Indian Techie: ಇಸ್ರೇಲ್ ಜತೆ ಮೈಕ್ರೋಸಾಫ್ಟ್ ಒಪ್ಪಂದ- ಬಿಲ್ ಗೇಟ್ಸ್ ಮುಂದೆಯೇ ಪ್ರತಿಭಟಿಸಿದ ಭಾರತೀಯ ಮೂಲದ ಟೆಕ್ಕಿ
Viral Video: ಇಸ್ರೇಲ್‌ಗೆ ಯುದ್ಧ ತಂತ್ರಜ್ಞಾನ ಒದಗಿಸಲು ಮೈಕ್ರೋಸಾಫ್ಟ್ ಒಪ್ಪಂದ ಮಾಡಿಕೊಂಡಿರುವುದನ್ನು ವಿರೋಧಿಸಿ ಭಾರತೀಯ ಮೂಲದ ಉದ್ಯೋಗಿಯೊಬ್ಬರು ಸಿಇಒ ಸತ್ಯ ನಾಡೆಲ್ಲಾ ಮತ್ತು ಮಾಜಿ ಸಿಇಒಗಳಾದ ಬಿಲ್ ಗೇಟ್ಸ್ ಮತ್ತು ಸ್ಟೀವ್ ಬಾಲ್ಮರ್ ಅವರ ಮುಂದೆಯೇ ಪ್ರತಿಭಟನೆ ನಡೆಸಿ, ಬಹಿರಂಗವಾಗಿ ಟೀಕಿಸಿದ್ದಾರೆ.


ಬೆಂಗಳೂರು: ಇಸ್ರೇಲ್‌ಗೆ ಯುದ್ಧ ತಂತ್ರಜ್ಞಾನ ಒದಗಿಸಲು ಮೈಕ್ರೋಸಾಫ್ಟ್ ಒಪ್ಪಂದ ಮಾಡಿಕೊಂಡಿರುವುದನ್ನು ವಿರೋಧಿಸಿ ಭಾರತೀಯ ಮೂಲದ ಉದ್ಯೋಗಿಯೊಬ್ಬರು(Indian Techie) ಸಿಇಒ ಸತ್ಯ ನಾಡೆಲ್ಲಾ(Satya Nadella) ಮತ್ತು ಮಾಜಿ ಸಿಇಒಗಳಾದ ಬಿಲ್ ಗೇಟ್ಸ್(Bill Gates) ಮತ್ತು ಸ್ಟೀವ್ ಬಾಲ್ಮರ್(Steve Ballmer) ಅವರ ಮುಂದೆಯೇ ಪ್ರತಿಭಟನೆ ನಡೆಸಿ, ಬಹಿರಂಗವಾಗಿ ಟೀಕಿಸಿದ್ದಾರೆ. ಮೈಕ್ರೋಸಾಫ್ಟ್‌ನ 50 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ನಡೆದ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿವೆ. ಪ್ರತಿಭಟನೆ ನಡೆಸಿದ ಉದ್ಯೋಗಿಯನ್ನು ಭಾರತೀಯ-ಅಮೇರಿಕನ್ ಸಾಫ್ಟ್‌ವೇರ್ ಎಂಜಿನಿಯರ್ ವನಿಯಾ ಅಗರ್ವಾಲ್ ಎಂದು ಗುರುತಿಸಲಾಗಿದೆ. ಈಕೆ ಸದ್ಯಕ್ಕೆ ಮೈಕ್ರೋಸಾಫ್ಟ್‌ನಲ್ಲಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾಳೆ.
“ಗಾಜಾದಲ್ಲಿ ಐವತ್ತು ಸಾವಿರ ಪ್ಯಾಲೆಸ್ಟೀನಿಯನ್ನರನ್ನು ಮೈಕ್ರೋಸಾಫ್ಟ್ ತಂತ್ರಜ್ಞಾನದಿಂದ ಕೊಲ್ಲಲಾಗಿದೆ. ಅವರ ರಕ್ತದ ಮೇಲೆ ಸಂಭ್ರಮಾಚರಣೆ ನಡೆಸುತ್ತಿರುವುದು ನಾಚಿಕೆಗೇಡು, ನಿಮಗೆ ಎಷ್ಟು ಧೈರ್ಯ” ಎಂದು ವನಿಯಾ ಹೇಳಿರುವುದು ವಿಡಿಯೋದಲ್ಲಿ ಕೇಳಿಸಿದೆ.
“ಮೈಕ್ರೋಸಾಫ್ಟ್ ʼಡಿಜಿಟಲ್ ಶಸ್ತ್ರಾಸ್ತ್ರ ತಯಾರಕʼ ಕಂಪನಿ. ಇದು ತನ್ನ ತಂತ್ರಜ್ಞಾನದ ಮೂಲಕ ಹಿಂಸಾಚಾರಕ್ಕೆ ಅನುವು ಮಾಡಿಕೊಡುತ್ತಿದೆ. ಮೈಕ್ರೋಸಾಫ್ಟ್ ಇಸ್ರೇಲ್ ಜೊತೆಗಿನ ಸಂಬಂಧವನ್ನು ಮುರಿಯಬೇಕು” ಎಂದು ಅವರು ಹೇಳಿದರು. ಅಷ್ಟರಲ್ಲಿ ಮತ್ತೊಬ್ಬ ಮಹಿಳೆ ವನಿಯಾರನ್ನು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಹೊರಗೆ ಕರೆದೊಯ್ದರು. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದಾಗ ಸಿಇಒ ಸತ್ಯ ನಾಡೆಲ್ಲಾ ಮತ್ತು ಮಾಜಿ ಸಿಇಒ ಬಿಲ್ ಗೇಟ್ಸ್ ಸುಮ್ಮನೆ ಕುಳಿತಿದ್ದರು. ವನಿಯಾರನ್ನು ಹಾಲ್‌ನಿಂದ ಹೊರದಬ್ಬಿದ ಬಳಿಕ ತಮ್ಮ ಚರ್ಚೆಯನ್ನು ಮುಂದುವರೆಸಿದರು.
