Police Firing: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪಾತಕಿಯ ಕಾಲಿಗೆ ಗುಂಡು
ಬಳ್ಳಾರಿ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಪಾತಕಿಯ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಆರೋಪಿ ಮಂಜುನಾಥ್

ಬಳ್ಳಾರಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Physical Abuse) ಎಸಗಿದ ಆರೋಪಿಯ ಕಾಲಿಗೆ ಪೊಲೀಸರು (Police Firing) ಗುಂಡು ಹಾರಿಸಿ ಬಂಧಿಸಿದ್ದಾರೆ. ಬಳ್ಳಾರಿ (Bellary Crime News) ಜಿಲ್ಲೆಯ ತೋರಣಗಲ್‌ನಲ್ಲಿ ಘಟನೆ ನಡೆದಿದೆ. ಮಂಜುನಾಥ್ (26) ಎಂಬಾತ ಅತ್ಯಾಚಾರ ಎಸಗಿದ ಆರೋಪಿ.
ಗುರುವಾರ ಬೆಳಗ್ಗೆ ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಆರೋಪಿ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಸೋಮವಾರ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆಗೆ ಪೊಲೀಸರು ಮೂರು ತಂಡ ರಚಿಸಿದ್ದರು. ಕೊಪ್ಪಳದ ಹುಲಗಿಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಪಂಚನಾಮೆಗೆ ಹೋದಾಗ ಆತ, ಹೆಡ್ ಕಾನ್ಸ್ಟೇಬಲ್ ರಘುಪತಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹೀಗಾಗಿ ಆತನ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಪಿಎಸ್ಐ ಡಾಕೇಶ್ ಆರೋಪಿಯ ಬಲಗಾಲಿಗೆ ಮೇಲೆ ಪೈರಿಂಗ್ ಮಾಡಿದ್ದರು. ಸದ್ಯ ಆರೋಪಿಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತ್ಯಾಚಾರಕ್ಕೊಳಗಾಗಿರುವ ಬಾಲಕಿ ಸದ್ಯ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಜನವರಿ 13ರ ಸೋಮವಾರದಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಆರೋಪಿ ಮಂಜುನಾಥ ಬಾಲಕಿಯನ್ನು ಹೊಂಚು ಹಾಕಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದುದು ಮತ್ತು ಆತನ ಚಲನವಲದ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು.
ಬಾಲಕಿಯನ್ನು ಕರೆದುಕೊಂಡು ಹೋಗುವ ಮುನ್ನ ಆರೋಪಿ ಬಾರ್‌ನಲ್ಲಿ ಮದ್ಯಪಾನ ಮಾಡಿದ್ದ. ಕುಡಿದ ಮತ್ತಿನಲ್ಲಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ. ಬಳಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಆರೋಪಿ ಹುಡುಕಾಟಕ್ಕೆ ಬಳ್ಳಾರಿ ಎಸ್ಪಿ ಮೂರು ಪೊಲೀಸ್ ತಂಡ ರಚನೆ ಮಾಡಿದ್ದರು.