗರ ಅನುಕೂಲಕ್ಕೆ ಹೊಸ ಟ್ರಾವೆಲ್ ಸೇವೆ ಆರಂಭ, ಯುರೋಪ್ ಪ್ರವಾಸಿಗರಿಗಾಗಿ ಹೊಸ ಟ್ರಾವೆಲ್ ಆಪ್ ( App) ಬಿಡುಗಡೆ, ಪ್ರವಾಸಿಗ ರಿಗಾಗಿ ಹೊಸ ಮಳಿಗೆ ಉದ್ಘಾಟನೆ.. ಮುಂತಾದ ಸುದ್ದಿಗಳಿಗೆ ಮುಖಪುಟದಲ್ಲಿ ವಿಜೃಂಭಿಸುವ ರಾಜಯೋಗ.
ನಾನು ಇಲ್ಲಿ ತನಕ ತೋರಿದ ಪತ್ರಿಕೋದ್ಯಮದ ಯಾವ ಪಟ್ಟುಗಳು, ವರಸೆಗಳು ಸೀಶೆಲ್ಸ್ ನಲ್ಲಿ ಕೆಲಸಕ್ಕೇ ಬರುವುದಿಲ್ಲ. ನಾವು ಕಲಿತಿದ್ದನ್ನು ಮತ್ತು ಇಷ್ಟು ದಿನ ಮಾಡಿದ್ದನ್ನು ಸಂಪೂರ್ಣ ಮರೆತು ( Unlearn), ಪತ್ರಿಕೋದ್ಯಮದ ಹೊಸ ಪಾಠಗಳನ್ನು ಕಲಿತರೆ, ಪಟ್ಟುಗಳನ್ನು ಕರಗತ ಮಾಡಿಕೊಂಡರೆ, ಪತ್ರಕರ್ತನಾಗಿ ಇಲ್ಲಿ ಬದುಕಬಹುದೇನೋ? ಹಾಗೆಂದು ‘ಪ್ರವಾಸಿ ಪ್ರಪಂಚ’ ಪತ್ರಿಕೆಯನ್ನು ಸೀಶೆಲ್ಸ್ ನಲ್ಲಿ ಆರಂಭಿಸಿದರೆ ಅಥವಾ ಸೀಶೆಲ್ಸ ಆವೃತ್ತಿ ಶುರು ಮಾಡಿದರೆ, ಖಂಡಿತವಾಗಿಯೂ ಬಿಸಿಬಿಸಿ ಮಸಾಲೆ ದೋಸೆಯಂತೆ ಖರ್ಚಾಗುವುದರಲ್ಲಿ ಸಂದೇಹವೇ ಇಲ್ಲ!
ಅಷ್ಟರಮಟ್ಟಿಗೆ ಇಲ್ಲಿ ಜೀವ ಉಳಿಸಿಕೊಳ್ಳಬಹುದು, ಜೀವನ ಸಾಗಿಸಬಹುದು ಅಂತ ಪ್ರಾಮಾಣಿಕ ವಾಗಿ ಅನಿಸಿದ್ದು ಸುಳ್ಳಲ್ಲ. ಇದು ಕಟು ವಾಸ್ತವ. ಸೀಶೆಲ್ಸ್ ಅಧ್ಯಕ್ಷ ಇದ್ದಾರಲ್ಲ, ಅವರ ಹೆಸರು ವಾವೆಲ್ ರಾಮ್ಕಲವಾನ್. ಇವರ ಮುತ್ತಾತ ಬಿಹಾರ ಮೂಲದವರು. 2020ರಿಂದ ಇವರು ಅಧ್ಯಕ್ಷರು. ಅದಕ್ಕಿಂತ ಮುನ್ನ ಇವರು ಇಪ್ಪತ್ತು ವರ್ಷಗಳ ಕಾಲ ಆಂಗ್ಲಿಕನ್ ಚರ್ಚಿನಲ್ಲಿ ಪಾದ್ರಿ (ಪ್ರೀಸ್ಟ್) ಯಾಗಿ ಸೇವೆ ಸಲ್ಲಿಸಿದವರು.
ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿ ಜನಾನುರಾಗಿ ಯಾದವರು. ಕಳೆದ ಐದು ವರ್ಷಗಳಿಂದ ಅವರ ಬಗ್ಗೆ ಭ್ರಷ್ಟಾಚಾರದ ಒಂದು ಅಪಸ್ವರವೂ ಕೇಳಿ ಬಂದಿಲ್ಲ. ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಸೀಶೆಲ್ಸ್ ಗೆ ಹದಿನೆಂಟನೇ ಸ್ಥಾನ. (ಗೊತ್ತಿರಲಿ, ಭಾರತದ ಸ್ಥಾನ 96ನೆಯದು). ಎರಡು ದಶಕಗಳ ಕಾಲ ಪ್ರತಿಪಕ್ಷ ನಾಯಕ ರಾಗಿದ್ದ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸುವುದಿಲ್ಲ. ಚುನಾವಣಾ ಸಂದರ್ಭ ದಲ್ಲೂ ತಮ್ಮ ಅರ್ಹತೆ, ಯೋಗ್ಯತೆ ನೋಡಿ ಮತ ನೀಡಿ ಅಂತ ಪ್ರಚಾರ ಮಾಡುತ್ತಾರೆ.
ಈ ಎಲ್ಲ ಪರಿಣಾಮ ಸೀಶೆಲ್ಸ್ ಪತ್ರಿಕೆಗಳ ಮೇಲಾಗಿದೆ. ಒಂದು ದೇಶ ಹೇಗಿದೆ ಎಂಬುದನ್ನು ಅರಿಯಲು ಎರಡು ಸಂಗತಿಗಳು ಸಾಕು. ಅಲ್ಲಿನ ಒಂದು ಲೋಟ ನೀರು ಕುಡಿದು, ಪ್ರಮುಖ ಪತ್ರಿಕೆಯೊಂದನ್ನು ಇಡಿಯಾಗಿ ಓದಿದರೆ ಸಾಕು. ಮತ್ತೇನೂ ಬೇಕಿಲ್ಲ. ಐದು ದಿನಗಳಲ್ಲಿ ಸೀಶೆಲ್ಸ್ ಎಂಥ ರಾಷ್ಟ್ರ ಎಂಬ ಚಿತ್ರಣ ಕಣ್ಣಿಗೆ ಕಟ್ಟಿತು!