ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BY Vijayendra: ಡಿ.ಕೆ.ಶಿವಕುಮಾರ್ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ: ಬಿ.ವೈ. ವಿಜಯೇಂದ್ರ

BY Vijayendra: ಸಂವಿಧಾನ ಬದಲಿಸಲು ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಅವಕಾಶ ಕೊಡುವುದಿಲ್ಲ. ಸಂವಿಧಾನ ಬದಲಿಸುವ ಕುರಿತ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯು ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಡಿಕೆಶಿ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ: ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ.

Profile Siddalinga Swamy Mar 24, 2025 8:25 PM

ಕಲಬುರಗಿ: ಸಂವಿಧಾನ ಬದಲಿಸುವ ಕುರಿತ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರ ಹೇಳಿಕೆಯು ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದಲಿಸಲು ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದೀಜಿ ಅವರು ಅವಕಾಶ ಕೊಡುವುದಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಮತಬ್ಯಾಂಕ್ ಆಗಿ ಮಾಡಿಕೊಂಡಿದೆ. ರಾಜ್ಯದ- ದೇಶದ ಶೋಷಿತ, ಪೀಡಿತ ಸಮುದಾಯಗಳನ್ನು ಮತಬ್ಯಾಂಕಾಗಿ ಮಾಡಿಕೊಂಡು ಅವರನ್ನು ದುರುಪಯೋಗ ಪಡಿಸಿಕೊಂಡಿತ್ತು. ಇದು ಪದೇಪದೇ ಗೊತ್ತಾಗುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕೇವಲ ಅವರ ವೈಯಕ್ತಿಕವಲ್ಲ; ರಾಹುಲ್ ಗಾಂಧಿಯವರ, ಈ ರಾಜ್ಯದ ಮುಖ್ಯಮಂತ್ರಿಗಳ ಮನಸ್ಥಿತಿಯನ್ನೇ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ ಎಂದು ದೂರಿದರು.

ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿಗೆ ಗೌರವ ಕೊಡುವ ಪಕ್ಷ ಬಿಜೆಪಿ. ಡಾ. ಅಂಬೇಡ್ಕರ್‌ ಅವರಿಗೆ ಮತ್ತು ಸಂವಿಧಾನಕ್ಕೆ ಗೌರವ ಕೊಡುವವರು ಮಹಾನ್ ವ್ಯಕ್ತಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಅವರು ತಿಳಿಸಿದರು.

ಕಾಂಗ್ರೆಸ್ಸಿನವರ ಚಟಕ್ಕಾಗಿ ಹಾಗೂ ಮುಸ್ಲಿಮರ ಓಲೈಕೆಗೆ ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡಿದ್ದು, ಇದು ಅಸಾಧ್ಯ. ನರೇಂದ್ರ ಮೋದಿಯವರು ಇವತ್ತು ಪ್ರಧಾನಿ ಆಗಿದ್ದಾರೆ. ಡಾ. ಅಂಬೇಡ್ಕರ್‌ ಅವರಿಗೆ ಮತ್ತು ಸಂವಿಧಾನಕ್ಕೆ ಗರಿಷ್ಠ ಗೌರವ ಕೊಡುವ ಹೆಮ್ಮೆಯ ಪ್ರಧಾನಮಂತ್ರಿ ಮೋದಿಜೀ ಇದ್ದಾಗ, ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಇದಕ್ಕೆ ನಾವು ಖಂಡಿತವಾಗಿ ಅವಕಾಶ ಕೊಡುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಡಿ.ಕೆ. ಶಿವಕುಮಾರ್ ಸೇರಿದಂತೆ ರಾಹುಲ್ ಗಾಂಧಿಯವರು ಸಹ ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂದು ಅಪಪ್ರಚಾರ ಮಾಡಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು, ಮೋದಿಯವರು ಪ್ರಧಾನಿ ಆಗಬಾರದೆಂದು ಹೀಗೆ ಮಾಡಿದ್ದರು. ಸ್ವಾತಂತ್ರ್ಯ ಬಂದ ಬಳಿಕ ಸಂವಿಧಾನಕ್ಕೆ ಅತಿ ಹೆಚ್ಚು ತಿದ್ದುಪಡಿ ತಂದ ಅಪಕೀರ್ತಿ ಈ ದೇಶವನ್ನು ಆಳಿದ ಕಾಂಗ್ರೆಸ್ಸಿಗೆ ಸಲ್ಲುತ್ತದೆ ಎಂದು ನಾವು ಹೇಳಿದ್ದೆವು. ಈಗ ಮತ್ತೊಮ್ಮೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಿಂದ ಇವರ ಬಂಡವಾಳ ಬಯಲಾಗಿದೆ. ಕಾಂಗ್ರೆಸ್ ಪಕ್ಷದ ಬಂಡವಾಳ ಬಯಲಾಗಿದೆ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಸಂವಿಧಾನವನ್ನೂ ಕೂಡ ಬದಲಿಸುವುದಾಗಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಇವರ ಮನಸ್ಥಿತಿ ಏನು? ಡಾ. ಅಂಬೇಡ್ಕರ್‌ ಅವರ ಕುರಿತು ಇವರು ಎಷ್ಟು ಗೌರವ ಇಟ್ಟುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 74 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಧರ್ಮಾಧಾರಿತ ಮೀಸಲಾತಿಯನ್ನು ನೀಡಬಾರದು ಎಂದು ಡಾ. ಅಂಬೇಡ್ಕರ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಅದು ಸಂವಿಧಾನದಲ್ಲಿ ಉಲ್ಲೇಖ ಆಗಿದೆ. ಇಷ್ಟಿದ್ದರೂ ಡಿ.ಕೆ. ಶಿವಕುಮಾರ್- ಸಿದ್ದರಾಮಯ್ಯ ಅವರು ಮುಸಲ್ಮಾನರನ್ನು ಸಂತೃಪ್ತಿ ಪಡಿಸಲು ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನ ವಿರೋಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದರು.