Vishweshwar Bhat Column: ನೀರು, ದುಂಬಿ ಇತ್ಯಾದಿ
ಭಾಷಾ ತಜ್ಞರ ಪ್ರಕಾರ, ಯಾವುದೇ ಭಾಷೆಯಲ್ಲಿ ಒಂದು ಪದವನ್ನು ಹೇಳಲು ಆರಕ್ಕಿಂತ ಹೆಚ್ಚು ಪದಗಳಿ ದ್ದರೆ, ಆ ಭಾಷೆ ಸಂಪದ್ಭರಿತವಾದ, ಜನಬಳಕೆಯ ಭಾಷೆ. ಸಂಸ್ಕೃತ ಯಾಕೆ ಪರಿಪೂರ್ಣ ಮತ್ತು ಸಂಪದ್ಭ ರಿತ ಭಾಷೆ ಎನ್ನಲು ಇದೊಂದೇ ನಿದರ್ಶನ ಸಾಕು. ಸಂಸ್ಕೃತದಲ್ಲಿ ಬಹುತೇಕ ಪದಗಳನ್ನು ಬಣ್ಣಿಸಲು ಐದಕ್ಕಿಂತ ಹೆಚ್ಚು ಪದಗಳಿವೆ.


ಸಂಪಾದಕರ ಸದ್ಯಶೋಧನೆ
ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಒಂದೇ ಅರ್ಥ ಕೊಡುವ ಅನೇಕ ಪದಗಳಿರುವ ಬಗ್ಗೆ ಹೇಳಿ, ಸಾವು ಅಥವಾ ನಿಧನಕ್ಕೆ ಕನ್ನಡದಲ್ಲಿ ಕನಿಷ್ಠ ಒಂದು ಡಜನ್ ಗಿಂತ ಹೆಚ್ಚು ಪದಗಳಿರುವ ಕುರಿತು ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಇದು ಕೇವಲ ಸಾವಿಗಷ್ಟೇ ಅಲ್ಲ, ಇನ್ನೂ ಅನೇಕ ಪದಗಳು ಈ ವಿಷಯದಲ್ಲಿ ‘ಭಾಗ್ಯಶಾಲಿ’ಗಳೇ. ಉದಾಹರಣೆಗೆ ನೀರು. ಸಂಸ್ಕೃತದಲ್ಲಿ ನೀರಿಗೆ ಜಲಂ, ಉದಕಂ, ನೀರಂ, ಪುಷ್ಕರಂ, ಪಾನಿಯಂ, ವಾರಿ, ತೋಯಂ, ಆಪಃ, ಅಹಿ, ಅಂಕುರ, ಬುಬುರಂ, ಪಾಯಂ, ಕವನಂ, ಪೀವಾ, ಸವರಃ, ಸತೀಕಮ, ತಾಮರಂ, ಕುವಲಮ, ಸತೀನಂ, ಬಲಾಹಂ, ಸಲಂ, ಅಬ್ಜು , ಸಮುಂದ್, ಬಾರ್ಹಿಸ್, ನಳಿನ, ಸರ್ವ, ವರುಣ, ಉದ್ರ ಸೇರಿದಂತೆ 160ಕ್ಕಿಂತ ಹೆಚ್ಚು ಪದಗಳಿವೆ.
ಒಂದು ಪದಕ್ಕೆ ಸಮನಾದ ಹದಿನೈದು - ಇಪ್ಪತ್ತು ಪದಗಳಿರುವುದು ಸಾಮಾನ್ಯ. ನೀರಿನ ಬಗ್ಗೆ ಸಂಸ್ಕೃತದಲ್ಲಿ ಅಷ್ಟೊಂದು ಪದಗಳಿರುವುದು ನಿಜಕ್ಕೂ ಆಶ್ಚರ್ಯವೇ. ಬೇರೆ ಯಾವ ಭಾಷೆ ಯಲ್ಲೂ ಒಂದು ವಸ್ತುವನ್ನು ಬಣ್ಣಿಸಲು ಅಷ್ಟು ಪದಗಳನ್ನು ಕಾಣಲು ಸಾಧ್ಯವಿಲ್ಲ.