ಮಹಿಳೆಯ ಪ್ರತಿಭಟನೆ ವಿಡಿಯೊ ಇಲ್ಲಿದೆ
ಏನಿದು ಇಸ್ರೇಲ್-ಮೈಕ್ರೋಸಾಫ್ಟ್ ಒಪ್ಪಂದ:
ಇಸ್ರೇಲ್‌ನ ರಕ್ಷಣಾ ಸಚಿವಾಲಯದೊಂದಿಗೆ ಮೈಕ್ರೋಸಾಫ್ಟ್ $133 ಮಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿದೆ. ಹಮಾಸ್ ವಿರುದ್ಧದ ಗಾಜಾ ಯುದ್ಧದಲ್ಲಿ AI ಮತ್ತು Azure ತಂತ್ರಜ್ಞಾನಗಳನ್ನು ಒದಗಿಸಲು ಮೈಕ್ರೊಸಾಫ್ಟ್ ಒಪ್ಪಿಕೊಂಡಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕಂಪನಿಯ ಹಲವು ಉದ್ಯೋಗಿಗಳು ಆರೋಪಿಸಿ ಸರಣಿ ರಾಜೀನಾಮೆ ನೀಡುತ್ತಿದ್ದಾರೆ.
ವನಿಯಾ ರಾಜೀನಾಮೆ ಪತ್ರದಲ್ಲಿ ಏನಿದೆ?
"ಈ ಹಿಂಸಾತ್ಮಕ ಕೃತ್ಯದಲ್ಲಿ ಭಾಗವಹಿಸುವ ಕಂಪನಿಯ ಉದ್ಯೋಗಿಯಾಗಿರಲು ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ಮೈಕ್ರೋಸಾಫ್ಟ್ ಹೊಂದಿರುವ ಮೌಲ್ಯಗಳು ಮತ್ತು ಧ್ಯೇಯಕ್ಕೆ ಬದ್ಧರಾಗಿ ಕೆಲಸ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದ ಅವರು, ಇತರ ಉದ್ಯೋಗಿಗಳೂ ರಾಜೀನಾಮೆ ನೀಡಲು ಒತ್ತಾಯಿಸಿದ ಅವರು, ಇಸ್ರೇಲ್ ನರಮೇಧದ ಭಾಗವಾಗುವುದರಿಂದ ತಪ್ಪಿಸಿಕೊಳ್ಳಲು ತಕ್ಷಣವೇ ರಾಜೀನಾಮೆ ನೀಡಿ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಇಬ್ತಿಹಾಲ್ ಅಬೌಸಾದ್ ಎಂಬ ಉದ್ಯೋಗಿ ರಾಜೀನಾಮೆ ನೀಡಿದ್ದು, ಅವರು ಮೈಕ್ರೋಸಾಫ್ಟ್ AI ಸಿಇಒ ಮುಸ್ತಫಾ ಸುಲೇಮಾನ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಸುಲೇಮಾನ್ “ಯುದ್ದದಲ್ಲಿಯೂ ಲಾಭ ಕಾಣುವ ವ್ಯಕ್ತಿ” ಎಂದು ಅವರು ಹೇಳಿದ್ದರು. ಇದಕ್ಕೆ ಶಾಂತ ರೀತಿಯಲ್ಲಿ ಪ್ರತಿಕ್ರಿಯಿಸಿದ್ದ ಸುಲೇಮಾನ್, ನಿಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಕ್ಕೆ ಧನ್ಯವಾದಗಳು, ನಿಮ್ಮ ಮಾತುಗಳನ್ನುಆಲಿಸಲಾಗಿದೆ ಎಂದಿದ್ದರು.
ಹಮಾಸ್‌ನೊಂದಿಗಿನ ಕದನ ವಿರಾಮ ಒಪ್ಪಂದ ಮುರಿದು ಬಿದ್ದ ನಂತರ ಗಾಜಾದಲ್ಲಿ ಮತ್ತೆ ದಾಳಿ ನಡೆಸಿದ ಇಸ್ರೇಲ್ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ಹಲವು ಉದ್ಯೋಗಿಗಳು ಆಗ್ರಹಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಸತ್ಯ ನಾಡೆಲ್ಲಾ ಅವರು ಸಭೆ ನಡೆಸುವಾಗ ಅಡ್ಡಿಪಡಿಸಿದ ಐವರನ್ನು ಹೊರಹಾಕಲಾಗಿತ್ತು.