ಅದು ಸಂಸ್ಕೃತದ ಹಿರಿಮೆ. ಭಾಷಾ ತಜ್ಞರ ಪ್ರಕಾರ, ಯಾವುದೇ ಭಾಷೆಯಲ್ಲಿ ಒಂದು ಪದವನ್ನು ಹೇಳಲು ಆರಕ್ಕಿಂತ ಹೆಚ್ಚು ಪದಗಳಿದ್ದರೆ, ಆ ಭಾಷೆ ಸಂಪದ್ಭರಿತವಾದ, ಜನಬಳಕೆಯ ಭಾಷೆ. ಸಂಸ್ಕೃತ ಯಾಕೆ ಪರಿಪೂರ್ಣ ಮತ್ತು ಸಂಪದ್ಭರಿತ ಭಾಷೆ ಎನ್ನಲು ಇದೊಂದೇ ನಿದರ್ಶನ ಸಾಕು. ಸಂಸ್ಕೃತದಲ್ಲಿ ಬಹುತೇಕ ಪದಗಳನ್ನು ಬಣ್ಣಿಸಲು ಐದಕ್ಕಿಂತ ಹೆಚ್ಚು ಪದಗಳಿವೆ.
ಇದನ್ನೂ ಓದಿ: Vishweshwar Bhat Column: ವಿಮಾನದ ಟೈರುಗಳ ಮಹತ್ವ
ಮತ್ತೇನೂ ಬೇಡ, ದುಂಬಿಯನ್ನು ಬಣ್ಣಿಸಲು ಸಂಸ್ಕೃತದಲ್ಲಿ ಎಷ್ಟು ಪದಗಳಿವೆ ನೋಡಿ. ‘ಇಂದಿಂದಿರಶ್ಚಂಚರಿಕೋ ರೋಲಂಬೋ ಒಂಭರಶ್ವಸಃ’ ಎಂಬ ಒಂದು ಸಂಸ್ಕೃತ ಶ್ಲೋಕದಲ್ಲಿ ದುಂಬಿಗೆ ಎಷ್ಟೆ ಪದಗಳಿವೆ ಎಂಬುದನ್ನು ಗಮನಿಸಬಹುದು. ಇಂದಿಂದಿರ, ಚಂಚರೀಕ, ರೋಲಂಬ, ಬಂಭರ ... ಅಂದರೆ ದುಂಬಿ. ಇಷ್ಟೇ ಅಲ್ಲ, ದುಂಬಿಗೆ ಮಧುವ್ರತ, ಮಧುಪ, ಮಧುಕರ, ಅಲೀ, ದ್ವಿರೇಪ, ಭೃಂಗ, ಷಟ್ಪದ, ಭ್ರಮರ ಎಂಬ ಹೆಸರುಗಳೂ ಇವೆ.
ಇದನ್ನು ಕನ್ನಡ ನಿಘಂಟು ತಜ್ಞರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ತಮ್ಮ ‘ಇಗೋ ಕನ್ನಡ’ ಎಂಬ ಸಾಮಾಜಿಕ ಪದಕೋಶದಲ್ಲಿ ವಿವರಿಸಿದ್ದಾರೆ. ದುಂಬಿಯನ್ನು ಬಣ್ಣಿಸುವ ಈ ಪ್ರತಿಯೊಂದು ಪದಕ್ಕೂ ವ್ಯುತ್ಪತ್ತಿ ಬೇರೆಯದೇ ಇದೆ. ಇಂದಿಂದಿರ ಅಂದರೆ ಇಂದಿರೆಗೆ ಅರ್ಥಾತ್ ಲಕ್ಷ್ಮಿಗೆ ಪರಮ ಸಿರಿ, ಚಲಿಸುವುದರಿಂದ ಚಂಚರೀಕ, ಝೇಂಕಾರ ಶಬ್ದ ಮಾಡುವುದರಿಂದ ರೋಲಂಬ, ಅದೇ ಅರ್ಥಕ್ಕೆ ಮತ್ತೊಂದು ಹೆಸರು ಬಂಭರ. ಹೀಗೆ ಈ ಹನ್ನೆರಡು ಹೆಸರುಗಳನ್ನು ಕವಿಗಳು ವ್ಯಾಪಕ ವಾಗಿ ಬಳಸುತ್ತಾರೆ.
ಇಷ್ಟೇ ಅಲ್ಲ, ದುಂಬಿಗೆ ನಾಲಗೆ ಸುತ್ತಿಕೊಳ್ಳುವ, ಹೇಳಲು ಕಷ್ಟವೆನಿಸುವ ಮತ್ತೊಂದು ಪದವಿದೆ. ಅದು ಚಂಚಚ್ಚಂಚರೀಕ. ಚಂಚತ್ ಅಂದರೆ ಹಾರಾಡುತ್ತಿರುವ, ಚಲಿಸುತ್ತಿರುವ ಎಂದು ಅರ್ಥ. ಆದ್ದರಿಂದ ಚಂಚಚ್ಚಂಚರೀಕ ಅಂದರೆ ಹಾರಾಡುವ ದುಂಬಿ ಎಂದರ್ಥ. ‘ಕಾದಂಬರಿ’ ಗ್ರಂಥದಲ್ಲಿ ಇದನ್ನು, ‘ವನಲತಾಂದೋಳಿತಾಮೋದ ಸಂತರ್ಪಿತ ಚಂಚಚ್ಚಂಚರೀಕಂ’ ಎಂದು ಬಣ್ಣಿಸಲಾಗಿದೆ. ಕಾಡು ಅಥವಾ ವನದಲ್ಲಿರುವ ಹೂ ಗಿಡ, ಬಳ್ಳಿಗಳ ಪರಿಮಳದಿಂದ ಸಂತೋಷಗೊಂಡ ದುಂಬಿಗಳು ಎಂದರ್ಥ. ಈ ‘ಕಾದಂಬರಿ’ ಗ್ರಂಥ ಸಂಸ್ಕೃತದ ಬಾಣಕವಿಯ ಗದ್ಯ ಗ್ರಂಥದ ಅನುವಾದವಾದ ಕನ್ನಡ ಚಂಪೂ ಕಾವ್ಯದಲ್ಲಿದೆ’ ಎಂದು ಪ್ರೊ. ವೆಂಕಟಸುಬ್ಬಯ್ಯ ಅವರು ವಿವರಿಸಿದ್ದಾರೆ.
ಇದು ಒಂದು ಭಾಷೆಯ ಗಟ್ಟಿತನ ಮತ್ತು ಶ್ರೀಮಂತಿಕೆಯ ಪ್ರದರ್ಶನ. ಇಂಗ್ಲೀಷಿನಲ್ಲಿ ದುಂಬಿಗೆ bumblebee ಎನ್ನುತ್ತಾರೆ. ಇದಕ್ಕೆ ಸಮನಾಗಿ, honeybee, queenbee, killerbee ಎಂಬ ಪದಗಳಿವೆ ಎಂದು ಪದಕೋಶದಲ್ಲಿ ಹೇಳಲಾಗಿದೆ. ಆದರೆ ದುಂಬಿಯೇ ಬೇರೆ, ಜೇನು ಹುಳುವೇ ಬೇರೆ. ಅದು ಆ ಪ್ರಬೇಧಕ್ಕೆ ( bee) ಸೇರಿದ ಹುಳುವಾಗಿರಬಹುದು. ಆದರೆ ದುಂಬಿ ಮತ್ತು ಜೇನುಹುಳು ಒಂದೇ ಅಲ್ಲ. bee ಎಂದಿದ್ದ ಮಾತ್ರಕ್ಕೆ bumblebee ಮತ್ತು honeybee ಒಂದೇ ಆಗಲಾರದು.